೩೦ ಸೆಂಟಿಮೀಟರ್‌ನಲ್ಲಿ ಸಿಹಿನಿದ್ದೆಯ ಸುಖ

 

ಜುಲೈ  ೨೧:  ಬೀಟ್‌ರೂಟ್ ಕೆಲಸ.ಮಳೆ. ವೈಮಾನಿಕ ಕೀಟನಾಶಕ ಸಿಂಪಡನೆ ಬಗ್ಗೆ ಚಿಂತನೆ. ನನಗೆ ಶಿಕ್ಷೆ ನೀಡಲು ಇತರರ ಯೋಚನೆ. ಕ್ಷೌರ. ಕೀಟನಾಶಕ ಕವನ ರವಾನೆ.

ಮುಖ್ಯ ಕ್ಯಾಂಪಿನಲ್ಲಿ ಭಾರೀ ಚಟುವಟಿಕೆ. ಯಾರಿಗೆ ಯಾವ ಬ್ಯಾರಕ್ ಎಂದು ಗುಂಪಿನ ನಾಯಕ ಅದಾಗಲೇ ತೀರ್ಮಾನಿಸಿ-ದಾನೆ. ಸಾಮಾನ್ಯ-ವಾಗಿ ತನಗೆ ಹತ್ತಿರ ಇರೋ ಖೈದಿಗಳಿಗೆ ಹತ್ತಿರದಲ್ಲೇ ವಸತಿ. ‘ಮನೆಯಲ್ಲಿ ನಿನ್ನ ಹೆಂಗಸಿನ ಬಳಿ ಮಲಗು.ಪರ ಊರಿನಲ್ಲಿ ಗೋಡೆ ಪಕ್ಕ ಮಲಗು’ ಎಂಬುದೇ ಇಲ್ಲಿನ ಜಾಣತನದ ಮಾತು. ಗೋಡೆ ಬದಿಯ ಬ್ಯಾರಕ್-ಗಳು ಅತ್ಯುತ್ತಮ. ಜನಪ್ರಿಯರಲ್ಲದ ಖೈದಿಗಳಿಗೆ ಬಾಗಿಲು, ಕಿಟಕಿಯ ಬಳಿಯ ಬ್ಯಾರಕ್‌ಗಳೇ ಗತಿ. 

ನನಗಂತೂ ಯಾವುದಾದ್ರೂ ಪರವಾ ಇಲ್ಲ. ನಾನು ಮೊದಲು ಈ ಕ್ಯಾಂಪಿಗೆ ಬಂದಾಗ ಪ್ರತಿ ಖೈದಿಗೆ ಮೂವತ್ತು ಸೆಂಟಿಮೀಟರುಗಳಷ್ಟು ಅಗಲದ ಜಾಗ ಸಿಕ್ಕಿತ್ತು. ಒಂದು ಮುಷ್ಟಿಗೆ ಹತ್ತು ಸೆ.ಮೀ.ನಂತೆ ಮೂರು ಮುಷ್ಟಿ ಆಳೆದ್ರಾಯ್ತು. ತಂಡನಾಯಕನಿಗೆ ದಿನವಿಡೀ ಮುಷ್ಟಿ ಅಳೆಯೋದೇ ಆಯ್ತು. ಮೂವತ್ತು ಸೆಂಟಿಮೀಟರ್‌ನಲ್ಲಿ ಬರೀ ನಿದ್ದೆಯಲ್ಲ, ಒಳ್ಳೇ ಸಿಹಿನಿದ್ದೆ ಮಾಡಬಹುದು. ಇರಲು ಜಾಗ ಬೇಕು ಎಂದು ಬ್ರಹ್ಮಾಂಡವನ್ನು ಶೋಧಿಸೋದು ಮನುಕುಲದ ಅತ್ಯಂತ ಐಶಾರಾಮೀ ನಿಲುವು. 

೧೯೬೦ರ ಹೊತ್ತಿಗೆ ಈ ಮೀಸಲಾತಿ ಹೆಚ್ಚಿ ನಮಗೆ ಐವತ್ತು ಸೆಂ.ಮೀ. ಜಾಗ ಸಿಕ್ಕಿತು. ಆದರೆ ಅಷ್ಟುಹೊತ್ತಿಗೆ ನನ್ನನ್ನು ಶಿಕ್ಷಿಸಬೇಕೆಂದು ತಂಡನಾಯಕ ಹೆಹ್ ಚೆಂಗ್ ಸೇರಿದಂತೆ ಹಲವರು ಬಯಸಿದ್ದರು. ನಾನು ಮಾತ್ರ ಕವನಗಳನ್ನು ಬರೀತಾನೇ ಇದ್ದೆ ಬಿಡಿ. 

ಒಂದಿನ ನಾನು ಬೀಟ್‌ರೂಟ್ ಗಿಡಗಳನ್ನು ತೆಳು ಮಾಡ್ತಾ ಇದ್ದೆ. ಅಂದ್ರೆ ಕಳೆ ಕೀಳೋದು. ದುರ್ಬಲ ಗಿಡಗಳನ್ನೂ ಕೀಳೋದು. ಇವೆಲ್ಲ ಗೊತ್ತಿರದಿದ್ದರೆ ಅವರು ಖೈದಿಗಳಾಗೋದಿರ್‍ಲಿ, ಮನುಷ್ಯರಾಗೋದಕ್ಕೂ ನಾಲಾಯಕ್. ನಾನು ಆ ಕೆಲಸ ಮಾಡ್ತಾ ಇದ್ದಾಗ ತಂಡನಾಯಕ ಬಂದು ಕೇಳಿದ:‘ಓಹ್ ! ಇದ್ಯಾವ ಥರ ಕೆಲಸ?’ 

ನನಗೆ ಅರ್ಥ ಆಗ್ಲಿಲ್ಲ. ತಲೆ ಎತ್ತಿ ನೋಡಿದೆ. ‘ದರಿದ್ರದವನೆ! ಷಡ್ಯಂತ್ರ ಮಾಡ್ತಿದೀಯ?’

ಅವನ ಮಾತುಗಳು ನನ್ನ ಮೂಳೆಗಳನ್ನೇ ಕೊರೆದುಬಿಟ್ಟವು. ಇಡೀ ದೇಹ ನಡುಗತೊಡಗಿತು. ‘ನೋಡಿ! ಎಲ್ರೂ ಇಲ್ಲಿ ಬಂದು ಈ ಮನುಷ್ಯ ಬೀಟನ್ನು ತೆಳು ಮಾಡಿರೋದನ್ನು ನೋಡಿ!’ 

ಸರಿ, ಸಹಖೈದಿಗಳಿಗೆ ಸಮಯ ಕದೀಯೋದಕ್ಕೆ ಅವಕಾಶವಾಯ್ತು. ‘ಹೌದಲ್ಲ, ಈತ ಒಳ್ಳೆ ಬೀಟ್‌ಗಳನ್ನೇ ಕಿತ್ತಿದಾನೆ!’

‘ನಿಜಕ್ಕೂ ಇದು ಉದ್ದಿಶ್ಯಪೂರ್ವಕ ಷಡ್ಯಂತ್ರ’ 

‘ಆತ ಬುದ್ಧಿಜೀವಿ, ದರಿದ್ರ ಮನುಷ್ಯ’

‘ತಾನೇ ತಿನ್ನಬಹುದು ಅಂತ ಅದನ್ನು ಕಿತ್ತಿದಾನೆ.’ 

ಈಗ ನನಗೆ ಅರ್ಥವಾಯ್ತು. ನಂದೇ ತಪ್ಪು. ನಾವು ತೆಳು ಮಾಡುತ್ತ ಕಿತ್ತ ಗಿಡಗಳನ್ನು ಅಡುಗೆ ಮನೆಗೆ ಕಳಿಸ್ತಾರೆ ಅಂಥ ನಾನು ಕೇಳಿ ತಿಳಿದಿದ್ದೆ. ಹಾಗಾದರೆ ಒಳ್ಳೇ ಗಿಡಾನೇ ಕೀಳಬೇಕು ಅಂತ ಹೊರಟಿದ್ದೆ! ಅತ್ಯಂತ ರಸವತ್ತಾಗಿರೋ, ತಿನ್ನೋದಕ್ಕೆ ತುಂಬಾ ಚೆನ್ನಾಗಿರೋ ಬೀಟ್‌ರೂಟನ್ನು ಕೀಳಬೇಕು ಅಂದ್ಕೊಂಡಿದ್ದೆ. 

‘ಅದನ್ನೆಲ್ಲ ಕೊರಳಿಗೆ ನೇತು ಹಾಕ್ಕೋ!’ ತಂಡನಾಯಕ ಕಿರುಚಿದ. 

ಕಳೆ ಕೀಳೋದು ಅಂದ್ರೆ ಕೂತುಕೊಂಡು ಮಾಡೋ ಕೆಲಸ. ಸುಲಭ. ಇಂಥ ಸುಲಭದ ಕೆಲಸವೇ ಇಷ್ಟು ತೊಂದ್ರೆ ತರುತ್ತೆ ಅಂತ ನಾನು ಭಾವಿಸಿರ್‍ಲಿಲ್ಲ. ನಾನು ತೆವಳುತ್ತ ಹೋದೆ. ತಂಡನಾಯಕ ಎಲ್ಲ ಗಿಡಗಳನ್ನೂ ತನ್ನ ಹತ್ರ ಯಾವಾಗ್ಲೂ ಇಟ್ಕೊಂಡಿರ್‍ತಿದ್ದ ಹಗ್ಗದಲ್ಲಿ ಕಟ್ಟಿದ. ನನ್ನ ನಾಯಿ ಕುತ್ತಿಗೆಗೆ ಕಟ್ಟಿದ. ೪೦-೫೦ ಜಿನ್ ತೂಕದ ಬೀಟ್‌ಗಳನ್ನು ಹೊತ್ತಾಗ ನನ್ನ ಬೆನ್ನು ಬಾಗಿದ್ದು ನಿಜ. ಆದರೆ ನನಗೆ ಬೇಜಾರಾಗ್ಲಿಲ್ಲ. (ಕವನ ಬರೀತಿದ್ದೆ ತಾನೆ?) 

ತಂಡನಾಯಕ ಉಳಿದ ಹಗ್ಗವನ್ನು ಬೀಸುತ್ತ ‘ನಡಿ !ದರಿದ್ರದವನೆ, ನನ್ನ ಫಾಲೋ ಮಾಡು!’ 

ವಸ್ತುಶಃ ಅವನ ಹಿಂದೆ ತೆವಳುತ್ತ ಹೋದೆ. ಆತ ನನ್ನನ್ನು ನಾಯಿ ಥರ ಇಡೀ ಗದ್ದೆಯಲ್ಲಿ ಸುತ್ತಿಸಿದ. 

‘ಆಹ್! ನೋಡಿ, ಎಲ್ರೂ ನೋಡಿ. ಈತ ಷಡ್ಯಂತ್ರ ಮಾಡ್ತಾ ಇದ್ದ ಗೊತ್ತು ತಾನೆ? ಕೆಟ್ಟ ಗಿಡಗಳನ್ನು ತೆಗೀಲಿಲ್ಲ. ತುಂಬಾ ಜಾಗರೂಕತೆಯಿಂದ ಒಳ್ಳೇದನ್ನೇ ಕಿತ್ತ! ನೀವೇನು ಹೇಳ್ತೀರಿ? ಈ ನಾಯಿ ಮೇಲೆ ಒಂದು ಸಂಘರ್ಷದ ಗೋಷ್ಠಿ ಯಾಕೆ ನಡೆಸಬಾರದು?’ 

ಗೊತ್ತಾಯ್ತಲ್ಲ, ಇಷ್ಟು ದಿನ ನಾನು ಹೇಳ್ತಿದ್ದ ಫೋಟೋಗ್ರಾಫ್ ಆಂದ್ರೆ ಏನು ಅಂತ… ಅದರಲ್ಲಿ ಒಂದು ಉದಾಹರಣೆ ಅಷ್ಟೆ. 

ಅಲ್ಲಿ ನೂರು ಜನ ಖೈದಿಗಳಿದ್ದರು. ಎಲ್ಲರಿಗೂ  ತಮಾಷೆಗೆ ಅವಕಾಶ ಆಯ್ತು. ಎಲ್ರೂ ನಗ್ತಾ ಇದ್ದದ್ದನ್ನು ನಾನು ಕೇಳಿದೆ. ಇನ್ನೆಂದೂ ಮುಗಿಯುವುದೇ ಇಲ್ಲವೇನೋ ಎಂಬಂತೆ ನನ್ನ ಕಣ್ಣಿನ ಆಚೀಚೆ ಬೀಟ್‌ರೂಟ್ ಗಿಡಗಳು ಹಾದುಹೋದವು. ನನ್ನ ಕಣ್ಣೀರು ಮತ್ತು ಮೂಗಿನಲ್ಲಿ ಸುರಿಯುತ್ತಿದ್ದ ಸಿಂಬಳ ಎರಡೂ ಒಟ್ಟಿಗೇ ನೆಲಕ್ಕೆ ಬೀಳುತ್ತಿದ್ದವು. 

ಚೀನಾದಲ್ಲಿ ಸಾವಿರಾರು ವರ್ಷಗಳ ಒಂದು ಸಂಪ್ರದಾಯ ಇತ್ತು. ಒಬ್ಬ ಗೌರವಾನ್ವಿತ ವ್ಯಕ್ತಿಯನ್ನು ಕೊಂದುಬಿಡಬಹುದು, ಆದರೆ ಅವನಿಗೆ ಹಿಂಸೆ ನೀಡಬಾರದು. ಆದರೆ ೧೯೫೭ರಲ್ಲಿ ಈ ಸಂಪ್ರದಾಯ ನಿಂತಿತು. ವ್ಯಕ್ತಿಯನ್ನು ಹಂಗಿಸುವುದೇ ಅವನನ್ನು ತಿದ್ದುವ ಮಾರ್ಗವಾಯ್ತು. ಸಾವಿರಾರು ಸಂಘರ್ಷ ಗೋಷ್ಠಿಗಳಲ್ಲಿ ಬುದ್ಧಿಜೀವಿಗಳು ಬೇಕೆಂದೇ ತಮ್ಮನ್ನು ತಾವು ಟೀಕೆಗಳಿಗೆ ಒಡ್ಡಿಕೊಳ್ಳುತ್ತಿದ್ದರು. ಹಾಗಿದ್ದ ಮೇಲೆ ನಮ್ಮ ಪಾಡೇನು? 

ಕೃಷಿಯ ಬಗ್ಗೆ ಒಂದಿನಿತೂ ತಿಳಿವಳಿಕೆ ಇರದ ವ್ಯಕ್ತಿಯನ್ನು ಹಂಗಿಸುವ ಬಗೆ ಇದು ಎಂದು ನಾನು ಅರ್ಥ ಮಾಡಿಕೊಂಡಿದ್ದೆ. ಇದಕ್ಕಿಂತ ಹೆಚ್ಚಿನ ತರ್ಕ ಮಾಡಲು ನನ್ನ ಮನಸ್ಸು ಜಡಗಟ್ಟಿ-ಹೋಗಿತ್ತು. ಯಾವ ನಾಚಿಕೆಯೂ ಇಲ್ಲದೆ ನಾನು ನಾಯಿ ಥರ, ಅಥವಾ ಕತ್ತೆ ಥರ ನಾಯಕನ ಜೊತೆಗೆ ಗದ್ದೆ ಸುತ್ತಿದೆ. 

ಅದಾದ ಮೇಲೆ ಸಹಖೈದಿಗಳು ‘ಬೇಜಾರು ಮಾಡ್ಕೋಬೇಡ. ನಾಯಕನಿಗೆ ನಿನ್ನ ಬಗ್ಗೆ ಆಸಕ್ತಿ ಇರೋದಕ್ಕೇ ಹೀಗೆ ಮಾಡ್ದ’ ಎಂದರು. ನಾನೂ ಮುಂದೆ ಬೇರೆಯವರಿಗೆ ಇಂಥ ಶಿಕ್ಷೆ ಸಿಕ್ಕಿದಾಗ ಇವೇ ಮಾತುಗಳನ್ನು ಹೇಳಲು ಕಲಿತೆ. 

ಸದ್ಯ ನನ್ನ ಪಡಿತರ ರದ್ದಾಗಲಿಲ್ಲ. ಈ ಹಿಂದೆ ಸಾವಿರಾರು ಜನರ ಪಡಿತರ ಕಡಿತ ಆಗಿದ್ದನ್ನು ನಾನು ಕಂಡಿದ್ದೆ. 

ಮಧ್ಯಾಹ್ನ ಹುಲ್ಲಿನ ಸಾರು ಹೊತ್ತ ಗಾಡಿ ಬಂತು. ಎಲ್ಲರೂ ಸಾಲುನಿಂತರು. ಕುಗ್ಗಿ-ಹೋಗಿದ್ದ ನಾನೂ ಸಾಲು ಸೇರಿದೆ. ತಂಡನಾಯಕ ಮರದ ನೆರಳಿನಲ್ಲಿ ಕೂತು ಅನ್ನಕ್ಕೆ ತರಕಾರಿ ಬೆರೆಸುತ್ತಿದ್ದ. ಆತ ಎಲ್ಲ ಮರೆತಂತೆ ಕಾಣುತ್ತದೆ. ನನ್ನ ಪಾಲಿನ ಹುಲ್ಲಿನ ಸಾರು ದಕ್ಕಿದಾಗ ಮನಸ್ಸಿ-ನಲ್ಲೇ ತಂಡನಾಯಕನಿಗೆ ಕೃತಜ್ಞತೆ ಸಲ್ಲಿಸಿದೆ. 

ಅಕ್ಷರವನ್ನು ಹುಡುಕಿದಾಗಿನಿಂದ ಅದು ಮನುಕುಲಕ್ಕೆ ಕೊಟ್ಟ ತಲೆನೋವು ಅಷ್ಟಿಷ್ಟಲ್ಲ. ‘ಬಾಯ್’ ಬಗ್ಗೆ ನಡೆದದ್ದೂ ಇದೇ. ಸಾವಿರಾರು ಖೈದಿಗಳ ದಾಖಲೆಗಳನ್ನು ಸರಿಮಾಡ-ಬೇಕಾಗಿತ್ತು. ಯಾರಾದರೂ ಹೀಗೆ ತಿದ್ದುಪಡಿ ಮಾಡಬಹುದು. ಒಟ್ಟಾರೆ ಅದು ಕಾಗದದ ಮೇಲೆ ಮೂಡಿದರಾಯ್ತು. ಯಾರೂ ಆಳಿಸಲಾಗದ ದಾಖಲೆಯಾಗಿಬಿಡುತ್ತೆ. 

ಚೀನಾದಲ್ಲಿ ಒಂದು ಮಾತಿದೆ.‘ಸಾರ್ವಜನಿಕ ಗೇಟನ್ನು ಮಾತು ದಾಟಿದ ಮೇಲೆ, ಒಂಬತ್ತು ಎತ್ತುಗಳಿಗೂ ಅದನ್ನು ಮತ್ತೆ ಮಣಿಸಕ್ಕಾಗಲ್ಲ.’ ಚೀನಾದಲ್ಲಿ ಲಿಖಿತ ಪದಗಳಿಗೆ ಹೆಚ್ಚು ಬೆಲೆ, ಗೌರವ. ಯಾಕಂದ್ರೆ ಇಲ್ಲಿ ಅನಕ್ಷರಸ್ತರೇ ಹೆಚ್ಚು. ಹೀಗಾಗಿ ಚೀನೀ ಭಾಷೆಯೇ ಇಲ್ಲಿನ ಜನರನ್ನು ಮಟ್ಟ ಹಾಕಿಬಿಡುತ್ತೆ. ಪರಸ್ಪರ ದಾಖಲೆಗಳನ್ನು ಸರಿಪಡಿಸೋದ್ರಿಂದ ಪರಸ್ಪರ ವೈಷಮ್ಯ ಹೆಚ್ಚಿತು. 

ಬಾಯ್ ಒಬ್ಬ ಸಣ್ಣ ಕಳ್ಳ. ಕ್ಯಾಂಪಿಗೆ ಬಂದಮೇಲೆ ಸಹಜವಾಗೇ ಕದಿಯೋದು ಹೆಚ್ಚಾಯ್ತು.  ಅವನ ಕಳ್ಳತನದ ದಾಖಲೆಗಳನ್ನೇ ನಾನು ಸರಿಪಡಿಸಬೇಕಾಯ್ತು: ತರಕಾರಿಗಳ ಬೇರುಗಳು, ಕ್ಯಾರೆಟ್‌ಗಳು, ಬೇರೆ ಕುಟುಂಬದವರು ಕಳಿಸಿದ್ದ ಖಾದ್ಯಗಳು ಇತ್ಯಾದಿಗಳನ್ನು ಆತ ಕದ್ದಿದ್ದ. ಅಂದಮೇಲೆ ಅವನಿಗೆ ಶಿಕ್ಷೆ ಖಾಯಂ. 

ನಾನು ಒಳ್ಳೆ ಬೀಟ್‌ನ್ನು ಕದ್ದಿದ್ದಕ್ಕೂ, ಆತ ಕದ್ದಿದ್ದಕ್ಕೂ ವ್ಯತ್ಯಾಸ ಇದೆ. ಆತ ಕ್ಯಾಂಪಿಗೆ ಬಂದಮೇಲೆ ಕಳ್ಳತನ ಮಾಡಿದವ. ನನ್ನದು ಜನತೆ ಮತ್ತು ಶತ್ರುಗಳ ನಡುವಣ ವೈರುಧ್ಯದ ಉದಾಹರಣೆ. ಆದ್ದರಿಂದ ನಾನು ಶಿಕ್ಷೆಗೆ ಒಳಗಾಗೋದು ಸಹಜ. 

ಕವಿಗಳಿಗೆ ಅವರದ್ದೇ ಆದ ದೌರ್ಬಲ್ಯ ಇರುತ್ತೆ ನಿಜ. ಆದ್ರೆ ಅವರೂ ಗಟ್ಟಿ ಜೀವಗಳೇ. ಕಷ್ಟ ಬಂದಾಗ ಅಸ್ತಿತ್ವಕ್ಕಾಗಿ ಆವರು ಹೋರಾಡ್ತಾರೆ. ಇನ್ನೇನು ಮಾಡಲಿಕ್ಕಾಗಲ್ಲ ಆಂದ್ರೂ ಕಾವ್ಯವನ್ನು ವಾಚಿಸುತ್ತ ಇರ್‍ತಾರೆ. ಹೀಗಾಗಿ ಶಿಕ್ಷೆಯ ಮಾತು ಬಂದಿದ್ದರೂ ನಾನು ಕಾವ್ಯ-ರಚನೆಯಲ್ಲಿ ತೊಡಗಿದ್ದೆ. 

ನನ್ನ ಕವನದ ಶೀರ್ಷಿಕೆ: ವೈಮಾನಿಕ ಕೀಟನಾಶಕ ಸಿಂಪಡಣೆ. 

ನಿಜ, ಇದಕ್ಕೆ ‘ಹೊಳೆಯುತ್ತಿರು ಕೆಂಪು ಕಿರಣವೆ’ ಎನ್ನುವಾಗಿನ ಕಾವ್ಯಾತ್ಮಕತೆ ಇಲ್ಲ. ಆದ್ರೆ, ಗಯಟೆ ಹೇಳಿದಾನಲ್ಲ, ಕಾವ್ಯವಾಗಿ ಬರೆಯಲಾಗದ್ದು ಈ ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲ ಅಂತ. ವಿಮಾನ ಕಾವ್ಯಾತ್ಮಕವಾಗಿಲ್ವ? ಕೀಟನಾಶಕವನ್ನು ಸಾವಿರಾರು ಎಕರೆ ಹೊಲಕ್ಕೆ ಸಿಂಪಡಿಸೋವಾಗ ಹ್ಯಾಗೆ ಕಾಣುತ್ತೆ ಗೊತ್ತ? ಈ ಕವನ ಆಂಚೆಗೆ ಹೋಗಲ್ಲ ಅಂತ ನನಗೆ ಗೊತ್ತು. ಆದ್ರೆ ಸೆರೆಮನೆಯ ಅಧಿಕಾರಿಗಳು ನನ್ನನ್ನು ಪರಿಶೋಧನೆಗೆ ಗುರಿಪಡಿಸಿದಾಗ ನನ್ನ ರಾಜಕೀಯ ಪ್ರಾಮಾಣಿಕತೆ ಅವರಿಗೆ ಅರಿವಾಗಲಿ ಅನ್ನೋದು ನನ್ನ ನಿಜವಾದ ಉದ್ದೇಶ! ಹಾಗೇ ನನ್ನ ಸಾಹಿತ್ಯಿಕ ಗುಣಮಟ್ಟ.

ಆಮೇಲೆ ನಾನು ಮಾಡಿದ್ದು ವೀ ಮಿಂಗ್ ಶೂ ನನ್ನು ಟೀಕಿಸಿದ್ದು. ಪಕ್ಕಾ ಬುದ್ಧಿಜೀವಿಗಳು ಎಂದೆನಿಸಿಕೊಂಡವರು ಹೀಗೆ ‘ಉಳಿದವರ ಬಗ್ಗೆ ರಹಸ್ಯ ಬಯಲು ಮಾಡಿದ್ದರ’ ಬಗ್ಗೆ ಬರೆಯಲ್ಲ. ಆದರೆ ಗೋಡೆಗೆ ಒತ್ತಿಕೊಂಡಾಗ ಮಾಡೋದಾದ್ರೂ ಏನು? 

ಇದೊಂಥರ ಸಿಫಿಲಿಸ್ ಥರ. ಸಿಫಿಲಿಸ್ ವ್ಯಾಪಕವಾದಾಗ ಅದು ಭಯಂಕರ ಕಾಯಿಲೆ-ಯಾಗಿ ಉಳಿಯಲ್ಲ. ಅದು ಒಳ್ಳೆಯ ಬ್ಯಾಡ್ಜ್ ಅನ್ನೋ ಹೊಗಳಿಕೆಗೂ ಪಾತ್ರವಾಗುತ್ತೆ. ನೀವು ಸೂಳೆಮನೆಗೆ ಹೋಗಿದ್ದೀರಿ ಅನ್ನೋದನ್ನ ಅದು ಎಷ್ಟು ಚೆನ್ನಾಗಿ ತೋರಿಸಿಕೊಡುತ್ತೆ ಅಲ್ವ?

Leave a Reply