ಕಪಾಲಗುಹೆಯಲ್ಲಿ ಸಾವಿನ ಪರಿಮಳ

ಪೀಪಲ್ಸ್ ಹೆಲ್ತ್ ಕಲೆಕ್ಟಿವ್ ಕಚೇರಿ ಇದ್ದ ಆ ಮೂರಂತಸ್ತಿನ ಹಳೆ ಕಟ್ಟಡವು ಒಳಗಡೆಗಿಂತ ಹೊರಗೇ ಹೆಚ್ಚು ಬಿಳಿಚಿಕೊಂಡಿದೆ. ಇಡೀ ಲಾಬಿಯಲ್ಲೆಲ್ಲ ಬೂಸ್ಟಿನ ವಾಸನೆ. ಲಾಬಿ ಗೋಡೆಯ ಮೇಲೆ ಬುಲ್‌ಡೋಜರುಗಳು ಮತ್ತು ಟ್ರಾಕ್ಟರುಗಳ ಕೊಲಾಜ್. ಅದೂ ಈಗ ಬಿರುಕು ಬಿಟ್ಟುಹೋಗಿದೆ. ೪೦೪ ನೆಯ ಬ್ಯಾರಕ್ಕಿನಲ್ಲಿ ಇದ್ದ ಥರದ್ದೇ ಮೂಳೆ ಪುಡಿಯ ಧೂಳು ಇಲ್ಲಿಯ ಪೀಠೋಪಕರಣಗಳಲ್ಲೂ ಇದೆ. ಹಾಸಿನಲ್ಲಿ, ಒಂದು ಗೋಡೆಯ ಮೇಲೆ ಹಸಿರು ಮತ್ತು ಕಂದು ಬಣ್ಣದ ಕಲೆಗಳು ಹಾಸಿಹೋಗಿವೆ. ಅವರು ಕಟ್ಟಡ ಪ್ರವೇಶಿಸುತ್ತಿದ್ದಂತೆ ಒಂದು ದೊಡ್ಡ ದುಂಬಿ ಹೊರಕ್ಕೆ ಹಾರಿಹೋಯಿತು.

ಮೇಡಂ ಕೋ ಕರೆದಿದ್ದಳು. ಗಿಡ್ಡಗಿದ್ದ, ನಡುಗುತ್ತಿದ್ದ ವ್ಯಕ್ತಿಯೊಬ್ಬ ಶಾನ್, ಯೆಶೆ ಮತ್ತು ಫೆಂಗ್‌ರನ್ನು ಮಬ್ಬುದೀಪದ ಬೆಳಕಿನಲ್ಲೇ ಕಾಣುತ್ತಿದ್ದ ಮೆಟ್ಟಿಲುಗಳಲ್ಲಿ ಕೆಳಗೆ ಇಳಿಸಿಕೊಂಡು ಹೋದ. ಅಲ್ಲಿ ಐದು ಪರಿಶೀಲನಾ ಮೇಜುಗಳಿವೆ. ತುಯ್ಯುವ ಬಾಗಿಲುಗಳನ್ನು ಆತ ತೆರೆಯುತ್ತಿದ್ದಂತೆಯೇ ಅಮೋನಿಯಾ ಮತ್ತು ಫಾರ್ಮಾಲ್ಡಿಹೈಡಿನ ಕಟು ವಾಸನೆ ಅಲೆಯಾಗಿ ರಾಚಿತು.
ಸಾವಿನ ಪರಿಮಳ.
ಯೆಶೆ ಕೂಡಲೇ ಬಾಯಿ, ಮೂಗು ಮುಚ್ಚಿಕೊಂಡ. ಫೆಂಗ್ ಬಯ್ಯುತ್ತ ಸಿಗರೇಟಿಗಾಗಿ ತಡಕಾಡಿದ. ಅಲ್ಲಿ ಇನ್ನೂ ಕಡುವಾದ ಕಲೆಗಳಿದ್ದವು. ಒಂದು ಕಂದು ಕಲೆಯಂತೂ ನೆಲದಿಂದ ಸೀದಾ ಛಾವಣಿಯವರೆಗೂ ಹೋಗಿದ್ದನ್ನು ಶಾನ್ ಗಮನಿಸಿದ. ಇನ್ನೊಂದು ಗೋಡೆಯಲ್ಲಿ ಒಂದು ಪೋಸ್ಟರಿದೆ. ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರ ವಿವರಗಳಿವೆ. ಸ್ಥಳ ಬೀಜಿಂಗ್ ಒಪೆರಾ. ಅಲ್ಲಿದ್ದ ಒಂದೇ ಒಂದು ತುಂಬಿದ ಮಂಚದ ಬಳಿ ಇವರೆಲ್ಲರನ್ನೂ ಆತ ಒಯ್ದ. ಆತ ಸೀದಾ ಬಾಗಿಲು ಮುಚ್ಚಿ ಮರೆಯಾದ.
ಯೆಶೆ ಕೂಡಾ ಆತನನ್ನೇ ಹಿಂಬಾಲಿಸಲು ತಿರುಗಿದ.
`ಎಲ್ಲಿಗೋ ಹೋಗ್ತಿದೀಯ?’ ಶಾನ್ ವಿಚಾರಿಸಿದ.
`ಇಲ್ಲಿದ್ರೆ ನನ್ನ ತಲೆ ಕೆಡುತ್ತೆ,’
`ನಮಗೆ ಒಂದು ಕೆಲಸ ಕೊಟ್ಟಿದಾರೆ. ಇದನ್ನು ನೀನು ಅಲ್ಲಿ ಕಾಯ್ತಾ ಕುಳಿತು ಪೂರೈಸಲಿಕ್ಕೆ ಆಗಲ್ಲ. ನೀನು ಎಲ್ಲಿಗೆ ಹೋಗಬೇಕು ಅಂತಿದೀಯ?’
`ಹೋಗೋದು?’
`ನೀನಿನ್ನೂ ಯುವಕ. ನೀನು ಮಹತ್ವಾಕಾಂಕ್ಷೆ ಇಟ್ಟುಕೊಂಡಿದೀಯ. ನಿನಗೊಂದು ಗುರಿ ಇದೆ. ನಿನ್ನ ವಯಸ್ಸಿನಲ್ಲಿ ಎಲ್ಲರಿಗೂ ಒಂದು ಗುರಿ ಇರುತ್ತೆ.’
`ಸಿಚುವಾನ್ ಪ್ರಾಂತ,’ ನಂಬಿಕೆಯೇ ಬರದೆ ಯೆಶೆ ನುಡಿದ ` ಮತ್ತೆ ಚೆಂಗ್‌ದುಗೆ. ನನ್ನ ಕಾಗದಪತ್ರ ಸಿದ್ಧ ಎಂದು ವಾರ್ಡನ್ ಝೊಂಗ್ ಹೇಳಿದಾನೆ.ಅಲ್ಲಿ ನನಗೊಂದು ಕೆಲಸಕ್ಕಾಗಿ ವ್ಯವಸ್ಥೆ ಮಾಡಿದೀನಿ ಅಂತಾನೂ ಹೇಳಿದಾನೆ. ಈಗ ಜನ ಅಲ್ಲಿ ತಮ್ಮದೇ ಅಪಾರ್ಟ್‌ಮೆಂಟ್‌ಗಳನ್ನು ಬಾಡಿಗೆಗೆ ತಗೊಳ್ಳಬಹುದು. ಟೆಲಿವಿಜನನ್ನೂ ಖರೀದಿ ಮಾಡಬಹುದು.’
`ವಾರ್ಡನ್ ನಿನಗೆ ಹೇಳಿದ್ದು ಯಾವಾಗ?’
`ನಿನ್ನೆ ರಾತ್ರಿ. ನನಗೆ ಚೆಂಗ್‌ದುನಲ್ಲಿ ಈಗಲೂ ಗೆಳೆಯರಿದಾರೆ. ಪಕ್ಷದ ಸದಸ್ಯರು.’
`ಸರಿ. ನಿನಗೊಂದು ಗುರಿ ಇದೆ. ನನಗೂ ಒಂದು ಗುರಿ ಇದೆ. ನಾವು ಬೇಗನೇ ಮುಗಿಸಿದಷ್ಟೂ ಬೇಗ ಗುರಿಯತ್ತ ನಡೆಯಬಹುದು.’
ಯೆಶೆ ಮುಖದಲ್ಲಿ ಈಗಲೂ ಜಿಗುಪ್ಸೆ. ಯೆಶೆ ಒಂದು ಸ್ವಿಚ್ಚನ್ನು ಅದುಮಿದ. ಮೇಜುಗಳ ಮೇಲೆ ನೇತಾಡುತ್ತಿದ್ದ ನಗ್ನ ಬಲ್ಬುಗಳು ಹೊತ್ತಿಕೊಂಡವು. ಮಧ್ಯದಲ್ಲಿ ಇದ್ದ ಮೇಜು ಸ್ವಲ್ಪ ಶುದ್ಧವಾಗೇ ಇದೆ. ಅದರ ಮೇಲಿದ್ದ ಬಿಳಿ ಹಾಸೇ ಆ ಕೊಠಡಿಯಲ್ಲಿ ಇದ್ದ ಅತಿ ಹೊಳಪಿನ ವಸ್ತು. ಸಾರ್ಜೆಂಟ್ ಫೆಂಗ್ ದೂರದಲ್ಲಿ ನಿಂತು  ಏನೋ ಗೊಣಗುತ್ತಿದ್ದಾನೆ. ತುಕ್ಕು ಹಿಡಿದ ಕುರ್ಚಿಯೊಂದರಲ್ಲಿ ಒಂದು ದೇಹ ಕೂತಿದೆ. ವಿಚಿತ್ರ ಕೋನದಲ್ಲಿ ಅದರ ಕುತ್ತಿಗೆಯು ದೇಹದತ್ತ ವಾಲಿದೆ. ಅದರ ಮೇಲೆ ಕೊಳಕು ಬಟ್ಟೆ ಹಾಸಿದೆ.
`ನಿನ್ನನ್ನು ಅವರು ಹೀಗೆಯೇ ಬಿಟ್ಟುಬಿಡುತ್ತಾರೆ,’ ಫೆಂಗ್ ಭುಸುಗುಡುತ್ತ ಹೇಳಿದ.`ನನಗೆ ಒಂದು ಸೇನಾ ಆಸ್ಪತ್ರೆ ಕೊಡಿ. ಕನಿಷ್ಟಪಕ್ಷ ಅವರು ನಿನ್ನನ್ನು ಯೂನಿಫಾರ್ಮಿನಲ್ಲಿ ಕೊಳೆಸುತ್ತಾರೆ.’
ಶಾನ್ ಮತ್ತೆ ರಕ್ತದ ಕಲೆಗಳನ್ನೇ ನೋಡುತ್ತ ಉಳಿದ. ಅದು ಒಂದು ಶವಾಗಾರ ಆಗಿರಬೇಕಿತ್ತು. ಹೆಣಗಳಿಗೆ ಇಲ್ಲಿ ರಕ್ತದ ಒತ್ತಡ ಇರುವುದಿಲ್ಲ. ಅವು ರಕ್ತ ಕಾರುವುದಿಲ್ಲ.
ಹಠಾತ್ತಾಗಿ ಕುರ್ಚಿಯಲ್ಲಿದ್ದ ದೇಹ ನರಳಿತು. ಬೆಳಕು ಹಾದಂತೆ ಅದು ತನ್ನ ತೋಳುಗಳನ್ನು ಸೀದಾ ಚಾಚಿತು. ಆಮೇಲೆ ದಪ್ಪ ಚೌಕಟ್ಟಿನ ಕನ್ನಡಕವನ್ನು ತೆಗೆದುಕೊಂಡಿತು.
ಫೆಂಗ್ ಬೆಚ್ಚಿದ. ಸೀದಾ ಬಾಗಿಲಿನತ್ತ ನಡೆದ.
ಅವಳು ಒಬ್ಬ ಮಹಿಳೆ. ಅವಳ ಮೇಲೆ ಇದ್ದದ್ದು ಕವರಲ್ಲ. ಒಂದು ದೊಡ್ಡ ಸೈಜಿನ ಏಪ್ರನ್.  ಅವಳೇ ಒಂದು ರಟ್ಟನ್ನೂ ಹೊರತೆಗೆದಳು.
`ನಾವು ವರದಿಯನ್ನು ಕಳಿಸಿದೇವೆ,’ ಆಕೆಯ ದನಿಯಲ್ಲಿ ಅಸಹನೆ ಇದೆ. `ನೀನು ಯಾಕೆ ಬರಬೇಕಿತ್ತು ಎಂದು ಯಾರಿಗೂ ಅರ್ಥವಾಗಿಲ್ಲ.’ ಅವಳ ಕಣ್ಣುಗಳಲ್ಲಿ ದಣಿವಿನ ರಾಶಿಯೇ ಕಾಣಿಸುತ್ತಿದೆ. ಒಂದು ಕೈಯಲ್ಲಿ ಚಾಕುವಿನ ಹಾಗೆ ಹಿಡಿದ ಪೆನ್ಸಿಲ್. `ಕೆಲವರು ಸತ್ತವರನ್ನು ನೋಡಬೇಕು ಅಂತ ಬಯಸ್ತಾರೆ. ಹೌದೆ? ಹೆಣ ನೋಡೋದು ಅಂದ್ರೆ ನಿನಗೆ ಇಷ್ಟಾನಾ?’
ಮನುಷ್ಯನ ಬದುಕು ಸದಾ ಸರಳ ರೇಖೆಯಂತೆ, ಕ್ಯಾಲೆಂಡರಿನಲ್ಲಿ ಇರುವ ದಿನಾಂಕಗಳ ಚೌಕಟ್ಟಿನಂತೆ ಸಮವಾಗಿ ಗತಿಸುವುದಿಲ್ಲ ಎಂದು ಚೋಜೆ ತನ್ನ ಭಿಕ್ಷುಗಳಿಗೆ ಹೇಳುತ್ತಿದ್ದ. ಬದಲಿಗೆ ಅದು ಆತ್ಮದ ಮೇಲಣ ನಿರ್ಧಾರಗಳಿಂದಾಗಿ ಒಂದು ಘಟನೆಯಿಂದ ಇನ್ನೊಂದು ಸ್ಮರಣೀಯ ಘಟನೆಗೆ ಚಲಿಸುತ್ತದೆ. ಇಲ್ಲಿ ಅಂಥ ಒಂದು ಘಟನೆ ಇದೆ ಎಂದು ಶಾನ್‌ಗೆ ಅನ್ನಿಸುತ್ತಿದೆ. ತಾನ್ ತಂತ್ರವನ್ನು ಇಲ್ಲಿಯೇ ಎದುರಿಸಬಹುದು, ಹೇಗಾದರೂ ಮಾಡಿ ೪೦೪ನೆಯ ತಂಡವನ್ನು ರಕ್ಷಿಸಬಹುದು. ತನ್ನ ಜಗತ್ತಿನಲ್ಲಿ ಬಂದದ್ದೆಲ್ಲವೂ ಅದೃಷ್ಟ ಎಂದು ತಿಳಿದು ಅದಕ್ಕೆ ತಕ್ಕಂತೆ ನಡೆದುಕೊಳ್ಳಬಹುದು. ದವಡೆ ಕಚ್ಚುತ್ತ ಶಾನ್ ಆ ಮಹಿಳೆಯತ್ತ ತಿರುಗಿದ.
` ಇಲ್ಲಿ ಅಟಾಪ್ಸಿ ನಡೆಸಿದ ವೈದ್ಯರ ಬಳಿ ನಾನು ಮಾತನಾಡಬೇಕು’ ಶಾನ್ ನುಡಿದ. `ಡಾ|| ಸುಂಗ್.’
ಆಕೆ ನಗುತ್ತಿದ್ದಾಳೆ. ತನ್ನ ಕಿಸೆಯಿಂದ ಅವಳು ಶಸ್ತ್ರಚಿಕಿತ್ಸಕರು ಬಳಸುವ ಇನ್ನೊಂದು ಮುಖವಾಡವನ್ನು ತೆಗೆದಳು. ಅದನ್ನು ಚೀನೀಯರು ವೈರಸ್‌ಗಳನ್ನು ಮತ್ತು ಧೂಳನ್ನು ದೂರ ಇಡಲು ಬಳಸುತ್ತಾರೆ. `ಬೇರೆ ಜನ. ಈ ಬೇರೆ ಜನ ಯಾವಾಗ್ಲೂ ತೊಂದರೆ ಕೊಡೋದಕ್ಕೆ ಇಷ್ಟಪಡ್ತಾರೆ.’ ಆಕೆ ತನ್ನ ಮುಖದ ಮೇಲೆ ಆ ಮುಖವಾಡವನ್ನು ಹಾಕಿಕೊಂಡಳು. ಸೀದಾ ಹತ್ತಿರದಲ್ಲಿದ್ದ ಬಾಕ್ಸಿನಲ್ಲಿ ಇದ್ದ ಇನ್ನಷ್ಟು ಮುಖವಾಡಗಳನ್ನು ತೆಗೆದಳು. ಆಕೆ ನಡೆದಂತೆ ಅವಳ ಉಡುಗೆಯಿಂದ ಸ್ಟೆಥಾಸ್ಕೋಪ್ ಇಣುಕಿತು.
ಅಲ್ಲಿ ಇನ್ನೂ ಒಂದು ದಾರಿ ಇದೆ. ಬಹುಶಃ ತೀರಾ ಕಿರಿದಾದ ದಾರಿ. ಈಗ ಒಂದು ಅಪಘಾತದ ವರದಿಗೆ ಸಹಿ ಹಾಕಿಸಿಕೊಳ್ಳಬೇಕು. ೪೦೪ನೆಯ ಬ್ರಿಗೇಡಿನಲ್ಲಿ ನಡೆದ ಒಂದು ಅಪಘಾತವು ಯಾವುದೇ ಕೊಲೆ ತನಿಖೆ ಇಲ್ಲದೆಯೇ ತಾನ್‌ನ ಬೇಡಿಕೆಗಳನ್ನು ಪೂರೈಸಬಹುದು. ವರದಿಗೆ ಸಹಿ ಹಾಕುವುದು, ಕೊನೆಗೆ ಕಳೆದುಹೋದ ಆತ್ಮಕ್ಕೆ ಶಾಂತಿ ಸಿಗುವಂತೆ ಮರಣಕ್ರಿಯೆಗಳನ್ನು ನಡೆಸುವುದಕ್ಕೆ ದಾರಿ ಹುಡುಕುವುದು…. ರಾಜಕೀಯ ಗೊಂದಲದ ಬಗ್ಗೆ ಉತ್ತರಿಸಬೇಕೆಂದರೆ, ೪೦೪ ನೆಯ ಬ್ರಿಗೇಡನ್ನು ನಿರ್ಲಕ್ಷ್ಯದ ಆಪಾದನೆಯ ಮೇಲೆ ದೂಷಿಸಬಹುದು. ಬಹುಶಃ ಒಂದು ತಿಂಗಳ ಕಾಲ ಕಡಿಮೆ ರೇಶನ್. ಬಹುಶಃ ಒಂದು ತಿಂಗಳ ಕಾಲ ಪ್ರತೀ ಖೈದಿಯ ರೇಶನ್‌ನಲ್ಲಿ  ಕಡಿತ.ಅದು ಬೇಸಗೆ. ಮುದುಕರೂ ಈ ಕಡಿತವನ್ನು ಸಹಿಸಿಕೊಳ್ಳಬಹುದು. ಅದೇನೂ ಪಕ್ಕಾ ಪರಿಹಾರವಲ್ಲ. ಆದರೆ ಅದು ತನ್ನ ಮಿತಿಯಲ್ಲೇ ಇದೆ.
ಮೂರೂ ಜನರು ಮುಖವಾಡಗಳನ್ನು ಹಾಕಿಕೊಳ್ಳುವ ಹೊತ್ತಿಗೆ ಆಕೆ ದೇಹದ ಮೇಲಿನ ಹೊದಿಕೆಯನ್ನು ಸರಿಸಿ ಅದಕ್ಕೆ ಸಂಬಂಸಿದ ಟಿಪ್ಪಣಿಯ ರಟ್ಟನ್ನು ಹಿಡಿದಿದ್ದಳು.
`ಸಾವು ದೇಹವನ್ನು ಕಂಡುಹಿಡಿಯುವ ಹದಿನೈದು ಅಥವಾ ಇಪ್ಪತ್ತು ಗಂಟೆಗಳಲ್ಲಿ ಸಂಭವಿಸಿದೆ. ಆಂದರೆ ದೇಹ ಕಂಡು ಬಂದ ಹಿಂದಿನ ಸಂಜೆ.’ ಆಕೆ ಹೇಳಿದಳು. `ಸಾವಿನ ಕಾರಣ: ಕಾರೋಟಿಡ್ ಆರ್ಟರಿ, ಜುಗುಲಾರ್ ವೇನ್ ಮತ್ತು ಸ್ಪೈನಲ್ ಕಾರ್ಡುಗಳನ್ನು ಏಕಕಾಲಿಕವಾಗಿ ಮೊನಚಾದ ವಸ್ತುವಿನಿಂದ ಕೊಯ್ದದ್ದು. ಅಟ್ಲಾಸ್ ಮತ್ತು ಆಕಿಪೀಟಲ್ ನಡುವೆ ಕತ್ತರಿಸಲಾಗಿದೆ.’ ಹೇಳುತ್ತ ಆಕೆ ಮೂವರನ್ನೂ ನೋಡಿದಳು. ಯೆಶೆಯನ್ನು ಮಾತ್ರ ಅವಗಣನೆ ಮಾಡಿದಳು. ಆತನಂತೂ ಟಿಬೆಟಿಗ. ಶಾನ್‌ನ ತೆಳುವಾದ ಉಡುಗೆಯನ್ನು ನೋಡಿದ ಆಕೆ ಕೊನೆಗೆ ನಿಲ್ಲಿಸಿದ್ದು ಫೆಂಗ್‌ನನ್ನು ನೋಡುತ್ತ.
`ಅವನ ತಲೆ ಕತ್ತರಿಸಲಾಯಿತು ಅಂತ ನಾನು ತಿಳಿದಿದ್ದೆ’ ಯೆಶೆ ಶಾನ್‌ನನ್ನು ನೋಡುತ್ತ ಹೇಳಿದ.
`ನಾನೂ ಹಾಗಂತಲೇ ಹೇಳಿದ್ದು.’
`ವೇಳೆಯ ಬಗ್ಗೆ ನೀನು ಇನ್ನಷ್ಟು ನಿರ್ದಿಷ್ಟವಾಗಿ ಹೇಳಬಲ್ಲೆಯ?’ ಶಾನ್ ಕೇಳಿದ.
`ರಿಗರ್ ಮಾರ್ಟಿಸಿನ್ನೂ ಇತ್ತು,’ ಆಕೆ ಹೇಳಿದಳು,ಮತ್ತೆ ಫೆಂಗ್‌ನತ್ತ ನೋಡುತ್ತ. `ರಾತ್ರಿಗಿಂತ ಮುನ್ನಾದಿನ ಎಂದಷ್ಟೆ ಹೇಳಬಲ್ಲೆ. ಅದಕ್ಕಿಂತ ಹೆಚ್ಚಾಗಿ…’ಆಕೆ ಭುಜ ಕುಣಿಸಿದಳು. `ಗಾಳಿ ತೀರಾ ಒಣ. ತೀರಾ ತಣ್ಣಗೂ ಇದೆ. ದೇಹ ಮುಚ್ಚಿತ್ತು. ಇನ್ನೂ ನಿಖರವಾಗಿ ಹೇಳಬೇಕು ಅಂದ್ರೆ ಇನ್ನೂ ಸರಣಿ ಪರೀಕ್ಷೆಗಳನ್ನು ಮಾಡಬೇಕು.’
ಶಾನ್ ಮುಖದಲ್ಲಿದ್ದ ಭಾವವನ್ನು ಗಮನಿಸಿದ ಆಕೆ ಅವನತ್ತ  ಹುಳಿನೋಟ ಬೀರಿದಳು. `ಇದೇನು ಬೀಜಿಂಗ್ ವಿಶ್ವವಿದ್ಯಾಲಯ ಅಲ್ಲ ಕಾಮ್ರೇಡ್…’
ಶಾನ್ ದೇಹದ ನಿಲುವನ್ನು ಮತ್ತೆ ನೋಡಿದ. ` ಬೀ ದಾ ದಲ್ಲಿ ನೀನು ಕ್ರೋಮಾಟೋಗ್ರಾಫ್ ಮಾಡಬಹುದಿತ್ತು,’ ಶಾನ್ ಹೇಳಿದ. ಬೀ ದಾ ಎಂದರೆ ಬೀಜಿಂಗ್ ವಿಶ್ವವಿದ್ಯಾಲಯ ಎಂದರ್ಥ.  ಬೀಜಿಂಗಿನಲ್ಲಿ ಮಾತ್ರ ಆ ಪದವನ್ನು ಹೆಚ್ಚಾಗಿ ಬಳಸುತ್ತಾರೆ.
ಆಕೆ ನಿಧಾನವಾಗಿ ತಿರುಗಿದಳು. `ನೀನು ರಾಜಧಾನಿಯಿಂದ ಬಂದಿದೀಯ?’ ಅವಳ ದನಿಯಲ್ಲಿ ಹೊಸ ಬಗೆ ಕಾಣಿಸಿತು. ಒಂದು ರೀತಿಯ ತಾತ್ಕಾಲಿಕ ಗೌರವ ಕೂಡಾ ಕಂಡಿತು. ಈ ದೇಶದಲ್ಲಿ ಅಕಾರ ಹಲವು ಆಕಾರಗಳಲ್ಲಿ ಬರುತ್ತದೆ. ಯಾರೂ ತೀರಾ ಎಚ್ಚರದಿಂದಿರಲಾರರು. ಇದು ತಾನು ಅಂದುಕೊಂಡದ್ದಕ್ಕಿಂತ ಸುಲಭವಾಗಿರಬಹುದು. ಪತ್ತೇದಾರ ಕೆಲವೇ ಕ್ಷಣಗಳ ಕಾಲ ಬದುಕಿರಲಿ. ಅಪಘಾತದ ವರದಿಯ ಪ್ರಾಮುಖ್ಯ ಅವಳಿಗೆ ಗೊತ್ತಾಗೋವರೆಗೆ.
`ನನಗೆ ಬೀ ದಾ ದಲ್ಲಿ ಫೋರೆನ್ಸಿಕ್ ವೈದ್ಯಕೀಯದ ಬಗ್ಗೆ ಶಿಕ್ಷಣ ತರಬೇತಿ ನೀಡುವ ಗೌರವ ಇತ್ತು…’ ಶಾನ್ ಹೇಳಿದ,` ನಿಜ ಹೇಳಬೇಕಂದ್ರೆ ಕೇವಲ ಎರಡು ವಾರ. ತನಿಖಾ ತಂತ್ರಗಳು ಸಮಾಜವಾದಿ ವ್ಯವಸ್ಥೆಯ ಭಾಗ.’
`ನಿನ್ನ ಕೌಶಲ್ಯ ಚೆನ್ನಾಗಿ ಕೆಲಸ ಮಾಡಿದೆ.’ ಅವಳ ಮಾತಿನಲ್ಲಿ ವ್ಯಂಗ್ಯ.
`ಕೆಲವರು ನನ್ನ ತನಿಖೆಯಲ್ಲಿ ತೀರಾ ಪತ್ತೇದಾರಿತನ ಇದೆ ಎಂದಿದ್ದರು. ಹೆಚ್ಚು ಸಮಾಜವಾದಿ ವ್ಯವಸ್ಥೆ ಇಲ್ಲ ಎಂದಿದ್ದರು’ ಒಂದು ಬಗೆಯ ತಿರಸ್ಕಾರದಿಂದ ಶಾನ್ ಹೇಳಿದ, ತಾಮ್‌ಜಿಂಗ್‌ನಲ್ಲಿ ತನಗೆ ಹೇಳಿಕೊಟ್ಟ ಹಾಗೆ, ತರಬೇತಿಯ ಮಾತಿನ ಹಾಗೆ.
`ನೀನು ಇಲ್ಲಿ ಇದೀಯ…’ ಆಕೆ ಹೇಳಿದಳು.
`ನೀನೂ ಇಲ್ಲಿಯೇ ಇದೀಯ’ ಶಾನ್ ಮಾತನ್ನು ಹಿಂದಿರುಗಿಸಿದ.
ಆಕೆ ನಕ್ಕಳು.  ಅದೊಂದು ದೊಡ್ಡ ತಮಾಷೆಯ ಹಾಗೆ. ಆಕೆ ನಗುವಾಗ ಅವಳ ಮುಖದ ಮೇಲಿನ ಕುಳಿಗಳು ಕಾಣೆಯಾಗುತ್ತವೆ. ಆ ದೊಡ್ಡ ಗೌನಿನ ಒಳಗೆ ಆಕೆ ತೀರಾ ತೆಳು ದೇಹವನ್ನು ಹೊಂದಿದ್ದಾಳೆ ಎಂದು ಶಾನ್‌ಗೆ ಅರಿವಾಯಿತು. ಅವಳ ಕೂದಲುಗಳನ್ನು ಹಿಂದೆ ಬಿಗಿಯಾಗಿ ಕಟ್ಟದಿದ್ದರೆ ಆಕೆಯನ್ನು ಯಾವುದೇ ಆಸ್ಪತ್ರೆಯ ಸಿಬ್ಬಂದಿ ಎಂದೇ ತಿಳೀಬೇಕುಷ್ಟೆ.
ಆಕೆ ಮಾತಾಡದೆ ಮೇಜಿನ ಸುತ್ತ ತಿರುಗಿದಳು. ಮೊದಲು ಸಾರ್ಜೆಂಟ್ ಫೆಂಗ್‌ನನ್ನು ಆಮೇಲೆ ಶಾನ್‌ನನ್ನು ನೋಡಿದಳು. ನಿಧಾನವಾಗಿ ಶಾನ್‌ನ ಬಳಿ ಸಾಗಿದ ಆಕೆ ಹಠಾತ್ತಾಗಿ ಶಾನ್‌ನ ತೋಳುಗಳನ್ನು ಹಿಡಿದಳು. ಆತ ಪ್ರತಿಭಟಿಸಲಿಲ್ಲ. ತನ್ನ ತೋಳಂಗಿಯನ್ನು ಮೇಲಕ್ಕೆತ್ತಿದ. ತನ್ನ ತೋಳಿನ ಮೇಲೆ ಇದ್ದ ಸೆರೆಮನೆಯ ಖೈದಿ ಸಂಖ್ಯೆಯನ್ನು ತೋರಿಸಿದ.
`ಟ್ರಸ್ಟಿಯೆ?’ ಆಕೆ ಕೇಳಿದಳು. `ನಾವು ಇಲ್ಲಿ ಶೌಚಾಲಯ ತೊಳೆಯುವ ಟ್ರಸ್ಟಿಯೊಬ್ಬನನ್ನು ಇಟ್ಟುಕೊಂಡಿದ್ದೇವೆ. ಇನ್ನೊಬ್ಬ ರಕ್ತವನ್ನು ಬಾಚಿ ತೊಳೆಯಲಿಕ್ಕೆ. ಆದರೆ ತನಿಖೆ ಮಾಡಲು ಮಾತ್ರ ಯಾವ ಟ್ರಸ್ಟಿಯನ್ನೂ ಈವರೆಗೆ ಕಳಿಸಿರಲಿಲ್ಲ,’ ಆಕೆ ಶಾನ್‌ನನ್ನು ಮತ್ತಷ್ಟು ಕುತೂಹಲದಿಂದ ನೋಡುತ್ತಿದ್ದಾಳೆ. ತನ್ನೆದುರಿಗೆ ಇರುವ ವಿಚಿತ್ರ ಪ್ರಾಣಿಯನ್ನು ಕತ್ತರಿಸುವ ಹಾಗೆ.
ಸಾರ್ಜೆಂಟ್ ಫೆಂಗ್ ತನ್ನ ದನಿಯಿಂದ ಈ ಮೌನವನ್ನು ಒಡೆದ. ಅದು ಮಾತಲ್ಲ, ಎಚ್ಚರಿಕೆ. ಯೆಶೆಗೆ ಬಾಗಿಲನ್ನು ತೆರೆಯುವ ಯತ್ನ ಮಾಡುತ್ತಿದ್ದ. ಕೊನೆಗೆ ಸಾಧ್ಯವಾಗದೆ ಮೂಲೆಯಲ್ಲಿ ಕುಳಿತ.
ಶಾನ್ ಮೇಜಿನ ಮೂಲೆಯಲ್ಲಿ ನೇತು ಹಾಕಿದ್ದ ವರದಿಯನ್ನು ಓದಿದ.
`ಡಾ|| ಸುಂಗ್…ನೀನೇನಾದ್ರೂ ಅಂಗಾಂಶ ವಿಶ್ಲೇಷಣೆ ಮಾಡಿದೀಯ?’ ಶಾನ್ ನಿಧಾನ-ವಾಗಿ ಕೇಳಿದ.
ಸಹಾಯಕ್ಕಾಗಿ ಎಂಬಂತೆ ಆಕೆ ಫೆಂಗ್‌ನತ್ತ ನೋಡಿದಳು. ಆದರೆ ಸಾರ್ಜೆಂಟ್ ಈಗ ಹೆಣದಿಂದ ದೂರ ಸರಿಯುತ್ತಿದ್ದ. ಆಕೆ ಮತ್ತೆ ನಿರಾಕರಣ ಭಾವದಿಂದ ನುಡಿದಳು. `ಮೇಲ್ ಮಧ್ಯ ವಯಸ್ಕ. ಇಪ್ಪತ್ತೈದು ಪೌಂಡ್ ಹೆಚ್ಚುವರಿ ತೂಕ ಹೊಂದಿದ್ದಾನೆ. ಶ್ವಾಸಕೋಶಗಳು ಟಾರಿನಿಂದ ಕಟ್ಟಿಹೋಗುತ್ತಿವೆ. ಶಿಥಿಲವಾದ ಯಕೃತ್ತು. ಆದರೆ ಅದು ಅವನಿಗೆ ಗೊತ್ತಿದ್ದ ಹಾಗೆ ಇಲ್ಲ. ಅವನ ರಕ್ತದಲ್ಲಿ ಮದ್ಯದ  ಅಂಶ ಇತ್ತು. ಸಾಯೋದಕ್ಕಿಂತ ಎರಡು ಗಂಟೆಗಳ ಮುನ್ನ ಆಹಾರ ಸೇವಿಸಿದ ಹಾಗಿದೆ. ಅನ್ನ, ಕೋಸು, ಮಾಂಸ. ಒಳ್ಳೆಮಾಂಸ. ಕುರಿ ಮಾಂಸ ಅಲ್ಲ. ಬಹುಶಃ  ಮೇಕೆ. ಅಥವಾ ಕೋಣದ ಮಾಂಸವೂ ಇರಬಹುದು.’
ಸಿಗರೇಟುಗಳು, ಮದ್ಯ, ಮಾಂಸ. ಉಳ್ಳವರ ಪಥ್ಯ.ಅಥವಾ ಪ್ರವಾಸಿಗಳ ಪಥ್ಯ ಎಂದು ಶಾನ್ ತಿದ್ದಿಕೊಂಡ.
ಫೆಂಗ್ ಅಲ್ಲಿ ನೋಟೀಸು ಬೋರ್ಡಿನಲ್ಲಿ ಇದ್ದ ರಾಜಕೀಯ ಸಭೆಗಳ ಕರಪತ್ರವನ್ನು ಓದುತ್ತಿರು-ವಂತೆ ನಟಿಸುತ್ತಿದ್ದಾನೆ.
೪೦೪ನೆಯ ಬ್ರಿಗೇಡಿನವರು ಕೆಲಸ ನಿಲ್ಲಿಸುವಂತೆ ಮಾಡಿ, ಕರ್ನಲ್ ತನ್ನನ್ನು ಗುಲಾಗ್‌ನಿಂದ ಮೇಲೆತ್ತಿದ, ಡ್ರೇಗನ್ ಕ್ಲಾಸ್‌ನಲ್ಲಿ ಅಸಂತೋಷದ ಆತ್ಮವಾಗಿ ಸಂಚರಿಸುತ್ತಿರುವವನ ದೇಹವನ್ನು  ಶಾನ್ ಸುತ್ತುತ್ತ ಪರಿಶೀಲಿಸಿದ. ಪೆನ್ಸಿಲಿನಿಂದ ಅವನ ಎಡಗೈ ಬೆರಳುಗಳನ್ನು ಬಿಡಿಸಿದ. ಅದು ಖಾಲಿಯಾಗಿತ್ತು. ಮತ್ತೆ ಮತ್ತೆ ಅದೇ ಬೆರಳುಗಳನ್ನು ನೋಡುತ್ತ ನಿಂತ. ತೋರು-ಬೆರಳಿನ ಬುಡದಲ್ಲಿ ಒಂದು ತೆಳುವಾದ ಗೆರೆ  ಇದೆ. ಅದನ್ನು ಶಾನ್ ರಬ್ಬರಿನಿಂದ ಒರೆಸಿದ. ಅದೊಂದು ಕೊರೆತದ ಗಾಯ.
ಡಾ|| ಸುಂಗ್ ಈಗ ರಬ್ಬರಿನ ಗ್ಲೌಸ್‌ಗಳನ್ನು ಹಾಕಿಕೊಂಡಿದ್ದಳು. ಸಣ್ಣ ಪಾಕೆಟ್ ದೀಪದಿಂದ ಆ ಕೈಗಳನ್ನು ಪರಿಶೀಲಿಸುತ್ತಿದ್ದಳು. ಅಲ್ಲಿ ಎರಡನೆಯ ಕೊರೆತದ ಗಾಯವೂ ಕಾಣಿಸಿತು. ಹೆಬ್ಬೆರಳಿನ ಕೆಳಗೆ, ಅಂಗೈನಲ್ಲಿ.
`ನಿನ್ನ ಕಸ್ಟಡಿಯಲ್ ವರದಿಯಲ್ಲಿ ಕೈಯಿಂದ ಯಾವುದೋ ವಸ್ತುವನ್ನು ತೆಗೆದ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.’ ಅದು ಬಹುಶಃ ತೀರಾ ಚಿಕ್ಕದು. ಬಹುಶಃ ಮೊನಚು ಅಲಗುಳ್ಳದ್ದು. ಎರಡಂಗುಲ ಅಗಲ ಇರಬಹುದು.
`ಯಾಕೆಂದರೆ ನಾವೇನನ್ನೂ ತೆಗೀಲಿಲ್ಲ,’ ಸುಂಗ್ ಆ ಕೊರೆತಗಳನ್ನೇ ಮತ್ತೆ ಮತ್ತೆ ನೋಡುತ್ತ ನುಡಿದಳು. `ಅಲ್ಲಿ ಏನಿದ್ದರೂ ಅದನ್ನು ಆತ ಸತ್ತ ನಂತರ ಎಳೆದು ತೆಗೆಯಲಾಗಿತ್ತು. ರಕ್ತ ಸುರಿಯಲಿಲ್ಲ. ರಕ್ತ ಹೆಪ್ಪುಗಟ್ಟಲೂ ಇಲ್ಲ. ಅದು ಆಮೇಲೆ ಆಗಿದ್ದು.’ ಅವಳು ಬೆರಳುಗಳನ್ನು ಒಂದೊಂದಾಗಿ ಮುಟ್ಟಿದಳು. ಮುಜುಗರದ ಮುಖ ಮಾಡಿದಳು. `ಎರಡು ಬೆರಳೆಲುಬುಗಳು ಮುರಿದಿವೆ. ಯಾವುದೋ ವಸ್ತುವಿನಿಂದ ಕೈಯನ್ನು ಬಲವಾಗಿ ಜಜ್ಜಲಾಗಿದೆ. ಸತ್ತಾಗ ಆದ ಹಿಡಿತವನ್ನು ಬಲಪ್ರಯೋಗದಿಂದ ಬಿಡಿಸಲಾಗಿದೆ.’
`ಅದು ಹಿಡಿದಿದ್ದನ್ನು ಬಿಡಿಸಲು.’
`ಬಹುಶಃ ಹಾಗೇ ಇರಬೇಕು.’
ಶಾನ್ ಸುಂಗ್‌ಳನ್ನೇನೋಡಿದ. ಚೀನೀ ಅಕಾರಶಾಹಿಯಲ್ಲಿ ಮಾನವೀಯ ಸೇವೆಗಳು ಮತ್ತು  ಸೀದಾಸಾದಾ ದೇಶಭ್ರಷ್ಟತನಕ್ಕೂ ನಡುವೆ ಇರೋದು ತೀರಾ ತೆಳುವಾದ ಗೆರೆ. ` ಆದ್ರೆ ನೀನು ಈ ಕಾರಣದ ಬಗ್ಗೆ ಅಷ್ಟು ಖಚಿತಾನಾ? ಬಹುಶಃ ಅವನು ಕೆಳಗೆ ಬಿದ್ದು ಸತ್ತಿರಬಹುದು. ಯಾವುದೋ ಬೇರೆ ಕಾರಣಕ್ಕೆ. ಆಮೇಲೆ ಅವನ ತಲೆಯನ್ನು ಕಡಿದಿರಬಹುದು.’
`ಸಂಬಂಧವಿಲ್ಲದ ಕಾರಣಕ್ಕೆ? ತಲೆ ಕತ್ತರಿಸಿದಾಗ ಹೃದಯ ಇನ್ನೂ ಮಿಡಿಯುತ್ತಿತ್ತು. ಇಲ್ಲವಾದ್ರೆ ದೇಹದಿಂದ ಇನ್ನಷ್ಟು ರಕ್ತ ಹೊರಗೆ ಹೋಗುತ್ತಿತ್ತು.’
ಶಾನ್ ನಿಟ್ಟುಸಿರು ಬಿಟ್ಟ `ಅಂದ್ರೆ ಅದು ಏನು? ಕೊಡಲೀನಾ?’
`ತೀರಾ ಭಾರವಾದದ್ದು. ಜತೆಗೆ ತುಂಬಾ ಹರಿತವಾಗಿರೋದು.’
`ಒಂದು ಕಲ್ಲಿರಬಹುದೆ?’
ಡಾ|| ಸುಂಗ್ ಬೆಚ್ಚಿಬೀಳುವಂತೆ ನಡುಗಿದವಳು ಸಾವರಿಸಿಕೊಂಡು ಹೇಳಿದಳು,`ಖಂಡಿತ. ಮಚ್ಚಿನಷ್ಟು ಹರಿತವಾದ ಕಲ್ಲು. ಅದು ಒಂದೇ ಹೊಡೆತ ಆಗಿರಲಿಲ್ಲ. ಆದರೆ ಮೂರಕ್ಕಿಂತ ಹೆಚ್ಚು ಹೊಡೆತ ಇರಲಿಲ್ಲ. ಹಾಗಂತ ನಾನು ಹೇಳ್ತೇನೆ.’
`ಆತ ಪ್ರeಯಲ್ಲಿದ್ನಾ?’
`ಸಾಯೋವಾಗ ಆತ ಪ್ರe ತಪ್ಪಿದ್ದ.’
`ತಲೆ ಇಲ್ಲದೇ ಇರಬೇಕಾದ್ರೆ ನಿಂಗೆ ಅದು ಗೊತ್ತಾಗೋದಾದ್ರೂ ಹ್ಯಾಗೆ?’
`ಅವನ ಬಟ್ಟೆಗಳು,’ ಡಾ|| ಸುಂಗ್ ಹೇಳಿದಳು. `ಅವನ ಬಟ್ಟೆಯ ಮೇಲೆ ಸ್ವಲ್ಪಾನೂ ರಕ್ತದ ಕಲೆ ಇರಲಿಲ್ಲ. ಅಂದರೆ ಉಗುರುಗಳು ಕತ್ತರಿಸಿರ್‍ಲಿಲ್ಲ ಅಂತಾಯ್ತು. ಉಗುರುಗಳ ಕೆಳಗೆ ಚರ್ಮದ ತುಂಡು ಅಥವಾ ಕೂದಲೂ ಇರಲಿಲ್ಲ. ಅಲ್ಲಿ ಯಾವುದೇ ಹೋರಾಟ ನಡೆದಿರಲಿಲ್ಲ. ಅವನ ದೇಹದಿದ ರಕ್ತವನ್ನು ಬಸಿಯೋ ಹಾಗೆ ಇಡಲಾಗಿತ್ತು. ಮುಖ ಮೇಲೆ ಮಾಡಿ. ನಾವು ಅವನ ಸ್ವೆಟರಿನ ಹಿಂಭಾಗದಿಂದ ಖನಿಜದ ಕಣಗಳನ್ನು, ಮಣ್ಣನ್ನು ತೆಗೆದು ಪರೀಕ್ಷೆ ಮಾಡಿದೀವಿ. ಬರೀ ಹಿಂಭಾಗದಲ್ಲಿ ಮಾತ್ರ ಸಿಕ್ಕಿದ್ದು.
`ಆದ್ರೆ ಅದು ಬರೀ ಥಿಯರಿ. ಅವನಿಗೆ ಪ್ರe ತಪ್ಪಿತ್ತು ಅನ್ನೋದು.’
`ಹಾಗಾದ್ರೆ ನಿನ್ನ ಥಿಯರಿ ಏನು ಕಾಮ್ರೇಡ್? ಕಲ್ಲಿಗೆ ಡಿಕ್ಕಿ ಹೊಡೆದು ಆತ ಬಿದ್ದ. ಅಲ್ಲೇ ಸಾಗಿ ಹೋಗ್ತಾ ಇದ್ದ ಯಾರೋ ಅವನ ತಲೆಯನ್ನು ತೆಗೆದುಕೊಂಡು ಹೋದ್ರು ಅಂತಾನಾ?’
`ಇದು ಟಿಬೆಟ್. ಹೆಣವನ್ನು ಕತ್ತರಿಸಿ ಬಿಸಾಡಲು ಬದ್ಧವಾಗಿರೋ ಇಡೀ ಸಾಮಾಜಿಕ ವರ್ಗವೇ ಇಲ್ಲಿ ಇದೆ. ಬಹುಶಃ ಒಬ್ಬ ರಾಗ್ಯಪಾ ಅಲ್ಲಿ ಹೋಗ್ತಾ ಇದ್ದ. ಆತ ಆಕಾಶಸಮಾಯ ಆಚರಣೆ ಮಾಡ್ತಾ ಇದ್ದ. ಆಗ ಈ ಘಟನೆ ನಡೆದಿರಬಹುದು.’
`ಯಾವುದರಿಂದ?’
`ನನಗೆ ಗೊತ್ತಿಲ್ಲ. ಹಕ್ಕಿಗಳು.’
`ಅವು ರಾತ್ರಿ ಹಾರಾಡಲ್ಲ. ನಾನಂತೂ ತಲೆಬುರುಡೆಯನ್ನು ಎತ್ತಿಕೊಂಡು ಹೋಗಿ ಎಸೆಯೋವಂಥ ಹದ್ದನ್ನು ಇನ್ನೂವರೆಗೆ ನೋಡಿಲ್ಲ.’ ಆಕೆ ರಟ್ಟಿನಿಂದ ಒಂದು ಚೀಟಿಯನ್ನು ತೆಗೆದಳು. `ಈ ಚೀಟಿಯನ್ನು ಕಳಿಸಿದ ನೀನು ಬಹುಶಃ ಒಬ್ಬ ಮೂರ್ಖ ಇರಬೇಕು.’ ಆಕೆ ಹೇಳಿದಳು. ಅದು ಅಪಘಾತ ವರದಿ. ಆಕೆಯ ಸಹಿಗಾಗಿ ಕಾಯುತ್ತಿದೆ.
`ನೀನು ಸುಮ್ನೆ ಇದಕ್ಕೆ ಸಹಿ ಹಾಕಿದ್ರೆ ಕರ್ನಲ್‌ಗೆ ತುಂಬಾ ಸಮಾಧಾನ ಆಗುತ್ತೆ.’
`ನಾನು ಕರ್ನಲ್‌ಗಾಗಿ ಕೆಲಸ ಮಾಡಲ್ಲ.’
`ಹಾಗಂತ ನಾನೂ ಅವನಿಗೆ ಹೇಳ್ದೆ.’
`ಆಮೇಲೆ?’
`ಕರ್ನಲ್‌ನಂಥ ಮನುಷ್ಯನಿಗೆ ಅವೆಲ್ಲ ತೀರಾ ಗುಪ್ತವಾದ ಆಂಶಗಳು.’
ಸುಂಗ್ ಅವನತ್ತ ಒಂದು ಕೊನೆಯ ನೋಟವನ್ನು ಬೀರಿದಳು. ಆಮೇಲೆ ಆ ಅರ್ಜಿ ನಮೂನೆ-ಯನ್ನು ಪರಪರ ಹರಿದಳು. `ಇದೀಗ ಹೇಗೆ ಗುಪ್ತವಾಗಿ ಕಾಣ್ತಾ ಇದೆ?’ ಹರಿದ ಚೂರುಗಳನ್ನು ಆಕೆ ನಗ್ನ ದೇಹದ ಮೇಲೆ ಎಸೆದಳು. ಸೀದಾ ಕೊಠಡಿಯಿಂದ ಹೊರಗೆ ನಡೆದಳು.

೪೦೪ನೆಯ ನಾಯಕ ಕೆಲಸಗಾರನಾಗಿ ಕೊಲೆಗಾರ ಜಿಲಿನ್‌ಗೆ ಇನ್ನಿಲ್ಲದ ಗೌರವ ಪ್ರಾಪ್ತಿ-ಯಾಗಿತ್ತು. ಆತ ಸುತ್ತಿಗೆಯಿಂದ ಕಲ್ಲುಬಂಡೆಗಳನ್ನು ಒಡೆಯುತ್ತ ಮತ್ತೆ ಮತ್ತೆ ತಿರುಗಿ ಟಿಬೆಟನ್ ಖೈದಿಗಳತ್ತ ನೋಡುತ್ತಿದ್ದ. ಅವರೆಲ್ಲ ಕಣಿವೆಯ ಕೆಳಗೆ ಕೂತಿದ್ದರು. ಸಾಮಾನ್ಯವಾಗಿ ರಸ್ತೆ ಸಿಬ್ಬದಿಯ ಜೊತೆಗೆ ಕಾಣಿಸದ ಚೀನೀ ಮತ್ತು ಮುಸ್ಲಿಮರನ್ನು  ಶಾನ್ ನೋಡುತ್ತಿದ್ದ. ಝೊಂಗ್ ಅಡುಗೆ ಸಿಬ್ಬಂದಿಯನ್ನು ಸೌಥ್ ಕ್ಲಾಗೆ ಕಳಿಸಿದ್ದಾನೆ.
ಪದ್ಮಾಸನದಲ್ಲಿ ಕುಳಿತಿದ್ದ ಚೋಜೆಯನ್ನು ಶಾನ್ ಗುರುತಿಸಿದ. ಕಣ್ಣುಗಳು ಮುಚ್ಚಿದ್ದವು. ಸುತ್ತಲೂ ಭಿಕ್ಷುಗಳು ಕುಳಿತಿದ್ದಾರೆ. ಕಾವಲುಗಾರು ಮುಂದೆ ಬಂದರೆ ಅವನಿಗೆ ರಕ್ಷಣೆ ಕೊಡುವ ಉದ್ದೇಶ ಸ್ಪಷ್ಟ. ಅಂದರೆ ಅವನ ಬಳಿ ಬರುವ ಹೊತ್ತಿಗೆ ಕಾವಲುಗಾರರು ತೀರಾ ಕೋಪೋದ್ರಿಕ್ತ-ರಾಗಿರ್‍ತಾರೆ ಎಂಬುದಂತೂ ನಿಜ.
ಆದರೆ ಕಾವಲುಗಾರರು  ಸಿಗರೇಟು ಸೇದುತ್ತ, ಸಹಾ ಕುಡಿಯುತ್ತ ಉರಿಯುತ್ತಿದ್ದ ಕಟ್ಟಿಗೆ ಬೆಂಕಿಯ ಸುತ್ತ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಅವರು ಖೈದಿಗಳ ಮೇಲೆ ನಿಗಾ ಇಟ್ಟಿಲ್ಲ. ಅವರು ಕಣಿವೆಯ ರಸ್ತೆಯನ್ನೇ ಗಮನಿಸುತ್ತಿದ್ದಾರೆ.
ಶಾನ್‌ನನ್ನು ನೋಡಿದ ಕೂಡಲೇ ಜಿಲಿನ್ ಮುಖದಲ್ಲಿದ್ದ ಉತ್ಸಾಹ ಉಡುಗಿತು. `ನೀನು ಒಬ್ಬ ಟ್ರಸ್ಟಿ ಎಂಬುದು ಅವರಿಗೆ ಗೊತ್ತಾಗಿದೆ,’ ಕಹಿಯಾಗಿ ಹೇಳಿದ.ಮಧ್ಯೆ ಸುತ್ತಿಗೆಯ ಹೊಡೆತ-ಗಳು.
`ಕೆಲವೇ ದಿನ. ಮತ್ತೆ ನಾನು ವಾಪಸಾಗ್ತೇನೆ.’
`ನೀನು ಎಲ್ಲವನ್ನೂ ಕಳೆದುಕೊಳ್ತೀಯ. ಕೆಲಸ ಮಾಡಿದ್ರೆಮೂರು ಪಟ್ಟು ರೇಶನ್. ಮಿಡತೆಗಳ ರೆಕ್ಕೆಗಳನ್ನು ಕಡಿದುಹಾಕ್ತಿದ್ದಾರೆ.ಲಾಯ ತುಂಬುತ್ತೆ. ನಾವೇ ಹೀರೋಗಳು.’ ಮಿಡತೆಗಳು. ಟಿಬೆಟನ್ ಸ್ಥಳೀಯರ ಬಗ್ಗೆ ಬೈಗಳದ ಮಾತು. ಅವರು ಹೇಳುವ ಮಾದಕ ಮಂತ್ರಗಳಿಗೆ.
ದೇಹವು ಕಂಡ ಜಾಗದ ನಾಲ್ಕು ಮೂಲೆಗಳಲ್ಲಿ ಕಲ್ಲುಗಳನ್ನು ಪೇರಿಸಿ ಇಟ್ಟಿದ್ದನ್ನು ಶಾನ್ ಗಮನಿಸಿದ. ಆತ ಸೀದಾ ಅಲ್ಲಿಗೆ ಹೋಗಿ ಟಿಪ್ಪಣಿ ಬರೆದುಕೊಳ್ಳತೊಡಗಿದ.
ಸುಂಗ್ ಹೇಳಿದ್ದು ನಿಜ. ಕೊಲೆಗಾರ ತನ್ನ ಕೆಲಸವನ್ನು ಇಲ್ಲೇ ಮಾಡಿದ್ದಾನೆ. ಇದು ಕಟುಕರ ನೆಲ. ಆತ ಈ ವ್ಯಕ್ತಿಯನ್ನು ಕೊಂದಿದ್ದಾನೆ. ಅವನ ಜೇಬಿನಲ್ಲಿ ಇದ್ದಿದ್ದನ್ನು ಪ್ರಪಾತಕ್ಕೆ ಎಸೆದಿದ್ದಾನೆ. ಆದರೆ ಆತನಿಗೆ ಅಂಗಿಯ ಕಿಸೆ ಕಾಣಲಿಲ್ಲ.ಯಾಕೆ? ಸ್ವೆಟರಿನ ಕೆಳಗಿದ್ದ ಕಿಸೆ ಕಾಣಿಸಲೇ ಇಲ್ಲ. ಅದರಲ್ಲಿ ಅಮೆರಿಕನ್ ಡಾಲರುಗಳಿದ್ದವು.  ಯಾಕೆಂದರೆ ಅವನ ಅಂಗಿ ಬಿಳಿಯಾಗಿತ್ತು. ಕೊಲೆಗಾರನ ಕೈ ರಕ್ತರಂಜಿತವಾಗಿತ್ತು.
`ಯಾಕೆ ಇಷ್ಟುದೂರ ಬಂದೂ ದೇಹವನ್ನು ಕಣಿವೆಗೆ ಎಸೆಯಲಿಲ್ಲ? ಅದನ್ನು ಪತ್ತೆ ಹಚ್ಚುವುದೇ ಕಷ್ಟವಾಗ್ತಿತ್ತು.’ ಮಾತು ಬಂದಿದ್ದು ಹಿಂದಿನಿಂದ. ಯೆಶೆ ಶಾನ್‌ನನ್ನು ಅನುಸರಿಸಿ ಬಂದಿದ್ದ. ತನ್ನ ಕೆಲಸದಲ್ಲಿ ಯೆಶೆ ಆಸಕ್ತಿ ತೋರಿಸಿದ್ದು ಇದೇ ಮೊದಲು.
`ಅದನ್ನು ಎಲ್ಲರೂ ಕಾಣಬೇಕೆಂದೇ ಇಲ್ಲಿ ಇಟ್ಟಿದಾರೆ.’ ಶಾನ್ ಅಲ್ಲಿ ತುಕ್ಕು ಹಿಡಿದಂತಿದ್ದ ರಕ್ತರಂಜಿತ ಕಲ್ಲುಗಳನ್ನು ಬದಿಗೆ ಸರಿಸಲಾರಂಭಿಸಿದ.
`ಹಾಗಾದ್ರೆ ಅದನ್ನು ಕಲ್ಲಿನಿಂದ ಮುಚ್ಚಿದ್ದಾದರೂ ಯಾಕೆ?’
ಶಾನ್ ಒಮ್ಮೆ ಯೆಶೆಯನ್ನು ನೋಡಿದ. ಆಮೇಲೆ ತನ್ನನ್ನೇ ನೋಡುತ್ತಿದ್ದ ಭಿಕ್ಷುಗಳನ್ನು ನೋಡಿದ. ಜಂಗ್‌ಪೋಗಳು ಕೇವಲ ರಾತ್ರಿ ಬರುತ್ತಿದ್ದರು. ಹಗಲು ಹೊತ್ತು ರಣಹದ್ದುಗಳು ಪ್ರಪಾತದ ಕಲ್ಲುಪೊಟರೆಗಳಲ್ಲಿ ಅಡಗಿ ಕುಳಿತಿರುತ್ತವೆ.
`ಬಹುಶಃ ಕಾವಲುಗಾರರು ದೂರದಿಂದ ದೇಹವನ್ನು ಕೂಡಲೇ ಕಾಣಬಹುದು ಎಂದು.’
`ಆದ್ರೆ ಅದನ್ನು ಕಂಡು ಹಿಡಿದದ್ದೇ ಕಾವಲುಗಾರರು.’
`ಇಲ್ಲ. ಮೊದಲು ಕಂಡದ್ದು ಖೈದಿಗಳು. ಟಿಬೆಟನ್ನರು.’
ಶಾನ್ ಅಲ್ಲಿ ಪೇರಿಸಿದ್ದ ಕಲ್ಲುಗಳಿದ ದೂರವಾಗಿ ಜಿಲಿನ್ ಬಳಿ ಬಂದ. `ನೀನು ನನ್ನನ್ನು ಈ ಪ್ರಪಾತದ ಅಂಚಿಗೆ ಹೋಗಲಿಕ್ಕೆ ಸಹಾಯ ಮಾಡಬೇಕು.’
ಜಿಲಿನ್ ಸುತ್ತಿಗೆಯನ್ನು ಕೆಳಗಿಳಿಸಿದ.`ನೀನೊಬ್ಬ ವಿಚಿತ್ರ ಮನುಷ್ಯ.’
ಶಾನ್ ತನ್ನ ಮನವಿಯನ್ನೇ ಪುನರುಚ್ಚರಿಸಿದ. `ಕೆಲವೇ ಸೆಕೆಂಡುಗಳ ಕಾಲ. ಅಲ್ಲಿ…’ ಶಾನ್ ಬೊಟ್ಟು ಮಾಡಿದ.`ನನ್ನ ಮೊಣಕಾಲನ್ನು ಗಟ್ಟಿಯಾಗಿ ಹಿಡ್ಕೋ.’
ಜಿಲಿನ್ ನಿಧಾನವಾಗಿ ಪ್ರಪಾತದ ಅಂಚಿಗೆ ಶಾನ್‌ನನ್ನು ಅನುಸರಿಸಿದ. ಹೊಡೆತ ಹೊಡೆ-ಯುವ ಮೊದಲು ದೀರ್ಘವಾಗಿ ಯೋಚಿಸಬೇಕು. ಆಮೇಲೆ ನೀನು  ಫಿರಂಗಿಯಿಂದ ಹೊರತೂರಿದ ಕಲ್ಲಂಗಡಿ ಹಣ್ಣು ಮಾತ್ರ.
`ಕೆಲವೇ ಸೆಕೆಂಡುಗಳು. ಆಮೇಲೆ ನೀನು ನನ್ನನ್ನು ಮೇಲೆ ಎಳ್ಕೋಬೇಕು.’
`ಯಾಕೆ?’
`ಚಿನ್ನಕ್ಕೆ.’
`ನರಕದ ಹಾಗೆ,’ ಜಿಲಿನ್ ಉಗುಳಿದ. ಕೊನೆಗೆ ಸಂಶಯದ ನೋಟ ಬೀರುತ್ತ ಪ್ರಪಾತದತ್ತ ಬಂದ. ಅಚ್ಚರಿಯಿದ ನೋಡುತ್ತಲೇ `ಥತ್’ಎಂದ. `ನನಗೆ ನೀನು ಬೇಕಿಲ್ಲ.’
`ಹೌದು. ನೀನು ಮೇಲಿನಿಂದ ಅದನ್ನು ತಲುಪಲಿಕ್ಕೆ ಆಗಲ್ಲ.  ನಿನ್ನನ್ನು ಕೆಳಗಿಳಿಸಲು ಯಾರನ್ನ ನಂಬ್ತೀಯ?’
ಒಂದು ಬಗೆಯ ಅರ್ಥ ಮಾಡಿಕೊಡ ಭಾವ ಜಿಲಿನ್‌ಮುಖದ ಮೇಲೆ ಹಾದುಹೋಯಿತು. `ನನ್ನನ್ನು ಯಾಕೆ ನಂಬ್ತೀಯ?’
`ಯಾಕಂದ್ರೆ ನಾನು ನಿಂಗೆ ಚಿನ್ನ ಕೊಡ್ತೀನಿ.ಮೊದಲು ನಾನು ಅದನ್ನ ನೋಡ್ತೀನಿ. ಆಮೇಲೆ ಅದನ್ನು ನಿಂಗೆ ಕೊಡ್ತೀನಿ.’ ಜಿಲಿನ್‌ಗೆ ಈಗ ಈ ಆಶೆಯನ್ನು ಅವಲಂಬಿಸಲೇಬೇಕಾದ ಸ್ಥಿತಿ.
ಒಂದೇ ಕ್ಷಣ. ಶಾನ್ ಈಗ ತನ್ನ ಮೊಣಕಾಲಿನ ಮೇಲೆ ಪ್ರಪಾತದ ಆಳದಲ್ಲಿ ನೇತಾಡುತ್ತಿದ್ದ. ಅವನ ಜೇಬಿನಿಂದ ಬಿದ್ದ ಪೆನ್ಸಿಲ್ ಈಗ ಕಣಿವೆಯ ಕಲ್ಲುಗಳಿಗೆ ಡಿಕ್ಕಿ ಹೊಡೆಯುತ್ತ ಕೆಳಗೆ ಕಾಣೆಯಾಯಿತು. ಕಣ್ಣು ಮುಚ್ಚಿದ ಶಾನ್‌ನನ್ನು ಜಿಲಿನ್ ಅಲ್ಲಾಡಿಸುತ್ತ ನಗುತ್ತಿದ್ದ. ಆದರೆ ಶಾನ್ ಕಣ್ಣು ತೆರೆದಾಗ ಲೈಟರ್ ಅಲ್ಲೇ ಕಂಡಿತ್ತು.
ಮತ್ತೆ ಶಾನ್ ಮೇಲೆ ಬಂದ. ಲೈಟರ್ ಪಾಶ್ಚಾತ್ಯ ನಿರ್ಮಿತ. ಆದರೆ ಅದರ ಮೇಲೆ ಚೀನೀ ಅಕ್ಷರಗಳನ್ನು ಕೆತ್ತಲಾಗಿದೆ. ಇಂಥ ಲೈಟರುಗಳನ್ನು ಶಾನ್ ಎಲ್ಲಿಯೋ ನೋಡಿದ್ದಾನೆ. ಹೌದು. ಅವನ್ನು ಪಕ್ಷದ ಸಭೆಗಳಲ್ಲಿ ಕೊಡುಗೆಯಾಗಿ ನೀಡುತ್ತಾರೆ. ಶಾನ್ ಅದರ ಮೇಲೆ ಉಸಿರುಬಿಟ್ಟ. ಯಾವುದೇ ಬೆರಳುಗಳ ಗುರುತಿಲ್ಲ.
`ಅದನ್ನು ನಂಗೆ ಕೊಡು,’ಜಿಲಿನ್ ಕಿರುಚಿದ. ಆತ ಕಾವಲುಗಾರರನ್ನು ನೋಡುತ್ತಿದ್ದ.
`ಶಾನ್ ತಣ್ಣಗೆ ಹೇಳಿದ,`ಖಂಡಿತ. `ಆದರೆ ಒಂದು ಷರತ್ತಿದೆ.’
ಜಿಲಿನ್ ಕಣ್ಣುಗಳಲ್ಲಿ ಕ್ರೂರತೆ ಕಂಡಿತು. ಆತ ಮುಷ್ಟಿ ಬಿಗಿದ. `ನಿನ್ನನ್ನು ನಾನು ಕತ್ತರಿಸ್ತೇನೆ.’
`ನೀನು ಆ ದೇಹದಿಂದ ಏನನ್ನೋ ತಗೊಂಡಿದೀಯ. ಅವನ ಕೈಯಿಂದ ಅದನ್ನು ಎಳೆ-ದಿದ್ದೀಯ.  ನನಗೆ ಅದು ಬೇಕು’
ಶಾನ್‌ನನ್ನು ಕಣಿವೆಯ ಅಂಚಿಗೆ ತಳ್ಳಿ ಲೈಟರನ್ನು ಕಸಿದುಕೊಳ್ಳಬಹುದೇ ಎಂದು ಜಿಲಿನ್ ನೋಡುತ್ತಿದ್ದ.
ಆದರೆ ಶಾನ್ ಅವನಿಂದ ದೂರ ನಿಂತ. `ನನಗೇನೋ ಅದು ತೀರಾ ಬೆಲೆಯುಳ್ಳದ್ದು ಅಂತ ಕಾಣಲಿಲ್ಲ. `ಆದರೆ ಇದು ಮಾತ್ರ..’ ಶಾನ್ ಲೈಟರನ್ನು ಹಚ್ಚಿದ.`ನೋಡು ಚಳಿಗಾಲದಲ್ಲಿಯೂ ಹೇಗೆ ತಕ್ಷಣ ಹೊತ್ತಿ ಉರಿಯುತ್ತೆ..’ ಅದನ್ನು ಆತ ಮತ್ತೆ ಚಾಚಿದ, ಕಾವಲುಗಾರರು ನೋಡುವ ಸಾಧ್ಯತೆ ಇನ್ನೂ ಹೆಚ್ಚಲಿ.
ಕೂಡಲೇ ಜಿಲಿನ್ ತನ್ನ ಜೇಬಿಗೆ ಕೈ ಹಾಕಿ ಒಂದು ಲೋಹದ ಡಿಸ್ಕ್ ತೆಗೆದ. ಅದನ್ನು ಶಾನ್‌ನ ಅಂಗೈಗೆ ಹಾಕಿ ಲೈಟರನ್ನು ಹಿಡಿದೆಳೆದ. ಶಾನ್ ಬಿಡಲಿಲ್ಲ. `ಇನ್ನೂ ಒಂದು. ಒಂದೇ ಪ್ರಶ್ನೆ.’
ಜಿಲಿನ್ ಈಗ ಹತಾಶನಾಗಿ ಕಣಿವೆಯತ್ತ ನೋಡಿದ. ಶಾನ್‌ನನ್ನು ಅಲ್ಲೇ ತುಳಿದುಬಿಡಬೇಕು ಎಂಬಂಥ ಕೋಪ. ಆದರೆ ಈ ಥರ ಹೋರಾಟ ಮಾಡಿದ್ರೆ ಕಾವಲುಗಾರರಿಗೆ ಗೊತ್ತಾಗುತ್ತೆ.
`ನಿನ್ನ ವೃತ್ತಿಪರ ನೋಟ ಬೇಕು.’
`ವೃತ್ತಿಪರ?’
`ಒಬ್ಬ ಕೊಲೆಗಾರನಾಗಿ.’
ಜಿಲಿನ್ ಈಗ ಹೆಮ್ಮೆಯಿಂದ ಉಬ್ಬಿದ. ಅವನ ಬದುಕಿನಲ್ಲೂ ಅಪೂರ್ವ ಕ್ಷಣಗಳಿವೆ. ಜಿಲಿನ್ ಹಿಡಿತ ಸಡಿಲವಾಯ್ತು.
`ಇಲ್ಲಿ ಯಾಕೆ?’ ಶಾನ್ ಪ್ರಶ್ನಿಸಿದ. ` ಯಾಕೆ ನಗರದಿಂದ ಇಷ್ಟು ದೂರ ಬಂದೂ ದೇಹವನ್ನು ಬಿಟ್ಟು ಹೋಗಿರೋದು?’
ಜಿಲಿನ್ ಕಣ್ಣುಗಳಲ್ಲಿ ಒಂದು ಬಗೆಯ ಅನಿಶ್ಚಿತ ಸ್ಥಿತಿ ಕಂಡಿತು. `ವೀಕ್ಷಕರು.’
`ವೀಕ್ಷಕರು?’
`ಯಾರೋ ನನಗೆ ಪರ್ವತದಲ್ಲಿ ಒಂದು ಮರ ಉರುಳುತ್ತಿದೆ ಎಂದು ಹೇಳಿದ್ರು.  ಅಲ್ಲಿ ಕೇಳಲಿಕ್ಕೆ ಯಾರೂ ಇರದಿದ್ರೆ ಅದು ಶಬ್ದವನ್ನೇ ಮಾಡ್ತಿರಲಿಲ್ಲ ಅಲ್ವ? ಯಾರೂ ಪ್ರಶಂಸಿಸದ ಕೊಲೆ ಮಾಡೋದ್ರಲ್ಲಿ ಅರ್ಥ ಎಲ್ಲಿದೆ? ಒಳ್ಳೆಯ ಕೊಲೆಗೆ  ವೀಕ್ಷಕರು ಬೇಕು.’
`ನಾನು ಕೇಳಿದ ಹಲವು ಕೊಲೆಗಳು ಖಾಸಗಿಯಾಗೇ ನಡೆದಂಥವು.’
`ಸಾಕ್ಷಿಗಳಿಲ್ಲ ನಿಜ. ಆದರೆ ಅದನ್ನು ಕಾಣುವವರು ಇರ್‍ತಾರಲ್ಲ? ವೀಕ್ಷಕರಿಲ್ಲದೆ ಅಲ್ಲಿ ಕ್ಷಮೆಯ ಪ್ರಶ್ನೆಯೇ ಇರಲ್ಲ.’
ಅದು ನಿಜ ಎಂದು ಶಾನ್‌ಗೂ ಅನಿಸಿತು. ದೇಹವನ್ನು ಖೈದಿಗಳು ಕಂಡು ಹಿಡಿದಿದ್ದರು. ಯಾಕೆಂದರೆ ಕೊಲೆಗಾರನಿಗೆ ಬೇಕಾದ್ದೂ ಅದೇ.  ಜಿಲಿನ್‌ನ ಕಣ್ಣುಗಳನ್ನೇ ಶಾನ್ ನೋಡುತ್ತ ನಿಂತ. ಕೊನೆಗೆ ಡಿಸ್ಕಿನತ್ತ ನೋಡಿದ. ಅದು ನಿಮ್ನವಾಗಿತ್ತು. ಎರಡು ಅಂಗುಲ ಅಗಲದ್ದು. ಮೇಲೆ ಮತ್ತು ಬುಡದಲ್ಲಿ ಚಿಕ್ಕ ಚಿಕ್ಕ ರಂಧ್ರಗಳಿವೆ. ಅಂದರೆ ಅದನ್ನು ಯಾವುದೋ ಆಭರಣದಲ್ಲಿ  ಹೆಣೆಯಲು ಬಳಸಿದ್ದಾರೆ. ಟಿಬೆಟನ್ ಲಿಪಿಯಿದೆ. ಹಳೆಯ ಶೈಲಿಯಲ್ಲಿ. ಎಲ್ಲವನ್ನು ಡಿಸ್ಕಿನ ಅಂಚಿಗೆ ಬರೆಯಲಾಗಿದೆ. ಅದು ಶಾನ್‌ಗೆ ಅರ್ಥವಾಗುತ್ತಿಲ್ಲ. ಮಧ್ಯದಲ್ಲಿ ಕುದುರೆ ಮುಖವನ್ನು ತೀರಾ ಕಲಾತ್ಮಕ ಶೈಲಿಯಲ್ಲಿ ಬರೆಯಲಾಗಿದೆ. ಅದಕ್ಕೆ ಕೋರೆ ಹಲ್ಲುಗಳಿವೆ.

ಶಾನ್ ಚೋಜೆಯ ಬಳಿ ಬರುತ್ತಿದ್ದಂತೆ ಭಿಕ್ಷುಗಳ ಭದ್ರತಾ ವೃತ್ತ ಬಿಚ್ಚಿಕೊಂಡಿತು. ಲಾಮಾ ತನ್ನ ಧ್ಯಾನವನ್ನು ಮುಗಿಸುವವರೆಗೆ ಕಾಯಲೇ ಎಂದು ಶಾನ್ ಯೋಚಿಸಿದ. ಆದರೆ ಶಾನ್ ಚೋಜೆಯ ಪಕ್ಕ ಕೂರುತ್ತಲೇ ಆತ ಕಣ್ಣು ತೆರೆದ.
`ಅವರಿಗೆ ಪ್ರತಿಭಟನೆ ಮಾಡಲು ನಿಯಮಗಳಿವೆ, ರಿನ್‌ಪೊಚೆ’ ಶಾನ್ ನಿಧಾನವಾಗಿ ಹೇಳಿದ. `ಬೀಜಿಂಗಿನಿಂದ. ಅದನ್ನು ಒಂದು ಪುಸ್ತಕದಲ್ಲಿ ಬರೆಯಲಾಗಿದೆ. ಪ್ರತಿಭಟನಾಕಾರರಿಗೆ ಪಶ್ಚಾತ್ತಾಪ ಪಡಲು ಅಥವಾ ಶಿಕ್ಷೆಯನ್ನು ಒಪ್ಪಿಕೊಳ್ಳಲು ಒಂದು ಅವಕಾಶ  ಕೊಡ್ತಾರೆ. ಅದಾಗದಿದ್ದರೆ ಅವರೆಲ್ಲರನ್ನೂ ಹಸಿವಿಗೆ ಕೆಡವಲಾಗುತ್ತದೆ. ಮೊದಲು ಉದಾಹರಣಾರ್ಥವಾಗಿ ನಾಯಕರು. ಒಂದು ವಾರದ ನಂತರ ಅವರು ಲಾಗೋಯ್‌ನ ಮುಷ್ಕರವು ಮರಣದಂಡನೆಯ ಶಿಕ್ಷೆಗೆ ಅರ್ಹ ಎಂದು ಘೋಷಿಸಬಹುದು. ಅವರು ತುಂಬಾ ಉದಾರಿಗಳಾಗಿದ್ದರೆ ಎಲ್ಲರ ಶಿಕ್ಷೆ ಅವಗೆ ಕೇವಲ ಹತ್ತು ವರ್ಷಗಳನ್ನು ಸೇರಿಸಿ ಸುಮ್ಮನಾಗಬಹುದು.’
`ತಾನು ಮಾಡಲೇಬೇಕಾದ್ದನ್ನು ಬೀಜಿಂಗ್ ಮಾಡುತ್ತೆ, ನಾವೂ ಮಾಡಬೇಕಾದ್ದನ್ನೇ ಮಾಡುತ್ತೇವೆ.’ ನಿರೀಕ್ಷಿತ ಉತ್ತರ.
ಶಾನ್ ಅಲ್ಲಿದ್ದವರನ್ನು ಸುಮ್ಮನೆ ನೋಡಿದ. ಅವರ ಕಣ್ಣುಗಳಲ್ಲಿ ಹೆದರಿಕೆ ಇರಲಿಲ್ಲ. ಹೆಮ್ಮೆಯಿತ್ತು. ಆತ ತನ್ನ ಕೈಗಳನ್ನು ಕೆಳಗಿದ್ದ ಕಾವಲುಗಾರರತ್ತ ಚಾಚಿದ. `ಕಾವಲುಗಾರರು ಯಾಕೆ ಕಾಯ್ತಿದಾರೆ ಅಂತ ನಿನಗೆ ಗೊತ್ತು.’ ಅದು ಒಂದು ಹೇಳಿಕೆ. ಪ್ರಶ್ನೆಯಲ್ಲ. `ಅವರು ಬಹುಶಃ ದಾರಿಯಲ್ಲಿದ್ದಾರೆ. ಗಡಿಗೆ ಇಷ್ಟು ಹತ್ತಿರ ಇರೋವಾಗ ಅವರು ತಡ ಮಾಡುವುದಿಲ್ಲ.’
ಚೋಜೆ ಹೇಳಿದ,` ಜನ ಅದನ್ನು ಇಷ್ಟಪಡುತ್ತಾರೆ. ಅವರು ಯಾವಾಗಲೂ ಇಂಥ ಯಾವುದಕ್ಕೋ ಕಾಯ್ತಾ ಇದ್ದರು.’ ಹತ್ತಿರ ಇದ್ದ ಕೆಲವು ಭಿಕ್ಷುಗಳು ನಿರುಮ್ಮಳವಾಗಿ ನಕ್ಕರು.
ಶಾನ್ ನಿಟ್ಟುಸಿರಿಟ್ಟ. `ಸತ್ತವನ ಕೈಯಲ್ಲಿ ಇದಿತ್ತು…’ ಆತ ಆ ಡಿಸ್ಕನ್ನು ಚೋಜೆಯ ಕೈಗೆ ಹಾಕಿದ. `ಕೊಲೆಗಾರನಿಂದ ಇದನ್ನು ಆತ ಹಿಡಿದೆಳೆದ ಅಂತ ಅನ್ಸುತ್ತೆ.’
ಚೋಜೆಯ ಕಣ್ಣುಗಳು ಸೀದಾ ಆ ಡಿಸ್ಕಿನಲ್ಲೇ ನೆಟ್ಟವು. ಒಂದು ಬಗೆಯ ತಿಳಿವಳಿಕೆಯ ಅಲೆ ಅವನ ಕಣ್ಣುಗಳಲ್ಲಿ ಹಾದುಹೋಯಿತು. ಆಮೇಲೆ ಅವನ ಕಣ್ಣುಗಳು  ಗಂಭೀರವಾದವು. ತನ್ನ ಬೆರಳುಗಳನ್ನು ಸರಿಸುತ್ತ ಅದರಲ್ಲಿದ್ದ ಬರೆಹವನ್ನು ಓದಿದ. ಕೊನೆಗೆ ಆ ಡಿಸ್ಕನ್ನು ವೃತ್ತದ ಇತರರಿಗೆ ರವಾನಿಸಿದ. ಅಲ್ಲಿ ಕಂಡದ್ದು ಹಲವು ಬಗೆಯ ಅಚ್ಚರಿಯ ಉದ್ಗಾರಗಳು. ಎಲ್ಲರೂ ಡಿಸ್ಕನ್ನೇ ನೋಡುತ್ತ ಬೆರಗಾಗಿದ್ದರು.
ಕೊಲೆಯಾದವ ಮತ್ತು  ಕೊಲೆಗಾರನ ನಡುವೆ ಅಂಥ ಸಂಘರ್ಷ ನಡೆದಿರಲಿಲ್ಲ ಎಂಬುದು ಶಾನ್‌ಗೆ ಚೆನ್ನಾಗಿ ಗೊತ್ತಿತ್ತು. ಡಾ|| ಸುಂಗ್ ಒಂದು ವಿಷಯದಲ್ಲಂತೂ ತೀರಾ ಕರಾರು-ವಾಕ್ಕು. ಯಾವುದೋ ಒಂದು ಕ್ಷಣದಲ್ಲಿ ಕೊಲೆಯಾದವ ಆ ದೆವ್ವವನ್ನು ಹಿಡಿ-ದೆಳೆದಿದ್ದ. ಕೂಡಲೇ ತಲೆತಿರುಗಿ ಬಿದ್ದಿದ್ದ.
`ಅವನ ಬಗ್ಗೆ ಪದಗಳಿವೆ,’ ಚೋಜೆ ಹೇಳಿದ. ` ಉನ್ನತ ಶಿಖರಗಳಿಂದ. ನನಗೆ ಖಾತ್ರಿಯಿಲ್ಲ. ಕೆಲವರು ನಮ್ಮ ಮೇಲೆ ಅವನು ಭರವಸೆಯನ್ನೇ ಬಿಟ್ಟಿದ್ದಾನೆ ಎಂದಿದ್ದರು.’
`ನನಗೆ ಅರ್ಥವಾಗಲಿಲ್ಲ.’
`ಹಳೆಯ ದಿನಗಳಲ್ಲಿ ಅವರು ನಮ್ಮವರೇ ಆಗಿದ್ದರು,’ ಲಾಮಾನ ಕಣ್ಣುಗಳು ಆ ಡಿಸ್ಕಿನ ಮೇಲೆಯೇ ನೆಟ್ಟಿದ್ದವು. `ಕಪ್ಪು ವರ್ಷಗಳು ಬಂದಾಗ ಅವರು ಪರ್ವತದ ಆಳದಲ್ಲಿ ಮರೆಯಾದರು. ಆದರೆ ಅವರು ಒಂದಲ್ಲ ಒಂದು ದಿನ ಬರುತ್ತಾರೆ ಎಂದು ಜನ ಹೇಳುತ್ತಿದ್ದರು.’
ಚೋಜೆ ಈಗ ಶಾನ್‌ನನ್ನು ನೋಡುತ್ತಿದ್ದ. `ತಾಮ್‌ದಿನ್. ಈ ಪದಕ ತಾಮ್‌ದಿನ್‌ನಿಂದ ಬಂದಿದ್ದು. ಕುದುರೆ ಮುಖದ್ದು ಎಂದು ಎಲ್ಲರೂ ಹೇಳುತ್ತಾರೆ. ಅದು ಒಂದು ರಕ್ಷಕ ದೈವ.’ ಚೋಜೆ ಮಾತಾಡದೆ ಹಲವು ಬಾರಿ ಮಣಿಸರವನ್ನು ಎಣಿಸಿದ. ಕೊನೆಗೆ ಅವನ ಮುಖದಲ್ಲಿ ಕಂಡದ್ದು ಅಚ್ಚರಿ. `ಈ ಮನುಷ್ಯ ತಲೆಯಿಲ್ಲದೆ ಕಂಡನಲ್ಲವೆ? ಅವನನ್ನು ನಮ್ಮ ಒಂದು ರಕ್ಷಕ ದೆವ್ವ ಕೊಂಡೊಯ್ದಿದೆ.’
ಚೋಜೆಯ ಬಾಯಿಯಿಂದ ಈ ಮಾತು ಬರುತ್ತಲೇ ಯೆಶೆ ವೃತ್ತದ ತುದಿಗೆ ಬಂದಿದ್ದ. ಆತ ಭಿಕ್ಷುಗಳನ್ನು ವಿಚಿತ್ರವಾಗಿ ನೋಡಿದ. ಮುಜುಗರಕ್ಕೆ ಒಳಗಾದವನಂತೆ. ಅಥವಾ ಹೆದರಿಕೆ? `ಅವರು ಏನೋ ಕಂಡಿದ್ದಾರೆ,’ ಆತ ಉಸಿರೇ ಕಟ್ಟಿಹೋದಂತೆ ಹೇಳುತ್ತಿದ್ದ `ಕೂಡುರಸ್ತೆಯಲ್ಲಿ ಕರ್ನಲ್ ಕಾಯುತ್ತಿದ್ದಾನೆ.’

೪೦೪ನೆಯ ಬ್ರಿಗೇಡು ಕಟ್ಟಿದ ಮೊದಲನೆಯ ರಸ್ತೆಯೇ ಆ ಕಣಿವೆಯ ಸುತ್ತಲೂ ಹಾದುಹೋಗಿತ್ತು. ಉನ್ನತ ಕಂದರಗಳ ನಡುವೆ ಮೂಡಿದ ಹಳೆಯ ಕಾಲುದಾರಿಗಳನ್ನು ಈ ರಸ್ತೆ ಕೂಡಿಸಿತ್ತು. ಎರಡು ವಾಹನಗಳು ಸಾಗುತ್ತಿದ್ದ ಆ ರಸ್ತೆ ಡ್ರೇಗನ್ ಕ್ಲಾಸ್‌ಗಳತ್ತಲೇ ಸಾಗುತ್ತದೆ. ಅದು ಎಷ್ಟು ಕಡಿದಾಗಿತ್ತೆಂದರೆ ಕೆಲವು ಸಲ ಅದು ಝರಿಯಾಗಿದ್ದೂ ಇದೆ. ಕಣಿವೆಯನ್ನು ಬಿಟ್ಟ ೨೦ ನಿಮಿಷಗಳ ನಂತರ ತಾನ್‌ನ ಕಾರು ಒಂದು ಕೊಳಕು ಹಾದಿಯತ್ತ ಸಾಗಿತು. ನೋಡಿದರೆ ಈಗಷ್ಟೇ ಒಂದು ಬುಲ್‌ಡೋಜರ್ ಅದನ್ನು ಮಟ್ಟ ಮಾಡಿದಂತಿದೆ. ಕೊನೆಗೆ ಅವರು ತಲುಪಿದ್ದು ಒಂದು ಚಿಕ್ಕ ಬಯಲಿಗೆ. ಶಾನ್ ಕಿಟಕಿಯಿಂದ ಆ ಗಾಳಿ ಹರಿಯುತ್ತಿದ್ದ ನೆಲದ ಬಟ್ಟಲನ್ನೇ ವೀಕ್ಷಿಸಿದ. ಅದರ ಬುಡದಲ್ಲಿ ಒಂದು ಚಿಕ್ಕ ಸೆಲೆಯಿದೆ. ಒಂದು ಏಕಾಂಗಿ ದೇವದಾರು ಮರವೂ ಇದೆ. ಉತ್ತರದಲ್ಲಿ ಅದು ಮುಚ್ಚಿಹೋಗಿದೆ. ದಕ್ಷಿಣದಲ್ಲಿ ಐವತ್ತು ಮೈಲಿಗಳಾಚೆಗಿನ ಕಣಿವೆಯನ್ನು ತೋರಿಸುತ್ತಿದೆ. ಟಿಬೆಟನ್ನರಿಗೆ ಇದೊಂದು ಶಕ್ತಿಸ್ಥಳವಾಗಬಹುದಿತ್ತು. ಸಾಮಾನ್ಯವಾಗಿ ದೆವ್ವಗಳು ವಾಸಿಸುವ ಸ್ಥಳ.
ಫೆಂಗ್ ಟ್ರಕ್ಕನ್ನು ನಿಲ್ಲಿಸುತ್ತಿದ್ದಂತೆಯೇ ತೀರಾ ಉದ್ದವಾದ ಚಿಮಣಿ ಇದ್ದ ಒಂದು ಉದ್ದ ಶೆಡ್ ಕಣ್ಣಿಗೆ ಬಿತ್ತು. ಅದನ್ನು ಇತ್ತೀಚೆಗೆ ಕಟ್ಟಲಾಗಿದೆ. ಬೇರೆ ರಚನೆಗಳಿಂದ ಪ್ಲೈವುಡ್‌ಗಳನ್ನು ಕಿತ್ತು ತೆಗೆದು ಇದಕ್ಕೆ ಜೋಡಿಸಲಾಗಿದೆ.ಮರದ ಆ ಬಿಡಿ ಚೂರುಗಳು ತಮ್ಮ ಹಿಂದಿನ ಜನ್ಮದ ಚಿತ್ರಗಳನ್ನು ಇನ್ನೂ ಬಿಂಬಿಸುತ್ತಿವೆ. ಒಂದಕ್ಕೊಂದು ಹೊಂದಿಕೆಯಾಗದ ಚೂರುಗಳಿಂದ ಜೋಡಿಸಿದ ಒಂದು ವಿಚಿತ್ರ ಪ್ರಶ್ನೆಯ ರೂಪದಲ್ಲಿ ಆ ಶೆಡ್ ಕಾಣುತ್ತಿದೆ. ಅದರ ಹಿಂದೆ ಹಲವು ಚತುಶ್ಚಕ್ರ ವಾಹನಗಳು. ಅವುಗಳ ಹಿಂದೆ ಹಲವು ಡಜನ್ ಪಿ ಎಲ್ ಎ ಅಕಾರಿಗಳು.
ಅಕಾರಿಗಳ ಜೊತೆ ಕೊಂಚ ಚರ್ಚಿಸಿದ ತಾನ್ ತಿರುಗಿ ಶಾನ್‌ಗೆ ತನ್ನ ಜೊತೆ ಸೇರಲು ಸನ್ನೆ ಮಾಡಿದ. ಯೆಶೆ ಮತ್ತು ಫೆಂಗ್ ಕೂಡಾ ಸೇರಿಕೊಂಡರು. ಅಕಾರಿಯೊಬ್ಬ ಆತುರಾತುರವಾಗಿ ಅವರಿಗೆ ಟ್ರಕ್ಕಿನಲ್ಲೇ ಇರಲು ಹೇಳಿದ.
ಶೆಡ್‌ನ ಇಪ್ಪತ್ತಡಿ ಹಿಂದೆ ಒಂದು ಗುಹೆಗೆ ಹೋಗುವ ಬಾಗಿಲಿದೆ. ಅದರ ಮೇಲೆ ಹೊಸ ಕೆತ್ತನೆಯ ಗುರುತುಗಳಿವೆ. ಅದನ್ನು ಇತ್ತೀಚೆಗೆ ಅಗಲಿಸಲಾಗಿದೆ. ಹಲವು ಅಕಾರಿಗಳು ಗುಹೆಯ ಹತ್ತಿರ ಧಾವಿಸಿದರು. ತಾನ್ ಕಿರುಚಿದ ಕೂಡಲೇ ನಿಂತರು. ಕೊನೆಗೆ ಮುಂದೆ ಬಂದವರು ವಿದ್ಯುತ್ ಲಾಟೀನು ಹಿಡಿದ ಇಬ್ಬರು ಸೈನಿಕರು.  ಉಳಿದವರೆಲ್ಲ ಅಲ್ಲೇ ಗುಸುಗುಸು ಮಾತನಾಡುತ್ತ ನಿಂತರು. ಶಾನ್ ಮತ್ತು ತಾನ್ ಆ ಸೈನಿಕರ ಹಿಂದೆ ನಡೆದರು.
ಮೊದಲ ನೂರಡಿ ನಡೆಯಲ್ಲಿ ಅವರು ಕಂಡದ್ದು ತೀರಾ ಕಡಿದಾದ ಸುರಂಗದ ರೂಪದ ಹಾದಿ. ಅಲ್ಲಿ ಕೈಬಂಡಿ ಹೋಗಲು ಬೇಕಾದಂತೆ ದಾರಿ ಇತ್ತು. ಅದೇ ಕೊರಕಲು ದಾರಿ ಮುಂದೆ ಒಂದು ದೊಡ್ಡ ಅಂಗಣಕ್ಕೆ ದಾರಿ ಮಾಡಿಕೊಟ್ಟಿತು. ತಾನ್ ಅಲ್ಲಿ ಎಷ್ಟು ಹಠಾತ್ತಾಗಿ ನಿಂತ ಎಂದರೆ ಶಾನ್ ಇನ್ನೇನು ಅವನಿಗೆ ಡಿಕ್ಕಿ ಹೊಡೆಯುವುದರಲ್ಲಿದ್ದ.
ಗೋಡೆಗಳಿಗೆ ಶತಮಾನಗಳ ಹಿಂದೆ ಪ್ಲಾಸ್ಟರ್ ಹಾಕಿದಂತಿದೆ.  ಅದರ ಮೇಲೆ ಭೀಕರ ನೋಟ ಬೀರುತ್ತಿರುವ ಪ್ರಾಣಿಗಳ  ಮ್ಯೂರಲ್‌ಗಳು. ಆ ಚಿತ್ರಗಳನ್ನು ನೋಡುತ್ತಲೇ ಶಾನ್‌ನ ಹೃದಯದಲ್ಲಿ ಏನೋ ಸಿಕ್ಕಿಹಾಕಿಕೊಂಡ ಅನುಭವ.  ತಾನ್ ಮತ್ತು ಅವನ ಸೇನೆ ಅಲ್ಲಿ ಬಂದು ಉಲ್ಲಂಘನೆ ಮಾಡಿದ್ದಾರೆ ಎಂಬ ಭಾವವಲ್ಲ. ಶಾನ್‌ನ ಇಡೀ ಬದುಕೇ ಅಂಥ ಉಲ್ಲಂಘನೆಗಳ ಸರಮಾಲೆ. ನಡುಗುವ ಕೈಗಳಿಂದ ಲಾಟೀನು ಹೊತ್ತಿದ್ದ ಸೈನಿಕರು ತೋರಿಸುತ್ತಿದ್ದ ದೆವ್ವಗಳ ಚಿತ್ರವೂ ಶಾನ್‌ನನ್ನು ಹೆದರಿಸಿರಲಿಲ್ಲ. ಆ ಚಿತ್ರಗಳಂತೂ ಅವರ ಕಣ್ಣೆದುರಿಗೇ ನೃತ್ಯ ಮಾಡುತ್ತಿದ್ದಂತೆ ಭಾಸವಾಗುತ್ತಿದೆ. ೪೦೪ನೆಯ ಬ್ರಿಗೇಡಿನಲ್ಲಿ ಶಾನ್ ಕಲಿತಿದ್ದ ಹೆದರಿಕೆಗಳಿಗೆ ಹೋಲಿಸಿದರೆ ಇದು ಹೆಚ್ಚೇನಲ್ಲ.
ಅಲ್ಲ. ಪ್ರಾಚೀನ ಕಲಾಕೃತಿಗಳು ಶಾನ್‌ನನ್ನು ಅಣಕಿಸಿದ್ದು ಹಾಗೆಯೇ. ಚೋಜೆಯ ಬಳಿ ಇರುವಂತೆ ಅವು ಅವನಿಗೆ ಆದೇಶ ನೀಡುತ್ತಿವೆ. ಅವು ಎಷ್ಟು ಮುಖ್ಯ….. ತಾನೆಷ್ಟು ಸಣ್ಣವನಾಗಿದ್ದೇನೆ. ಅವು ಎಷ್ಟು ಸುಂದರವಾಗಿವೆ…ತಾನೆಂಥ ಕುರೂಪಿಯಾಗಿದ್ದೇನೆ. ಅವು ಎಷ್ಟು ಖಚಿತವಾಗಿ ಟಿಬೆಟನ್ ಆಗಿವೆ…. ತಾನು ಎಷ್ಟು ಖಚಿತವಾಗಿ ಯಾರೂ ಆಗಿಲ್ಲದೆ ಇದ್ದೇನೆ…..
ಅವರು ಇನ್ನೂ ಹತ್ತಿರ ಹೋದರು. ಸುಮಾರು ಐವತ್ತಡಿಯ ಗೋಡೆಯು ಸೈನಿಕರ ಲಾಟೀನಿನಿಂದ ಬೆಳಗುತ್ತಿದೆ. ಗಾಢವಾದ, ಶ್ರೀಮಂತ ಬಣ್ಣಗಳು ತೀರಾ ನಿಚ್ಚಳವಾಗುತ್ತಿದ್ದಂತೆ ಶಾನ್‌ಗೆ ಆ ಚಿತ್ರಗಳ ಗುರುತು ಸಿಗುತ್ತಿದೆ. ಮಧ್ಯದಲ್ಲಿ ಸುಮಾರು ಆಳೆತ್ತರದ  ಕುಳಿತ ಬುದ್ಧನ ನಾಲ್ಕು ಚಿತ್ರಗಳು. ಹಳದಿ ದೇಹದ ವಜ್ರಜನ್ಯ ಬುದ್ಧ. ದಾನ ಕೊಡುವಂತೆ ಅವನ ಎಡ ಅಂಗೈ  ಅರಳಿದೆ. ಆಮೇಲೆ ಕೆಂಪು ಬಣ್ಣದ ಅಸೀಮ ಬೆಳಕಿನ ಬುದ್ಧ. ಅತ್ಯಂತ ಕುಸುರಿ ಕೆಲಸದಿಂದ ರೂಪುಗೊಂಡ ನವಿಲಿನ ಸಿಂಹಾಸನದ ಮೇಲೆ ಕುಳಿತಿದ್ದಾನೆ.  ಅವನ ಪಕ್ಕದಲ್ಲಿ ಬಲಗೈ ಎತ್ತಿ ಖಡ್ಗ ಹಿಡಿದು ಭಯನಿವಾರಕ ಮುದ್ರೆ ಹೊತ್ತ ಅಂಗೈಯನ್ನು ಚಾಚಿದ ಬುದ್ಧ. ಅವನೇ ಹಸಿರು ಬುದ್ಧ. ಕೊನೆಯಲ್ಲಿ ನೀಲಿ ಬುದ್ಧ. ಅವನು ಅಚಲ ಬುದ್ಧ. ಹಾಗೆಂದು ಚೋಜೆ ಹೇಳುತ್ತಿದ್ದದ್ದು ನೆನಪಾಗುತ್ತಿದೆ. ಆನೆಗಳಿಂದಸಿಂಗಾರವಾಗಿದ್ದ ಸಿಂಹಾಸನದ ಮೇಲೆ ಕುಳಿತಿದ್ದಾನೆ.ಅವನ ಬಲಗೈಯು ನೆಲಕ್ಕೆ ಚಾಚಿದ ಮುದ್ರೆಯನ್ನು ಹೊಂದಿದೆ. ಹೊಸ ಖೈದಿಗಳಿಗೆ ಚೋಜೆ ಸಾಮಾನ್ಯವಾಗಿ ಹೇಳಿಕೊಡುತ್ತಿದ್ದ ಮುದ್ರೆಯದು. ತಮ್ಮ ನಂಬಿಕೆಗಳಿಗೆ ಸಾಕ್ಷಿಯಾಗಿ ಭೂಮಿಯನ್ನು ಕರೆಯುತ್ತಿದ್ದ ಮುದ್ರೆ.
ಬುದ್ಧಂದಿರ ಆಚೀಚೆ ಶಾನ್‌ಗೆ  ಗೊತ್ತಿಲ್ಲದ ವಿಚಿತ್ರ ಆಕೃತಿಗಳು. ಅವುಗಳು ಸಮರಯೋಧರ ದೇಹವನ್ನು ಹೊತ್ತಿವೆ. ಬಿಲ್ಲು ಎತ್ತಿವೆ. ಕೊಡಲಿ, ಖಡ್ಗಗಳನ್ನು ಹಿಡಿದಿವೆ. ಮನುಷ್ಯನ ಮೂಳೆಗಳ ಮೇಲೆ ನಿಂತಿವೆ. ಶಾನ್‌ಗೆ ತೀರಾ ಹತ್ತಿರದಲ್ಲಿ ಎಡಭಾಗದಲ್ಲಿ ಉಗ್ರ ಶರಭದ ಮುಖ ಹೊತ್ತ ಕೋಬಾಲ್ಟ್ ನೀಲಿ ಬಣ್ಣದ ಆಕೃತಿಯಿದೆ. ಅವನ ಕುತ್ತಿಗೆಯಲ್ಲಿ ಹಾವುಗಳ ಮಾಲೆಯಿದೆ. ಅವನ ಪಕ್ಕದಲ್ಲಿ ಬಿಳಿಯ ಯೋಧ ಇದ್ದಾನೆ. ಮುಖ ಹುಲಿಯದು. ಸುತ್ತಲೂ ಚಿಕ್ಕ ಚಿಕ್ಕ ಅಸ್ಥಿಪಂಜರಗಳ ಚಿತ್ರಗಳಿವೆ.
ಹಠಾತ್ತಾಗಿ ಶಾನ್‌ಗೆ ಅರಿವಾಯಿತು. ಅವು ನಂಬಿಕೆಯನ್ನು ರಕ್ಷಿಸುವ ಆಕೃತಿಗಳು. ಶಾನ್ ಮುಂದೆ ಸಾಗಿದಂತೆ ಹುಲಿಯ ಮುಖದ ಆಕೃತಿಯ ಕಾಲುಗಳ ಬಣ್ಣವನ್ನು ತೆಗೆದುಹಾಕಿದ್ದು ಕಂಡಿತು. ಇಲ್ಲ. ಬಣ್ಣ ತೆಗೆದಿಲ್ಲ. ಯಾರೋ ಅದನ್ನು ಕೆತ್ತಲು ಹೋಗಿ ವಿಫಲರಾಗಿದ್ದಾರೆ. ಚಿತ್ರದ ಕೆಳಗೆ ಬಣ್ಣದ ಒಂದು ಚೂರು ಬಿದ್ದಿದೆ.
ಬೆಳಕು ಕಡಮೆಯಾಗುತ್ತಿದೆ. ಸೈನಿಕರು ಗೋಡೆಯ ಗುಂಟ ಕೆಳಗಿನ ಇನ್ನೊಂದುದೊಡ್ಡ ಅಂಗಣದತ್ತ ನಡೆಯುತ್ತಿದ್ದಾರೆ. ಇನ್ನೂ ಎರಡು ದೆವ್ವಗಳ ಚಿತ್ರಗಳು ಕಾಣುತ್ತಿವೆ. ಒಂದು ದೊಡ್ಡ ಹೊಟ್ಟೆಯ, ಹಸಿರು ಆಕೃತಿ. ಮಂಗನ ಮುಖ. ಒಂದು ಬಿಲ್ಲು ಹಿಡಿದು ಒದು ಮೂಳೆಯನ್ನು ತೋರಿಸುತ್ತಿದೆ.  ಆಮೇಲೆ ಒಂದು ಕೆಂಪು ಆಕೃತಿ. ಅದಕ್ಕೆ ನಾಲ್ಕು ಕೋರೆ ಹಲ್ಲುಗಳಿವೆ. ಉಗ್ರವಾದ ಮುಖ. ಅದರ ಚಿನ್ನದ ಬಣ್ಣದ ಕೂದಲಿನ ಮೇಲುಗಡೆ ಒಂದು ಕುದುರೆಯ ಚಿಕ್ಕ ಹಸಿರು ತಲೆ ಇದೆ. ಒಂದು ಭುಜದ ಮೇಲೆ ಹುಲಿಯ ಚರ್ಮವನ್ನು ಹೊದಿಸಲಾಗಿದೆ. ಮೂಳೆಗಳಿಂದ ಸುತ್ತುವರೆದು, ಅಗ್ನಿಯ ಜ್ವಾಲೆಯಲ್ಲಿ ಆಕೃತಿ ನಿಂತಿದೆ. ಶಾನ್ ತನ್ನ ಜೇಬಿನಲ್ಲಿದ್ದ ಪದಕವನ್ನು ಗಟ್ಟಿಯಾಗಿ ಹಿಡಿದ. ಕೊಲೆಗಾರನಿಂದ ಸಿಕ್ಕಿದ ಪದಕ ಅದು. ಅದನ್ನು ಹೊರಗೆ ಎಳೆಯಬೇಕೆಂಬ ಹಂಬಲವನ್ನು ಹೇಗೋ ಹತ್ತಿಕ್ಕಿದ. ಕೋರೆ ಹಲ್ಲುಗಳ ಕುದುರೆ ಮುಖವು ಈ ಪದಕಕ್ಕೆ ಹೊಂದುತ್ತ-ದೆಂದು ಅವನಿಗೆ ಖಾತ್ರಿಯಾಗಿದೆ.
ಲಾಟೀನುಗಳು ಈಗ ತಾನ್‌ನ ಬೂಟುಗಳತ್ತ ಕೇಂದ್ರೀಕೃತವಾಗಿವೆ. ಸ್ವತಃ ತಾನ್ ಒಂದು ದೆವ್ವದ ಹಾಗೆ ಕಾಣುತ್ತಿದ್ದಾನೆ. `ಇಲ್ಲಿ ಹಲವು ಸಂಗತಿಗಳು ಬದಲಾಗಿವೆ,’ ತಾನ್ ಹಠಾತ್ತಾಗಿ ಹೇಳಿದ.
ಶಾನ್ ತಮ್ಮನ್ನು ಕರೆದುಕೊಡು ಹೋದ ಸಿಬ್ಬಂದಿಯ ಮುಖಗಳನ್ನೇ ನೋಡಿದ. ಅವನ ಹೃದಯ ಮತ್ತೆ ಕಂಪಿಸಿತು. ತಾನ್‌ನಂಥವರು ಇಲ್ಲಿ ಏನು ಮಾಡುತ್ತಾರೆಂಬ ಅರಿವು ಶಾನ್‌ಗಿತ್ತು.  ಪರ್ವತದ ಆ ಆಳ ಸ್ಥಳದಲ್ಲಿನ ಸದ್ದು ಹೊರಗೆ ಕೇಳಿಸುವುದೇ ಇಲ್ಲ. ಕಿರುಚಾಟವೂ ಕೇಳಿಸುವುದಿಲ್ಲ. ಅಥವಾ ಒಂದು ಬಂದೂಕಿನ ಹೊಡೆತ. ಯಾವುದೂ ಕೇಳಿಸದು. ಯಾವುದಕ್ಕೂ ಕುರುಹೇ ಇರುವುದಿಲ್ಲ. ಜಿಲಿನ್ ಹೇಳಿದ್ದು ತಪ್ಪು. ಎಲ್ಲಾ ಕೊಲೆಗಳೂ ಕ್ಷಮೆಗಾಗಿಯೇ ನಡೆಯುವುದಿಲ್ಲ.
ತಾನ್ ಈಗ ಶಾನ್‌ಗೆ ಒಂದು ಚೀಟಿಯನ್ನು ಕೊಟ್ಟ. ಅದು ಶಾನ್ ನೀಡಿದ ಅಪಘಾತದ ವರದಿಯ ಪ್ರತಿ. `ನಾವು ಇದನ್ನು ಇನ್ನುಮುಂದೆ ಬಳಸುವುದಿಲ್ಲ.’
ನಡುಗುವ ಕೈಗಳಿಂದ ಶಾನ್ ಅದನ್ನು ಪಡೆದ.
ತಾನ್ ಮತ್ತೆ ತನ್ನ ಸೈನಿಕರ ಜೊತೆಗೆ ಒಂದು ಬದಿ ಸುರಂಗದಲ್ಲಿ ನಡೆದ. ಅದರ ಒಳಗೆ ಹೋಗುವದಕ್ಕೆ ಮುನ್ನ ತಾನ್ ಶಾನ್‌ನನತ್ತ ಅಸಹನೆಯಿಂದ ನೋಡಿ ಜೊತೆಗೆ ಬರುವಂತೆ ಸನ್ನೆ ಮಾಡಿದ. ಶಾನ್ ಹಿಂದಿರುಗಿ ನೋಡಿದ. ಓಡಿ ಹೋಗಲು ದಾರಿಯೇ ಇಲ್ಲ. ಹೊರಗೆ ಇನ್ನೂ ಇಪ್ಪತ್ತು ಸೈನಿಕರು ಕಾಯುತ್ತಿದ್ದಾರೆ. ಬಣ್ಣದ ಪ್ರತಿಮೆಗಳತ್ತ ಮತ್ತೆ ನೋಡಿದ. ಹತಾಶೆ ಮೂಡಿತು. ತನಗೆ ಆ ರಕ್ಷಕ ಪ್ರತಿಮೆಗಳಲ್ಲಿ ಪ್ರಾರ್ಥನೆ ಮಾಡುವುದು ಗೊತ್ತಿದ್ದರೆ ಎಂದು ಯೋಚಿಸುತ್ತ ಮುಂದೆ ಸಾಗಿದ.
ಆ ಸುರಂಗದಲ್ಲಿ ಒಂದು ಬಗೆಯ ವಾಸನೆ ಹರಡಿತ್ತು. ಊದುಬತ್ತಿಯ ವಾಸನೆ ಅಲ್ಲ. ಊದು-ಬತ್ತಿ ಉರಿದುರಿದು ಕೊನೆಗೆ ಅದರ ಧೂಳು ನೀಡುವ ಪರಿಮಳ. ಎರಡೂ ಬದಿಯ ಗೋಡೆಯಲ್ಲಿ ರಕ್ಷಕ ದೆವ್ವಗಳ ಪ್ರತಿಮೆ. ಹಾಗೇ ಹೋದಂತೆ ಕಪಾಟುಗಳು ಕಾಣಿಸುತ್ತಿವೆ. ಅವನ್ನು ಮರದಿಂದ ಮಾಡಿದ್ದಾರೆ. ಬಹುಶಃ  ಹಲವು ದಶಕಗಳಷ್ಟು  ಅಥವಾ ಹಲವು ಶತಮಾನಗಳಷ್ಟು ಹಳೆಯವು. ಒಂದಡಿ ಅಗಲ. ಪ್ರತೀ ಗೋಡೆಯ ಬದಿಯೂ ನಾಲ್ಕು ಕಪಾಟುಗಳು. ಮೊದಲನೆಯದು ಮೂವತ್ತು ಅಡಿ ಉದ್ದ ಇದೆ. ಖಾಲಿ. ಉಳಿದದ್ದೆಲ್ಲ ಆ ಲಾಟೀನಿನ ಬೆಳಕಿಗೆ ಸಿಗದ ಹಾಗೆ  ಕಂಡೂ ಕಾಣದಂತಿವೆ.
ಶಾನ್ ಬೆನ್ನಹುರಿಯಲ್ಲಿ ಒಂದು ಆಘಾತದ ಸೆಳಕು. `ಬೇಡ!’ ಶಾನ್ ಕಿರುಚಿದ.
ತಾನ್ ಕೂಡಾ ಈಗ ದೈಹಿಕವಾಗಿ ತಡೆಹಿಡಿದವನಂತೆ ನಿಂತಿದ್ದ. `ಇದರ ಆವಿಷ್ಕಾರದ ವರದಿಯನ್ನು ನಾನು ಎರಡು ವಾರಗಳ ಹಿಂದೆ ಓದಿದ್ದೆ,’ ಪಿಸುಗುಡುವ ಹಾಗೆ ತಾನ್ ಹೇಳುತ್ತಿದ್ದ,`ಆದರೆ ಅದು ಹೀಗಿರುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ.’
ಅವು ತಲೆಬುರುಡೆಗಳು. ನೂರಾರು ಕಪಾಲಗಳು!
ಅವರು ನೋಡಿದಷ್ಟೂ ಕಾಣುತ್ತಿವೆ. ಅಷ್ಟು ಅಸಂಖ್ಯ. ಪ್ರತಿಯೊಂದನ್ನೂ ಒಂದು ಪೂಜನಾ ಪೀಠದ ಮೇಲೆ ಇಡಲಾಗಿದೆ. ಅರ್ಧವೃತ್ತಾಕಾರದ ಆ ಪೀಠಗಳ ಬದಿಯಲ್ಲಿ ಧಾರ್ಮಿಕ ವಸ್ತುಗಳಿವೆ. ಬೆಣ್ಣೆಯ ದೀಪವನ್ನು ಹಚ್ಚಿದ ಗುರುತಿದೆ. ಪ್ರತಿಯೊಂದೂ ತಲೆಬುರುಡೆಗೂ ಚಿನ್ನದ ಕವಚವಿದೆ.
ತಾನ್ ಒಂದು ಕಪಾಲವನ್ನು ಮುಟ್ಟಿದ. `ಭೂಗರ್ಭ ಶಾಸ್ತ್ರಜ್ಞರ ಒಂದು ತಂಡ ಇದನ್ನು ಪತ್ತೆ ಹಚ್ಚಿತು. ಅವೆಲ್ಲ ಶಿಲ್ಪಕೃತಿಗಳು ಎಂದು ಅವರು ಭಾವಿಸಿದರು. ಆಮೇಲೆ ಒಂದನ್ನು ನೋಡಿದ ಕೂಡಲೇ ಎಲ್ಲವೂ ಸ್ಪಷ್ಟವಾಯಿತು.’ ತಾನ್ ಆ ತಲೆಬುರುಡೆಯನ್ನು ಎತ್ತಿ ಬೆರಳಿನಿಂದ ತಟ್ಟಿದ. `ಬರೀ ಮೂಳೆ.’
ದಿಗ್‌ಭ್ರಮಿತನಾದ ಶಾನ್ ಕೇಳಿದ,`ನಿನಗೆ ಈ ಸ್ಥಳ ಯಾವುದೆಂದು ಗೊತ್ತಾಗಲಿಲ್ಲವೆ?’
`ಗೊತ್ತಲ್ಲ, ಒಂದು ಚಿನ್ನದ ಗಣಿ.’

`ಪವಿತ್ರ ಭೂಮಿ,’ ಶಾನ್ ಪ್ರತಿಭಟಿಸಿದ. ಕರ್ನಲ್ ಹಿಡಿದಿದ್ದ ಕಪಾಲವನ್ನು ಶಾನ್ ಮುಟ್ಟಿದ. `ಇವು ಅತ್ಯಂತ ಪವಿತ್ರವಾದ ಕಲಾಕೃತಿಗಳು.’ ತಾನ್ ಸಡಿಲ ಬಿಟ್ಟ ಮೇಲೆ ಆ ತಲೆಬುರುಡೆಯನ್ನು ಶಾನ್ ಅದರ ಸ್ಥಳದಲ್ಲೇ ಇಟ್ಟ.  `ಕೆಲವು ಬೌದ್ಧಾಲಯಗಳು ತಮ್ಮ ಅತ್ಯಂತ ಗೌರವಪಾತ್ರ ಲಾಮಾಗಳ ಕಪಾಲಗಳನ್ನು ಹೀಗೆ ರಕ್ಷಿಸಿದವು. ಅವರೆಲ್ಲ ಜೀವಂತ ಬುದ್ಧಂದಿರು. ಇದು ಅವರ ಪುಣ್ಯಕ್ಷೇತ್ರ. ಅದಕ್ಕಿಂತ ಹೆಚ್ಚಿನದು. ಇದಕ್ಕೆ ತುಂಬಾ ಶಕ್ತಿ ಇದೆ. ಬಹುಶಃ ಇದನ್ನು ಶತಮಾನಗಳ ಕಾಲ ಬಳಸಿದ್ದಾರೆ.’
`ಇದರ ಪಟ್ಟಿ ಮಾಡಲಾಗಿದೆ,’ ತಾನ್ ವರದಿ ಮಾಡಿದ. `ಸಾಂಸ್ಕೃತಿಕ ಪುರಾತತ್ವ ಇಲಾಖೆ-ಗಾಗಿ.’
ಆಗ ಶಾನ್‌ಗೆ ಎಲ್ಲವೂ ದಿಢೀರನೆ ಅರಿವಾದಂತಾಯಿತು. `ಆ ಹೊಗೆಕೊಳವೆ…!’ ದನಿ ತೀರಾ ಒಣಗಿತ್ತು.
`ಐವತ್ತರ ದಶಕದಲ್ಲಿ ಟೀನ್‌ಸ್ಟಿನ್‌ನ ಇಡೀ ಉಕ್ಕಿನ ಕಾರ್ಖಾನೆಯನ್ನು ಟಿಬೆಟನ್ ದೇಗುಲಗಳಿಂದ ಬಂದ ಚಿನ್ನದಿಂದಲೇ ನಡೆಸಲಾಗುತ್ತಿತ್ತು. ಅದು ಜನರಿಗೆ ಮಾಡಿದ ಮಹಾನ್ ಸೇವೆ. ಇದಕ್ಕಾಗಿ ಟಿಬೆಟನ್ ಅಲ್ಪಸಂಖ್ಯಾತರಿಗೆ ಧನ್ಯವಾದ ಹೇಳಿ ಒಂದು ಫಲಕವನ್ನೂ ನೆಡಲಾಗಿದೆ.’
`ನೀವು ಮುಟ್ಟಿರೋದು ಒಂದು ಸಮಾ…’
`ಸಂಪನ್ಮೂಲಗಳು ತೀರಾ ಕಡಿಮೆಯಾಗಿವೆ. ಈಗಂತೂ ಮೂಳೆಯ ಚೂರುಗಳನ್ನೂ ಉಪ ಉತ್ಪನ್ನ ಎಂದು ವರ್ಗೀಕರಿಸಲಾಗಿದೆ. ಅವುಗಳನ್ನು ಖರೀದಿಸಲು ಚೆಂಗ್‌ದು ನಲ್ಲಿ ಇರೋ ಒಂದು ರಸಗೊಬ್ಬರ ಕಾರ್ಖಾನೆ ಮುಂದೆ ಬಂದಿದೆ.’
ಎಲ್ಲರೂ ಮೌನವಾಗಿ ನಿಂತರು. ಮೊಣಕಾಲೂರಿ ಒಂದು ಪ್ರಾರ್ಥನೆ ಮಾಡುವ ಯೋಚನೆ ಶಾನ್‌ನ ಮನಸ್ಸಿನಲ್ಲಿ ಹಾದುಹೋಯಿತು.
`ನಾವು ಈ ಉಪಕ್ರಮಕ್ಕೆ ಮುಂದಾಗ್ತೇವೆ,’ ತಾನ್ ಹೇಳಿದ ` ಅಕೃತವಾಗಿ. ಕೊಲೆ ಪ್ರಕರಣದ್ದು…’
ಶಾನ್‌ಗೆ ತಕ್ಷಣ ನೆನಪಾಯಿತು. ಎದೆಬಡಿತ ಹೆಚ್ಚಿತು. ತನಗೆ ತಾನ್ ಕೊಟ್ಟ ವರದಿಯನ್ನು ಮತ್ತೆ ಬಿಡಿಸಿದ. ತಾನ್ ಒಳಗಡೆ ನಿಜವಾದ ಪತ್ತೇದಾರನಿದ್ದಾನೆ. ಆತ ತನ್ನ ಸುಳ್ಳು ಶುರುವಾತನ್ನು ಅಳಿಸಿಹಾಕುವ ಬಯಕೆ ಹೊಂದಿದ್ದಾನೆ.
`ತನಿಖೆ ನನ್ನ ಹೆಸರಿನಲ್ಲಿ ಇರುತ್ತೆ. ನೀನೀಗ ಕೇವಲ ಟ್ರಸ್ಟಿಯಲ್ಲ,’ ತಾನ್ ಮುಂದಾಗ-ಬಹುದಾದ್ದನ್ನು ಊಹಿಸಿದಂತೆ ನಿಧಾನವಾಗಿ ಹೇಳಿದ,`ವಾಸ್ತವವಾಗಿ ಯಾರಿಗೂ ಏನೂ ಗೊತ್ತಾಗ-ಕೂಡದು. ನೀನು ನನ್ನ,-‘ ಪದಕ್ಕಾಗಿ ತಾನ್ ಹುಡುಕುತ್ತಿದ್ದ,`ಪ್ರಕರಣವನ್ನು ನೋಡಿಕೊಳ್ಳುವಾತ. ನನ್ನ ಕಾರ್ಯಾಚರಣೆಯನ್ನು ನೇರವಾಗಿ ಮಾಡುವವ.’
ಶಾನ್ ಗೊಂದಲಕ್ಕೆ ಬಿದ್ದ. ತನ್ನನ್ನು ಚುಡಾಯಿಸಲೆಂದೇ ತಾನ್ ಇಲ್ಲಿಗೆ ಈ ಗವಿಗೆ ಕರೆದು-ಕೊಂಡು ಬಂದಿದ್ದಾನೆಯೆ? `ನಾನು ಈ ವರದಿಯನ್ನು ಮತ್ತೆ ಬರೆಯಬಹುದು. ನಾನು ಡಾ|| ಸುಂಗ್ ಬಳಿಯೂ ಮಾತಾಡಿದೆ. ೪೦೪ನೆಯ ಬ್ರಿಗೇಡಿನಲ್ಲಿ ಸಮಸ್ಯೆ ಇದೆ. ನಾನು ಈಗ ಅಲ್ಲಿಯೇ ಹೆಚ್ಚು ಉಪಯುಕ್ತ.’
ತಾನ್ ಇನ್ನು ಮಾತಾಡುವುದು ಏನೂ ಇಲ್ಲ ಎಂಬಂತೆ ಕೈ ಎತ್ತಿದ.`ನಾನು ಈ ಬಗ್ಗೆ ತುಂಬಾ ಯೋಚಿಸಿದೇನೆ. ನಿನ್ನ ಬಳಿ ಈಗಾಗಲೇ ಒಂದು ಟ್ರಕ್ ಇದೆ. ಸಾರ್ಜೆಂಟ್ ಫೆಂಗ್‌ನಿಗೆ ನಿನ್ನ ಮೇಲೆ ನಿಗಾ ಇಡುವಂತೆ ನಾನು ಹೇಳಬಹುದು. ನೀನು ನಿನ್ನ ಸಾಕಿದ ಟಿಬೆಟನ್‌ನನ್ನು ಇಟ್ಟುಕೊಳ್ಳಬಹುದು. ಜೆಡ್ ಸ್ಪ್ರಿಂಗ್‌ನಲ್ಲಿ ಒಂದು ಖಾಲಿ ಬ್ಯಾರಕ್ ಇದೆ. ಅದರಲ್ಲಿ ನೀನು ಊಟ ನಿದ್ದೆ ಮಾಡಬಹುದು.’
`ನೀನು ನಂಗೆ ಓಡಾಡೋ ಸ್ವಾತಂತ್ರ್ಯ ಕೊಡ್ತೀಯ?’
ತಾನ್ ಮತ್ತೆ ತಲೆಬುರುಡೆಗಳನ್ನೇ ನೋಡುತ್ತಿದ್ದ.`ನೀನು ಓಡಿ ಹೋಗಬಾರ್‍ದು.’ ಆತ ಶಾನ್ ನತ್ತ ತಿರುಗಿ ನೋಡಿದಾಗ ಕಣ್ಣುಗಳಲ್ಲಿ  ಒಂದು ಬಗೆಯ ಅಶಾಂತಿ ಇತ್ತು. `ನೀನು ಯಾಕೆ ಓಡಿ ಹೋಗಲ್ಲ ಅಂತ ನಿಂಗೆ ಗೊತ್ತ? ನಾನು ವಾರ್ಡನ್ ಝೊಂಗ್‌ನ ಸಲಹೆಯನ್ನು ಕೇಳುವ ಅವಕಾಶ ಹೊಂದಿದ್ದೆ.’ ತಾನ್ ಅಸಹನೆಯಿಂದ ಶಾನ್‌ನತ್ತ ನೋಡುತ್ತಿದ್ದ. ` ಕಣಿವೆಯಲ್ಲಿ ಇನ್ನೂ ಮಂಜು ಹಬ್ಬಿದೆ. ಅದು ಮೃದು ಮಂಜು. ಬೇಗನೆ ಕರಗುತ್ತೆ. ಹಿಮಪಾತವಾಗೋ ಅಪಾಯ ಇದೆ. ನೀನು ಓಡಿಹೋದ್ರೆ ಅಥವಾ ನೀನು ಸರಿಯಾದ ಸಮಯಕ್ಕೆ ನನ್ನ ವರದಿಯನ್ನು ಸಿದ್ಧ ಮಾಡಲಿಕ್ಕೆ ವಿಫಲವಾದ್ರೆ ನಾನು ೪೦೪ನೆಯ ಒಂದು ತಂಡಕ್ಕೆ ಕೆಲಸ ಕೊಡ್ತೇನೆ. ನಿನ್ನದೇ ತಂಡ. ಯಾವುದೇ ಪಾಳಿ ಇಲ್ಲ. ರಸ್ತೆಗಳ ಮೇಲೆ ಇರುವ ಕಡಿದಾದ ಅಂಚುಗಳಲ್ಲಿ ಪರೀಕ್ಷೆ. ೪೦೪ ನೆಯ ಬ್ರಿಗೇಡಿನಲ್ಲಿ ೧೯೬೫ರಲ್ಲೇ ಬಂಸಿದ ಕೆಲವು ಮುದಿ ಲಾಮಾಗಳಿದ್ದಾರೆ. ಕೆಲವು ತೀರಾ ಒರಿಜಿನಲ್. ಅವ-ರಿಂದಲೇ ಈ ಪ್ರಪಾತ ಪರೀಕ್ಷೆ ಶುರು ಮಾಡಲಿಕ್ಕೆ ಝೊಂಗ್‌ಗೆ ಆದೇಶ ನೀಡ್ತೇನೆ.’
ಶಾನ್ ಭಯಗ್ರಸ್ತ ಮುಖದಿಂದ ತಾನ್‌ನತ್ತ ನೋಡಿದ. ಅವನ ಭಯ ಬೀಳಿಸುವ ನಡತೆಯೊಂದೇ ಎದ್ದು ಕಾಣುತ್ತಿದೆ. `ನೀನು ಅವರನ್ನು ಅಪಾರ್ಥ ಮಾಡಿಕೊಂಡಿದೀಯ,’ ಪಿಸುಗುಡುತ್ತ  ಶಾನ್ ನುಡಿದ.` ನಾನು ೪೦೪ನೆಯ ಬ್ರಿಗೇಡಿನಲ್ಲಿ ಇದ್ದ ಮೊದಲನೆಯ ದಿನ ಕುದುರೆ ಲಾಯದಿಂದ ಒಬ್ಬ ಭಿಕ್ಷುವನ್ನು ಕರೆತಂದರು. ಕಾನೂನಿಗೆ ವಿರುದ್ಧವಾಗಿ ಮಣಿಮಾಲೆ ಹೊಂದಿದ್ದಕ್ಕಾಗಿ ಶಿಕ್ಷೆ ಅನುಭವಿಸಿದ್ದ. ಅವನ ಎರಡು ಮೂಳೆಗಳು, ಮೂರು ಬೆರಳುಗಳು ಮುರಿದುಹೋಗಿದ್ದವು. ಅವನ ದೇಹದ ಮಾಂಸಖಂಡಗಳ ಮೇಲೆ ಕಾವಲುಗಾರರು ಮಾಡಿದ್ದ ಗುರುತುಗಳನ್ನು ಚೆನ್ನಾಗಿ ಕಾಣಬಹುದಿತ್ತು. ಆದರೆ ಆತ ತೀರಾ ಮನೋಹರವಾಗಿ ಕಾಣುತ್ತಿದ್ದ. ಎಂದೂ ದೂರು ನೀಡಲಿಲ್ಲ. ಯಾಕೆ ನಿನಗೆ ಸಿಟ್ಟು ಬರೋದಿಲ್ಲ ಎಂದು ನಾನು ಕೇಳಿದೆ. ಆತ ಏನು ಹೇಳ್ದ ಗೊತ್ತ? `ಸರಿಯಾದ ದಾರಿಯಲ್ಲಿ ನಡೆದದ್ದಕ್ಕೆ ಶಿಕ್ಷೆ ಅನುಭವಿಸುವುದು, ನಿನ್ನ ನಂಬಿಕೆಯನ್ನು ಸಾಬೀತುಪಡಿಸುವುದಕ್ಕೆ ಸಾಧ್ಯವಾಗುವುದು – ಎರಡೂ ನಿಜವಾದ ನಂಬಿಗಸ್ತನ ಆಶಯ ಪೂರೈಸಿದಂತೆಯೇ ಸರಿ.’
`ಅಪಾರ್ಥ ಮಾಡಿಕೊಂಡವ ನೀನು,’ತಾನ್ ಮರುತ್ತರ ನೀಡಿದ, ` ನಾನು ಈ ಜನರನ್ನು ಮತ್ತು ನಿನ್ನನ್ನೂ ಬಲ್ಲೆ. ನಾವು ಎಂದೂ ಅವರನ್ನು ದೈಹಿಕವಾಗಿ ಬಲವಂತ ಮಾಡಿಲ್ಲ. ಹಾಗಿದ್ದರೆ ನನ್ನ ಸೆರೆಮನೆ ಅಷ್ಟು ತುಂಬಿಕೊಂಡಿರ್‍ತಿರಲಿಲ್ಲ. ಇಲ್ಲ. ನೀನಿದನ್ನು ಮಾಡೋದು  ಆವರಿಗೆ ಸಾವಿನ ಭಯ ಇದೆ ಎಂದಲ್ಲ,’ ತಾನ್ ಮೂಳೆ ನಡುಗುವ ತಣ್ಣಗಿನ ದನಿಯಲ್ಲಿ ಹೇಳಿದ,`ನೀನು ಆವರ ಸಾವಿಗೆ ಕಾರಣನಾಗ್ತೀಯ ಎಂಬ ಹೆದರಿಕೆಯಲ್ಲಿ ಇದನ್ನು ಮಾಡ್ತೀಯ.’
ಲಾಟೀನುಗಳಿದ್ದ ಸೈನಿಕರು ಹೋದ ಸ್ಥಳಕ್ಕೆ ನಡೆದುಹೋದ ತಾನ್. ಇಬ್ಬರೂ ಕಾವಲುಗಾರರು ನಡುಗುತ್ತ ನಿಂತಿದ್ದರು. ಒಬ್ಬನಂತೂ ಥರ ಥರ ನಡುಗುತ್ತಿದ್ದಾನೆ. ಶಾನ್ ಅವರ ಬದಿಗೆ ಬಂದು ನಿಲ್ಲುತ್ತಿದ್ದಂತೆಯೇ ತಾನ್ ಒಬ್ಬನಿಂದ ಲಾಟೀನು ಪಡೆದು ಇನ್ನೊಂದು ಕಪಾಟಿನತ್ತ ಬೆಳಕು ಬೀರಿದ. ಎರಡು ಚಿನ್ನದ ತಲೆಬುರುಡೆಗಳ ನಡುವೆ ಇನ್ನೊಂದು ತಲೆಬುರುಡೆ ಇತ್ತು. ತೀರಾ ಹೊಚ್ಚ ಹೊಸ ಸೇರ್ಪಡೆ. ಅದು ಮಾಂಸ, ದಪ್ಪನೆಯ ಕಪ್ಪು ಕೂದಲು,  ಮತ್ತು ದವಡೆಗಳು. ಅದರ ಕಂದು ಕಣ್ಣುಗಳು ತೆರೆದುಕೊಂಡಿದ್ದವು. ಮುಖದಲ್ಲಿ ಒಂದು ಬಗೆಯ ಸುಸ್ತಿನ ಚಹರೆ. ಅವರೆಲ್ಲರನ್ನೂ ನೋಡುತ್ತಿರೋ ಭಾವ.
`ಕಾಮ್ರೇಡ್ ಶಾನ್…’ ತಾನ್ ಈಗ ಮತ್ತೆ ಮಾತು ತೂರಿದ,` ಜಾವೋ ಜೆಂಗ್‌ದಿಂಗ್‌ನನ್ನು ಭೇಟಿಯಾಗು. ನೀನು ತುಂಬಾ ಕೇಳ್ತಾ ಇದ್ದೆಯಲ್ಲ, ಅವನೇ..ಲ್ಹಾದ್ರಂಗ್ ಕೌಂಟಿಯ ಪ್ರಾಸಿಕ್ಯೂಟರ್.’

Leave a Reply