ಮಾವೋ: ಗೊತ್ತಿಲ್ಲದ ಇತಿಹಾಸದ ಮೊದಲ ಪುಟ

ಮಾವೋ ತ್ಸೆ ತುಂಗ್. 

ದಶಕಗಳ ಕಾಲ ಜಗತ್ತಿನ ಕಾಲುಭಾಗದಷ್ಟು ಜನರ ಮೇಲೆ ನಿರಂಕುಶ ಪ್ರಭುತ್ವ ಹೊಂದಿದವ. 

ಅವನೇ ಈ ಜಗತ್ತಿನ ಇತಿಹಾಸದಲ್ಲಿ ಏಳು ಕೋಟಿ ಜನರು ಶಾಂತಿಕಾಲದಲ್ಲೇ ಸಾಯುವುದಕ್ಕೆ ಕಾರಣ. ಇಪ್ಪತ್ತನೇ ಶತಮಾನದಲ್ಲಿ ಅವನ ಹಾಗೆ ನರಮೇಧ ನಡೆಸಿದವರೇ ಇಲ್ಲ. 

ಹುಟ್ಟಿದ್ದು ಚೀನಾದ ಹೊಟ್ಟೆಯಲ್ಲಿರುವ ಹುನಾನ್ ಪ್ರಾಂತದ ಶಾವೋಸಾನ್ ಕಣಿವೆಯ ಒಂದು ರೈತಾಪಿ ಕುಟುಂಬದಲ್ಲಿ. ಜನ್ಮದಿನಾಂಕ ೨೬ ಡಿಸೆಂಬರ್ ೧೮೯೩. ಅವನ ಹಿರೀಕರೆಲ್ಲರೂ ಇದೇ ಕಣಿವೆಯಲ್ಲಿ ಐದು ಶತಮಾನಗಳಿಂದ ಇದ್ದವರೇ. 

ಶಾವೋಸಾನ್ ಪ್ರದೇಶವೇ ಹಾಗೆ. ಅಲ್ಲಿ ಪ್ರಾಚೀನತೆಯ ರಮ್ಯತೆ  ತುಂಬಿಕೊಂಡಿತ್ತು. ನಿಯೋಲಿಥಿಕ್ ಕಾಲದಿಂದಲೂ ಇಲ್ಲಿನ ಹಿಮಾವೃತ ಗುಡ್ಡಗಳು ಮನುಕುಲದ ವಸತಿಯಿಂದ ತುಂಬಿಕೊಂಡಿದ್ದವು. ಮಾವೋ ಹುಟ್ಟಿದಾಗ ಇಲ್ಲಿ ಬೌದ್ಧ ದೇಗುಲಗಳು ಇನ್ನೂ ಬಳಕೆಯಲ್ಲಿದ್ದವು. ಇಲ್ಲಿಗೆ ಬೌದ್ಧ ಧರ್ಮ ಬಂದಿದ್ದೇ ತಾಂಗ್ ಸಾಮ್ರಾಜ್ಯದ (ಕ್ರಿ.ಶ. ೬೧೮ – ೯೦೬) ಕಾಲದಲ್ಲಿ . ಮೇಪಲ್, ಕ್ಯಾಂಫರ್, ಮೆಟಾಸೆಖೋಯಿಯಾ ಮರಗಳೂ ಸೇರಿದಂತೆ ೩೦೦ಕ್ಕೂ ಹೆಚ್ಚು ಬಗೆಯ ಸಸ್ಯಸಂಕುಲ ಈ ಕಣಿವೆಯಲ್ಲಿತ್ತು. ಅಪರೂಪದ ಗಿಂಕೋ ಮರಗಳೂ ಇಲ್ಲಿದ್ದವು. ಹುಲಿಗಳು, ಚಿರತೆಗಳು ಇಲ್ಲಿ ಆರಾಮಾಗಿ ಅಡ್ಡಾಡುತ್ತಿದ್ದವು. (ಇಲ್ಲಿ ಹುಲಿಯೊಂದು ಕಂಡು ಬಂದ ಇತ್ತೀಚೆಗಿನ ದಾಖಲೆ ೧೯೫೭ರದ್ದು). ರಸ್ತೆಯಿಲ್ಲದ, ದಾಟಲೂ ಬಾರದಂಥ ನದಿಗಳಿಂದ ಆವೃತವಾದ ಈ ಹಳ್ಳಿಗೆ  ಹೊರಜಗತ್ತಿನ ಸಂಪರ್ಕವೇ ಇರಲಿಲ್ಲ. ೧೯೦೮ರಲ್ಲಿ ಚೀನಾ ದೇಶದ ಸಾಮ್ರಾಟ ಸತ್ತರೆ ಈ ಸುದ್ದಿ ಈ ಹಳ್ಳಿಗೆ ತಲುಪಿರಲೇ ಇಲ್ಲ. ಎರಡು ವರ್ಷಗಳ ನಂತರ ಮಾವೋ ಊರುಬಿಟ್ಟು  ಬಂದಾಗಲೇ ಅವನಿಗೆ ಈ ವಾರ್ತೆ ತಲುಪಿತ್ತು! 

ಶಾವೋಸಾನ್ ಅಂಥ ದೊಡ್ಡ ಊರೂ ಆಗಿರಲಿಲ್ಲ ಬಿಡಿ.  ಐದು ಕಿಲೋಮೀಟರ್ ಉದ್ದ, ಮೂರೂವರೆ ಕಿಲೋಮೀಟರ್ ಅಗಲ. ಇಲ್ಲಿದ್ದದ್ದು ೬೦೦ ಚಿಲ್ಲರೆ ಕುಟುಂಬಗಳು. ಅಕ್ಕಿ, ಬಾರ್ಲಿ, ಬಿದಿರು ಇವೇ ಇಲ್ಲಿನ ಮುಖ್ಯ ಬೆಳೆಗಳಾಗಿದ್ದವು; ಗದ್ದೆ ಉಳುವುದಕ್ಕೆ ಎಮ್ಮೆಗಳ ಸಾಕಣೆಯೂ ಮುಖ್ಯವಾಗಿತ್ತು. ದಿನನಿತ್ಯದ ಕೆಲಸವೆಲ್ಲವೂ ಈ ಕಾಲಾತೀತ ಚಟುವಟಿಕೆಗಳಿಂದಲೇ ತುಂಬಿದ್ದವು. ಮಾವೋನ  ತಂದೆ ಯಿ ಶಿಂಗ್ ಹುಟ್ಟಿದ್ದು ೧೮೭೦ರಲ್ಲಿ. ಹತ್ತನೇ ವಯಸ್ಸಿನಲ್ಲೇ ಹತ್ತು ಕಿಲೋಮೀಟರ್ ದೂರದ ಹುಲಿವಾಸದ ಕಣಿವೆಯ ಹತ್ತಿರದ ಹಳ್ಳಿಯ ಹುಡುಗಿಯನ್ನು ಮದುವೆಯಾದ. ಆಕೆಯ ವಯಸ್ಸು ಹದಿಮೂರು. ಈ ಎರಡೂ ಹಳ್ಳಿಗಳು ಎಷ್ಟು ಹತ್ತಿರ ಎಂದುಕೊಂಡರೆ ಅಷ್ಟೇ ದೂರ! ಎರಡೂ ಹಳ್ಳಿಗಳ ಭಾಷಾಶೈಲಿಗಳೇ ವಿಭಿನ್ನ. ಅವಳೋ ಬರೀ ಹುಡುಗಿ. ಹೆಸರೇ ಇರಲಿಲ್ಲ. ವಾನ್ ಮನೆತನದ ಏಳನೇ ಹುಡುಗಿ ಎಂದು ಅವಳನ್ನು ಕರೆದಿದ್ದರು. ಶತಮಾನಗಳ ಸಂಪ್ರದಾಯದಂತೆ ಅವಳ ಪಾದಗಳನ್ನು ಜಜ್ಜಿ ಗಟ್ಟಿಯಾಗಿ ಸುತ್ತಿ….. ಹೌದು… ‘ಮೂರಂಗುಲದ ಚಿನ್ನದ ಲಿಲೀ’ಎಂದರೆ ಸೌಂದರ್ಯದ ಖನಿಗಳು ಎಂದೇ ಪ್ರಸಿದ್ಧ.

5 thoughts on “ಮಾವೋ: ಗೊತ್ತಿಲ್ಲದ ಇತಿಹಾಸದ ಮೊದಲ ಪುಟ

  1. ಮಾವೋ ಬಗ್ಗೆ ಕುತೂಹಲದಿಂದ ಓದಲು ಆರಂಭಿಸಿದ ನನಗೆ ನಿರಾಶೆಯಾಯಿತು. ಲೇಖನವನ್ನು ಪೂರ್ಣಗೊಳಿಸುವಿರೆಂದು ನಂಬಿದ್ದೇನೆ.

  2. ಮಾವೋ ಕಥೆಯನ್ನು ತುಂಬಾ ಅದ್ಬುತವಾಗಿ ಆರಂಭಿಸಿದ್ದೀರಿ. ದಯವಿಟ್ಟು ಮುಂದುವರಿಸಿ.

Leave a Reply