ನನ್ನ ಚಿಕ್ಕಪ್ಪ

ನನ್ನ ಚಿಕ್ಕಪ್ಪ ಇನ್ನೊಬ್ಬ ಭಿಕ್ಷುವಿನ ಜತೆ ಒಂದು ಕೊಠಡಿಯನ್ನು ಹಂಚಿಕೊಂಡಿದ್ದ. ಆ ಭಿಕ್ಷುಲಡಾಖಿನವ. ಆತ ನನಗೆ ಮೀನಿನ ಆಕಾರದಲ್ಲಿದ್ದ ಒಂದು ಮಿಠಾಯಿಯನ್ನು ಕೊಟ್ಟ ನೆನಪು ಈಗಲೂ ಇದೆ. ಆ ಮಿಠಾಯಿ ಭಾರತದ್ದು ಎಂದು ಆತ ಹೇಳಿದ್ದ. ಆಮೇಲೆ ಅಲ್ಲಿ ನಾನು ಒಂದು ಲಾಂದ್ರವನ್ನು (ಅದೇ ಮೊದಲ ಬಾರಿಗೆ!) ನೋಡಿದೆ. ಅದೂ ಭಾರತದಿಂದ ಬಂದದ್ದು ಎಂದು ನನಗೆ ಗೊತ್ತಾಯಿತು. ಭಾರತ ಎಂಥ ಅದ್ಭುತ ಸ್ಥಳವಾಗಿರಬೇಕು, ಎಷ್ಟೆಲ್ಲ ಚಿತ್ರವಿಚಿತ್ರ- ಅಪರೂಪದ ವಸುತ್ಗಳಿಂದ ತುಂಬಿರಬೇಕು ಎಂಬ ಕೌತುಕದ ಭಾವ ನನ್ನನ್ನು ಆವರಿಸಿಕೊಂಡಿತು. ಕ್ರೈಸ್ತರು ಜೆರುಸಲೇಂನ್ನು ಕಾಣುವಂತೆ ಟಿಬೆಟನ್ನರು ಭಾರತವನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಆದರೆ “ಪಾಗ್- ಪಾದ ನಾಡಿನಲ್ಲಿ ಬುದ್ಧನ ಜೀವನ”ದ ಕುರಿತ ಕಥೆಗಳನ್ನು ಕೇಳಿ ನಾನು ಗೊಂದಲಕ್ಕೆ ಒಳಗಾಗಿದ್ದೆ. `ಪಾಗ್- ಪಾ’ ಅಂದರೆ ಟಿಬೆಟನ್ ಭಾಷೆಯಲ್ಲಿ ಹಂದಿ ಎಂದರ್ಥ. ಭಾರತವನ್ನು ಯಾಕೆ ಹಂದಿಗಳ ನಾಡು ಎಂದು ಕರೆಯಬೇಕು, ಕರೆಯುತ್ತಾರೆ ಎಂದು ನನಗೆ ಅತ್ಯಂತ ಆಶ್ಚರ್ಯವಾಗಿತ್ತು. ಭಾರತದ ಕಾಡುಗಳಲ್ಲಿ ಸಹಸ್ರಾರು ಹಂದಿಗಳು ಅಡ್ಡಾಡಿಕೊಂಡಿರಬಹುದು ಎಂದೇ ನಾನು ಕಲ್ಪಿಸಿಕೊಂಡೆ ಯಾಕೆ ಭಾರತವನ್ನು ಹಂದಿಗಳ ನಾಡೆಂದು ಕರೆಯುತ್ತಾರೆ ಎಂದು ನಾನು ಕೇಳಿದಾಗ ಚಿಕ್ಕಪ್ಪ ಮತ್ತು ಇತರೆ ಭಿಕ್ಷುಗಳು ಜೋರಾಗಿ ನಕ್ಕುಬಿಟ್ಟರು. ನಾನೀಗ ಓದಲು- ಬರೆಯಲು ಸಮಯ ಒದಗಿದೆ ಎಂದು ಆಗ ಚಿಕ್ಕಪ್ಪ ನನಗೆ ಹೇಳಿದ.

ನನಗೆ ಗೊತ್ತಿದ್ದ ವಿಶಾಲ ಜಗತ್ತೆಲ್ಲವೂ ನನ್ನ ಚಿಕ್ಕಪ್ಪ ಹೇಳಿದ ಕಥೆಗಳಿಂದಷ್ಟೇ ರೂಪುಗೊಂಡಿದ್ದವು. ಭಾರತವು ಇಡೀ ಭೂಮಿಯಲ್ಲೇ ಅತ್ಯಂತ ಪವಿತ್ರವಾದ ಸ್ಥಳ; ಉಳಿದೆಲ್ಲ ಸ್ಥಳಗಳೂ ಭಯ ಹುಟಿಟ್ಸುವಂಥವೇ. ಸಂಸ್ಕೃತಿ- ಸಂಸ್ಕಾರ- ಕರುಣೆ ಇಲ್ಲದ ಜನರಿಂದಲೇ ಈ ಹೊರಜಗತ್ತು ತುಂಬಿದೆ ಎಂಬ ಭಾವ ಮೂಡಿಸಿದ ನನ್ನ ಚಿಕ್ಕಪ್ಪನ ಭಯಾನಕ ಕಥೆಗಳು ನನ್ನ ಸಹಜ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದವು. ಹಿಮದ ನಾಡಿನಲ್ಲಿ ಹುಟ್ಟಿದ ನಾವೇ ತೀರಾ ಅದೃಷ್ಟವಂತರು ಎಂದು ಆತ ಹೇಳುತ್ತಿದ್ದ; ಅದರ ಬಗ್ಗೆ ಅನುಮಾನಪಡಲು ನನಗೆ ಕಾರಣವೇ ಇರಲಿಲ್ಲ.
ಟಿಬೆಟ್ ಕುರಿತ, ಟಿಬೆಟನ್ನರ ಉಗಮವನ್ನು ಕುರಿತ ನನ್ನ ಚಿಕ್ಕಪ್ಪನ ಕಥೆಗಳೇ ಟಿಬೆಟನ್ನರು ಮತ್ತು ಚೀನೀಯರ ನಡುವಣ ನಿರ್ದಿಷ್ಟ ವ್ಯತ್ಯಾಸಗಳನ್ನು ಕುರಿತು ನನ್ನ ಗ್ರಹಿಕೆಯನ್ನು ರೂಪಿಸಿತು ಎಂದು ನನಗೆ ಈಗ ಅನ್ನಿಸುತ್ತಿದೆ. ಟಿಬೆಟ್ ಸದಾ ಚೀನಾದ ಭಾಗವಾಗಿಯೇ ಇತ್ತೆಂದು ಆನಂತರ ಆಕ್ರಮಣಮಾಡಿದ ಚೀನೀಯರು ಹೇಳಿದಾಗ ನಮಗೆ ಅದು ಅರ್ಥವೇ ಆಗಲಿಲ್ಲ. ಇತಿಹಾಸದ ಕುರಿತು ನಮ್ಮ ಗ್ರಹಿಕೆಯೇ ಬೇರೆ ಯಾಗಿತ್ತು. ಕಮ್ಯುನಿಸ್ಟರೇನೋ ನಮ್ಮ ಕಥೆಗಳನ್ನು ಬಾಲಿಶ ಎಂದು ಅಲ್ಲಗಳೆದರು; ಆಧರೆ ನಮಗೆ ಮಾತ್ರ ಅವು ಟಿಬೆಟ್ ಅಂದರೇನೆಂದು ತಿಳಿಸುವ ಪ್ರಭಾವಿ ನಿರೂಪಣೆಗಳಾಗಿದ್ದವು.
ಹಳ್ಳಿಯಲ್ಲಿ ನನ್ನ ಸೋದರತ್ತಿಗೆ ವಾಂಗ್ಮೋ ನನ್ನ ತೀರಾ ನಿಕಟ ಜತೆಗಾರಳಾಗಿದ್ದಳು. ನಾವಿಬ್ಬರೂ ಬೇರ್ಪಡಿಸಲಾಗದ ಜೀವಗಳು ಎಂದು ಚಿಕ್ಕಮ್ಮ ಹೇಳುತ್ತಿದ್ದಳು. ನಮ್ಮ ಬಳಿ ವಿಶೇಷ ಆಟಿಕೆಗಳಾವುವೂ ಇರಲಿಲ್ಲ. ಆದರೆ ನಮ್ಮ ಕೈಗೆ ಸಿಕ್ಕಿದ್ದನ್ನೇ ನಾವು ಆಟಿಕೆಯಾಗಿ ಬಳಸಿಕೊಳ್ಳುತ್ತಿದ್ದೆವು. ಕೋಲು ಸಿಕ್ಕಿದರೆ ಅದೇ ಭರ್ಚಿ ಆಗುತ್ತಿತ್ತು. ಧೂಳಿನ ಬಯಲೇ ರಣಾಂಗಣ. ಅಲ್ಲಿ ನಮ್ಮದೇ ಕಲ್ಪನೆಯ ಯುದ್ಧಗಳನ್ನು ಹೂಡುತ್ತಿದ್ದೆವು. ಸಾಮಾನ್ಯವಾಗಿ ಉಳಿದ ಗಂಡು ಮಕ್ಕಳೆಲ್ಲ ತಮ್ಮಷ್ಟಕ್ಕೆ ತಾವೇ ಆಡಲು ಬಯಸುತ್ತಿದ್ದರು. ನಾನು ಮಾತ್ರ ಯಾವುದೇ ಆಟದಲ್ಲೂ ವಾಂಗ್ಮೋಳನ್ನು ಸೇರಿಸಿಕೊಳ್ಳಲು ಯತ್ನಿಸುತ್ತಿದ್ದೆ. ಅವಳು ಗಟ್ಟಿ ಹುಡುಗಿಯಾಗಿದ್ದಳು. ಹಳ್ಳಿಯ ಎತ್ತುಗಳಿಗೂ ಅವಳು ಹೆದರುತ್ತಿರಲಿಲ್ಲ.
ಬಹುಶಃ ನಮಗೆ ಐದಾರು ವರ್ಷ ಆಗಿರಬೇಕು… ವಾಂಗ್ಮೋ ಕಾಯಿಲೆ ಬಿದ್ದಳು. ನನ್ನ ಚಿಕ್ಕಮ್ಮನಂತೂ ವಾಂಗ್ಮೋಳ ಚಿಕಿತ್ಸೆಗಾಗಿ ಎಲ್ಲಾ ಬಗೆಯ ಪ್ರಯತ್ನಗಳನ್ನೂ ನಡೆಸಿದಳು. ಒಂದು ಸಲವಂತೂ ಕಾಯಿಲೆಗೆ ಕಾರಣವಾದ ದುಷ್ಟಶಕ್ತಿಗಳನ್ನು ದೂರ ಓಡಿಸಲು ಧಾರ್ಮೋಕ ವಿಧಿ ನಡೆಸಲು ಲಾಮಾಗಳನ್ನು ಆಹ್ವಾನಿಸಲಾಯಿತು. ಒಂದು ದಿನ ನನ್ನ ಚಿಕ್ಕಮ್ಮ ಅಡುಗೆ ಮನೆಯಲ್ಲಿ ಬಿಕ್ಕುತ್ತಿದ್ದಳು. ವಾಂಗ್ಮೋ ಇನ್ನಿಲ್ಲ ಎಂಬ ಸುದ್ದಿ ನನಗೆ ಗೊತ್ತಾಯಿತು. ನನ್ನ ಚಿಕ್ಕಮ್ಮ ಅನೇಕ ದಿನಗಳ ಕಾಲ ಹಾಸಿಗೆ ಹಿಡಿದಳು. ಅವಳನ್ನು ಸಮಾಧಾನಪಡಿಸುವ ಸಾಮರ್ಥ್ಯ ನನಗಾದರೂ ಎಲ್ಲಿತ್ತು?
ಆದರೆ ಅನಂತರ ಏನೂ ನಡೆದೇ ಇಲ್ಲ ಎಂಬಂತೆ ದಿನಗಳು ಕಳೆಯತೊಡಗಿದವು. ವಾಂಗ್ಮೋ ಕುರಿತು ಮಾತನಾಡಿದರೆ ನನಗೆ ದುಃಖವಾಗುತ್ತದೆ, ವಿಷಯವನ್ನು ಚರ್ಚಿಸದೇ ಇದ್ದರೆ ಎಲ್ಲವೂ ಮರೆತೇ ಹೋಗುತ್ತದೆ ಎಂದು ಹಿರಿಯರು ಭಾವಿಸಿದ್ದರೆಂದು ಕಾಣುತ್ತದೆ. ನಾವು ಟಿಬೆಟನ್ನರು ಅಹಿತಕರ ವಿಷಯಗಳನ್ನು, ಅವುಗಳ ನೋವು ತನ್ನಿಂತಾನೇ ಮಾಯವಾಗಲಿ ಅನ್ನೋ ನಿರೀಕ್ಷೆಯಿಂದ ಬೇಕೆಂದಲೇ ಮರೆತುಬಿಡುತ್ತೇವೆ ಎಂದು ನನಗೆ ಹಲವು ಸಲ ಅನ್ನಿಸಿದ್ದಿದೆ. ಇವತ್ತಿಗೂ ನನಗೆ ಚಿಕ್ಕಮ್ಮನ, ವಾಂಗ್ಮೋಳ ನೆನಪಾದರೆ ಸಾಕಾ, ಕಣ್ಣುಗಳು ಹನಿಗೂಡುತ್ತವೆ. ಆ ಹಳೆಯ ದಿನಗಳೇ ನನ್ನ ಬದುಕಿನ ಪರಮಸುಖದ ಕ್ಷಣಗಳಾಗಿದ್ದವು. ಸಣ್ಣಪುಟ್ಟ ಕೋಳಗಳಲ್ಲಿ ನಾವು ಆಡುತ್ತಿದ್ದೆವು; ಮಣ್ಣಿನಿಂದ ಪ್ರತಿಮೆ ರಚಿಸುತ್ತಿದ್ದೆವು. ಮೈಯೆಲ್ಲ ಕೊಳಕಾಗಿ ಮನೆಗೆ ಬರುತ್ತಿದ್ದೆವು. ಚಿಕ್ಕಮ್ಮ ನಮ್ಮನ್ನು ನೋಡಿ ಬೈಉತ್ತಿದ್ದಳು; ಸೇವಕನನ್ನು ಕರೆದು ನಮ್ಮನ್ನು ತೊಳೆಯಲು ಹೇಳುತ್ತಿದ್ದಳು.
ವಾಂಗ್ಮೋ ತೀರಿಕೊಂಡು ಬಹಳ ದಿನಗಳೇನೂ ಆಗಿರಲಿಲ್ಲ; ಆಗಲೇ ನನ್ನ ನಿಜ ಕುಟುಂಬದ ಸದಸ್ಯರನ್ನು ನಾನು ಭೇಟಿ ಮಾಡಿದೆ. ನನ್ನ ಚಿಕ್ಕಮ್ಮನ ಶೋಕದಲ್ಲಿ ಭಾಗಿಯಾಗಲು ನನ್ನ ಅಜ್ಜಿ, ಸೋದರಿಯರು, ನನ್ನ ಸೋದರ ಎಲ್ಲರೂ ಬಂದರು. ಅವರು ಬಂದ ಕೂಡಲೇ ಎಲ್ಲರೂ ಅಳಲಾರಂಭಿಸಿದರು. ನನ್ನ ಅಪ್ಪ ನನಗಾಗಿ ಭಾರತದಲ್ಲಿ ತಯಾರಾಗಿದ್ದ ಚರ್ಮದ ಬೂಟುಗಳನ್ನೂ, ಒಂದು ಜೊತೆ ಹೊಸ ಬಟ್ಟೆಯನ್ನೂ ಕಳಿಸಿದ್ದ. ಒಂದು ದಿನ ನನ್ನನ್ನು ಒಳಗೆ ಕರೆದ ಚಿಕ್ಕಮ್ಮ ನನ್ನ ಮೈಮೇಲಿನ ಧೂಳನ್ನೆಲ್ಲ ಒರೆಸಿ ಕುಟುಂಬದ ಪ್ರಾರ್ಥನಾ ಕೊಠಡಿಗೆ ಕರೆದೊಯ್ಯುವವರೆಗೆ ನನಗೆ ಅಪ್ಪನನ್ನು ಕುರಿತ ನೆನಪೇ ಇರಲಿಲ್ಲ. ಆವತ್ತೇ ನಾನು ಅಪ್ಪನನ್ನು ಕಂಡದ್ದು. ಆತ ಅಲ್ಲಿ ಒಂದು ಕುರ್ಚಿಯಲ್ಲಿ ಚಹಾ ಹೀರುತ್ತ ಕುಳಿತಿದ್ದ. ಅವನ ಕಣ್ಣುಗಳು ಇರಿಯುವಂತಿದ್ದವು. ಆತ ಕಿವಿಯಲ್ಲಿ ತಿಳಿನೀಲಿ ಬಣ್ಣದ ಲೋಲಾಕು ಧರಿಸಿದ್ದ. ಅದು ಅವನ ಭುಜದವರೆಗೂ ಇಳಿಬಿದ್ದಿತ್ತು.
ಚಿಕ್ಕಮ್ಮ ನನ್ನನ್ನು ಕೊಂಚ ದೂಡಿ “ಅಪ್ಪನನ್ನು ಭೇಟಿಯಾಗು” ಎಂದಳು. ಅಪರಿಚಿತರನ್ನು ಕಂಡರೆ ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ಪ್ರತಿಕ್ರಿಯಿಸುವಂತೆಯೇ ಆನು ನಾಚಿಕೊಂಡೆ, ಉದ್ವಿಗ್ನನಾದೆ. ಆದರೆ ಏನಾದರೂ ಉಡುಗೊರೆ ಸಿಗುವುದಲ್ಲಾ ಎಂಬ ಆಶೆಯೂ ಹುಟ್ಟಿಕೊಂಡು ಉಲಕ್ಲಸಿತಾನದೆ. ಅಪ್ಪ ತನ್ನ ಜೇಬಿನೊಳಗೆ ಕೈಹಾಕಿ ಬಿಳಿ ಹರಳಿನ ಕಲ್ಲಿನಂಥದ್ದೊಂದನ್ನು ಹೊರ ತೆಗೆದ. ನಾನು ಕೆಎಗಳನ್ನು ಬಗಸೆ ಮಾಡಿ ಮುಂಚಾಚಿದೆ. ನನ್ನ ಬೊಗಸೆಯೊಳಗೆ ಅಪ್ಪ ಆ ಹರಳನ್ನು ಇಟ್ಟ.
ಅಪ್ಪ ಮಾತನಾಡುತ್ತಲೇ ಇದ್ದ. ನಾನು ಮಾತ್ರ ದಕ್ಕಿದ ಕೊಡುಗೆಯನ್ನೇ ನೋಡುತ್ತ ಮೈಮರೆತಿದ್ದೆ. ಅದು ನಾವೆಲ್ಲ ಕರೆಯುತ್ತಿದ್ದ `ಸಿಹಿಗಾಜು’- ಶೇಲ್ ಕರಾ- ಆಗಿತ್ತು. ಅದನ್ನು ನಾನು ಹಲವು ದಿನಗಳ ಕಾಲ ನನ್ನ ಜೇಬಿನಲ್ಲೇ ಇಟ್ಟುಕೊಂಡಿದ್ದೆ. ಆಗಾಗ ಅದನ್ನು ಹೊರತೆಗೆದು ನೆಕ್ಕುತ್ತಿದ್ದೆ.
ನಾವಿಬ್ಬರೂ ಬೇರೆ ಬೇರೆಯಾಗಿದ್ದರೂ ನಮ್ಮಿಬ್ಬರ ನಡುವೆ ಸಹಜವಾದ ಬಂಧವೊಂದು ಇದ್ದೇ ಇತ್ತು. ಒಂದು ದಿನ ಮನೆಯಲ್ಲಿ ಒಬ್ಬ ದೊಡ್ಡ ಹುಡುಗ ನನ್ನ ಅಪ್ಪ ಮಣ್ಣಿನ ಬಣ್ಣದ ತೋಳಿಲ್ಲದ ಅಂಗಿ ಧರಿಸಿದ್ದರಿಂದ ಕೊಳಕಿನ ತುಂಡಿನಂತೆ ಕಾಣುತ್ತಾನೆ ಎಂದಾಗ ನಾನು ಅಪ್ಪನ ರಕ್ಷಣೆಗೆ ಮುಂದಾಗಿದ್ದೆ. ಆ ಹುಡುಗನನ್ನು ಬೆನ್ನಟ್ಟಿ ಹಿಡಿದು ಬಾರಿಸಿದ್ದೆ.
ಅಪ್ಪ, ಚಿಕ್ಕಮ್ಮನ ಮನೆಗೆ ಬಂದಾಗಲೆಲ್ಲ ನನ್ನನ್ನು ಅಪ್ಪನ ಬಳಿಗೆ ಕಳಿಸುತ್ತಿದ್ದರು. ನಮ್ಮ ಮಾತುಕತೆಗಳು ತೀರಾ ಸಂಕ್ಷಿಪ್ತವಾಗಿರುತ್ತಿದ್ದವು. `ಚೆನ್ನಾಗಿದ್ದೀಯಾ?’ ಎಂದು ಅಪ್ಪ ಕೇಳಿದರೆ ನಾನು ತಲೆ ಅಲ್ಲಾಡಿಸುತ್ತಿದ್ದೆ- ಅಷ್ಟೆ. `ಚಿಕ್ಕಮ್ಮನ ಮಾತು ಕೇಳು, ಒಳ್ಳೆಯವನಾಗಿರು’ ಅಂತ ಅಪ್ಪ ಉಪದೇಶಿಸುತ್ತಿದ್ದ. ಆಮೇಲೆ ನನ್ನ ಜೇಬಿಗೆ ಮಿಠಾ, ಒಣಮಾಂಸವನ್ನು ತುಂಬುತ್ತಿದ್ದ. ನಾನು ಅದನ್ನು ಉಳಿದ ಕ್ಕಳಿಗೆ ತೋರಿಸುತ್ತಿದ್ದೆ. ಅವರೆಲ್ಲ ಹಟ್ಟೆಕಿಚ್ಚುಪಡುತ್ತಾರೆ ಎಂಬುದು ನನಗೆ ಗೊತ್ತಿತ್ತು. ನನ್ನ ಅಪ್ಪನ ನಿಗೂಢತೆ, ಅವನಿಗಿದ್ದ ಪ್ರಾಮುಖ್ಯ- ಇವೆಲ್ಲ ಇತರೆ ಮಕ್ಕಳಿಗೆ ಸೋಜಿಗದ ಸಂಗತಿಯಾಗಿತ್ತು. ಆತ ಬಂದಾಗಲೆಲ್ಲ ಅವನನ್ನು ಭಾರೀ ಆತಿಥ್ಯ ನೀಡಿ ನೋಡಿಕೊಳ್ಳಲಾಗುತ್ತಿತ್ತು. ಅಪ್ಪ ಮನೆಯ ಅತೀ ಚೆನ್ನಾಗಿದ್ದ ಕೊಠಡಿಯಲ್ಲೇ ಮಲಗುತ್ತಿದ್ದ.
ನನ್ನ ಚಿಕ್ಕಮ್ಮನಿಗೆ ವಾಂಗ್ಮೋಳ ಸಾವಿನ ದುಃಖದಿಂದ ಹೊರಬರಲು ಆಗಲೇ ಇಲ್ಲ. ಅವಳು ಬರೀ ತನ್ನ ಕೆಲಸಗಳಲ್ಲೇ ಮುಳುಗಿರುತ್ತಿದ್ದಳು. ಬೇಸಗೆಯಲ್ಲಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಅವಳು ಚಳಿಗಾಲದಲ್ಲಿ ಉಣ್ಣೆ ಹದ ಮಾಡುವ, ನೂಲುವ ಕೆಲಸದಲ್ಲೇ ಎಲ್ಲಾ ಸಮಯವನ್ನೂ ಕಳೆಯುತ್ತಿದ್ದಳು. ಅದರ ಜತೆಗೇ ಮನೆಗೆಲಸಗಳ ಉಸ್ತುವಾರಿಯನ್ನೂ ಅವಳು ವಹಿಸಿಕೊಂಡಿದ್ದಳು. ನನ್ನ ಬಗ್ಗೆ ಮಾತ್ರ ಅವಳಿಗಿದ್ದ ನಿಗಾ ಇನ್ನಷ್ಟು ಹೆಚ್ಚಾಯಿತು.
ಮತ್ತೊಂದು ದಿನ ಅಪ್ಪ ಬಂದ. ನನ್ನನ್ನು ವಾಪಸು ಒಯ್ಯಲು ಸಿದ್ಧತೆ ಮಾಡಲೆಂದೇ ಆತ ಬಂದಿದ್ದ ಎಂದೂ ನನಗೆ ಗೊತ್ತಾಯಿತು. ನನ್ನ ಚಿಕ್ಕಮ್ಮ ಬಿಕ್ಕುತ್ತಿದ್ದಳು. ಆಗ ನನಗೆ ಒಂಭತ್ತರ ಪ್ರಾಯ.

Leave a Reply