ಚಿಕ್ಕಮ್ಮ

ಆ ಬೇಸಗೆಯ ಒಂದು ದಿನ ಚಿಕ್ಕಮ್ಮ ನನ್ನನ್ನು ಎಬ್ಬಿಸಿ ಒಂದು ಲೋಟ ಚಹಾ ಮತ್ತು ಒಂದು ಬಟ್ಟಲಿನ ತುಂಬಾ ದ್ರೆಲ್- ಸಿಲ್ (ಅಕ್ಕಿ, ಗೆಣಸು, ಸಕ್ಕರೆಯ ಮಿಶ್ರಣ) ಕೊಟ್ಟಳು. ಎರಡು ಡ್ರಾಗನ್‌ಗಳು ಪರಸ್ಪರ ಅಪ್ಪಿಕೊಂಡ ಚಿತ್ರವಿದ್ದ ಹಳೆಯ ಚೀನೀ ಬಟ್ಟಲನ್ನೇ ಅವಳು ಬಳಸಿದ್ದಳು. ಆ ಬಟ್ಟಲುಗಳನ್ನು ಸಾಮಾನ್ಯವಾಗಿ ಮನೆಯ ಪೂಜಾಸ್ಥಳದಲ್ಲಿ ಇಡುತ್ತಿದ್ದರು. ದ್ರೆಲ್- ಸಿಲ್‌ನ್ನು ಕೇವಲ ಪ್ರಮುಖ ದಿನದಂದು ಮಾತ್ರ ಬಡಿಸುತ್ತಾರೆ.
ಆಮೇಲೆ ಚಿಕ್ಕಮ್ಮ ನನಗೆ ಒಂದು ತಿಳಿಬಣ್ಣದ ಧಾರ್ಮಿಕ ಸಂಕೇತದ ಬಟ್ಟೆ- ಖಾತಾವನ್ನು ಕೊಟ್ಟಳು. ಅದನ್ನು ನಾನು ಕುಳಿತಿದ್ದ ಹಾಸಿಗೆಯ ಹೊದಿಕೆಯ ಮೇಲೆ ಇಡಲು ಹೇಳಿದಳು. ಹಾಗೆ ಇಟ್ಟರೆ ನಾನು ಮನೆಗೆ ಮರಳುವುದಾಗಿ ಅರ್ಥವೆಂದೂ ಅವಳೇ ತಿಳಿಸಿದಳು. ನನ್ನ ಚಹಾ ಲೋಟವೂ ಇನ್ನೊಂದು ಹನಿಯೂ ಹಿಡಿಸದಂತೆ ಭರ್ತಿಯಾಗಿತ್ತು. ಅದರ ಸಂಕೇತವೂ ಅದೇ: ನಾನು ಮತ್ತೆ ಈ ಮನೆಗೆ ಬರುವೆನಂತೆ. ಆಮೇಲೆ ಅವಳು ನನಗೆ ಹೊಸ ಉಡುಗೊರೆಯೊಂದನ್ನು ತೋರಿಸಿ ಅದನ್ನು ತೊಡಬೇಕು ಎಂದಳು. ಆ ಉಡುಗೆಗಳನ್ನು ಈ ಸಂದರ್ಭಕ್ಕೆಂದೇ ವಿಶೇಷವಾಗಿ ತಯಾರಿಸಲಾಗಿತ್ತು. ನಾನು ಆ ಉಡುಗೆ ತೊಟ್ಟಾಗ ಚಿಕ್ಕಮ್ಮ ನನ್ನನ್ನು ಛೇಡಿಸಿದಳು.
ಹೌದು, ನಾನು ಕೊನೆಗೊಮ್ಮೆ ಆ ಮನೆಯನ್ನು ಬಿಡಬೇಕಾದ ಸಮಯ ಬಂದೇ ಬಿಟ್ಟಿತ್ತು. ನಾನು ತುಂಬಾ ದುಃಖಿತನಾಗಿದ್ದೆ. ಚಿಕ್ಕಮ್ಮನ ಮುಖದಲ್ಲಿಯೂ ಅದೇ ಖಿನ್ನತೆ ಆವರಿಸಿತ್ತು. ಅವಳು ನನ್ನನ್ನು ಸ್ವಂತ ಮಗನೆಂದೇ ನೋಡಿಕೊಂಡಿದ್ದಳು. ಅವಳ ಮಗಳು ಸತ್ತು ಹೋಗಿದ್ದಳು. ಆದರೆ ನಾನು ಮಾತ್ರ ಅವಳ ಎದೆಹಾಲನ್ನೇ ಕುಡಿದು ಅವಳ ಕಣ್ಣೆದುರಿಗೇ ಬೆಳೆದು ನಿಂತಿದ್ದೆ. ನಾನು ಉಡುಗೆ ತೊಡುವಾಗ ನನ್ನ ಬಳಿಯೇ ಇದ್ದ ಅವಳು ಅಲ್ಲಿ- ಇಲ್ಲಿ ಕಂಡ ಲೋಪಗಳನ್ನು ಸರಿಪಡಿಸುತ್ತ ನಿಂತಳು.
ಹೊರಗಡೆ ಪ್ರಾಂಗಣದಲ್ಲಿ ಇಡೀ ಕುಟುಂಬವೇ ಸಿದ್ದವಾಗಿತ್ತು. ಆರೇಳು ಕುದುರೆಗಳ ಮೇಲೆ ಮರದ ಪೆಟ್ಟಿಗೆಗಳನ್ನೂ ಹೇರಲಾಗಿತ್ತು. ಎಲ್ಲಾ ಸಿದ್ಧತೆಗಳನ್ನು ನನ್ನ ಅಪ್ಪನೇ ನೋಡಿಕೊಳ್ಳುತ್ತಿದ್ದ. ನಾನು ಅದನ್ನೆಲ್ಲ ನೋಡುತ್ತ ನಿಂತೆ. ಇಡೀ ಕುಟುಂಬದ ಎಲ್ಲಾ ಸದಸ್ಯರೂ ಒಬ್ಬೊಬ್ರಾಗಿ ಬಂದು ನನ್ನ ಕೊರಳಿಗೆ ಒಂದೊಂದು ಖಾತಾ ಹಾಕಿದರು. ಸ್ವಲ್ಪ ಹೊತ್ತಿಗೆ ನಾನು ಈ ಖಾತಾಗಳ ಕೆಳಗೆ ಅಡಗಿಹೋದಂತೆ ಅನಿನ್ಸಿತು. ಕೊನೆಯಲ್ಲಿ ನನಗೆ ಖಾತಾ ತೊಡಿಸಿದವಳು ನನ್ನ ಚಿಕ್ಕಮ್ನೀವು ಊಹಿಸಿಕೊಳ್ಳಬಹುದಾದ ಅತ್ಯಂತ ಉತ್ಕೃಷ್ಟ ದರ್ಜೆಯ ಖಾತಾ ಹಿಡಿದ ಅವಳು ಎರಡೂ ಕೈಗಳನ್ನು ಬಾಚಿಕೊಂಡು ಮುಂದೆ ಬಂದಳು. ಅವಳು ನನ್ನನ್ನು ಅಪ್ಪಿಕೊಂಡಾಗ ಅವಳ ಕೆನ್ನೆಯಲ್ಲಿ ಹರಿದಿದ್ದ ಕಣ್ಣೀರು ನನ್ನ ಕೆನ್ನೆಯನ್ನೂ ತೋಯಿಸಿತು. ನಾನು ಚಿಕ್ಕಮ್ಮನನ್ನು ಹಿಡಿದು ಗಟ್ಟಿಯಾಗಿ ಅಳಲಾರಂಭಿಸಿದೆ. ನನ್ನ ಅಳು ಕೇಳಿ ನೇರೆಹೊರೆಯವರೂ ಬಂದರು. ಅವರಲ್ಲೂ ಕೆಲವರು ಖಾತಾ ಹೊದಿಸಿದರು.
ಯಾರೋ ಉಸುರುತ್ತಿದ್ದರು : “ನೋದುಪ್‌ನನ್ನು ಮದುಮಗಳಂತೆ ಕಳಿಸ್ತಾ ಇದ್ದಾರೆ”! ನಾನು ಸಮಾಧಾನ ಮಾಡಿಕೊಳ್ಳುತ್ತ ಕಣ್ಣೀರು ಒರೆಸಿಕೊಂಡೆ. ನಾನೂ ಒಂದು ಕುದುರೆಯ ಮೇಲೆ ಕುಳಿತೆ! ಹಳ್ಳಿಯ ಹುಡುಗರೆಲ್ಲ ನನ್ನ ಕುರಿತು `ನ-ಮ’ `ನ-ಮ’, (ಮದುವಣಗಿತ್ತಿ) ಎಂದು ಕರೆದು ಕೀಟಲೆ ಮಾಡುತ್ತಿದ್ದರು. ಕುದುರೆ ನನ್ನನ್ನು ಕೂಡಲೇ ದೂರ ಒಯ್ಯಬಾರದಿತ್ತೇ ಎಂದು ನಾನು ಬಯಸಿದ್ದೆ. ದಾರಿ ಕಳೆದಂತೆ ಮಕ್ಕಳ ಕಿರುಚಾಟದ ಸದ್ದು ಅಡಗುತ್ತ ಬಂತು. ಮೆರವಣಿಗೆಯ ಮುಂಚೂಣಿಯಲ್ಲಿ ಅಪ್ಪ, ಅಜ್ಜಿ ಇದ್ದರು. ಖಾತಾಗಳು ನನ್ನ ಆಚೀಚೆ ಧ್ವಜಗಳಂತೆ ಹಾರುತ್ತಿದ್ದವು. ನನ್ನ ಚಿಕ್ಕಮ್ಮ ಊರಿನಿಂದ ಹೊರಗೆ ಕೊಂಚ ದೂರ ನಡೆದೇ ಬಂದಳು. ಆಮೇಲೆ ನನ್ನ ಖಾತಾಗಳನ್ನೆಲ್ಲ ತೆಗೆದಿರಿಸಿದಳು. ಆನಂತರ ಅವಳೂ ನಮ್ಮ ಜತೆ ಊರಿಗೆ ಬಂದಳು.
ನನ್ನ ಅಪ್ಪ ಆಗಾಗ ನನ್ನನ್ನು ಒಡಲೆಂದು ಹಿಂದೆ ತಿರುಗುತ್ತಿದ್ದ. ನಾನು ಅವನ ಕಣ್ಣಿಗೆ ಸಿಗದಂತಿರಲು ಯತ್ನಿಸುತ್ತಿದ್ದೆ. ನಾವು ಮನೆಗೆ ಹೋದಾಗ ಮನೆಯವರು, ನೆರೆಯವರು ನಮಗಾಗಿ ಕಾದು ನಿಂತಿದ್ದರು. ನಾನು ಕುದುರೆಯಿಂದ ಕೆಳಗಿಳಿದೆ. ಒಬ್ಬಾತ ಬಂದು ನನಗೆ ಇನ್ನೊಂದು ಖಾತಾಹೊದಿಸಿದ. ಗ್ಯಾತ್ಸೋಶಾರ್‌ಗೆ ಹಿಂದಿರುಗುವ ಮುನ್ನ ನನ್ನ ಚಿಕ್ಕಮ್ಮ ಇಲ್ಲಿ ಕೆಲವು ವಾರಗಳ ಕಾಲ ಇದ್ದಳು. ಅವಳು ಮನೆಬಿಟ್ಟಾಗ ಅಳುತ್ತಿದ್ದುದು ನನಗೆ ನೆನಪಿದೆ.
ಪನಮ್‌ನಲ್ಲಿನ ನನ್ನ ಹೊಸ ಬದುಕೇ ನನ್ನ ವಯಸ್ಕತನದ ಆರಂಭದ ದಿನಗಳಾಗಿದ್ದವು. ಆ ದಿನಗಳಲ್ಲಿ ಟಿಬೆಟಿನಲ್ಲಿ ನಾವೆಲ್ಲ ಬಲುಬೇಗ ಬೆಳೆಯುತ್ತಿದ್ದೆವು. ನನ್ನ ತಂದೆ ಮತ್ತು ಅಣ್ಣ ಇಬ್ಬರೂ ತಮ್ಮ ೧೪ನೆಯ ವಯಸ್ಸಿನಲ್ಲಿದ್ದಾಗಲೇ ಮನೆಯಎ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿ ಬಂದಿತ್ತು. ನನಗೆ ಮಾತ್ರ ಮನೆಯಲ್ಲಿ ಮಾಡುವ ಕೆಲಸವೇ ಇರಲಿಲ್ಲ. ಎಲ್ಲಾ ಕೆಲಸಗಳನ್ನೂ ನನ್ನ ಸೋದರ, ಸೋದರಿಯರೇ ಮಾಡಿ ಮುಗಿಸುತ್ತಿದ್ದರು. ನನಗೆ ಬೇಸರವಾತೊಡಗಿತು. ದಿನ ಕಳೆದಂತೆ ತೀರಾ ಗಂಭೀರವಾದ ಅಪ್ಪನಿಂದ ನಾನು ದೂರವೇ ಉಳಿದೆ. ಅವನು ಗುನಗುತ್ತಿದ್ದ ಪ್ರಾರ್ಥನೆಯೇ ಅವನನ್ನು ದೂರ ಮಾಡಿತು ಎಂದರೆ ತಪ್ಪಿಲ್ಲ.
ನನ್ನ ಅಪ್ಪ ನನ್ನ ಮೇಲೆ ಇಟ್ಟಿದ್ದ ಪ್ರೀತಿಗೆ ತಾಯಿಯಿಲ್ಲದ ಮಗುವಿನ ಮೇಲಿರುವಂಥ ಕರುಣೆ, ಅನುಕಂಪದ ಪಸೆ ಅಂಟಿಕೊಂಡಿತ್ತು ಎಂದು ನನಗೆ ಈಗ ಅನ್ನಿಸುತ್ತಿದೆ. ನಾನು ಅಮ್ಮನ ನೆನಪು ತರುತ್ತಿದ್ದೇನೆಂದೇ ಅಪ್ಪ ನನ್ನನ್ನು ದೂರ ಇಟ್ಟಿದ್ದ. ತಾನು ನನಗೆ ಏನೂ ಮಾಡಲಾರೆ, ಚೆನ್ನಾಗಿ ನೋಡಿಕೊಳ್ಳಲಾರೆ ಎಂಬ ಅರಿವಿನಿಂದ ಆತ ಅಸಹಾಯಕನಾಗಿದ್ದ ಎಂದೇ ನನಗನ್ನಿಸುತ್ತದೆ. ಅಪ್ಪ ಎಂದೂ ಅಮ್ಮನ ಬಗ್ಗೆ ಮಾತನಾಡುವುದಿರಲಿ, ಅವಳ ಹೆಸರನ್ನೂ ಉಲ್ಲೇಖಿಸಲಿಲ್ಲ. ಹಾಗಂತ ಅವನು ಅವಳನ್ನು ಮರೆತೇ ಬಿಟ್ಟಿದ್ದಾನೆ ಎಂದು ಹೇಳುವಂತಿರಲಿಲ್ಲ; ಅವಳಿಲ್ಲ ಎಂಬ ವಾಸ್ತವವನ್ನು ಎದುರಿಸುವ ಸ್ಥೈರ್ಯ ಆತನಿಗಿರಲಿಲ್ಲ.
ನನ್ನ ತಾಯಿ ಸತ್ತ ಮರುವರ್ಷ ನನ್ನಪ್ಪ ಮರುಮದುವೆಯಾಗಿದ್ದ. ನನ್ನ ಮಲತಾಯಿಗೆ ಅದಾಗಲೇ ಇಬ್ಬರು ಮಕ್ಕಳಿದ್ದರು. ನಾನು ಪನಮ್‌ಗೆ ಮರಳಿದ ಹೊತ್ತಿಗಾಗಲೇ ಆ ಮಕ್ಕಳಲ್ಲಿ ಒಬ್ಬ ಗೆಡಾಂಗ್ ಬೌದ್ಧಾಲಯದಲ್ಲಿ ಭಿಕ್ಷುವಾಗಿದ್ದ. ನನ್ನ ತಂದೆಯ ಥರ ನನ್ನ ಮಲತಾಯಿ ಪ್ರತ್ಯೇಕವಾಗಿರುವ ಸ್ವಭಾವದವಳಾಗಿರಲಿಲ್ಲ. ಅವಳು ನಮ್ಮೆಲ್ಲರ ಬಗ್ಗೆ ಸದಾ ಅಕ್ಕರೆ ತೋರುತ್ತಿದ್ದಳು. ಸಾಮಾನ್ಯ ಮಲತಾಯಿಯರಂತೆ ಆಕೆ ಎಂದೂ ಇರಲಿಲ್ಲ. ನನ್ನ ತಂದೆ ಸತ್ತು ನನ್ನ ಅಣ್ಣನೇ ಇಡೀ ಮನೆಯ ಮುಖ್ಯಸ್ಥನ ಹೊಣೆಗಾರಿಕೆಯನ್ನು ವಹಿಸಿಕೊಂಡಾಗ ಆತ ನನ್ನ ಮಲತಾಯಿಯನ್ನೇ ಮದುವೆ ಮಾಡಿಕೊಂಡ. ಆಗಿನ್ನೂ ಅವಳು ಯುವತಿಯಾಗಿದ್ದಳು. ಹೊಸಬಳು ಬಂದರೆ ಮನೆಯಲ್ಲಿ ಜಗಳ ಹೆಚ್ಚಾಗಬಹುದು ಎಂದೇ ಕುಟುಂಬದ ಅಭಿಪ್ರಾಯವಾಗಿತ್ತು. ಕುಟುಂಬವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು, ಅದರ ಸಂಪತ್ತನ್ನು ಹಾಗೇ ಉಳಿಸಿಕೊಳ್ಳಲು ಅಲ್ಲಿ ಹಲವು ಸೋದರರು ಒಂದೇ ಪತ್ನಿಯನ್ನು ಹೊಂದುವುದು ಸಾಮಾನ್ಯ ಸಂಗತಿಯಾಗಿತುತ. ಆದರೆ ನನ್ನ ಅಣ್ಣ ಮಲತಾಯಿಯನ್ನು ಮದುವೆಯಾಗಿ ಹೊಸ ಸಂಸಾರ ಹೂಡಿದ.
ನಾನು ಪನಮ್‌ಗೆ ಬಂದದ್ದಕ್ಕೆ ಆದ ಒಂದೇ ಸಮಾಧಾನವೆಂದರೆ ಗದಾಂಗ್ ಬೌದ್ಧಾಲಯ. ಅದಕ್ಕೂ ನಮ್ಮ ಮನೆಗೂ ಒಂದೇ ತಾಸಿನ ಕಾಲ್ನಡಿಗೆಯ ಅಂತರ. ನನ್ನ ಅಪ್ಪನ ಇಬ್ಬರು ಸೋದರರು ಅಲ್ಲಿ ಭಿಕ್ಷುಗಳಾಗಿದ್ದರು. ಅವರನ್ನು ಕಾಣಲು ನಾನೂ ಅಪ್ಪನ ಜತೆ ಆಗಾಗ ಅಲ್ಲಿಗೆ ಹೋಗುತ್ತಿದ್ದೆ. ಅಥವಾ ನನಗೆ ಬೇರೆ ಕೆಲಸಗಳೇ ಇಲ್ಲದಾಗಲೂ ನಾನು ಬೌದ್ಧಾಲಯಕ್ಕೆ ಭೇಟಿ ನೀಡುತ್ತಿದ್ದೆ. ನಾನು ಬೌದ್ದಾಲಯದಲ್ಲೇ ತುಂಬಾ ಸಮಯ ಕಳೆಯುತ್ತಿದ್ದೇನೆಂದು ನನ್ನ ಅಜ್ಜಿ ಗಮನಿಸಿದಳು. ಆಗ ಮತ್ತೆ ನನ್ನ ಹುಟ್ಟಿನ ಬಗ್ಗೆ ಕಥೆ ಹೇಳಲಾರಂಭಿಸಿದ ಅಜ್ಜಿ ನಾನು ಭಿಕ್ಷುವಾಗುವ ಬಗ್ಗೆ ಯೋಚಿಸಬೇಕು ಎಂದು ಸೂಚಿಸಿದಳು. ನನಗೆ ಅಜ್ಜಿಯ ಸಲಹೆ ಹಿಡಿಸಿತು. ಹಳ್ಳಿಯಲ್ಲಿ ನಾನು ಒಂಟಿಯಾಗಿದ್ದೆ. ಬೌದ್ಧಾಲಯದಲ್ಲಿ ನನಗೆ ಸ್ನೇಹಿತರಿದ್ದರು; ಹಿರಿಯರೂ ನನ್ನ ಜತೆ ಸಮಯ ಕಳೆಯಲು ಮುಂದಾಗುತ್ತಿದ್ದರು.
ನನ್ನ ಭವಿಷ್ಯದ ಬಗ್ಗೆ ಅಜ್ಜಿ ಮಾತನಾಡಲಿಕ್ಕೆ ಶುರುಮಾಡಿ ತುಂಬಾ ದಿನಗಳೇನೂ ಆಗಿರಲಿಲ್ಲ. ಆಗ ಅಪ್ಪ ನನ್ನನ್ನು ಇನ್ನೂ ಮಗುವಿನಂತೇ ಕಾಣುತ್ತಿದ್ದ. ನನ್ನ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಆತ ಚಿಂತಿಸಿಯೇ ಇರಲಿಲ್ಲ. ಆದರೆ ಅಜ್ಜಿ ಮಾತ್ರ `ನೋದು ಪ್‌ನ ಭವಿಷ್ಯಕ್ಕೊಂದು ಹಾದಿ ಮಾಡಿ ಕೊಡಲೇಬೇಕು. ಆ ಸಮಯ ಈಗ ಬಂದಿದೆ’ ಎಂದು ಅಪ್ಪನನ್ನು ಸದಾ ಕಾಡುತ್ತಿದ್ದಳು.
ಅಂದಿನ ದಿನಗಳಲ್ಲಿ ಟಿಬೆಟಿನಲ್ಲಿ ಹಳ್ಳಿಯ ಹುಡುಗನಿಗೆ ಆಯ್ಕೆಗಳೇ ಇರಲಿಲ್ಲ. ಸಿರಿವಂತ ಹುಡುಗನಗತಿಯೂ ಅಷ್ಟೇ. ಒಂದೋ- ಆತ ಕುಟುಂಬದ ಹೊಲದಲ್ಲಿ ದುಡಿಯುತ್ತಿದ್ದ; ಅಥವಾ ಬೌದ್ಧಾಲಯ ಪ್ರವೇಶಿಸುತ್ತಿದ್ದ. ಸಾಮಾನ್ಯವಾಗಿ ಹಿರಿಯ ಮಗ ಹೊಲದ ಮತ್ತು ಕುಟುಂಬದ ಹೊಣೆಗಾರಿಕೆಯ ವಾರಸುದಾರ ಆಗಿರುತ್ತಿದ್ದ. ಹದಿನಾಲ್ಕರ ಹರೆಯದಲ್ಲೇ ನನ್ನ ಅಣ್ಣ ಇಡೀ ಜಮೀನನ್ನು ನೋಡಿಕೊಳ್ಳುವ ಬಹುತೇಕ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದ. ಎಲ್ಲಾ ಸರಿಯಾಗಿ ನಡೆದುಕೊಂಡು ಹೋಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತ ಆತ ವಿಶ್ವಾಸಯುತವಾಗಿ ಓಡಾಡುತ್ತಿದ್ದ; ಕೂಲಿಯಾಳುಗಳಿಗೆ ಕೆಲಸ ಹಂಚುತ್ತಿದ್ದ; ಉಳುಮೆಯ ಕೆಲಸ ವಹಿಸಿಕೊಂಡವರ ದೂರುಗಳತ್ತ ತತ್‌ಕ್ಷಣವೇ ಗಮನ ಹರಿಸುತ್ತಿದ್ದ. ಈ ಮಾದರಿ ಮಗನನ್ನು ಹಳ್ಳಿಯವರೆಲ್ಲ ಅಭಿಮಾನದಿಂದ, ಗೌರವದಿಂದ ನೋಡುತ್ತಿದ್ದರು. ನಾನೂ ಕೆಲವೊಮ್ಮೆ ಅವನ ಜತೆ ಓಡಾಡುತ್ತಿದ್ದೆ.
ನನ್ನ ಅಜ್ಜಿ ಧಾರ್ಮಿಕ ವ್ಯಕ್ತಿಯಾಗಿದ್ದರಿಂದ ನಾನು ಭಿಕ್ಷು ಆಗಬೇಕೆಂದು ಸಹಜವಾಗಿಯೇ ಬಯಸಿದ್ದಳು. ಪರ್‍ತೀ ಟಿಬೆಟನ್ ತಿಂಗಳಿನ ಎಂಟನೆಯ, ೧೫ನೆಯ ಮತ್ತು ೩೦ನೆಯ ದಿನ ಅವಳು ತಪ್ಪದೆ ಬೌದ್ಧಾಲಯಕ್ಕೆ ಹೋಗುತ್ತಿದ್ದಳು. ಪ್ರತಿಯೊಂದು ಭೇಟಿಯೂಇಡೀ ದಿನದ ಕಾರ್ಯಕ್ರಮವಾಗಿತ್ತು. ಮುಂಜಾನೆಯೇ ಎದ್ದು ಶುಭ್ರ ವಸ್ತ್ರಗಳನ್ನು ಧರಿಸುತ್ತಿದ್ದಳು. ಒಂದು ದೊಡ್ಡ ಬೆಣ್ಣೆ ಮುದ್ದೆಯನ್ನೂ, ಭಾರತದಿಂದ ತಂದ ಅತ್ಯುತ್ಕೃಷ್ಟವಾದ, ಸಿರಿವಂತಿಕೆಯ ಅಪರೂಪದ ಸಂಕೇತವಾದ ಸೂರ್ಯಕಾಂತಿ ಎಣ್ಣೆಯ ಒಂದು ಡಬ್ಬವನ್ನು ಅವಳು ಬೌದ್ಧಾಲಯಕ್ಕೆ ಒಯ್ಯುತ್ತಿದ್ದಳು. ನಾನೂ ಅವಳ ಜತೆ ಬೌದ್ಧಾಲಯಕ್ಕೆ ಹೋಗಲಾರಂಭಿಸಿದೆ. ಅವಳ ವಯಸ್ಸು ೭೦ ದಾಟಿದ್ದರೂ ಬಲಶಾಲಿ ಯಾಗಿದ್ದಳು; ಕಡಿದಾದ ಗುಡ್ಡವನ್ನು ಸುರಳೀತ ಏರಿ ಮೈಲುಗಟ್ಟಲೆ ನಡೆಯುತ್ತಿದ್ದಳು. ಆನಂತರ ಬೌದ್ಧಾಲಯದಲ್ಲಿರುವ ಎಲ್ಲಾ ಕೊಠಡಿಗಳಲ್ಲಿ ಓಡಾಡಿ ದೀಪಗಳಿಗೆ ಎಣ್ಣೆಯನ್ನೋ, ಬೆಣ್ಣೆಯನ್ನೋ ಹಾಕುತ್ತಿದ್ದಳು. ಯಾವುದೇ ಪ್ರತಿಮೆಕಂಡರೂ ಸಾಕು, ಕೈಮುಗಿದು ನಿಂತು ಪ್ರಾರ್ಥನೆ ಪಠಿಸುತ್ತಿದ್ದಳು; ಆ ಪ್ರತಿಮೆಯ ಪಾದಕ್ಕೆ ಹಣೆ ತಾಗಿಸುತ್ತಿದ್ದಳು.
ಮಧ್ಯಾಹ್ನ ಅವಳು ತನ್ನ ಇಬ್ಬರು ಮಕ್ಕಳಲ್ಲಿ ಒಬ್ಬರನ್ನಾದರೂ ಭೇಟಿಯಾಗುತ್ತಿದ್ದಳು. ನನ್ನ ಚಿಕ್ಕಪ್ಪಂದಿರು ಹುರಿದ ಬಾರ್ಲಿ ಹಿಟ್ಟಿನ ಸಾಂಪಾ ಭೋಜನವನ್ನು ಸಿದ್ಧಮಾಡಿ ಇಡುತ್ತಿದ್ದರು; ಹಾಗೇ ಒಣ ಮಾಂಸ ಕೂಡಾ. ಆಮೇಲೆ ಅಜ್ಜಿಗೆ ಒಂದರ ಗಳಿಗೆ ವಿಶ್ರಾಂತಿ. ಆಗ ನಾನು ಅಲ್ಲಲ್ಲಿ ಸುತ್ತಾಡುತ್ತಾ, ಹೊಸ ಭಿಕ್ಷುಗಳೊಂದಿಗೆ ಆಟ ಆಡುತ್ತಾ ಕಾಲ ಕಳೆಯುತ್ತಿದ್ದೆ. ಅವರೆಲ್ಲ ಓದಲು, ಬರೆಯಲು ಕಲಿಯುತ್ತಿದ್ದುದನ್ನು ನೋಡಿ ನನಗೆ ಹೊಟ್ಟೆಕಿಚ್ಚಾಗುತ್ತಿತ್ತು. ವಿಶ್ರಾಂತಿಯ ನಂತರ ಅಜ್ಜಿ ಕೇಂದ್ರ ದೇಗುಲದಲ್ಲಿ ತನ್ನ ಕೊನೆಯ ಪ್ರಾರ್ಥನೆ ಸಲ್ಲಿಸುತ್ತಿದ್ದಳು. ಮುಖ್ಯ ಗರ್ಭ ಗುಡಿಯುತ್ತಲೇ ನೋಡುತ್ತ, ಹಕ್ಕಿಯ ಮುಷ್ಟಿಗಳಂತಿದ್ದ ನೆರಿಗೆಯುಕ್ತ ಕೈಗಳನ್ನು ತನ್ನ ಮುಖದ ಬಳಿ ತರುತ್ತ, ವಿಶಿಷ್ಟ ಸಂeಗಳೊಡನೆ ಒಂದು ಪ್ರಾರ್ಥನೆಯನ್ನು ಹೇಳಲಾರಂಭಿಸುತ್ತಿದ್ದಳು. “ನೀನು ಏನು ಪ್ರಾರ್ಥಿಸಿಕೊಳ್ಳುತ್ತೀಯಾ?” ಎಂದು ನಾನೊಮ್ಮೆ ಕೇಳಿದ್ದೆ. ಜಗತ್ತಿನ ಎಲ್ಲಾ ಜೀವಿಗಳ ಕಲ್ಯಾಣಕ್ಕಾಗಿ, ಯಾರೊಬ್ಬರೂ ಅನಾರೋಗ್ಯದಿಂದ ಬಳಲದಿರುವಂತೆ ಪ್ರಾರ್ಥಿಸಿಕೊಳ್ಳುತ್ತಿರುವುದಾಗಿ ಅಜ್ಜಿ ಉತ್ತರಿಸುತ್ತಿದ್ದಳು. ಒಳ್ಳೆಯ ಆರೋಗ್ಯ ಎಂಬುದು ತುಂಬಾ ಅಮೂಲ್ಯವಾದುದ್ದು, ಅದನ್ನು ದುಡ್ಡುಕೊಟ್ಟು ಖರೀದಿಸಲಾಗದು ಎಂದವಳು ಹೇಳುತ್ತಿದ್ದಳು. ಅನಾರೋಗ್ಯ ಎಂಬುದಕ್ಕೆ ಯಾವುದೇ ತಾರತಮ್ಯವಿಲ್ಲ. ಅದು ಬಡವ- ಶ್ರೀಮಂತರೆಂಬ ಭೇದ ವಿಲ್ಲದೆ ಎಲ್ಲರಿಗೂ ಬರುತ್ತದೆ ಎಂದಿದದಳು.
ಈಗ, ಅವಲೋಕಿಸಿದಾಗ ಟಿಬೆಟಿನ ಸ್ಥಿತಿಯಲ್ಲಿ ಆಕೆಯ ಕಾಳಜಿಯೇ ಪ್ರತಿಬಿಂಬಿಸಿದಂತೆ ಎಂದಿದ್ದಳು. ಟಿಬೆಟನ್ ವೈದ್ಯರು (ಅಮ್‌ಚಿ) ಹಲವು ಸ್ಥಳಗಲಳ್ಲಿದ್ದರೂ, ಪನಮ್‌ನಲ್ಲಿ ಮಾತ್ರ ಯಾರೂ ಇರಲಿಲ್ಲ. ಶಿಗಾಸೆಯಲ್ಲೋ, ಗ್ಯಾತ್ಸೆಯಲ್ಲೋ ಆ ವೈದ್ಯರನ್ನು ಕಾಣಲು ಒಂದೆರಡು ದಿನ ನಡೆಯಬೇಕಾಗಿತ್ತು. ಯಾರಾದರೂ ಕಾಯಿಲೆ ಬಿದ್ದರೆ ಆ ಕುಟುಂಬವು ಮಾಡುವಂಥ ಪ್ರಯತ್ನ ತೀರಾ ಸೀಮಿತವಾಗಿತ್ತು. ಕಾಯಿಲೆ ವಾಸಿಯಾಗಲು ನಾವು ಆಧ್ಯಾತ್ಮಿಕ ಮಾರ್ಗಗಳನ್ನೇ ಅವಲಂಬಿಸಿದ್ದೆವು; ಕೆಲವೊಮ್ಮೆ ಪವಾಡಸದೃಶವಾಗಿ ರೋಗಿಗಳು ಗುಣಮುಖರಾಗುತ್ತಿದ್ದರು.
ಹಸಿರಿನ ವಿಶಾಲ ಬಯಲೊಂದು ಹಳ್ಳಿಯ ಬೌದ್ಧಾಲಯದ ನಡುವೆ ಹರಡಿತ್ತು. ಬಯಲು ಮುಗಿದಂತೆ ಪರ್ವತಗಳ ಕೆಳ ಇಳಿಜಾರು ಪರ್‍ದೇಶಗಳು ಎದುರಾಗುತ್ತಿದ್ದವು. ಅಲ್ಲಿ ಬೌದ್ಧಾಲಯವು ತನ್ನದೇ ವಿಶಿಷ್ಟ ಶೈಲಿಯಲ್ಲಿ ಸ್ಥಾಪಿತವಾಗಿತ್ತು. ಶಿಗಾಸೆಯತ್ತ ನಾಂಗ್‌ಶೂ ನದಿಯು ಹರಿಯುವುದನ್ನು ಅಲ್ಲಿ ಕಾಣಬಹುದಾಗಿತ್ತು. ಕೆಲವೊಮ್ಮೆ ನನ್ನ ಮನೆಯಿಂದ ನಾನು ಬಿಸಿಲಿಗೆ ಹೊಳೆಯುತ್ತಿದ್ದ ಬೌದ್ಧಾಲಯದ ಬಿಳಿ ಗೋಡೆಗಳನ್ನೂ ನೋಡುತ್ತಿದ್ದೆ.
ಆ ಬೌದ್ಧಾಲಯ ೯೦೦ ವರ್ಷಗಳಷ್ಟು ಹಳೆಯದು. ೧೧ನೆಯ ಶತಮಾನದಲ್ಲಿ ಟಿಬೆಟಿನಲ್ಲಿ ಬೌದ್ಧಧರ್ಮವನ್ನು ಬೋಧಿಸಲು ಬಂದ ಮಹಾನ್ ಭಾರತೀಯ ಪಂಡಿತ ಖಾಚೆ- ಸಾಖ್ಯಶ್ರೀಯವರಿಂದ ಈ ಬೌದ್ಧಾಲಯ ಸ್ಥಾಪನೆಗೊಂಡಿತ್ತು.
ಈ ಬೌದ್ಧಾಲಯದ ಹೆಸರು ಭಾರೀ ವಿವಾದದ ಮೂಲವೂ ಹೌದು. ಹಳ್ಳಿಯಿದ್ದೆಡೆ ಆಗಸಕ್ಕೆ ಚಾಚಿರುವ ಪರ್ವತದ ಹೆಸರಿನಿಂದಲೇ ಗದಾಂಗ್ ಎಂಬ ಹೆಸರು ಬಂತೆಂಬುದು ಸಾಮಾನ್ಯ ನಂಬಿಕೆ. ಆ ಪವರ್ತವನ್ನು `ಗ’ ಎಂದು ಕರೆಯಲಾಗುತ್ತಿತ್ತು `ಗ’ ಎಂದರೆ ಏಣಿ. ದಾಂಗ್ ಎಂದರೆ `ಎದುರುಗಡೆ’ ಅಂದರೆ ‘ಏಣಿ ಪರ್ವತದ ಎದುರು’ ಎಂದರ್ಥ. ಆದರೆ ಪಂಡಿತರು ಈ ಬೌದ್ಧಾಲಯಕ್ಕೆ ವಾಸ್ತವವಾಗಿ “ಸಂತೋಷದ ಮರ” ಎಂದು ಕರಲಉಲಾಗುತ್ತಿತ್ತೆಂದು ವಾದಿಸುತ್ತಿದ್ದರು. ಆ ಕಥೆ ಹೀಗಿದೆ : ಈ ಬೌದ್ಧಾಲಯವು ಸ್ಥಾಪನೆಯಾದ ಕೂಡಲೇ ಟಿಬೆಟಿನಲ್ಲಿ ಬೌದ್ಧ ಧರ್ಮವು ಅವನತಿ ಕಾಣಲಾರಂಭಿಸಿತು; ದೇಶೀಯವಾದ ಬೋನ್ ಮತವು ಮರುಹುಟ್ಟು ಕಂಡಿತ್ತು. ಆಮೇಲೆ ಹಲವು ವರ್ಷಗಳ ಕಾಲ ಇನ್ನುಳಿದ ಬೌದ್ಧಾಲಯಗಳು ಬೌದ್ಧಾಲಯವಾದದ ಬೌದ್ಧ ನಿಯಮಗಳನ್ನು ಪಾಲಿಸಲು ವಿಫಲವಾದವು.
ಆದರೆ ಪನಮ್‌ನ ಈ ಬೌದ್ಧಾಲಯದಲ್ಲಿ ಮಾತ್ರ ಭಿಕ್ಷುಗಳು ಬೌದ್ಧಾಲಯ ಸೂತ್ರಗಳನ್ನು ಕಟ್ಟುನಿಟ್ಟಾಗಿ ಆಚರಿಸಿಕೊಂಡು ಬಂದರಂತೆ. ಆನಂತರ ಈ ಬೌದ್ಧಾಲಯದಿಂದ ಹೊರಟ ಭಿಕ್ಷುಗಳು ಟಿಬೆಟಿನೆಲ್ಲೆಡೆ ಸಂಚರಿಸಿ ಬೌದ್ಧಾಲಯ ಶಿಸ್ತಿನ ಪಾಲನೆ ಕುರಿತು, ಬೌದ್ಧಾಲಯಗಳ ಪುನರುಜ್ಜೀವನದ ಕುರಿತು ಬೋಧನೆ ಮಾಡಿದರಂತೆ. ಆದ್ದರಿಂದ ಈ ಬೌದ್ಧಾಲಯವನ್ನು `ಸಂತೋಷದ ಮರ’ ಎಂದು ಕರೆಯಲಾಯಿತು.
ಒಂದು ಕಾಲದಲ್ಲಿ ಈ ಬೌದ್ಧಾಲಯದಲ್ಲಿ ೨೦೦ ಭಿಕ್ಷುಗಳಿದ್ದರು. ನಮಗೆಲ್ಲ ನೆನಪಿರುವಂತೆ, ಗದಾಂಗ್‌ನಲ್ಲಿ ನಮ್ಮ ಕುಟುಂಬದ ಒಬ್ಬರು ಯಾವಾಗಲೂ ಭಿಕ್ಷುವಾಗಿ ಇರುತ್ತಿದ್ದರು. ತಮ್ಮ ಕುಟುಂಬದ ಒಬ್ಬರು ಬೌದ್ಧಾಲಯದಲ್ಲಿ ಇದ್ದಾರೆ ಎಂಬ ಅಂಶವೇ ಬೌದ್ಧಾಲಯವನ್ನೂ, ಹಳ್ಳಿಯನ್ನೂ ಜೋಡಿಸಿದ ಅಂಶವಾಗಿತ್ತು. ಅಂದರೆ ಅದು ನಮ್ಮ ಬೌದ್ಧಾಲಯವಾಗಿತ್ತು.

Leave a Reply