ನಾನಿನ್ನೂ ಜೀವಂತ

೪೦೪ನೆಯ ಕ್ಯಾಂಪಿನಲ್ಲಿ ಸೆರೆಮನೆ ಆಡಳಿತದ ಕಟ್ಟಡದಲ್ಲಿ ತನಗೆ ಕೊಟ್ಟಿದ್ದ ಮಬ್ಬು ಕೊಠಡಿಯಲ್ಲಿ ಶಾನ್ ಸುಮ್ಮನೆ ಕೂತಿದ್ದಾನೆ. ದೂರವಾಣಿಯನ್ನೇ ನೋಡುತ್ತಿದ್ದಾನೆ. ಇದೆಲ್ಲ ಸತ್ಯವೇ ಅಲ್ಲ ಎಂದು ಅವನಿಗೆ ಮೊದಲು ಅನ್ನಿಸಿತ್ತು. ಅದನ್ನು ಮರದಿಂದ ಮಾಡಿರಬಹುದು ಎಂದು ಪೆನ್ಸಿಲಿನಿಂದ ತಟ್ಟಿದ. ಎಳೆದ, ಅದರ  ಕಿತ್ತ ವೈರು ಬೀಳಬಹುದೆಂದು ನಿರೀಕ್ಷಿಸಿದ.ಅದೇ ಬೇರೆಯ ಜಗತ್ತು. ಅದೆಲ್ಲ ಗತಕಾಲದ ಸಂಗತಿಗಳು. ರೇಡಿಯೋ, ಟೆಲಿವಿಜನ್‌ಗಳಂತೆ, ಟ್ಯಾಕ್ಸಿಗಳು ಮತ್ತು ಫ್ಲಶ್ ಮಾಡುವ ಲ್ಯಾವೆಟರಿಗಳಂತೆ.

ಅವನು ತೊರೆದು ಬಂದ ಬದುಕಿನ ಕಲಾಕೃತಿಗಳು.
ಶಾನ್ ನಿಂತು ಮೇಜಿನ ಸುತ್ತ ನಡೆದ. ಅದು ಕಿಟಕಿಯೇ ಇಲ್ಲದ ಒಂದು ದಾಸ್ತಾನು ಕೊಠಡಿ. ಸಂಘರ್ಷ ಗೋಷ್ಠಿಗಳಿಗೆ ಅಲ್ಲಿ ಸಣ್ಣ ಗುಂಪಿನ ಸಭೆ ನಡೆಯುತ್ತಿತ್ತು. ಸಮಾಜವಾದಿ ವಿರೋ ಕನವರಿಕೆಗಳೆಲ್ಲ ಅಲ್ಲಿ ತಾಮ್‌ಜಿಂಗ್ ಮೂಲಕ ದುರಸ್ತಿಯಾಗುತ್ತಿದ್ದವು. ಅಮೋನಿಯಾದ ಕಮಟು ಎಲ್ಲೆಲ್ಲೂ ಹಬ್ಬಿದೆ. ದೂರವಾಣಿಯ ಪಕ್ಕ ಒಂದು ಚಿಕ್ಕ ಟಿಪ್ಪಣಿ ಪುಸ್ತಕವೂ ಇದೆ. ಹಲ್ಲಿನ ಗುರುತಿರುವ ಮೂರು ಪೆನ್ಸಿಲುಗಳು. ಬಾಗಿಲಿನ ಬಳಿ ಫೆಂಗ್ ಸೇಬು ಕತ್ತರಿಸುತ್ತ ಕೂತಿದ್ದಾನೆ. ವ್ಯಾಪಕವಾದ ಸಂಚಿಗೆ ಬಲಿ-ಯಾಗುತ್ತಿದ್ದೇನೆ ಎಂಬ ಶಾನ್‌ನ ಅನುಮಾನವನ್ನು ದೂರ ಮಾಡುವ ಯಾವ ಚಹರೆಯೂ ಅವನ ಮುಖದ ಮೇಲಿಲ್ಲ.
ಶಾನ್ ಮತ್ತೆ ಮೇಜಿಗೆ ಹಿಂತಿರುಗಿದ. ದೂರವಾಣಿಯ ರಿಸೀವರನ್ನು ಎತ್ತಿಕೊಂಡ. ಅರೆ-…ಡಯಲ್ ಟೋನ್ ಕೇಳಿಸ್ತಿದೆ.ಮತ್ತೆ ರಿಸೀವರನ್ನು ಅದರ ಜಾಗದಲ್ಲೇ ಇಟ್ಟ. ಅದನ್ನು ಮೆಟ್ಟಿ ಹಾಕುವಂತೆ ಒತ್ತಿ ಹಿಡಿದ. ಯಾರಿಗಾಗಿ ಈ ಹೊಂಚು? ಚೋಜೆ ಮತ್ತು ಇತರೆ ಭಿಕ್ಷುಗಳಿಗೆ? ತನಗಾಗೇ? ಇಷ್ಟೆಲ್ಲ ವರ್ಷಗಳಾದ ಮೇಲೆ ಈ ಹೊಂಚು ಹಾಕಿದ್ದಾರೆ. ತನ್ನ ಅಪರಾಧ ಯಾವು-ದೆಂದು ಬೀಜಿಂಗ್ ಆಗಲೀ, ತಾನ್ ಆಗಲೀ ಹೇಳೋದಿಲ್ಲ. ಅವರಿಗೇ ಅರ್ಥವಾಗೋ ಅಪರಾಧವನ್ನು ಅವರು ರೂಪಿಸ್ತಾರೆ. ನಾನು ಯಾರನ್ನು  ಕರೀತೀನಿ ಅಂತ ಅವರು ನಿರೀಕ್ಷೆ ಮಾಡ್ತಿದಾರೆ? ಸಚಿವ ಖಿನ್? ತನ್ನ ಸಂಬಂಧವನ್ನೇ ಅಳಿಸಿ ಹಾಕಿದ ಪಕ್ಷದ ಕಾರ್ಯಕರ್ತೆ, ತನ್ನ ಹೆಂಡತಿ?
ತಾನೇ ಮತ್ತೊಮ್ಮೆ ನೋಡಿದರೂ ಮುಖದ ಗುರುತೇ ಸಿಗದ ಮಗನೆ?
ಶಾನ್ ರಿಸೀವರನ್ನು ಎತ್ತಿಕೊಂಡು ಸುಮ್ಮನೆ ಕೈಗೆ ಬಂದ ಒಂದು ಸಂಖ್ಯೆಯನ್ನು ಡಯಲ್ ಮಾಡಿದ.
`ವೀ–,’ ಒಬ್ಬ ಮಹಿಳೆಯ ದನಿ ಕೇಳಿಸಿತು. ಫೋನಿಗೆ ಉತ್ತರಿಸುವ ಅರ್ಥವಿಲ್ಲದ ಪದ. ಶಾನ್ ರಿಸೀವರನ್ನು ಮತ್ತೆ ಕೆಳಗಿಟ್ಟು ಫೋನನ್ನೇ ನೋಡಿದ. ರಿಸೀವರಿನ ಪ್ರೇಷಕದ ಮುಚ್ಚಳ ತೆರೆದ. ನಿರೀಕ್ಷಿಸಿದಂತೆ ಅದರಲ್ಲಿ ಮಾತುಕತೆಯನ್ನು ದಾಖಲಿಸುವ ಯಂತ್ರವನ್ನು ಅಳವಡಿಸಿದೆ. ಸಹಜವಾದ ಸಾರ್ವಜನಿಕ ಭದ್ರತಾ ಕ್ರಮ. ಇವೇ ವಸ್ತುಗಳು ಅವನ ಹಿಂದಿನ ಜನ್ಮದ ಕೆಲಸದಲ್ಲೂ ಜೊತೆಯಾಗಿದ್ದವು. ಈ ಟ್ಯಾಪಿಂಗ್ ತನಗಾಗೇ ಇರಬಹುದು. ಅಥವಾ ಎಲ್ಲಾ ಸೆರೆಮನೆ ಪೋನುಗಳಿಗೂ ಅನ್ವಯಿಸಿದ ಸಾಮಾನ್ಯ ನಿಯಮವೆ?
ಮೌತ್‌ಪೀಸನ್ನು ಅದರ ಜಾಗದಲ್ಲೇ ಸಿಕ್ಕಿಸಿ ಶಾನ್ ಇಡೀ ಕೋಣೆಯನ್ನು ನೋಡಿದ. ಪ್ರತಿಯೊಂದೂ ವಸ್ತುವಿಗೆ ಇನ್ನಾವುದೋ ಹೊಸ ಆಯಾಮ ಇದ್ದಂತೆ ಕಾಣಿಸುತ್ತಿದೆ. ಯಾವುದೋ ಬಗೆಯ ಹೆಚ್ಚಿನ ವಾಸ್ತವಿಕತೆ ಅವುಗಳಿಗೆ ಅಂಟಿಕೊಂಡಂತೆ. ಸಾಯುವ ಮನುಷ್ಯನಿಗೆ ಕಂಡ ದೃಶ್ಯಗಳಂತೆ. ಶುದ್ಧ ಬಿಳಿ ಹಾಳೆಯನ್ನೇ ಅಚ್ಚರಿಯಿಂದ ನೋಡುತ್ತ ಪ್ಯಾಡನ್ನು ತೆರೆದ. ಮೂರು ವರ್ಷದ ಹಿಂದೆ ತಾನು ಪ್ರವೇಶಿಸಿದ ಜಗತ್ತಿನಲ್ಲಿ ಅಂಥ ಅಚ್ಚ ಬಿಳಿ ಎಂದೂ ಕಂಡಿಲ್ಲ. ಮೊದಲ ಪುಟದಲ್ಲಿ ಒಂದಷ್ಟು ಹೆಸರುಗಳು ಮತ್ತು ಸಂಖ್ಯೆಗಳು. ಉಳಿದದ್ದೆಲ್ಲ ಖಾಲಿ. ಕೊಂಚ ನಡುಗುತ್ತಲೇ ಶಾನ್ ಮುಂದಿನ ಪುಟಗಳನ್ನು ತೆರೆದ. ಪುಸ್ತಕ ಓದುವ ಹಾಗೆ ಪ್ರತಿಯೊಂದೂ ಪುಟವನ್ನು  ನಿಧಾನವಾಗಿ ತಿರುವಿದ. ಕೊನೆಯ ಪುಟದ ಮೂಲೆಯಲ್ಲಿ  ಎರಡು ಗೆರೆಗಳನ್ನು ಗೀಚಿದ. ಅವನ ಹೆಸರನ್ನು ಗುರುತಿಸುವುದೇ ಹೀಗೆ. ಇಲ್ಲಿ ಅದನ್ನು ಹುಡುಕುವುದು ಕಷ್ಟ. ಬಂಧನದ ನಂತರ ಮೊತ್ತಮೊದಲ ಬಾರಿಗೆ ಆತ ಬರೆದಿದ್ದ. ವಿಶಿಷ್ಟವಾದ ಸಮಾಧಾನದಿಂದ ಅದನ್ನೇ ನೋಡಿದ.
ನಾನಿನ್ನೂ ಜೀವಂತ.
ಅವನ ಹೆಸರಿನ ಕೆಳಗೇ ತಂದೆಯ ಹೆಸರನ್ನೂ ಬರೆದ. ತತ್‌ಕ್ಷಣ ಅಪರಾ ಭಾವದಿಂದ ಪುಸ್ತಕವನ್ನು ಮುಚ್ಚಿ, ಫೆಂಗ್ ನೋಡುತ್ತಿದ್ದಾನಾ ಎಂದು ಗಮನಿಸಿದ.
ಎಲ್ಲೋ ಯಾರೋ ನರಳಿದ ಸದ್ದು. ಅದು ಗಾಳಿಯೆ ?ಅಥವಾ ಲಾಯದಲ್ಲಿ ಇರುವ ಯಾರಾದರೂ… ಪ್ಯಾಡನ್ನು ದೂರ ಸರಿಸಿದ ಶಾನ್ ಅದರ ಕೆಳಗೆ ಮಾಸಿದ, ಮಡಚಿದ ಹಾಳೆಯೊಂದನ್ನು ಕಂಡ. ಅದು ಮುದ್ರಿತ ಬರೆವಣಿಗೆ. ಅದರ ಶೀರ್ಷಿಕೆ:
ಅಪಘಾತದ ಮರಣದ ವರದಿ.
ಶಾನ್ ರಿಸೀವರ್ ಎತ್ತಿ ಪಟ್ಟಿಯಲ್ಲಿದ್ದ ಮೊದಲನೆಯ ಸಂಖ್ಯೆಗೆ ಡಯಲ್ ಮಾಡಿದ. ಅದು ನಗರದಲ್ಲಿದ್ದ ಕ್ಲಿನಿಕ್‌ನ ಸಂಖ್ಯೆ. ಕೌಂಟಿ ಆಸ್ಪತ್ರೆ.
`ವೀ.’
`ಡಾ|| ಸುಂಗ್,’ ಶಾನ್ ಹೆಸರನ್ನು ಓದಿದ.
`ಕೆಲಸದ ಮೇಲೆ ಇಲ್ಲ,’ ಲೈನ್ ಸತ್ತೇ ಹೋಯಿತು.
ಹಠಾತ್ತಾಗಿ ತನ್ನ ಡೆಸ್ಕಿನ ಬಳಿ ಯಾರೋ ನಿಂತಿದ್ದಾರೆ ಅನ್ನಿಸಿತು. ಆತ ಟಿಬೆಟನ್. ಕೊಂಚ ಎತ್ತರವೇ ಇದ್ದಾನೆ. ಕ್ಯಾಂಪಿನ ಹಸಿರು ಸಮವಸ್ತ್ರ ಧರಿಸಿದ ಯುವಕ.
`ನನ್ನನ್ನು ನಿನಗಾಗಿ ನೇಮಕ ಮಾಡಿದ್ದಾರೆ. ನೀನು ವರದಿ ತಯಾರಿಸಲು ಸಹಾಯ ಮಾಡ-ಲಿಕ್ಕೆ,’ ಆತ ಇಡೀ ಕೋಣೆಯನ್ನೇ ನೋಡುತ್ತ ಹೇಳಿದ. ` ಕಂಪ್ಯೂಟರ್ ಎಲ್ಲಿದೆ?’
ಶಾನ್ ಫೋನ್ ಕೆಳಗಿಟ್ಟ. ` ನೀನು ಸೈನಿಕನಾ?’ ಪೀಪಲ್ಸ್ ಲಿಬರೇಶನ್ ಆರ್ಮಿಯಲ್ಲಿ ಟಿಬೆಟನ್ ಸೈನಿಕರು ಇದ್ದರೇನೋ ಹೌದು. ಆದರೆ ಅವರನ್ನು ಟಿಬೆಟಿನಲ್ಲಿ ನಿಯುಕ್ತಿ ಮಾಡಿದ್ದು ತೀರಾ ಅಪರೂಪ.
`ಹಾಗೇನಿಲ್ಲ…’ ತಿರಸ್ಕಾರದ ನೋಟ ಬೀರಿದ ಆತನನ್ನು ಶಾನ್ ಗಮನಿಸಿದ. ಶಾನ್ ಯಾರೆಂದು ಗೊತ್ತಿಲ್ಲದೆ ಆತ ನೋಡುತ್ತಿದ್ದ. ಈತ ಸೆರೆಮನೆಯ ಬದುಕಿನ ಪದರದಿಂದ ಬಂದವನೋ ಅಥವಾ ಅದಕ್ಕಿಂತ ಹೆಚ್ಚು ಸಂಕೀರ್ಣವಾದ ಚೀನಾದ ವರ್ಗರಹಿತ ಸಮಾಜದಿಂದ ಬಂದವನೋ ಎಂಬ ಅನುಮಾನ ಕಾಡಿದಂತಿದೆ. `ನಾನು ಈಗ ತಾನೇ ಮರುಶಿಕ್ಷಣದ ಎರಡು ವರ್ಷಗಳನ್ನು ಮುಗಿಸಿದ್ದೇನೆ,’ ಆತ ಹೇಳಿದ ` ನನ್ನ ಬಿಡುಗಡೆಯಾಗುತ್ತಲೇ ವಾರ್ಡನ್ ಝೊಂಗ್ ಬಟ್ಟೆ ಕೊಡುವಂಥ ದಯಾಳುವಾಗಿದ್ದಾನೆ.’
`ಯಾವುದಕ್ಕೆ ಮರುಶಿಕ್ಷಣ?’
`ನನ್ನ ಹೆಸರು ಯೆಶೆ.’
`ಆದ್ರೆ ನೀನಿನ್ನೂ ಕ್ಯಾಂಪಿನಲ್ಲೇ ಇದೀಯ.’
`ಕೆಲಸ ಕಡಿಮೆ. ನಾನು ಇಲ್ಲೇ ಇರಬೇಕು ಅಂದ್ರು. ನನ್ನ ಅವಯಂತೂ ಮುಗಿದಿದೆ,’ ಯೆಶೆ ಒತ್ತಿ ಹೇಳಿದ.
ಅವನ ದನಿಯಲ್ಲಿದ್ದ ಒಳಸುಳಿಗೊತ್ತಾಗುತ್ತಿದೆ. ಒಂದುಬಗೆಯ ತಣ್ಣನೆಯ ವಿನೀತ ಭಾವ. `ನೀನು ಪರ್ವತಗಳಲ್ಲಿ ಓದಿದ್ದಾ?’
ಅದೇ ತಿರಸ್ಕಾರ ಮರಳಿತು. `ನನಗೆ ಚೆಂಗ್‌ದು ವಿಶ್ವವಿದ್ಯಾಲಯದಲ್ಲಿ  ಓದಬೇಕೆಂದು ಹಿರಿಯರು ಹೇಳಿದ್ದರು’
`ಅಂದ್ರೆ ಗೊಂಪಾ?’
ಯೆಶೆ ಉತ್ತರಿಸಲಿಲ್ಲ. ಕೊಠಡಿಯ ಸುತ್ತ ನಡೆದ. ಹಿಂದೆ ನಿಂತು ಕುರ್ಚಿಗಳನ್ನು ಅರ್ಧ ವೃತ್ತಾಕಾರದಲ್ಲಿ ಜೋಡಿಸಿದ. ಇಲ್ಲಿ ಒಂದು ತಾಮ್‌ಜಿಂಗ್ ನಡೆಯೋ ಥರ.
`ನೀನು ಉಳಿದುಕೊಂಡಿದ್ದೆಲ್ಲಿ?’
`ಕಳೆದ ವರ್ಷ ಇಲ್ಲಿಗೆ ತುಂಬಾ ಕಂಪ್ಯೂಟರುಗಳನ್ನು ಕಳಿಸಿದ್ದರು. ಯಾವ ಸಿಬ್ಬಂದಿಗೂ ತರಬೇತಿ ನೀಡಿರ್‍ಲಿಲ್ಲ.’
`ನಿನ್ನ ಮರುಶಿಕ್ಷಣದಲ್ಲಿ ಸೆರೆಮನೆಯ ಕಂಪ್ಯೂಟರ್ ಬಳಸೋದರ ಬಗ್ಗೆ  ವಿಷಯ ಇತ್ತಾ?’
ಟಿಬೆಟನ್ ಆವಾಕ್ಕಾದ. `ನನ್ನ ಮರುಶಿಕ್ಷಣದಲ್ಲಿ ರಾತ್ರಿ ಹೊತ್ತು ಸೆರೆಮನೆಯ ಶೌಚಾಲಯ-ಗಳಿಂದ ಮಲ ಎತ್ತಿ ಹೊಲಕ್ಕೆ ತೆಗೆದುಕೊಂಡು ಹೋಗೋ ಕೆಲಸ ಇತ್ತು,’ ಈ ಕೆಲಸವನ್ನು ಹೆಮ್ಮೆಯಿಂದ ಮಾಡುತ್ತಿದ್ದೆ ಎಂಬ ಭಾವ ಅಲ್ಲಿದೆ. ರಾಜಕೀಯ ಅಕಾರಿಗಳು ಹೇಳಿಕೊಟ್ಟದ್ದನ್ನು ಒಪ್ಪಿಸುವ ಶೈಲಿ.  `ಆದ್ರೆ ನನಗೆ ಕಂಪ್ಯೂಟರ್ ತರಬೇತಿ ಇತ್ತು ಅಂತ  ಅವರಿಗೆ ಗೊತ್ತಾಯ್ತು. ನಾನು ಪುನರಾಶ್ರಯದ ಭಾಗವಾಗಿ ಕಚೇರಿ ಆಡಳಿತಕ್ಕೆ ಸಹಾಯ ಮಾಡ-ತೊಡಗಿದೆ. ಲೆಕ್ಕಪತ್ರ ನೋಡಿಕೊಳ್ಳೋದು. ಬೀಜಿಂಗಿಗೆ ಬೇಕಾದ ಹಾಗೆ ಕಂಪ್ಯೂಟರಿನಲ್ಲಿ ವರದಿ ತಯಾರಿಸೋದು. ನನ್ನ ಬಿಡುಗಡೆಯಾದ ಮೇಲೂ ಅವರು ಇನ್ನೂ ಇರು ಅಂದ್ರು.’
`ಹಾಗಾದ್ರೆ ಒಬ್ಬ ಮಾಜಿ ಭಿಕ್ಷುವಾಗಿ ಈಗ ನಿನ್ನ ಪುನರಾಶ್ರಯದ ಕೆಲಸ ಇತರೆ ಭಿಕ್ಷುಗಳನ್ನು ಸೆರೆಮನೆಗೆ ತಳ್ಳೋದು ಅಂತಾಯ್ತು?’
`ಗೊತ್ತಾಗ್ಲಿಲ್ಲ.’
`ಅದೃಷ್ಟದ ಹೆಸರಿನಲ್ಲಿ ಏನೇನನ್ನು ಮಾಡಬಹುದು ಅನ್ನೋದನ್ನ ಕಂಡು ಎಷ್ಟು ಅಚ್ಚರಿಪಟ್ಟರೂ ಕಡಿಮೇನೇ.’
ಯೆಶೆ ಗೊಂದಲಕ್ಕೆ ಬಿದ್ದ.
`ಬಿಡು. ಯಾವ ಥರದ ವರದಿಗಳು?’
ಯೆಶೆ ಒಮ್ಮೆ ಶಾನ್, ಇನ್ನೊಮ್ಮೆ ಫೆಂಗ್‌ನನ್ನು ನೋಡತೊಡಗಿದ. `ಕಳೆದ ವಾರ ವೈದ್ಯಕಿಯ ದಾಸ್ತಾನಿನ ವರದಿಗಳು. ಅದಕ್ಕಿಂತ  ಹಿಂದಿನ ವಾರ  ಪ್ರತಿ ಮೈಲಿ ರಸ್ತೆ ನಿರ್ಮಾಣವಾದ ಹಾಗೆ ಖೈದಿಗಳು ಬಳಸೋ ಧಾನ್ಯದ ಬಳಕೆಯಲ್ಲಿ ಕಂಡುಬಂದ ಬದಲಾವಣೆಗಳ ವರದಿ. ಹವಾಮಾನ ವರದಿ. ಬದುಕುಳಿಯುವ ಪ್ರಮಾಣ. ಕಳೆದುಹೋದ ಮಿಲಿಟರಿ ಸರಬರಾಜುಗಳ ಬಗ್ಗೆ ಈಗಲೂ ತಲೆ ಕೆಡಿಸಿಕೊಂಡಿದೀವಿ.’
`ನಾನು ಇಲ್ಲಿ ಯಾಕೆ ಬಂದಿದೀನಿ ಅಂತ ಅವರು ಹೇಳಲಿಲ್ವೆ?’
`ನೀನು ಒಂದು ವರದಿ ಬರೀತಿದೀಯಂತೆ.’
`ಡ್ರೇಗನ್ ಕ್ಲಾಸ್ ಕೆಲಸದ ಸ್ಥಳದಲ್ಲಿ ಒಬ್ಬ ಮನುಷ್ಯನ ಹೆಣ ಸಿಗ್ತು. ಸಚಿವಾಲಯಕ್ಕೆ ಒಂದು ವರದಿ ತಯಾರಿಸಬೇಕಾಗಿದೆ.’
ಯೆಶೆ ಗೋಡೆಗೆ ಒರಗಿದ.`ಅಂದ್ರೆ ಖೈದಿ ಅಲ್ಲ ಅಂತೀಯ?’
ಆ ಪ್ರಶ್ನೆಗೆ ಉತ್ತರ ಬೇಕಾಗಿರಲಿಲ್ಲ.
ಯೆಶೆ ಹಠಾತ್ತಾಗಿ ಶಾನ್‌ನ ಅಂಗಿಯನ್ನು ನೋಡಿದ. ತಕ್ಷಣ ಬಗ್ಗಿ ಶಾನ್‌ನ ಬೂಟುಗಳನ್ನು, ಅವನ ಕಾರ್ಡ್ ಬೋರ್ಡನ್ನು ನೋಡಿ ಫೆಂಗ್‌ನತ್ತ ತಿರುಗಿದ.
`ಅವರು ನಿನಗೆ ಹೇಳಲಿಲ್ಲ,’ ಶಾನ್ ನುಡಿದ. ಅದು ಒಂದು ಹೇಳಿಕೆಯಾಗಿತ್ತು. ಪ್ರಶ್ನೆಯಲ್ಲ.
`ಆದ್ರೆ ನೀನು ಟಿಬೆಟನ್ ಅಲ್ಲ.’
`ನೀನು ಚೀನೀ ಅಲ್ಲ,’ ಶಾನ್ ಮಾರುತ್ತರ ನೀಡಿದ.
ಯೆಶೆ ಶಾನ್‌ನಿಂದ ದೂರ ಸರಿದ. `ಏನೋ ತಪ್ಪಾಗಿದೆ,’ ಆತ ಪಿಸುಗುಟ್ಟಿದ. ಕೈಗಳನ್ನು ಚಾಚಿ ಫೆಂಗ್ ಬಳಿ ನಡೆದ. ಫೆಂಗ್ ಸೀದಾ ವಾರ್ಡನ್ ಕಚೇರಿಯತ್ತ ಕೈ ತೋರಿಸಿದ. ಯೆಶೆ ಮತ್ತೆ ಹಿಂತಿರುಗಿ ಶಾನ್ ಬಳಿ ಕೂತ. ಮತ್ತೆ ಶಾನ್‌ನ ಬೂಟುಗಳನ್ನು ನೋಡಿದ. `ನೀನು  ಆಪಾದಿತ ಆಗ್ತಿದೀಯ ತಾನೆ?’
`ಈ ಪದದ ಯಾವ ಅರ್ಥದಲ್ಲಿ ?’ ಶಾನ್‌ಗೆ ತನ್ನ ಪ್ರಶ್ನೆ ಎಷ್ಟು ಸಕಾರಣ ಎಂಬ ಪ್ರಶ್ನೆಯೂ ಕಾಡುತ್ತಿದೆ.
ಹೊಸ ಬಗೆಯ ದೆವ್ವವನ್ನು ಕಂಡಂತೆ ಯೆಶೆ ಕಣ್ಣರಳಿಸಿದ.`ಕೊಲೆಯ ವಿಚಾರಣೆಯ ಅರ್ಥ-ದಲ್ಲಿ…’
ಶಾನ್ ತನ್ನ ಅಂಗೈ ಮೇಲಿದ್ದ ಜಡ್ಡು ಚರ್ಮವನ್ನು ಚಿವುಟುತ್ತ ಹೇಳಿದ.`ನನಗೆ ಗೊತ್ತಿಲ್ಲ. ಹಾಗಂತ ಅವರೇನಾದ್ರೂ ನಿನಗೆ ಹೇಳಿದ್ರೆ?’ ಬಹುಶಃ ಇದೇಯೋಜನೆ ಹಾಕಿರಬೇಕು. ತಾನ್ ಮತ್ತು ಸಚಿವ ಖಿನ್‌ನಂಥ ಮುದಿಯರು ಊಟಕ್ಕಿಂತ ಮುಂಚೆ ಆಹಾರದ ಜೊತೆ ಆಟ ಆಡೋದನ್ನ ಇಷ್ಟ ಪಡುತ್ತಾರೆ.
`ಅವರು ನನಗೆ ಏನೂ ಹೇಳಲಿಲ್ಲ.’
`ಪ್ರಾಸಿಕ್ಯೂಟರ್ ಇಲ್ಲಿಲ್ಲ,’ ಶಾನ್ ಆದಷ್ಟೂ ತನ್ನ ದನಿಯನ್ನು ಮೆತ್ತಗೆ ಮಾಡಿಕೊಂಡು ನುಡಿದ.`ಕರ್ನಲ್ ತಾನ್‌ಗೆ ಒಂದು ವರದಿ ಬೇಕು. ಆ ಥರ ವರದಿ ಬರೆಯೋದು ನನಗೆ ಗೊತ್ತು.’
`ಕೊಲೆ?’ ಯೆಶೆ ಈಗ ತೀರಾ ಆಶಾವಾದಿ ಥರ ಕೇಳಿದ.
`ಇಲ್ಲ, ಕೇಸ್ ಫೈಲುಗಳು.’ ಶಾನ್ ಪಟ್ಟಿಯನ್ನು ಯೆಶೆಯತ್ತ ತಳ್ಳುತ್ತ ನುಡಿದ.` ನಾನು ಮೊದಲ್ನೇ ಹೆಸರು ಪ್ರಯತ್ನಿಸಿದೆ. ವೈದ್ಯರು ಕೆಲಸದ ಮೇಲೆ ಇಲ್ಲವಂತೆ.’
ಯೆಶೆ ಫೆಂಗ್ ಕಡೆ ನೋಡಿದ. ಫೆಂಗ್ ಮಾತಾಡಲಿಲ್ಲ. `ಇದು ಬರೀ ಮಧ್ಯಾಹ್ನಕ್ಕೆ’ ಯೆಶೆ ನುಡಿದ.
`ನಾನು ನಿನಗೆ ಕೇಳಲಿಲ್ಲ. ಇದು ನಿನ್ನ ಕೆಲಸ ಅಂತ ನೀನೇ ಹೇಳಿದೆ. ಈ ಮಾಹಿತಿ ಕಲೆ ಹಾಕೋದಕ್ಕೆ ನಿನಗೆ ಸಂಬಳ ಕೊಡ್ತಾರೆ.’ ಶಾನ್‌ಗೆ ಯೆಶೆಯ ಹಿಂಜರಿತ ಅಚ್ಚರಿ ತಂದಿತು. ತನ್ನ ಹೊಸ ಸಹಾಯಕನ ನೇಮಕಾತಿಯ ಕಾರಣ ಸಿಕ್ಕಿದೆ. ಬ್ಯೂರೋ ತನ್ನ ಮೇಲೆ ನಿಗಾ ಇಟ್ಟಿದ್ದರೆ ಅದು ಬರೀ ಒಂದು ಫೋನಿನಲ್ಲಿ  ಬಗ್ ಇಡೋದಕ್ಕೆ ಸೀಮಿತವಾಗಿರಲ್ಲ.
`ಖೈದಿಗಳ ಜೊತೆ ಸಂಚು ಹೂಡಬಾರದು ಎಂಬ ಸೂಚನೆ ನಮಗಿದೆ. ನಾನು ಹೊಸಾ ಕೆಲಸ ಹುಡುಕ್ತಾ ಇದೇನೆ. ಬಹುಶಃ ಅಪರಾ ಜೊತೆ ಕೆಲಸ ಮಾಡ್ತಾ ಇರಬಹುದು. ಇದನ್ನ…’
`ಹಿನ್ನಡೆ ಅಂತ ಕರೀತಾರ?’ ಶಾನ್ ಸೂಚಿಸಿದ.
`ಸರಿಯಾಗಿ ಹೇಳ್ದೆ,’ ಯೆಶೆ ಕೃತಜ್ಞತಾಪೂರ್ವಕವಾಗಿ ನುಡಿದ.
ಶಾನ್ ಒಂದು ಕ್ಷಣ ಯೆಶೆಯನ್ನೇ ನೋಡಿದ. ಕೊನೆಗೆ ಪ್ಯಾಡು ತೆರೆದು ಬರೆದ: `ಈ ದಿನಾಂಕಕ್ಕಿಂತ ಮುಂಚೆ ನಾನು ಲ್ಹಾದ್ರಂಗ್ ಕೌಂಟಿಯ ಕೇಂದ್ರ ಸೆರೆಮನೆ ಕಚೇರಿಯ ಯೆಶೆ ಅನ್ನೋ ಕಾರಕೂನ ಸಹಾಯಕನನ್ನು  ಎಂದೂ ಭೇಟಿಯಾಗಿಲ್ಲ.  ನಾನು ಲ್ಹಾದ್ರಂಗ್ ಕೌಂಟಿಯ ಗವರ್ನರ್ ಕರ್ನಲ್ ತಾನ್‌ನ ನೇರ ಆದೇಶಗಳಿಗೆ ಅನು-ಸಾರ-ವಾಗಿ ನಡೆದುಕೊಳ್ಳುತ್ತಿದ್ದೇನೆ.’ ಒಂದು ಕ್ಷಣ ಶಾನ್ ತಡೆದ.
`ಯೆಶೆಯು ಸಮಾಜವಾದಿ ಸುಧಾರಣೆಗೆ ಹೊಂದಿರುವ ಬದ್ಧತೆಯ ಬಗ್ಗೆ ನನಗೆ ತುಂಬಾ ಖುಷಿಯಾಗಿದೆ.’
ಶಾನ್ ದಿನಾಂಕ ಬರೆದು ಸಹಿ ಹಾಕಿ ನಡುಗುತ್ತ ನಿಂತ ಯೆಶೆಗೆ ಕೊಟ್ಟ. ಯೆಶೆ ವಿಧೇಯವಾಗಿ ಓದಿ ಕಿಸೆಯಲ್ಲಿ ಇಟ್ಟುಕೊಂಡ.
`ಇವತ್ತು ಮಾತ್ರ,’ ಯೆಶೆ ತನಗೆ ತಾನೇ ಭರವಸೆ ನೀಡಿಕೊಳ್ಳುವವನ ಹಾಗೆ ಹೇಳಿದ,` ನನಗೆ ಪ್ರತೀ ದಿನವೂ ಆ ದಿನದ ಕೆಲಸ ಮಾತ್ರ ಹೇಳ್ತಾರೆ.’
`ಗೊತ್ತು, ನಿನ್ನಂಥ ಬೆಲೆಬಾಳೋ ವಸ್ತುವನ್ನು ಕೆಲವು ಗಂಟೆಗಳಿಗಿಂತ ಹೆಚ್ಚು ಬಿಟ್ಟುಕೊಡಲು ವಾರ್ಡನ್ ಝೊಂಗ್ ತಯಾರಿಲ್ಲ.’
ಯೆಶೆ ಹಿಂಜರಿದನೆ? ಅಥವಾ ಶಾನ್‌ನ ವ್ಯಂಗ್ಯದ ಮಾತಿಗೆ ಗೊಂದಲಕ್ಕೆ ಬಿದ್ದನೆ? ಹಠಾತ್ತಾಗಿ ಕೆಲಸ ನೆನಪಾದಂತೆ ಹೇಳಿದ. `ವೈದ್ಯರಿಗಾಗಿ ಕರೆ ಮಾಡಬೇಡ. ಕ್ಲಿನಿಕ್ಕಿನ ನಿರ್ದೇಶಕರ ಕಚೇರಿಗೆ ಕರೆ ಮಾಡು. ಕರ್ನಲ್ ತಾನ್‌ಗೆ ವೈದ್ಯಕೀಯ ವರದಿಗಳು ಬೇಕು ಎಂದು ಹೇಳು. ನಿರ್ದೇಶಕನಿಗೆ ಫ್ಯಾಕ್ಸ್ ಇದೆ. ಅದನ್ನು ಕೂಡಲೇ ಫ್ಯಾಕ್ಸ್ ಮಾಡಬೇಕು ಎಂದು ಹೇಳು. ನಿನಗಲ್ಲ. ವಾರ್ಡನ್‌ನ ಕಾರ್ಯದರ್ಶಿಗೆ. ವಾರ್ಡನ್ ಹೊರಟುಹೋಗಿದಾನೆ. ನಾನು ಕಾರ್ಯ-ದರ್ಶಿಗೆ ಹೇಳ್ತೇನೆ.’
`ಆತ ಹೊರಟೇ ಹೋದನೆ?’
`ಭೂಗರ್ಭ ಇಲಾಖೆಯ ಚಾಲಕನೊಬ್ಬ ಅವನ್ನು ಕರೆದುಕೊಂಡು ಹೋದ.’
ತತ್‌ಕ್ಷಣ ಶಾನ್‌ಗೆ ಸತ್ತ ದೇಹ ದೊರಕಿದ ದಿನ ಕಂಡು ಬಂದ ಕೆಂಪು ಬಣ್ಣದ ಟ್ರಕ್ ನೆನಪಾಯಿತು.` ಭೂಗರ್ಭ ಇಲಾಖೆಯು ಯಾಕೆ ೪೦೪ ನೆಯ ವಾರ್ಡಿಗೆ ಯಾಕೆ ಭೇಟಿ ನೀಡುತ್ತೆ?’ ಶಾನ್ ದೊಡ್ಡ ದನಿಯಲ್ಲೇ ಪ್ರಶ್ನಿಸಿದ.
`ಅದು ಒಂದು ಪರ್ವತದ ಮೇಲಿದೆ,’ ಯೆಶೆ  ತತ್ತರಿಸಿದ.
`ಹೌದೆ?’
`ಸಚಿವಾಲಯವೇ ಪರ್ವತದ ನಿಯಂತ್ರಣ ಹೊಂದಿದೆ,’ ಯೆಶೆ ಪಟ್ಟಿಯನ್ನು ನೋಡುತ್ತಲೇ ವಿವರಿಸಿದ.`ಲೆಫ್ಟಿನೆಂಟ್ ಚಾಂಗ್. ಅವನ ಡೆಸ್ಕು ಕೆಳಗೆ ಹಾಲ್‌ನಲ್ಲಿದೆ.ದೇಹವನ್ನು ಕಾವಲು-ಗಾರರಿಂದ ಪಡೆದುಕೊಂಡ ಸೇನಾ ಅಂಬ್ಯುಲೆನ್ಸ್ ಸಿಬ್ಬಂದಿ. ಅವರ ದಾಖಲೆಗಳು ಜೇಡ್ ಸ್ಪ್ರಿಂಗ್ ಕ್ಯಾಂಪಿನಲ್ಲಿರುತ್ತವೆ,’ ಯೆಶೆ ಹೇಳಿದ. ಅದು ದೇಶದ ಒಂದೇ ಒಂದು ಸೇನಾ ನೆಲೆ. ಲ್ಹಾದ್ರಂಗ್ ನಗರದಿಂದ ಮೂರು ಮೈಲಿಗಳಾಚೆ.
`ನನಗೆ  ಎರಡು ದಿನಗಳ ಹಿಂದಿನ ಹವಾಮಾನ ವರದಿ ಬೇಕು,’ ಶಾನ್ ಕೇಳಿದ. `ಹಾಗೇ ಕಳೆದ ಒಂದು ತಿಂಗಳಿನಿಂದ ಟಿಬೆಟಿಗೆ ಹೋಗಲು ಅನುಮತಿ ಪಡೆದ ವಿದೇಶಿ ಪ್ರವಾಸಿ ತಂಡಗಳ ಪಟ್ಟಿ. ಲ್ಹಾಸಾದ ಚೀನಾ ಟ್ರಾವೆಲ್ ಸರ್ವಿಸ್‌ನಲ್ಲಿ ಈ ಮಾಹಿತಿ ಸಿಗಬಹುದು. ನಾವು ಮತ್ತೆ ನಗರಕ್ಕೆ ಹೋಗಬೇಕಾಗಬಹುದು ಅಂತ ಸಾರ್ಜೆಂಟ್‌ಗೆ ಹೇಳು.’
ಐದು ನಿಮಿಷಗಳಲ್ಲಿ ಯೆಶೆ ವರದಿಗಳನ್ನು ಕೊಡಲು ಆರಂಭಿಸಿದ. ಅವು ಯಂತ್ರದಿಂದ ಆಗಷ್ಟೆ ಹೊರಬಂದು ಬಿಸಿಯಾಗಿದ್ದವು. ಶಾನ್ ಅವೆಲ್ಲವನ್ನೂ ಕ್ಷಿಪ್ರವಾಗಿ ಓದಿ ಟಿಪ್ಪಣಿ ಬರೆಯ-ತೊಡಗಿದ. ಬರೆದು ಮುಗಿವ ಹೊತ್ತಿಗೆ ಮೊಗಸಾಲೆಯಲ್ಲಿ ಸೈರನ್ ಶಬ್ದ. ತನ್ನ ೪೦೪ನೆಯ ವಾರ್ಡಿನಲ್ಲಿ ಒಮ್ಮೆ ಮಾತ್ರ ಈ ಸದ್ದು ಕೇಳಿದ್ದೇನೆ.
ಅವನ ಬೆನ್ನುಹುರಿಯಲ್ಲಿ ನಡುಕ ಕಾಣುತ್ತಿದೆ.
ಕ್ಯಾಂಪಿನಲ್ಲಿ ಚೋಜೆ ಪ್ರತಿಭಟನೆ ಆರಂಭಿಸಿದ್ದಾನೆ!

ಒಂದು ತಾಸಿನ ನಂತರ ಕರ್ನಲ್ ತಾನ್ ಶಾನ್ ಕೊಟ್ಟ ವರದಿಯನ್ನು ಹಿಡಿದು ನಿಂತಿದ್ದ. ಶಾನ್‌ನತ್ತ ಅನುಮಾನದ ನೋಟ.
ಇಡೀ ಕಟ್ಟಡ ಖಾಲಿಯಾದಂತಿದೆ. ಬರೀ ಖಾಲಿಯಲ್ಲ, ನಿರ್ಮಾನುಷ. ಆಹಾರ ಸರಪಣಿಯ ಮೇಲುಗಡೆ ಇರುವ ದೈತ್ಯ ಭಕ್ಷಕ ಪ್ರಾಣಿ ಬಂದಾಗ ಸಣ್ಣ ಸಸ್ತನಿಗಳು ಪರಾರಿಯಾಗುವ ಹಾಗೆ. ಕಿಟಕಿಯಲ್ಲಿ  ಗಾಳಿಯ ಹೊಯ್ದಾಟ.
ಕರ್ನಲ್ ತಾನ್ ನೋಡಿದ. `ನೀನು ನನಗೆ  ಉಪವರದಿಗಳನ್ನು ಕೊಟ್ಟಿದೀಯ. ಆದರೆ ಈ ನಮೂನೆ ಇನ್ನೂ ಭರ್ತಿಯಾಗಿಲ್ಲ.’
`ನಿನ್ನ ಬಳಿ ತನಿಖೆಯ ಎಲ್ಲಾ ನೇರ ಮಾಹಿತಿಗಳೂ ಇವೆ. ಇಂಥ ನಿರ್ಣಯಗಳೂ ಸಿಗುತ್ತವೆ. ನಾನು ಮಾಡಬಹುದಾದದ್ದು ಇಷ್ಟೆ. ನೀನು ಇನ್ನಷ್ಟು ನಿರ್ಣಯಗಳನ್ನು ತೆಗೆದುಕೊಳ್ಳಬೇಕಷ್ಟೆ.’
ತಾನ್ ವರದಿಯ ಪುಟಗಳನ್ನು ಗಟ್ಟಿಯಾಗಿ ಮಡಚಿ ಹಿಡಿದುಕೊಡ. `ನನ್ನ ಅಕಾರವನ್ನು ಹಂಗಿಸಿ ತುಂಬಾ ದಿನಗಳೇ ಕಳೆದಿವೆ.ವಾಸ್ತವವಾಗಿ ನಾನು ಇಲ್ಲಿ ಅಕಾರ ವಹಿಸಿಕೊಂಡಾಗಿನಿಂದ ಈ ಥರ ನಡೆದಿಲ್ಲ. ಅದರಲ್ಲೂ ನನಗೆ ಕಪ್ಪು ದಂಡವನ್ನು ಕೊಟ್ಟ ಮೇಲೆ…’
ಕಪ್ಪು ದಂಡ! ಮರಣದ ವಾರಂಟನ್ನು ಬರೆಯುವ ಅಕಾರ.
`ನಾನು ಇನ್ನೂ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೆ ಕಾಮ್ರೇಡ್. ನೀನು ತೀರಾ ಪಕ್ಕಾ ಕೆಲಸ ಮಾಡ್ತೀಯ ಅಂದ್ಕೊಂಡಿದ್ದೆ. ನಿನಗೆ ಕೊಟ್ಟ ಅವಕಾಶವನ್ನು ಬಳಸಿಕೊಳ್ಳೋದಕ್ಕೆ ಸಮಯ ತಗೋ.’
`ಸಾಕಷ್ಟು ಯೋಚಿಸಿದ  ನಂತರ ಕೆಲವು ಸಂಗತಿಗಳನ್ನು ಬೇಗನೇ ಮುಗಿಸೋದು ಒಳ್ಳೇದು ಅನ್ನಿಸ್ತು…’
`೧೬೦೦ ಗಂಟೆಗೆ, ಹದಿನೈದರಂದು ಒಂದು ದೇಹ ಸಿಕ್ಕಿತು. ಡ್ರೇಗನ್ ಥ್ರೋಟ್ ಸೇತುವೆಯಿಂದ ಐನೂರಡಿ ಮೇಲೆ. ಕೊಲೆ-ಯಾದ ಅಪರಿಚಿತ ತುಂಬಾ ದುಬಾರಿಯ ಉಡುಗೆ ತೊಟ್ಟಿದ್ದ. ಕಾಶ್ಮೀರಿ, ಅಮೆರಿಕನ್ ಉಡುಗೆಗಳು. ದೇಹದ ಕೂದಲಿನ ಬಣ್ಣ ಕಪ್ಪು. ಅವನ ಹೊಟ್ಟೆಯ ಮೇಲೆರಡು ತರಿದಂಥ ಗುರುತುಗಳು. ಬೇರೆ ಯಾವುದೇ ಗುರುತಿನ ಮಾರ್ಕುಗಳಿಲ್ಲ. ಬಲಿಯಾದವ ರಾತ್ರಿ ಕಡಿದಾದ ಕಣಿವೆ ಹತ್ತಿ ಬಂದ. ಹಠಾತ್ತಾಗಿ ಕುತ್ತಿಗೆಯಲ್ಲಿ ಭಾರೀ ಆಘಾತ ಅನುಭವಿಸಿದ. ಮೂರನೆಯ ವ್ಯಕ್ತಿಯ ಭಾಗಿತ್ವದ ಬಗ್ಗೆ ಯಾವುದೇ ನೇರ ಸಾಕ್ಷ್ಯವಿಲ್ಲ. ಸ್ಥಳೀಯವಾಗಿ ಯಾವ ವ್ಯಕ್ತಿಯು ಕಳೆದುಹೋಗಿದ್ದಾನೆ ಎಂಬ ವರದಿಯೂ ದಾಖಲಾಗಿಲ್ಲ. ಹೀಗಾಗಿ ವ್ಯಕ್ತಿಯು ಆ ಪ್ರದೇಶಕ್ಕೆ ಅಪರಿಚಿತನೇ ಇರಬೇಕು. ಬಹುಶಃ ವಿದೇಶಿ ಮೂಲದವನು. ವೈದ್ಯಕೀಯ ಮತ್ತು ಭದ್ರತಾ ಅಕಾರಿಯ ವರದಿಗಳನ್ನು ಲಗತ್ತಿಸಲಾಗಿದೆ.’
ತಾನ್ ಪುಟ ತಿರುಗಿಸಿದ.
`ಆಘಾತವನ್ನು ವಿವರಿಸಬಲ್ಲ ಸಾಧ್ಯ ಕಾರಣಗಳು: ದೃಶ್ಯ ಒಂದು: ಸತ್ತವ ಕತ್ತಲಿನಲ್ಲಿ ಕಲ್ಲುಬಂಡೆಗೆ ಡಿಕ್ಕಿ ಹೊಡೆದ. ಆ ಪ್ರದೇಶದಲ್ಲಿ ಇದೆ ಎಂದು ಭೌಗೋಳಿಕವಾಗಿ ಗುರುತಿಸಲಾದ ಬ್ಲೇಡಿನಂಥ ಹರಿತ ಕ್ವಾರ್ಜ್ ಮೇಲೆ ಬಿದ್ದ. ಎರಡು: ನಿರ್ಮಾಣ ಕಾಮಗಾರಿ ಮಾಡು-ತ್ತಿದ್ದವರು ಬಿಟ್ಟು ಹೋದ ಹರಿತ ಗುದ್ದಲಿಯ ಮೇಲೆ ಬಿದ್ದ. ಮೂರು: ಎತ್ತರದ ಪರ್ವತ-ಗಳೆಂದರೆ ಅಪರಿಚಿತ. ಹಠಾತ್ತಾಗಿ ಪರ್ವತೋನ್ನತ ರೋಗಕ್ಕೆ ತುತ್ತಾದ. ಮೊದಲು ಅಥವಾ ಎರಡನೆಯ ಕಾರಣಗಳಲ್ಲಿ ಹೇಳಿದಂತೆ ಸತ್ತ.’ ತಾನ್ ತಡೆದ. `ಉಲ್ಕೆ ಇಲ್ಲವೆ? ನನಗೆ ಉಲ್ಕೆ ತುಂಬಾ ಇಷ್ಟ ಆಗಿತ್ತು. ಒಂಥರ ಬೌದ್ಧ ರುಚಿ ಅದರಲ್ಲಿತ್ತು. ಇನ್ನೊಂದು ಜಗತ್ತಿನ ವಿಯಾಟ.’
ತಾನ್ ವರದಿಯನ್ನು ಮತ್ತೆ ಮಡಚಿದ. `ನೀನು ನನಗೆ ಅಂತಿಮ ನಿರ್ಣಯಗಳನ್ನು ಕೊಡೋ-ದ್ರಲ್ಲಿ ಸೋತಿದೀಯ. ನೀನು ಕೊಲೆಯಾದವ ಯಾರು ಎಂದು ಹೇಳೋದ್ರಲ್ಲಿ ಸೋತಿ-ದೀಯ. ನೀನು ನಾನು ಸಹಿ ಮಾಡಬಹುದಾದ ವರದಿಯನ್ನು ತಯಾರಿಸೋವಲ್ಲಿ ಸೋತಿದೀಯ.’
`ಕೊಲೆಯಾದವನನ್ನು ಗುರುತಿಸೋದೆ?’
`ಅಪರಿಚಿತರನ್ನು ಶವಾಗಾರದಲ್ಲಿ ಇಟ್ಟುಕೊಳ್ಳೋದು ತೀರಾ ಮುಜುಗರ ತರುತ್ತೆ. ಅದನ್ನು ಅಲಕ್ಷ್ಯ ಎಂದು ತೀರ್ಮಾನಿಸಬಹುದು.’
`ಆದರೆ ಅದೇ ಕಾರಣಕ್ಕೇ ಸಚಿವಾಲಯವು ನಿನಗೆ ಯಾವ ತೊಂದರೆಯನ್ನೂ ಕೊಡ-ಬಾರದು. ಅವನ ಕುಟುಂಬವೇ ಅಲಕ್ಷ್ಯ ಮಾಡಿದ್ದರೆ ನಿನ್ನನ್ನು ಯಾಕೆ ಬೈಯ್ಯಬೇಕು?’
`ಒಂದು ಸಾಧಾರಣವಾದ ಗುರುತಿನಿಂದ ಅನುಮಾನ ಕಡಿಮೆಯಾಗುತ್ತೆ. ಹೆಸರಲ್ಲದಿದ್ರೂ ಸರಿ. ಒಂದು ಟೋಪಿ…’
`ಟೋಪಿ?’
`ಒಂದು ಕೆಲಸ. ಒಂದು ಮನೆ. ಇಲ್ಲಿ ಇರೋದಕ್ಕೆ ಒಂದಾದ್ರೂ ಕಾರಣ ಬೇಕು. ಮೇಡಂ ಕೋ ಈಗತಾನೇ ಆ ಬ್ಯುಸಿನೆಸ್ ಕಾರ್ಡಿನಲ್ಲಿ ಇರೋ ಅಮೆರಿಕನ್ ಕಂಪೆನಿಗೆ ಫೋನು ಮಾಡಿದ್ದಳು. ಅವರು ಎಕ್ಸ್ ರೇ ಯಂತ್ರಗಳನ್ನು ಮಾರ್‍ತಾರೆ. ಆತ ಎಕ್ಸ್ ರೇ ಯಂತ್ರಗಳನ್ನು ಮಾರ್‍ತಾ ಇದ್ದ ಅಂತಲಾದ್ರೂ ಹೇಳೋಣ.’
`ಇಲ್ಲಿ ಊಹೆ ಬಿಟ್ರೆ ಮತ್ತೇನೂ ಇರಲ್ಲ.’
`ಒಬ್ಬನ ಊಹೆಯೇ ಇನ್ನೊಬ್ಬನ ತೀರ್ಮಾನವೂ ಆಗಿರಬಹುದು.’
ಡ್ರೇಗನ್ ಕ್ಲಾದ ಮೇಲೆ ಬೀಳತೊಡಗಿದ್ದ ನೆರಳನ್ನೇ ಶಾನ್ ನೋಡತೊಡಗಿದ.`ನೀನು ಇದಕ್ಕೆ ಸ್ಪಷ್ಟ ಚಿತ್ರಣ ನೀಡಲೇಬೇಕು ಅಂತಿದ್ರೆ, ಅದರಲ್ಲೂ ಸಚಿವಾಲಯವು ಒಪ್ಪೋವಂಥ ವರದಿ ಬೇಕು ಅಂತಿದ್ರೆ, ನನ್ನನ್ನು ಮತ್ತೆ ನನ್ನ ಯೂನಿಟ್ಟಿಗೆ ಬಿಟ್ಟುಕೊಡ್ತೀಯ?’ ಶಾನ್‌ನ ಪ್ರತೀ ಪದದಲ್ಲೂ ದ್ವೇಷದ ಹೊರಳು.
`ಇದು ಸಂಧಾನವಲ್ಲ,’ ತಾನ್ ಮತ್ತೆ ತಿರಸ್ಕರಿಸುವ ನೋಟ ಬೀರಿದ. `ಕಲ್ಲು ಒಡೆಯೋದು ಅಂದ್ರೆ ಇಷ್ಟೆಲ್ಲ ಮಾದಕವಾಗಿರುತ್ತೆ ಅಂತ ನನಗೆ ಗೊತ್ತಿರ್‍ಲಿಲ್ಲ. ನಿಮ್ಮನ್ನು ಮತ್ತೆ ವಾರ್ಡನ್‌ಗೆ ಮರಳಿಸೋಕೆ ನನಗೆ ತುಂಬಾನೇ ಖುಷಿಯಾಗುತ್ತೆ ಕಾಮ್ರೇಡ್ ಖೈದಿಯವರೆ..’
`ಸತ್ತವನು ತೈವಾನಿನಿಂದ ಬಂದ ಒಬ್ಬ ಬಂಡವಾಳಶಾಹಿಯಾಗಿದ್ದ.’
`ಅಮೆರಿಕನ್ ಅಲ್ವ?’
`ಅಮೆರಿಕನ್ ಎಂಬ ಪದಕ್ಕೆ ಸಾರ್ವಜನಿಕ ಭದ್ರತಾ ಬ್ಯೂರೋ ಹೇಗೆ ಪ್ರತಿಕ್ರಿಯೆ ನೀಡುತ್ತೆ ಅನ್ನೋದರ ಬಗ್ಗೆ ಚಿಂತೆ ಮಾಡಿದೀಯ?’
ತಾನ್ ಹಾಗೇನಿಲ್ಲ ಎಂದು ತಲೆಯಾಡಿಸಿದ.
`ತೈವಾನೀಸ್. ಅದು ಅವನ ಉಡುಗೆ, ಹಣ, ಎಲ್ಲವನ್ನೂ ವಿವರಿಸುತ್ತೆ. ಹಾಗೇನೇ ಆತ ಯಾಕೆ ಯಾರ ಗಮನಕ್ಕೂ ಬರದೆ ಇಲ್ಲಿಯವರೆಗೆ ಬಂದ ಅನ್ನೋದಕ್ಕೂ ಕಾರಣ ಸಿಗುತ್ತೆ. ಇಲ್ಲಿ ಕೆಲಸ ಮಾಡ್ತಾ ಇದ್ದ ಕೋಮಿನ್‌ಟಾಂಗ್–ನ ಮಾಜಿ ಸೈನಿಕನೊಬ್ಬ  ತೀರಾ ಭಾವುಕ ಸಂಬಂಧ ಇಟ್ಟುಕೊಂಡಿದ್ದ. ಒಂದು ಪ್ರವಾಸಿ ತಂಡದ ಜೊತೆಗೆ ಬಂದ. ಲ್ಹಾಸಾಗೆ ಬಂದವನೇ ಅವರಿಂದ ಬೇರೆಯಾಗಿ ಲ್ಹಾದ್ರಂಗ್‌ಗೆ ಬಂದ. ಅಕ್ರಮ ಪ್ರವಾಸ ಮಾಡಿದ. ಅಂಥ ವ್ಯಕ್ತಿಯ ರಕ್ಷಣೆ ಬಗ್ಗೆ ಸರ್ಕಾರ ಯಾವುದೇ ಜವಾಬ್ದಾರಿ ಹೊರೋದಕ್ಕೆ ಆಗಲ್ವಲ್ಲ?’
ತಾನ್ ಈಗಲೂ ಶಾನ್ ಮಾತುಗಳನ್ನು ನಿರೀಕ್ಷಿಸುತ್ತಿದ್ದಾನೆ. `ನಿಜ. ಅಂಥ ಸಂಗತಿಗಳನ್ನು ಪರಿಶೀಲನೆ ಮಾಡಬಹುದು.’
ಶಾನ್ ಹಾಗಾಗಲ್ಲ ಎಂಬಂತೆ ತಲೆಯಾಡಿಸಿದ. `ಕಳೆದ ಮೂರು ವಾರಗಳಲ್ಲಿ ತೈವಾನ್‌ನಿಂದ ಎರಡು ತಂಡಗಳು  ಲ್ಹಾಸಾಗೆ ಭೇಟಿ ನೀಡಿವೆ. ಚೀನಾ ಟ್ರಾವೆಲ್ ಸರ್ವಿಸಿನ ವರದಿಯನ್ನು ಲಗತ್ತಿಸಿದೆ. ನೀನು ಇದನ್ನು ಪರಿಶೀಲಿಸಲಿಕ್ಕೆ ಮೂರು ದಿನ ತಗೊಂಡ್ರೆ ಆ ಗುಂಪುಗಳು ವಾಪಸಾ-ಗಿರ್‍ತವೆ. ಅಕೃತವಾಗಿ ನೀನು ತೈವಾನಿನಲ್ಲಿ ಯಾವ ತನಿಖೆಯನ್ನೂ ಮಾಡೋ ಹಾಗಿಲ್ಲ. ಅಂಥ ಗುಂಪುಗಳನ್ನು ಅನಕೃತ ಉದ್ದೇಶಗಳಿಗೆ ಬಳಸುತ್ತಾರೆ ಅನ್ನೋದು ಸಾರ್ವಜನಿಕ ಭದ್ರತೆಗೆ ಗೊತ್ತೇ ಇದೆ.’
ತಾನ್ ತನ್ನ ಎಂದಿನ ಹರಿತ ನಗೆ ಬೀರಿದ. `ಬಹುಶಃ ನಾನು ನಿನ್ನನ್ನು ತೀರಾ ಗಡಿಬಿಡಿಯಲ್ಲಿ ಗಮನಿಸಿದೆ.’
`ಫೈಲನ್ನು ಮುಗಿಸಲಿಕ್ಕೆ ಇಷ್ಟು ಸಾಕು. ತನಿಖಾ ತಂಡವು ಬಂದುಹೋದ ಮೇಲೆ ಏನು ಮಾಡಬೇಕೆಂಬುದು ನಿಮ್ಮ ಪ್ರಾಸಿಕ್ಯೂಟರ್‌ಗೆ ಗೊತ್ತಿರುತ್ತೆ.’ ಶಾನ್ ಮಾತಾಡಿದಂತೆ ಈ ಬಗ್ಗೆ ಇನ್ನೊಂದು ಕಾರಣವನ್ನು ತಾನ್ ಉಲ್ಲೇಖಿಸಿದ್ದು ನೆನಪಾಯಿತು. ತನಿಖಾ ತಂಡ ಬರೋದಕ್ಕಿಂತ ಮುಂಚೆ ಬರುವ ಅಮೆರಿಕನ್ ತಂಡ.
`ಪ್ರಾಸಿಕ್ಯೂಟರ್‌ಗೆ ಏನು ಗೊತ್ತಾಗುತ್ತೆ?’
`ಅದನ್ನು ಕೊಲೆ ತನಿಖೆಯಾಗಿ ಪರಿವರ್ತಿಸೋದಕ್ಕೆ.’
ತೀರಾ ಕಹಿಯಾದದ್ದನ್ನು ಜಗಿದ ಹಾಗೆ ತಾನ್ ಮುಖ ಗಂಟಿಕ್ಕಿದ.`ಬರಿಯ ತೈವಾನೀಸ್ ಪ್ರವಾಸಿ. ನಾವು ತೀರಾ ಅತಿಯಾದ ಪ್ರತಿಕ್ರಿಯೆ ನೀಡೋದ್ರಿಂದ ದೂರ ಇರಬೇಕು.’
ಶಾನ್ ಮುಖ ಎತ್ತಿ ಮಾವೋನ ಫೋಟೋ ನೋಡುತ್ತ ನುಡಿದ.`ನಾನು ಅದು ಪಕ್ಕಾ ದೃಶ್ಯಾವಳಿ ಎಂದೆ. ಆದರೆ ಅದನ್ನು ಸತ್ಯದ ಜೊತೆ ಬೆರೆಸಬೇಡ.’
`ಸತ್ಯ!?’
`ಕೊಟ್ಟ ಕೊನೆಗೆ ನೀನು ಕೊಲೆಗಾರನನ್ನು ಹಿಡಿಯೋ ಕೆಲಸ ಬಾಕಿ ಇದ್ದೇ ಇರುತ್ತೆ.’
`ಅದನ್ನು ನಾನು ಮತ್ತು ಪ್ರಾಸಿಕ್ಯೂಟರ್ ನಿರ್ಧರಿಸ್ತೇವೆ.’
`ಹಾಗೇನಿಲ್ಲ.’
ತಾನ್ ಪ್ರಶ್ನೆ ಮಾಡುವವನ ಹಾಗೆ ಹುಬ್ಬೇರಿಸಿದ.
`ನೀನು ಕೆಲವು ವಾರಗಳ ಕಾಲ ಈ ಪ್ರಕರಣದ ಜಾಡು ತಪ್ಪಿಸೋ ಹಾಗೆ ವರದಿಯನ್ನೇನೋ ತಯಾರಿಸಬಹುದು. ಅಥವಾ ಯಾವುದೇ ಸಹಿ ಇಲ್ಲದೆಯೇ ವರದಿಯನ್ನು ಕಳಿಸಲೂಬಹುದು. ಯಾರೋ ಅದನ್ನು ನೋಡೋದಕ್ಕೆ ಕೆಲವು ತಿಂಗಳುಗಳನ್ನು ತೆಗೆದುಕೊಳ್ಳಬಹುದು.’
`ನಾನು ಯಾಕೆ ಸಹಿ ಇಲ್ಲದೆಯೇ ವರದಿ ಕಳಿಸೋವಷ್ಟು ನಿರ್ಲಕ್ಷ್ಯ ವಹಿಸ್ತೇನೆ?’
`ಯಾಕಂದ್ರೆ ಅಂತಿಮವಾಗಿ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರೇ ಅಪಘಾತದ ವರದಿಗೆ ಸಹಿ ಹಾಕಬೇಕಾಗುತ್ತೆ.’
`ಡಾ|| ಸುಂಗ್.’ ತಾನ್ ದನಿಯಲ್ಲಿ ಕಹಿ ಇದೆ.
`ವೈದ್ಯಕೀಯ ವರದಿ ತುಂಬಾ ನಿಖರವಾಗಿಯೇ ಇತ್ತು. ತಲೆ ಕಾಣೆಯಾಗಿದೆ ಎಂದು ವೈದ್ಯರು ಗಮನಿಸಿದ್ದರು.’
`ನೀನು ಏನು ಹೇಳ್ತಾ ಇದೀಯ?’
`ಆ ವೈದ್ಯೆ ಬೇರೆಯವರಿಗೂ ವರದಿ ಕೊಡಬೇಕು. ಅವರು ತಮ್ಮದೇ ಆದ ಲೆಕ್ಕಾಚಾರ ಮಾಡ್ತಾರೆ. ತಲೆ ಇಲ್ಲದೆ ಇರೋದ್ರಿಂದ ನಿನ್ನ ಆಪಘಾತದ ವರದಿಗೆ ವೈದ್ಯಾಕಾರಿ ಸಹಿ ಹಾಕ್ತಾರೆ ಅಂತ ನನಗೆ ಅನ್ನಿಸಲ್ಲ. ಈ ವರದಿ ಇಲ್ಲದೆ ಸಚಿವಾಲಯವು ಪ್ರಕರಣವನ್ನು ಮತ್ತೆ  ತನಿಖೆ ಮಾಡಿ ಕೊಲೆ ಅಂತ ವರ್ಗೀಕರಿಸುತ್ತೆ.’
ತಾನ್ ಒಪ್ಪಲಿಲ್ಲ. `ಕೊನೆಗೊಮ್ಮೆ  ಪ್ರಾಸಿಕ್ಯೂಟರ್ ಜಾವೋ ಹಿಂದಿರುಗ್ತಾನೆ.’
`ಆದರೆ ಅಲ್ಲಿ ಕೊಲೆಗಾರ ಇನ್ನೂ ಮುಕ್ತವಾಗಿದಾನೆ. ನಿನ್ನ ಪ್ರಾಸಿಕ್ಯೂಟರ್ ಅದರ ಪರಿಣಾಮಗಳನ್ನು ಪರಿಶೀಲಿಸಲೇಬೇಕಾಗುತ್ತೆ.’
`ಪರಿಣಾಮ?’
`ಉದಾಹರಣೆಗೆ ಈತ ತನಗೆ ಗೊತ್ತಿದ್ದ ವ್ಯಕ್ತಿಯಿಂದಲೇ ಹೇಗೆ ಕೊಲೆಯಾದ ಅಂತ…’
ತಾನ್ ಅಮೆರಿಕನ್ ಸಿಗರೇಟನ್ನು ಹಚ್ಚಿದ. `ನಿನಗೆ ಅದು ಗೊತ್ತಿಲ್ಲ.’
`ದೇಹದ ಮೇಲೆ ಗುರುತುಗಳೇ ಇರಲಿಲ್ಲ. ಹೋರಾಟ ಮಾಡಿದ ಕುರುಹೂ ಇಲ್ಲ. ಆತ ಸ್ವಯಂ ತಾನೇ ಬೆಟ್ಟ ಹತ್ತಿದ್ದ. ಅವನ ಶೂಗಳು ನೀಟಾಗಿಯೇ ಇದ್ದವು.’
`ಅವನ ಶೂಗಳು?’
`ಅವನನ್ನು ಎಳೆದುಕೊಂಡು ಹೋಗಿದ್ರೆ ಅವು ತೀರಾ ಕೊಳಕಾಗಿರುತ್ತಿದ್ದವು. ಅವನನ್ನು ಎತ್ತಿ ಒಯ್ದಿದ್ದರೆ ಅವನ ಸೋಲ್‌ಗಳಲ್ಲಿ ಕಲ್ಲಿನ ಚೂರುಗಳು ಇರ್‍ತಾ ಇರಲಿಲ್ಲ. ಅದು ಈ ವರದಿಯಲ್ಲಿ ಇಲ್ಲ.’
`ಅಂದ್ರೆ ಒಬ್ಬ ಕಳ್ಳ ಈ ಸಿರಿವಂತ ಪ್ರವಾಸಿಯನ್ನು ಕಂಡ. ಅವನು ಎತ್ತರಕ್ಕೆ ಹತ್ತುವಂತೆ ಪಿಸ್ತೂಲು ತೋರಿಸಿ ಬೆದರಿಸಿದ.’
`ಇಲ್ಲ. ಅವನನ್ನು ದರೋಡೆ ಮಾಡಿಲ್ವಲ್ಲ… ಕಳ್ಳ ಅವನ ಕಿಸೆಯಲ್ಲಿದ್ದ ಇನ್ನೂರು ಡಾಲರ್ ಹಣವನ್ನು ಅಲಕ್ಷ್ಯ ಮಾಡ್ತಾನೆ ಅಂತ ನನಗನ್ನಿಸಲ್ಲ. ಅದರಲ್ಲೂ ಆತ ಸುಮ್ಮನೇ ಸೌತ್ ಕ್ಲಾ ಬಳಿಗೆ ಡ್ರೈವ್ ಮಾಡಲಿಲ್ಲ. ಅಥವಾ ತನಗೆ ಗೊತ್ತಿಲ್ಲದ ಯಾರೋ ಒಬ್ಬರ ವಿನಂತಿಯಂತೆ ಹೋಗಲೂ ಇಲ್ಲ.’
`ಅವನಿಗೆ ಗೊತ್ತಿದ್ದ ಯಾರೋ…’ ತಾನ್ ಯೋಚಿಸಿದ. `ಅಂದ್ರ ಅದು ಸ್ಥಳೀಯ ವಿಷಯ ಆಗುತ್ತೆ.  ಇಲ್ಲಿ ಯಾರೂ ಕಾಣೆಯಾಗಿಲ್ವಲ್ಲ.’
`ಅಥವಾ ಯಾರೋ ಇಲ್ಲಿ ಇರೋವ್ರಲ್ಲಿ ಗೊತ್ತಿರೋರು. ಹಠಾತ್ ಭೇಟಿ ಮಾಡಿದವನ ಬಗ್ಗೆ ಮತ್ತೆ ಮೇಲೆದ್ದ ಹಳೆ ದ್ವೇಷ. ಅಥವಾ ಅನಾವರಣಗೊಂಡ ಒಂದು ಸಂಚು. ಅಥವಾ ಹಿಂದಿನ ಸೇಡನ್ನು ತೀರಿಸಿಕೊಳ್ಳಲಿಕ್ಕೆ ಸಿಕ್ಕಿದ ಒಂದು ಅವಕಾಶ. ನೀನು ಪ್ರಾಸಿಕ್ಯೂಟರ್‌ನ ಸಂಪರ್ಕಿಸೋದಕ್ಕೆ ಪ್ರಯತ್ನಿಸಿದೀಯ? ನಾನು ಬರಿಯದೆ ಇದ್ದ ಒಂದು ತ್ರಾಸಿನ ಪ್ರಶ್ನೆ ಎಂದರೆ ಯಾಕೆ ಕೊಲೆಗಾರ ಆತ ನಗರ ಬಿಟ್ಟು ಹೋಗೋವರೆಗೂ ಕಾದ ಅನ್ನೋದು.’
`ನಿನಗೆ ಹೇಳಿದ್ದೆ. ಈ ಬಗ್ಗೆ ನಾನು ಅವನ ಹತ್ರ ಫೋನ್‌ನಲ್ಲಿ ಮಾತಾಡೋದಕ್ಕೆ ಇಷ್ಟ ಪಡಲ್ಲ ಅಂತ.’
`ಅವನ ಗೈರುಹಾಜರೀಲಿ ಇನ್ನೇನನ್ನೋ ಪ್ಲಾನ್ ಮಾಡಿದ್ರೆ ? ತನಿಖಾ ತಂಡ ಬರೋದಕ್ಕಿಂತ ಮುಂಚೆ?’
`ನಂಗೊತ್ತಿಲ್ಲ. ಅವನು ದಾಲಿಯಾನ್ ತಲುಪಿದ್ದಾನಾ ಅನ್ನೋದೂ ಗೊತ್ತಿಲ್ಲ.’ ತಾನ್ ಸಿಗರೇಟಿನ ಬೆಂಕಿಯನ್ನೇ ನೋಡುತ್ತ ನುಡಿದ. `ನಾನು ಇನ್ನೇನು ಕೇಳಬೇಕು ಆಂತ ನೀನು ಬಯಸಿದೀಯ?’
`ಬಾಕಿ ಉಳಿದಿರೋ ಪ್ರಕರಣಗಳ ಬಗ್ಗೆ ಕೇಳು. ಆತ ಯಾರ ಮೇಲಾದ್ರೂ ಒತ್ತಡ ಹೇರ್‍ತಿದ್ನಾ?’
`ನನಗೆ ಅರ್ಥ ಆಗ್ತಿಲ್ಲ…’
`ಪ್ರಾಸಿಕ್ಯೂಟರ್‌ಗಳು ಯಾವಾಗ್ಲೂ ಕಲ್ಲಿನ ಕೆಳಗೆ ಇಣುಕ್ತಾರೆ. ಕೆಲವು ಸಲ ಅವರು ಅಲ್ಲಿರೋ ಹಾವಿನ ಹುತ್ತವನ್ನು ಬಡಿದೆಬ್ಬಿಸ್ತಾರೆ.’
`ನಿನಗೆ ಅಂಥ ನಿರ್ದಿಷ್ಟ ಹಾವಿನ ಬಗ್ಗೆ ಮಾಹಿತಿ ಇದೆಯೆ?’
`ರಾಜಕೀಯ ಮಾಹಿತಿ ಕೊಡೋವ್ರು ಕೊಲೆಯಾಗ್ತಾರೆ. ಅಪರಾಧದಲ್ಲಿ ಪಾಲುದಾರ-ರಾದವರು ನಂಬಿಕೆ ಕಳಕೊಳ್ತಾರೆ. ಆತ ಯಾವುದಾದ್ರೂ ಲಂಚದ ಪ್ರಕರಣಾನ ತನಿಖೆ ಮಾಡ್ತಾ ಇದ್ನಾ ಅಂತ ಕೇಳು.’
ಈ ಸಲಹೆ ಕೇಳಿದ ಕೂಡಲೇ ತಾನ್ ಸ್ತಬ್ಧನಾದ. ಸಿಗರೇಟನ್ನು ಕಾಲಲ್ಲೇ ಹೊಸಕಿ ಕಿಟಕಿಯತ್ತ ನಡೆದ. ಬೈನ್ಯಾಕ್ಯುಲರನ್ನು ತೆಗೆದು ಪೂರ್ವದತ್ತ ನೋಡತೊಡಗಿದ. `ಸೂರ್ಯ ಪ್ರಖರವಾಗಿದ್ದಾಗ ಡ್ರೇಗನ್ ಥ್ರೋಟ್‌ನ ಬುಡದಲ್ಲಿ ಕಟ್ತಾ ಇರೋ ಹೊಸ ಸೇತುವೆ-ಯನ್ನು ನೀನು ನೋಡಬಹುದು. ಅದನ್ನು ಯಾರು ಕಟ್ಟಿರೋರು ಗೊತ್ತ? ನಾವೇ. ಲ್ಹಾಸಾದಿಂದ ಯಾವುದೇ ಸಹಾಯ ತಗೊಳ್ಳದೆ ನನ್ನ ಇಂಜಿನಿಯರುಗಳೇ ಇದನ್ನ ಕಟ್ಟಿದ್ರು.’
ಶಾನ್ ಉತ್ತರಿಸಲಿಲ್ಲ.
ತಾನ್ ಬೈನ್ಯಾಕ್ಯುಲರನ್ನು ತೆಗೆದಿಟ್ಟು ಬಂದು ಕೂತ. ಇನ್ನೊಂದು ಸಿಗರೇಟು. `ಲಂಚ ಯಾಕೆ?’ ಕಿಟಕಿಯನ್ನು ನೋಡುತ್ತಲೇ ತಾನ್ ತನಗೇ ಎಂಬಂತೆ ಪ್ರಶ್ನಿಸಿಕೊಂಡ. ಭ್ರಷ್ಟಾಚಾರ ಯಾವಾಗ್ಲೂ ಕೊಲೆಗಿಂತ ಹೆಚ್ಚಿನ ಮಟ್ಟದ ಅಪರಾಧ. ಮನೆತನಗಳ ಕಾಲದಲ್ಲಿ ಕೊಲೆ ಮಾಡಿದವರು ಕೇವಲ ದಂಡ ಕೊಟ್ಟು ಬಚಾವಾಗುತ್ತಿದ್ದರು. ಆದರೆ ಮಹಾರಾಜನ ಬಳಿ ಕಳ್ಳತನ ಮಾಡಿದವರು ಸಾವಿರ ಚೂರುಗಳಾಗಿ ಕತ್ತರಿಸಿಹೋಗುತ್ತಿದ್ದರು.
`ಬಲಿಯಾದವ ಚೆನ್ನಾಗಿ ಉಡುಗೆ ತೊಟ್ಟಿದ್ದ,’ ಶಾನ್ ಹೇಳತೊಡಗಿದ. `ಟಿಬೆಟನ್ನರು ವರ್ಷದಲ್ಲಿ ಗಳಿಸುತ್ತಿದ್ದಕ್ಕಿಂತ ಹೆಚ್ಚಿನ ಹಣ ಇಟ್ಕೊಂಡಿದ್ದ. ಬೀಜಿಂಗ್‌ನಲ್ಲಿ  ಎಲ್ಲಾ ಲೆಕ್ಕ ಇಟ್ಟಿರ್‍ತಾರೆ. ಎರಡು ಪ್ರಕರಣಗಳ ನಡುವಣ ಸಂಬಂ ಉಲ್ಲೇಖಗಳು. ಹ್ಞಾ, ಅವೆಲ್ಲ ವರ್ಗೀಕೃತ ನಿಜ. ಕೊಲೆಗಳು ಸಾಮಾನ್ಯವಾಗಿ ಒಂದೆರಡು ಪದರಗಳಲ್ಲಿ ಇರೋ ಶಕ್ತಿಗಳ ಪರಿಣಾಮವಾಗಿ ಆಗುತ್ತವೆ. ಮೋಹ. ಅಥವಾ ರಾಜಕೀಯ.’
`ರಾಜಕೀಯ?’
`ಬೀಜಿಂಗ್‌ನಲ್ಲಿ ಭ್ರಷ್ಟಾಚಾರವನ್ನು ವ್ಯಾಖ್ಯೆ ಮಾಡೋದೇ ಹೀಗೆ. ಭ್ರಷ್ಟಾಚಾರದಲ್ಲಿ ಸದಾ ಅಕಾರಕ್ಕಾಗಿ ಹೋರಾಟ ಮಾಡೋ ವಿಷಯ ಕೂಡಿಯೇ ಇರುತ್ತೆ. ನಿನ್ನ ಪ್ರಾಸಿಕ್ಯೂಟರ್ ಬಂದಾಗ ಕೇಳು. ಅವನಿಗೆ ಅರ್ಥ ಆಗುತ್ತೆ. ಹಾಗೇನೇ ನೈಜವಾದ ಒಬ್ಬ ಪತ್ತೇದಾರಿಯನ್ನು ಶಿಫಾರಸು ಮಾಡಲಿಕ್ಕೂ ಹೇಳು. ನಾನು ಈ ಅರ್ಜಿಯನ್ನು ತುಂಬಬಹುದು. ಆದರೆ ಹೊಸ ಸಾಕ್ಷ್ಯ ಸಿಕ್ಕಿದಾಗಲೇ ನಿಜವಾದ ತನಿಖೆ ಶುರುವಾಗೋದು.’
ತಾನ್ ಮತ್ತೆ ಸಿಗರೇಟಿನ ಹೊಗೆಯನ್ನು ದೀರ್ಘವಾಗಿ ಎಳೆದುಕೊಳ್ಳುತ್ತ ನುಡಿದ.` ಈಗ ನಾನು ನಿನ್ನನ್ನು ಆರ್ಥ ಮಾಡಿಕೊಳ್ಳಲಿಕ್ಕೆ ಆರಂಭಿಸಿದ್ದೇನೆ. ನೀನು ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿ ಸಣ್ಣ ಸಮಸ್ಯೆಯನ್ನು ಪರಿಹರಿಸ್ತೀಯ. ನೀನು ಟಿಬೆಟಿನಲ್ಲಿ ಇರೋದು ಇದೇ ಕಾರಣಕ್ಕೆ ಅಂತ ನಾನು ಈಗ ಹೇಳಬಲ್ಲೆ.’
ಶಾನ್ ಮತ್ತೆ ಮೌನವಾಗುಳಿದ.
`ತಲೆ ಪ್ರಪಾತದಿಂದ ಕೆಳಗೆ ಜಾರಿ ಬಿತ್ತು. ನಾವು ಅದನ್ನು ಹುಡುಕ್ತೇವೆ. ನಾಳೆ ನನ್ನ ಪಡೆಯನ್ನು ಕಳಿಸ್ತೇನೆ. ನಾವು ಅದನ್ನು ಹುಡುಕಿ ವರದಿಗೆ ಸಹಿ ಹಾಕುವಂತೆ ಡಾ|| ಸುಂಗ್‌ಗೆ ಹೇಳ್ತೇವೆ.’
ಶಾನ್ ಈಗಲೂ ಮೌನವಾಗಿ ತಾನ್‌ನತ್ತ ನೋಡುತ್ತಿದ್ದಾನೆ.
`ತಲೆ ಸಿಗದೆ ಇದ್ರೆ ಕೊಲೆಗಾರನನ್ನು ನಾನು ಹುಡುಕಿಕೊಡಬೇಕೆಂದು ಸಚಿವಾಲಯವು ನಿರೀಕ್ಷೆ ಮಾಡಬೇಕೆಂದು ನೀನು ಹೇಳ್ತಾ ಇದೀಯ.’
`ಹೌದು,’ ಆತ ಒಪ್ಪಿದ. `ಆದ್ರೆ ಅದು ಅವರ ಪ್ರಮುಖ ಕಾಳಜಿ ಆಗಿರಲ್ಲ ಅನ್ನು. ನೀನು ಮೊದಲು ಒಂದು ಸಮಾಜವಿರೋ ಕೃತ್ಯವನ್ನು ಹುಡುಕಬೇಕು. ನಿನ್ನ ಹೊಣೆಗಾರಿಕೆ ಇರೋದೇ ಇದನ್ನೆಲ್ಲ ಸಮಾಜವಾದಿ ಹಿನ್ನೆಲೆಯಲ್ಲಿ ವಿವರಿಸೋದ್ರಲ್ಲಿ. ಒಂದು ಹಿನ್ನೆಲೆ ಕೊಡು. ಉಳಿದದ್ದೆಲ್ಲ ಹಾಗೇ ಹಿಂಬಾಲಿಸ್ತವೆ.’
`ಹಿನ್ನೆಲೆ?’
`ಸಚಿವಾಲಯವು ಯಾರು ಕೊಲೆಗಾರ ಆಂತ ಜಾಸ್ತಿ ತಲೆ ಕೆಡಿಸ್ಕಳಲ್ಲ. ಅನುಮಾನಾಸ್ಪದ ವ್ಯಕ್ತಿಗಳು ಯಾವಾಗ್ಲೂ ಸಿಕ್ಕೇ ಸಿಗ್ತಾರೆ.’ ಪ್ರತಿಕ್ರಿಯೆಗಾಗಿ ಶಾನ್ ಕಾದ. ತಾನ್ ಕಣ್ಣು ಮಿಟುಕಿಸಲೂ ಇಲ್ಲ. `ಅವರು ಯಾವಾಗ್ಲೂ ಕೇಳೋದು..’ ಶಾನ್ ಮತ್ತೆ ತನ್ನ ವಾದ ಮುಂದುವರೆಸಿದ,`ರಾಜಕೀಯ ವಿವರಣೆ ಮಾತ್ರ. ಕೊಲೆ ತನಿಖೆ ಮಾಡೋದೊಂದು ಕಲೆ. ಹಿಂಸಾತ್ಮಕ ಅಪರಾಧದ ಮೂಲ ಕಾರಣ ವರ್ಗಸಂಘರ್ಷ.’
`ನೀನು ಮೋಹ ಅಂದೆ. ಆಮೇಲೆ ಭ್ರಷ್ಟಾಚಾರ.’
`ಅದು ವರ್ಗೀಕೃತ ಮಾಹಿತಿ. ಖಾಸಗಿ, ಕೇವಲ ಪತ್ತೇದಾರರು ಬಳಸಬಹುದಾದದ್ದು. ನಾನು ಸಮಾಜವಾದಿ ಪರಿಭಾಷೆ ಬಗ್ಗೆ ಮಾತ್ರ  ಮಾತಾಡ್ತಾ ಇದೀನಿ. ಕೊಲೆಯ ಪ್ರಾಸಿಕ್ಯೂಶನ್ ಒಂದು ಸಾರ್ವಜನಿಕ ವಿಚಾರ. ಪ್ರಾಸಿಕ್ಯೂಶನ್‌ಗೆ ಕಾರಣ ಏನು ಎಂದು ನೀನು ಇಲ್ಲಿ ವಿವರಿಸಲಿಕ್ಕೆ ಸಿದ್ಧನಾಗಿರಬೇಕಾಗುತ್ತೆ. ಇಲ್ಲಿ ಸದಾ ಒಂದು ರಾಜಕೀಯ  ವಿವರಣೆ ಇದ್ದೇ ಇರುತ್ತೆ. ಅದೇ ಈಗಿನ ಕಾಳಜಿ. ಅದೇ ನಿನಗೆ ಬೇಕಾದ ಸಾಕ್ಷ್ಯ.’
`ಏನು ಹೇಳ್ತಾ ಇದೀಯ?’ ತಾನ್ ಗುಡುಗಿದ.
ಶಾನ್ ಮತ್ತೆ ಮಾವೋನ ಚಿತ್ರದತ್ತ ತಿರುಗಿದ. `ಒಂದು ಕೌಂಟಿಯಲ್ಲಿ ಇರೋ ಮನೆ-ಯೊಂದನ್ನು ಊಹಿಸ್ಕೋ. ಒಂದು ದೇಹ ಸಿಕ್ಕಿದೆ. ಅದಕ್ಕೆ ಇರಿಯಲಾಗಿದೆ. ಒಂದು ರಕ್ತರಂಜಿತ  ಚಾಕುವೊಂದು ಅಡುಗೆ ಮನೆಯಲ್ಲಿದ್ದ ವ್ಯಕ್ತಿಯ ಬಳಿ ಸಿಕ್ಕಿದೆ. ಅವನನ್ನು ಬಂಸಲಾಗಿದೆ. ಈಗ ತನಿಖೆ ಎಲ್ಲಿ ಶುರುವಾಗುತ್ತೆ?’
`ಅಸ್ತ್ರದಿಂದ. ಅದನ್ನು ಗಾಯದ ಜೊತೆ ಹೋಲಿಸಬೇಕು.’
`ಅಲ್ಲ. ಕಪಾಟು. ಸದಾ ಕಪಾಟಿನತ್ತ ನೋಡಬೇಕು. ಹಿಂದಿನ ದಿನಗಳಲ್ಲಿ ನೀವು ಅಡಗಿಸಿಟ್ಟ ಪುಸ್ತಕಗಳನ್ನು ಹುಡುಕ್ತಾ ಇದ್ರಿ. ಇಂಗ್ಲಿಶಿನಲ್ಲಿರೋ ಪುಸ್ತಕಗಳು. ಪಾಶ್ಚಾತ್ಯ ಸಂಗೀತ. ಈಗ ನೀನು ಇದಕ್ಕೆ ವಿರುದ್ಧವಾಗಿ ಕೆಲಸ ಮಾಡಬೇಕು. ಹಳೆಬೂಟುಗಳು ಮತ್ತು ಹಳೆ ಬಟ್ಟೆಗಳು ; ಜೊತೆಗೆ ಅಧ್ಯಕ್ಷನ ಹೇಳಿಕೆಗಳು ಇರೋ ಪುಸ್ತಕ. ಪಕ್ಷದ ಕಾರ್ಯ ಬಲಪಡಿಸೋದಾದ್ರೆ ಹೊಸ ಬತ್ತಳಿಕೆ ಬೇಕಾಗುತ್ತಲ್ಲ…ಹಾಗೆ. ಸಮಾಜವಾದಿ ಪ್ರಗತಿಯ ಬಗ್ಗೆ ಹೇಗಿದ್ರೂ ಇದು ಪ್ರತಿಕ್ರಿಯಾತ್ಮಕ ಅನುಮಾನಗಳನ್ನು ಹುಟ್ಟಿಸುತ್ತೆ.
`ಆಮೇಲೆ ನೀನು ಪಕ್ಷದ ಕೇಂದ್ರ ಕಚೇರಿಯ ಕಡತಗಳನ್ನು ಪರೀಕ್ಷಿಸ್ತೀಯ. ವರ್ಗದ ಹಿನ್ನೆಲೆ. ಶಂಕಾಸ್ಪದ ವ್ಯಕ್ತಿಗೆ ಈ ಹಿಂದೆ ಮರುಶಿಕ್ಷಣ ಬೇಕಾಗಿತ್ತು ಅಂತಲೋ, ಅಥವಾ ಅವನ ಮುತ್ತಜ್ಜಂದಿರು ವ್ಯಾಪಾರಿ ವರ್ಗದ ಶೋಷಕರು ಎಂದೋ ಹುಡುಕ್ತೀಯ. ಬಹುಶಃ ಅವನ ಚಿಕ್ಕಪ್ಪ ಕೊಳಕು ಒಂಬತ್ತನೆಯವನಾಗಿರಬಹುದು.’ ಶಾನ್‌ನ ತಂದೆಯೂ ಕೊಳಕು ಒಂಬತ್ತನೆಯವನು. ಮಾವೋನ ಪಟ್ಟಿಯಲ್ಲಿರೋ ಕೆಟ್ಟ ಶಕ್ತಿಗಳ ಪೈಕಿ ಕೊನೆಯವರು. ಅರ್ಥಾತ್ ಬುದ್ಧಿಜೀವಿಗಳು. `ಅಥವಾ ಕೊಲೆಗಾರ ಮಾದರಿ ಕೆಲಸಗಾರ ಆಗಿರಬಹುದು. ಹಾಗಾಗಿದ್ರೆ ಬಲಿಯಾದವನತ್ತ ನೋಡು.’ ಶಾನ್ ತತ್ತರಿಸಿದ. `ಈ ಹಿಂದೆ ಬೀಜಿಂಗ್‌ನಲ್ಲಿ ಮಾಡಿದ ಭಾಷಣದ ಭಾಗಗಳನ್ನೇ ಈಗ ಉಲ್ಲೇಖಿಸ್ತಿದೇನೆ. `ಇಲ್ಲಿ ಸಮಾಜವಾದಿ ಹಿನ್ನೆಲೆಯೇ ತುಂಬಾ ಮುಖ್ಯವಾಗುತ್ತೆ. ಪ್ರತಿಕ್ರಿಯಾತ್ಮಕ ಎಳೆಯನ್ನು ಹಿಡಿದು ಮುಂದೆ ಸಾಗು. ಸಾರ್ವಜನಿಕರ ಮುಂದೆ ಇಡದ ಹೊರತು ಒಂದು ಕೊಲೆ ಪ್ರಕರಣದ ತನಿಖೆ ಅರ್ಥಹೀನವಾಗುತ್ತೆ.”
ತಾನ್ ಈಗಲೂ ಕಿಟಕಿಯಾಚೆ ನೋಡುತ್ತ ನಿಂತಿದ್ದ. `ಆದ್ರೆ ನಾನು ಈ ಎಲ್ಲದರ ಹಿಂದೆ ಹೋಗೋ-ದಕ್ಕೂ ನನಗೆ ಆ ತಲೆ ಬೇಕು.’
ಶಾನ್‌ನ ಬೆನ್ನುಹುರಿಯಲ್ಲಿ ನಡುಕದ ಎಳೆ ಹರಿಯುತ್ತಿದೆ. ` ಬರೀ ತಲೆ ಅಲ್ಲ. ಅದೇ ತಲೆ.’
ತಾನ್ ಮುಖ ಅರಳಿಸದೇ ವಿಚಿತ್ರವಾಗಿ ನಕ್ಕ. `ಒಬ್ಬ ಸಂಚುಗಾರ. ಝೊಂಗ್ ನನಗೆ ಎಚ್ಚರಿಸಿದ್ದ.’ ಮತ್ತೆ ಶಾನ್‌ನತ್ತ ಅಧ್ಯಯನದ ನೋಟ.`ನಿನಗೆ ಯಾಕೆ ಮತ್ತೆ ೪೦೪ ನೆಯ ವಾರ್ಡಿಗೆ ಹೋಗೋದಕ್ಕೆ ಇಷ್ಟು ಕೆಟ್ಟ ಆತುರ?’
`ನಾನು ಬಂದಿರೋದೇ ಅಲ್ಲಿಂದ. ಅಲ್ಲಿ ತೊಂದ್ರೆಕಾಣ್ತಾ ಇದೆ. ಪತ್ತೆಯಾದ ಆ ದೇಹವೇ ಕಾರಣ. ನಾನು ಸಹಾಯ ಮಾಡಬಹುದು ಅನ್ಸುತ್ತೆ.’
ತಾನ್ ಕಣ್ಣುಗಳು ಕಿರಿದಾದವು.`ಯಾವ ತೊಂದ್ರೆ?’
`ಜಂಗ್ ಪೋ.’
`ಜಂಗ್ ಪೋ?’
`ಅಂದ್ರೆ ಹಸಿವಿನ ದೆವ್ವ. ಸಾವಿಗೆ ತಯಾರಾಗದ ಆತ್ಮವು ಹಿಂಸಾಕೃತ್ಯದಿಂದಾಗಿ ಮುಕ್ತವಾಗಿದೆ. ಪರ್ವತದಲ್ಲಿ ಮರಣೋತ್ತರ ಕ್ರಿಯೆಗಳು ನಡೆಯದ ಹೊರತು ಅಲ್ಲಿ, ಆ ಸಾವಿನ ಸ್ಥಳದಲ್ಲಿ ದೆವ್ವ ಕಾಡುತ್ತಿರುತ್ತೆ. ಅದು ಕೋಪೋದ್ರಿಕ್ತವಾಗಿರುತ್ತೆ. ಭೀರುಗಳು ಅಲ್ಲಿ ಹೋಗಲು ತಯಾರಿರಲ್ಲ.’
`ತೊಂದ್ರೆ ಏನು?’
`೪೦೪ನೇ ವಾರ್ಡಿನವರು ಅಲ್ಲಿ ಮತ್ತೆ ಕೆಲಸ ಮಾಡಲ್ಲ. ಅದೀಗ ಅಪವಿತ್ರ. ಅವರು ಆ ಆತ್ಮದ ಅಂತಿಮ ಬಿಡುಗಡೆಗಾಗಿ ಪ್ರಾರ್ಥಿಸ್ತಾ ಇದಾರೆ. ಶುದ್ಧೀಕರಣಕ್ಕೆ ಪ್ರಾರ್ಥನೆ.’
ತಾನ್ ಕಣ್ಣುಗಳಲ್ಲಿ ಕೋಪದ ಕಿಡಿಗಳು ಹಾರುತ್ತಿವೆ. `ಯಾವುದೇ ಪ್ರತಿಭಟನೆಯ ವರದಿ ಬಂದಿಲ್ಲ.’
`ವಾರ್ಡನ್ ನಿನಗೆ ಅಷ್ಟು ಬೇಗ ಖಂಡಿತ ಹೇಳಲ್ಲ. ಆದನ್ನು ತಾನೇ ಮುಗಿಸಬೇಕೆಂದು ಮೊದಲು ಪ್ರಯತ್ನಿಸ್ತಾನೆ. ಅಲ್ಲಿ ಈ ಹಿಂದೆಯೂ ಅಪಘಾತಗಳಾಗಿವೆ. ಅಲ್ಲಿನ ಕಾವಲುಗಾರರಿಗೆ ಬಂದೂಕುಗಳನ್ನು ಕೊಟ್ಟಿದ್ದಾರೆ.’
ತಾನ್ ಕೂಡಲೇ ಬಾಗಿಲಿನತ್ತ ಹೋಗಿ ಮೇಡಂ ಕೋಗೆ ಬರಹೇಳಿದ. ತತ್‌ಕ್ಷಣವೇ ವಾರ್ಡನ್ ಝೊಂಗ್‌ನ ಕಚೇರಿಗೆ ಕರೆ ಮಾಡಲು ತಿಳಿಸಿದ. ಸಭಾಂಗಣ ಕೊಠಡಿಯಲ್ಲಿ ಕರೆ ಸ್ವೀಕರಿಸಿದ.
ಆತ ಹಿಂದಿರುಗಿದಾಗ ಕಣ್ಣುಗಳು ಬೆಂಕಿಯುಂಡೆಗಳ ಹಾಗೆ ಹೊಳೆಯುತ್ತಿದ್ದವು.`ಒಬ್ಬ ಕಾಲು ಮುರ್‍ಕೊಂಡಿದಾನೆ. ಸರಬರಾಜಿನ ಒಂದು ವ್ಯಾಗನ್ ಪ್ರಪಾತದಿಂದ ಬಿದ್ದಿದೆ. ಮಧ್ಯಾಹ್ನದ ಬಿಡುವಿನ ನಂತರ ಅಲ್ಲಿ ಕೆಲಸ ಮಾಡಲು ತಂಡ ನಿರಾಕರಿಸಿದೆ.’
`ಅರ್ಚಕರಿಗೆ ಅಲ್ಲಿ ಕ್ರಿಯೆಗಳನ್ನು ಮಾಡಲಿಕ್ಕೆ ಅನುಮತಿ ನೀಡಲೇಬೇಕು.’
`ಅಸಾಧ್ಯ,’ ತಾನ್ ಖಡಾಖಂಡಿತವಾಗಿ ನುಡಿದ. ಮತ್ತೆ ಕಿಟಕಿಯೆಡೆಗೆ. ದೂರದ ಕಣಿವೆಯಲ್ಲಿ ಕಾಣಬೇಕಾದ ಬೂದುಬಣ್ಣದ ಗುಂಪನ್ನು ಕಾಣಲು ವೃಥಾ ಯತ್ನ. ಮತ್ತೆ ಹಿಂದಿರುಗಿದಾಗ ಅದೇ ಕಟುಕಣ್ಣುಗಳು. `ನಿನಗೆ ಒಂದು ಹಿನ್ನೆಲೆ ಸಿಕ್ಕಿದೆ. ನೀನು ಅದನ್ನು ಏನಂತ ಕರೀತೀಯ? ಒಂದು ಪ್ರತಿಕ್ರಿಯಾತ್ಮಕ ಎಳೆ?’
`ನನಗೆ ಅರ್ಥವಾಗಲಿಲ್ಲ.’
`ನನಗಂತೂ ವರ್ಗಸಂಘರ್ಷದ ಥರ ಕಾಣ್ತಿದೆ. ಬಂಡವಾಶಾಹಿ ಮನಸ್ಥಿತಿ. ಪಂಥೀಯರು. ತಮ್ಮ ಪುನರ್ವಿಮರ್ಶೆಯ ಗೆಳೆಯರನ್ನು ಮುಕ್ತಗೊಳಿಸಲು ಕೆಲಸ ಮಾಡ್ತಾ ಇದಾರೆ.’
ಶಾನ್ ದಿಗ್ಭ್ರಾಂತನಾಗಿ ನುಡಿದ `ಕ್ಯಾಂಪಿನವರು ಇದರಲ್ಲಿ ಭಾಗಿಯಾಗಿಲ್ಲ.’
`ಆದ್ರೆ ನೀನು ನನಗೆ ಮನವರಿಕೆ ಮಾಡಿಕೊಟ್ಟಿದೀಯ. ವರ್ಗ ಸಂಘರ್ಷವು ಮತ್ತೆ ಸಮಾಜ-ವಾದಿ ಪ್ರಗತಿಗೆ ಅಡ್ಡಿಯಾಗಿದೆ. ಅವರು ಪ್ರತಿಭಟನೆ ಮಾಡ್ತಿದಾರೆ.’
ಶಾನ್‌ಗೆ ಹೃದಯವೇ ಬಾಯಿಗೆ ಬಂದಂತಾಯಿತು. `ಅದು ಪ್ರತಿಭಟನೆ ಅಲ್ಲ. ಅದು ಬರೀ ಧಾರ್ಮಿಕ ವಿಷಯ.’
`ಖೈದಿಗಳು ಕೆಲಸ ಮಾಡಲು ಒಪ್ಪದಿದ್ದಾಗ ಅದು ಪ್ರತಿಭಟನೆಯೇ ಸರಿ. ಸಾರ್ವಜನಿಕ ಭದ್ರತಾ ಬ್ಯೂರೋಗೆ ಅಸೂಚನೆ ಕಳಿಸಬೇಕು. ಇದು ನನ್ನ ವ್ಯಾಪ್ತಿ ಮೀರಿದ್ದು.’
ಶಾನ್ ಅಸಹಾಯಕನಾಗಿ ನೋಡತೊಡಗಿದ. ಸಚಿವಾಲಯವು  ಪರ್ವತದ ಮೇಲಿನ ಒಂದು ಸಾವನ್ನು ಅಲಕ್ಷಿಸಬಹುದು. ಆದರೆ ಕಣಿವೆಯಲ್ಲಿ ನಡೆಯುವ ಪ್ರತಿಭಟನೆಯನ್ನು ಮಾತ್ರ ಸರ್ವಥಾ ಸಹಿಸುವುದಿಲ್ಲ. ದಿಢೀರನೆ ಇಲ್ಲಿಯ ಸಂಗತಿಗಳೇ ಬೇರೆ ಬೇರೆ ಆಯಾಮಗಳನ್ನು  ಪಡೆಯುತ್ತಿವೆ.
`ನೀನೀಗ ಹೊಸ ಕಡತವನ್ನು ಬರೀತೀಯ,’ ತಾನ್ ವಿವರಿಸಿದ.`ನನಗೆ ವರ್ಗಸಂಘರ್ಷದ ಬಗ್ಗೆ ಹೇಳು. ೪೦೪ನೆಯ ಖೈದಿಗಳು ಕೆಲಸ ಮಾಡುವುದನ್ನು ನಿಲ್ಲಿಸಲಿಕ್ಕೆಂದೇ ಹೇಗೆ ಈ ಸಾವನ್ನು ಆಗಗೊಟ್ಟರು ಎಂದು ಹೇಳು. ನಿಜಕ್ಕೂ ಇನ್‌ಸ್ಪೆಕ್ಟರ್ ಜನರಲ್‌ಗೇ ಹೇಳಬೇಕಾದ ವಿಚಾರ. ಇದನ್ನೆಲ್ಲ ಸಚಿವಾಲಯವಂತೂ ಖಂಡಿತ ತಿರಸ್ಕರಿಸಲ್ಲ.’ ವರದಿಯ ಮೇಲೆ ಏನನ್ನೋ ಗೀಚಿದ ತಾನ್ ಕೊನೆಗೆ ಕಾಗದದ ಮೇಲೆ ತನ್ನ ಸೀಲನ್ನು ಒತ್ತಿದ. `ನೀನು ಅಕೃತವಾಗಿ ನನ್ನ ಕಚೇರಿಯಲ್ಲಿ ಕೆಲಸ ಮಾಡುತ್ತೀಯ. ನಾನು ನಿನಗೆ ಒಂದು ಟ್ರಕ್ ಕೊಡುತ್ತೇನೆ. ಹಾಗೆಯೇ ವಾರ್ಡನ್ನಿನ ಟಿಬೆಟನ್ ಕ್ಲಾರ್ಕನ್ನೂ ನಿನಗೆ ಕೊಡ್ತೇನೆ. ಫೆಂಗ್ ನಿನ್ನ ಮೇಲೆ ನಿಗಾ ಇಡ್ತಾನೆ. ಸಂದರ್ಶನಗಳನ್ನು ಮಾಡಲಿಕ್ಕೆ ನೀನು ಆಸ್ಪತ್ರೆಗೆ ಹೋಗಲು ಅನುಮತಿ. ಕೇಳಿದರೆ ನೀನು ಟ್ರಸ್ಟೀ ಕೆಲಸಗಳಲ್ಲಿ ಇದ್ದೀಯ ಎಂದು ಹೇಳು.’
ಶಾನ್‌ಗೆ ಬೆನ್ನ ಮೇಲೇ ಯಾರೋ ಕಲ್ಲಿನ ರೋಲರನ್ನು ಹಾಯಿಸಿದಂತಾಯಿತು. ಶಾನ್ ಹಿಂದಿರುಗಿ ಮತ್ತೆ ಡ್ರಾಗನ್ ಕ್ಲಾಗಳನ್ನೇ ನೋಡತೊಡಗಿದ. `ನನ್ನ ವರದಿಗೆ ಯಾವ ಚಿಕ್ಕಾಸಿನ ಬೆಲೆಯೂ ಇರಲ್ಲ,’ ಶಾನ್ ಗೊಣಗುಟ್ಟಿದ. ಪದಗಳು ಗಂಟಲಿನಲ್ಲೇ ಉಳಿಯುತ್ತಿದ್ದವು. ೪೦೪ಕ್ಕೆ ಮತ್ತೆ ವಾಪಸಾಗಬೇಕೆಂಬ ಆತುರದಲ್ಲಿ ಆತ ವರದಿಯನ್ನು ಹೇಗೋ ತಯಾರಿಸಿದ್ದ. ಚೋಜೆಗೆ ಸಹಾಯ ಮಾಡಬೇಕಿತ್ತು. ಈಗ ತಾನ್ ಈ ಭಿಕ್ಷುಗಳಿಗೆ ಇನ್ನೂ ಹೆಚ್ಚಿನ ಘಾತ ಉಂಟುಮಾಡಲು ಬಯಸಿದ್ದಾನೆ.
`ನಾನು ಅಪನಂಬಿಕೆಯವನು ಅಂತ ಈಗ ಸಾಬೀತಾಯಿತು.’
`ವರದಿ ನನ್ನ ಹೆಸರಿನಲ್ಲಿ ಇರುತ್ತೆ.’
ಶಾನ್ ಕಿಟಕಿಯಲ್ಲಿ ಕಾಣುತ್ತಿದ್ದ ತನ್ನದೇ ನೆರಳನ್ನು ನೋಡುತ್ತಿದ್ದ.
ತಾನು ಈಗ ಕೆಳಸ್ತರದ ಜೀವದ ರೂಪ ತಾಳುತ್ತಿದ್ದೇನೆ.
`ನಮ್ಮಲ್ಲೊಬ್ಬರ ಹೆಸರಿಗೆ ಅವಮಾನವಾಗುತ್ತೆ’ ಆತ ಈಗ ಪಿಸುಗುಡುತ್ತಿದ್ದಾನೆ.

…………………

`ವೀ,’ : `ಹಲೋ’ ಪದದ ಸಮಾನಾರ್ಥ ಪದ.
ಕೋಮಿನ್‌ಟಾಂಗ್: ಸನ್ ಯಾತ್ ಸೇನ್ ರೂಪಿಸಿದ್ದ ರಾಷ್ಟ್ರೀಯವಾದಿ ಸೇನೆಯ ಹೆಸರು. ಅದನ್ನು ಮಾವೋ ಝೆಡಾಂಗ್ ಹಿಮ್ಮೆಟ್ಟಿಸಿದ. ಕೋಮಿನ್‌ಟಾಂಗ್‌ನ ಸದಸ್ಯರನ್ನು ಮಾವೋ ಹಲವು ದಶಕಗಳ ಕಾಲ ಸೆರೆಮನೆಯಲ್ಲಿಟ್ಟಿದ್ದ.

Leave a Reply