ಎಡಿಮಾ ಎಂಬ ಸಾವಿನ ಮುಖವಾಡ

ಜುಲೈ  ೧೭ – ೨೦
ಹಸಿರಿನಲ್ಲಿ ಹುಡುಕಿದೆ. ಎರಡೂ ಹಸ್ತಪ್ರತಿಗಳನ್ನು  ಮತ್ತು ಅಮ್ಮನಿಗೆ ಬರೆದ ಪತ್ರವನ್ನು ಠಾಣೆ ಸಂಖ್ಯೆ ೩ರಿಂದ ಅಂಚೆಗೆ ಹಾಕಲು
ಲೀ ಗೌಲಿಯಾಂಗ್‌ಗೆ ಕೊಟ್ಟೆ.
ಹಸಿರಿನಲ್ಲಿ ಹುಡುಕಿದೆ.

ಬೆಳಗ್ಗೆ ಹುಲ್ಲು  ಕಿತ್ತೆ. ಹದಿನೆಂಟು ಜಿನ್.
ಮುಖ್ಯ ಕ್ಯಾಂಪಿಗೆ ಬಂದೆ. ಮಧ್ಯಾಹ್ನ ಮಣ್ಣಿನ ಮುದ್ದೆ ಎಳೆದೆ.
ಭವಿಷ್ಯ ಯಾವತ್ತೂ ಅಪಾರ-ದರ್ಶಕ. ಯಾರಿಗಾದರೂ ಭವಿಷ್ಯ-ವನ್ನು ಊಹಿಸೋದು ತುಂಬಾ ಕಷ್ಟ. ಅದರಲ್ಲೂ ಖೈದಿ-ಗಳ ಕುರಿತಂತೂ ಈ ಮಾತು ನೂರಕ್ಕೆ ನೂರು ನಿಜವೇ.  ನೀವು ಯಾವುದೋ ಕೆಲಸ ಮಾಡ್ತಾ ಇರ್‍ತೀರ. ಹಠಾತ್ತಾಗಿ ನಿಮ್ಮನ್ನು ಬೇರೆ ಕಡೆಗೆ ವರ್ಗ ಮಾಡ್ತಾರೆ. ಭವಿಷ್ಯದ ತರ್ಕಗಳೆಲ್ಲ ವಿಫಲ!
ನಾನು `ನೋಡಿಕೊಳ್ಳುತ್ತಿರುವವರ’ ಗುಂಪಿಗೆ ಸೇರಿ ಆರಾಮಾಗಿದ್ದೆ. ನನ್ನ ಬರೆಹಗಳು ಮತ್ತು ಪತ್ರವನ್ನು ನನಗಾಗಿ ಅಂಚೆಗೆ ಹಾಕೋವವನಿಗೆ ಕೊಟ್ಟಿದ್ದೆ.  ಅಷ್ಟು ಹೊತ್ತಿಗೆ ನಾನು ಮುಖ್ಯ ಕ್ಯಾಂಪಿಗೆ ಹೋಗಬೇಕೆಂಬ ಆದೇಶ ಬಂತು.

ನಾನು ಆ ಬಟ್ಟೆಯ ಚಿಕ್ಕ ಚಿಂದಿ ಮತ್ತು ಸಣ್ಣ ಗಾಜಿನ ಬಾಟಲಿಯನ್ನು ತೆಗೆದುಕೊಂಡೆ. ಹಾಗೇ ಒಂದು ದಾರ. ಯಾರಿಗ್ಗೊತ್ತು, ಅದು ನನಗೆ ಬೇಕಾಗುವ ಸಂದರ್ಭ ಬರಬಹುದು. ಕಾರ್ಮಿಕ ಸುಧಾರಣಾ ಶಿಬಿರದಲ್ಲಿ ಖೈದಿಗಳು ಸಿಂಬಳ ಮತ್ತು ಕಫವನ್ನು ಹೊರತುಪಡಿಸಿ ಬೇರೆ ಯಾವ ವಸ್ತುವನ್ನೂ ಬಿಟ್ಟುಹೋಗಲಿಕ್ಕೆ ತಯಾರಿರಲ್ಲ. ಇಡೀ ಕಾರ್ಮಿಕ ಸುಧಾರಣಾ ಶಿಬಿರದಲ್ಲಿ ಅತ್ಯಂತ ಶುದ್ಧವಾಗಿರೋದಂದ್ರೆ ಕಸ ಹಾಕುವ ಸ್ಥಳ. ಅಲ್ಲಿ ನಿಮಗೆ ಬೇರೆ ಕಡೆ ಬಳಸಬಹುದಾದ ಯಾವೊಂದು ಚಿಕ್ಕ ವಸ್ತುವೂ ಕಾಣಿಸುವುದಿಲ್ಲ. ನಾವು ಸಿದ್ಧರಾದೆವು ಎಂದರೆ ನಮ್ಮೆಲ್ಲ ವಸ್ತುಗಳನ್ನೂ ಹೆಗಲಿಗೇರಿಸಿಕೊಂಡಿರ್‍ತೇವೆ. ಬ್ಯಾರಕ್ಕಿನಲ್ಲಿ ನಾವು ಬಿಟ್ಟುಹೋಗುವುದು ಯಾರಿಗೂ ಬೇಡದ ಒಂದು ದರಿದ್ರನಾತ ಮಾತ್ರ.
ದಿನಚರಿಯ ಮೊದಲ ಟಿಪ್ಪಣಿಗಳನ್ನು ನಾನು ನಾಲ್ಕು ಸಂಖ್ಯೆಯ ಠಾಣೆಯಲ್ಲಿ ಬರೆದೆ. ಎಲ್ಲಾ ಠಾಣೆಗಲೂ ಒಂದೇ ಥರ. ಕೆಲವು ತೀರಾ ಹಳೆಯವು. ಕೆಲವು ಇನ್ನೂ ಪ್ರಾಚೀನ, ಅಷ್ಟೆ.  ನಾಲ್ಕರ ಠಾಣೆ ತೀರಾ ಪ್ರಾಚೀನ ಅನ್ನೋದಷ್ಟೇ ಇಲ್ಲಿ ಹೇಳಬಹುದಾದ ಮಾಹಿತಿ. ಮುಖ್ಯ ಕ್ಯಾಂಪಿನಲ್ಲಿ ಸಾಲುಸಾಲಾಗಿ ಕಟ್ಟಡಗಳಿದ್ದವು. ಸುತ್ತಲೂ ಒಂದು ದೊಡ್ಡ ಕಾಂಪೌಂಡ್ ಇತ್ತು.  ಆಮೇಲೆ ಸುತ್ತಲೂ ಮಣ್ಣಿನ ಗೋಡೆ. ಅದಕ್ಕೆ ಒಂದು ದೊಡ್ಡ ಮರದ ಗೇಟು. ಪ್ರತೀ ಕಟ್ಟಡದಲ್ಲೂ ಬ್ಯಾರಕ್‌ಗಳು. ಇವಕ್ಕೆ ಸಂಖ್ಯೆ ಕೊಟ್ಟಿರ್‍ತಾರೆ.
ಸಮಸ್ಯೆ ಇಷ್ಟೆ. ನಾನು ವರ್ಗವಾದ ಮೇಲೆ ನನ್ನ `ನೋಡಿಕೊಳ್ಳುತ್ತಿರುವ ವ್ಯಕ್ತಿ’ ಸ್ಥಾನ-ಮಾನವನ್ನು ನಾನು ಕಳೆದುಕೊಂಡೆ. ಮುಖ್ಯಾಕಾರಿ ನನ್ನ ಬಗ್ಗೆ ಇಲ್ಲಿ ಯಾರಿಗಾದರೂ ಆದೇಶ ರವಾನಿಸಿರ್‍ತಾನಾ ಎಂದು ನಾನು ಕಲ್ಪಿಸಿಕೊಂಡೆ. ಅದೇ ಮಧ್ಯಾಹ್ನ ನಾನು ಮತ್ತೆ ಮಣ್ಣಿನ ಮುದ್ದೆಗಳನ್ನು ಎಳೆದೊಯ್ಯಬೇಕಾದ ಕೆಲಸಕ್ಕೆ ಬಿದ್ದೆ. ಮುಖ್ಯಾಕಾರಿ ಯಾರಿಗೂ ಹೇಳಿಲ್ಲ.
ಅಷ್ಟು ಹೊತ್ತಿಗೆ `ಕಡಿಮೆ ಪಡಿತರದ ಬದಲಿಗೆ ಸೋರೆ ಹಾಗೂ ಹಸಿರು’ ನೀತಿ ಜಾರಿಗೆ ಬಂದು ಒಂದು ವರ್ಷವೇ ಆಗಿತ್ತು. ಸಾಯೋ ಹಾಗಿದ್ದವರು ಸತ್ತೇ ಹೋಗಿದ್ದರು. ಸಾಯದವರು ಸಾಯೋ ಹಾದಿಯಲ್ಲಿದ್ದರು. ಜನ ಒಬ್ಬರಾದ ಮೇಲೆ ಒಬ್ಬರಂತೆ ಸಾಯ್ತಿ-ದ್ದರು. ಕೊನೆಗೆ ಸಾಯೋದು ಉಳಿಯೋದು ಎಲ್ಲ ವಿಯಾಟ ಆಗಿಹೋಗಿತ್ತು. ನಾನೂ ಸಾಯ್ತೇನಾ? ನನಗೆ ಗೊತ್ತಾಗೋ ಸಂದರ್ಭವೇ ಇರ್‍ಲಿಲ್ಲ. ನನ್ನೊಳಗಿದ್ದ ನಿಶ್ಶಕ್ತಿ ಮತ್ತು ಸುಸ್ತು ಸಾಹಿತ್ಯದ ಯಾವ ಕೃತಿಯಲ್ಲೂ ನನಗೆ ಕಂಡಿರಲಿಲ್ಲ. ಖು ಯುವಾನ್‌ನಿಂದ (ಕ್ರಿ.ಪೂ. ೪ನೇ ಶತಮಾನದ ಚೀನೀ ಕವಿ) ಹಿಡಿದು ಹೋಮರ್‌ವರೆಗೆ ಅಂದ್ಕೊಳ್ಳಿ. ನಾನು ಮತ್ತೆ ಅವನ್ನೆಲ್ಲ ಮತ್ತೆ ಮತ್ತೆ ಹೇಳಲ್ಲ. ಒಂದೇ ಸಂಗತಿ: ಇಪ್ಪತ್ತನಾಲ್ಕು ಗಂಟೆಗಳ ಪ್ರತಿಯೊಂದೂ ಕ್ಷಣ ನಾನು ಉಸಿರಾಡೋದನ್ನು ಮರೆಯದೇ ಇರೋದೊಂದೇ ತುಂಬಾ ಮುಖ್ಯವಾದ ವಿಷಯ-ವಾಗಿತ್ತು.
ಶ್ವಾಸವ್ಯವಸ್ಥೆಯು ಸ್ವಯಂಕಾರ್ಯದ ನರವ್ಯವಸ್ಥೆಯ ನಿಯಂತ್ರಣದಲ್ಲಿದೆ ತಾನೆ? ಎಚ್ಚರವಿರಲಿ, ಬಿಡಲಿ, ಉಸಿರಾಡೋದು ನಿಲ್ಲುತ್ತಾ ಅಂತ ನೀವು ಕೇಳಬಹುದು. ಆದರೆ ನನ್ನ ಬದುಕಿನ ಆ ಕ್ಷಣಗಳಲ್ಲಿ ಈ ವ್ಯವಸ್ಥೆ ಚೆನ್ನಾಗಿ ಇದೆ ಅನ್ನೋದನ್ನ ನಾನು ಖಾತ್ರಿ ಮಾಡಿಕೊಳ್ಳಲೇಬೇಕಾಗಿತ್ತು. ನಾನು ಉಸಿರಾಡೋದನ್ನೇ ಮರೆತುಬಿಟ್ಟರೆ ಉಸಿರುಕಟ್ಟೋ ಅಪಾಯ ಇದೆ. ಇದು ಯಾವುದೋ ಕಾಯಿಲೆಯ ಅಥವಾ ಕೇಂದ್ರ ಶ್ವಾಸ ವ್ಯವಸ್ಥೆಯ ಸಮಸ್ಯೆ ಅಲ್ಲ. ಅಥವಾ ಶ್ವಾಸಕೋಶಕ್ಕೆ, ತಲೆಗೆ ಪೆಟ್ಟಾಗಿತ್ತು ಅಂತಲೂ ಅಲ್ಲ. ನನ್ನ ದೇಹದ ದಣಿವು ನನ್ನ ಶ್ವಾಸಕೋಶಗಳನ್ನೂ ದುರ್ಬಲಗೊಳಿಸ್ತಿತ್ತು.
ನೀವು ನಂಬ್ತೀರೋ ಇಲ್ಲವೋ ಗೊತ್ತಿಲ್ಲ. ನಿಜಕ್ಕೂ ನಾನು ಕೆಲವು ಸಲ ಉಸಿರಾಡೋದನ್ನೇ ಮರೀತಿದ್ದೆ. ಹಠಾತ್ತಾಗಿ ತಲೆ ತಿರುಗಿ, ಕಣ್ಣುಗಳ ಹಿಂದೆ ಬೆಳಕು ಮಿಂಚಿದಂತಾಗಿ…. ನಾನು ಬೀಳ್ತಾ ಇದ್ದ ಹಾಗೆ ಕತ್ತಲು ಆವರಿಸ್ತಿತ್ತು. ಅಂದಿನಿಂದ ನಾನು ಆಮ್ಲಜನಕವನ್ನು ಸ್ವೀಕರಿಸೋ-ದನ್ನು ಮರೀಲಿಲ್ಲ.
ಕ್ರಮೇಣವಾಗಿ ನನ್ನ ಬದುಕಿನಲ್ಲಿ ಎರಡೇ ಸಂಗತಿಗಳು ಮುಖ್ಯವಾದವು: ಹುಲ್ಲಿನ ಸಾರನ್ನು ಕುಡಿಯೋದು ಮತ್ತು ಉಸಿರಾಡೋದು.
ಮಜಾ ಅಂದ್ರೆ ನಾನು ಹುಲ್ಲಿನ ಸಾರಿನ ಶಕ್ತಿಯಿಂದಲೇ ಚಲಿಸ್ತಾ ಇದ್ದೆ, ಕೆಲಸಾನೂ ಮಾಡ್ತಿದ್ದೆ ! ಹಾಗೆ ಬೇರೆಯವರಿಗೆ ಹೋಲಿಸಿದ್ರೆ ನಾನೇ ಸ್ವಲ್ಪ ಗಟ್ಟಿಮುಟ್ಟಾಗಿದ್ದೆ ಅಂತಲೂ ಹೇಳಬಹುದಿತ್ತು. ಈ ಅಂಶವೇ ನಾನು ಸಾವಿನ ಹತ್ತಿರಕ್ಕೆ ಬಂದಿಲ್ಲ ಎಂಬ ಭಾವ ಮೂಡಿಸಿತು. ಅದೇ ಮತ್ತೆ ನಾನು ಬದುಕುವ ಶಕ್ತಿಯನ್ನೂ ನೀಡಿತು. ನನಗಿಂತ ದುರ್ಬಲರಾಗಿದ್ದವರೂ ಬದುಕಿದ್ರು. ಅದೂ ನನಗೆ ಉತ್ತೇಜನ ನೀಡ್ತಿತ್ತು.
ಸತ್ತವರೆಲ್ಲ ಹಸಿವಿನಿಂದಲೇ ಸತ್ತರು ಅಂತ ಹೇಳಕ್ಕಾಗಲ್ಲ.  ಪ್ರತಿ ಖೈದಿಗೂ ದಿನಾಲೂ ಮೂರು ಬೋಗುಣಿ ಹುಲ್ಲಿನ ಸಾರು ಸಿಗ್ತಿತ್ತು. ಆದರೆ ಕ್ರಮೇಣವಾಗಿ ದುರ್ಬಲರಾಗ್ತ ಖೈದಿಗಳು ಕ್ಷಯಿಸ್ತಾ ಇದ್ದರು.  ಹೀಗಾಗಿ ಹಠಾತ್ ಸಾವಿನ ಬದಲಿಗೆ ನಿಧಾನ ಸಾವಿನ ಬಗೆಗೆ ಅವರೆಲ್ಲ ಚಿಂತಿಸಬಹುದಿತ್ತು. ಅವರೆಲ್ಲ ಸಸ್ಯಗಳಿಗೆ ಆವರಿಸೋ `ಉದುರು ರೋಗ’ಕ್ಕೆ ತುತ್ತಾದವರ ಹಾಗೆ ಕಾಣುತ್ತಿದ್ದರು. ಫ್ಯುಸೇರಿಯಮ್, ವರ್ಟಿಕ್ಯುಲಮ್, ಸ್ಯೂಡೋ-ಮೋನಾಸ್ ಮುಂತಾದ ಬ್ಯಾಕ್ಟೀರಿಯಾಗಳು ಗಿಡಗಳ ಬೇರುಗಳನ್ನು, ಕಾಂಡವನ್ನು ಪ್ರವೇಶಿಸಿ ನಾಳಗಳನ್ನು ಕಡಿಯುತ್ತಿದ್ದವು.  ಈ ಗಿಡಗಳು ಕ್ರಮೇಣವಾಗಿ ಸಾಯುತ್ತವೆ. ಇಲ್ಲಿ ಹಿಂದಿನ ಆರೋಗ್ಯಕ್ಕೆ ಮರಳೋದಕ್ಕೆ ಸಾಧ್ಯವೇ ಇಲ್ಲ.
ಇದನ್ನೇ ಮನುಷ್ಯರಿಗೆ ಅನ್ವಯಿಸಿದರೆ, `ಸಾವಿನ ಮುಖವಾಡ’ದ ಹಾಗೆ ಕಾಣುತ್ತದೆ.
ಸಾವಿನ ಮುಖವಾಡ ಹಾಕಿಕೊಂಡವರು ಅಲ್ಲಿ ಇದ್ದರು ಅಂತ ಬೇರೆ ಹೇಳಬೇಕ? ಅವರ ಮುಖದ ಚರ್ಮ ಕಳಾಹೀನ. ಕೂದಲು ಒರಟು. ಕಣ್ಣುಗಳ ದ್ರವವಲ್ಲ, ಕಣ್ಣುಗಳೇ ವಿಚಿತ್ರ-ವಾಗಿ ಹೊಳೆಯುತ್ತವೆ. ಅವು ಒಂಥರ `ಕಳ್ಳನೋಟ’ ಬೀರುತ್ತವೆ. ಸದಾ ಅತ್ತಿತ್ತ ಚಲಿಸುವ, ಬೆದರಿದ ಕಣ್ಣುಗುಡ್ಡೆಗಳು. ವಿಷದ ಬೆಳಕು ಹಾದ ಹಾಗೆ. ಯಾರಿಗೂ ಅವನ್ನು ಕಂಡರೆ ಭಯ-ವಿಲ್ಲ. ಯಾಕೆಂದರೆ ಅವರ ಕಣ್ಣುಗಳೂ ಹಾಗೇ ಇದ್ದವಲ್ಲ…
ಈ ಸ್ಥಿತಿ ಮನುಷ್ಯನನ್ನು ಎಷ್ಟು ದುರ್ಬಲನಾಗಿ ಮಾಡುತ್ತೆ ಅಂತ ನಿಮಗೇನಾದ್ರೂ ಅರಿವಿದೆಯ?
ನೆಲದಿಂದ ಮೇಲೆದ್ದ ಒಂದೇ ಒಂದು ಭತ್ತದ ಸಸಿಯನ್ನು ಊಹಿಸಿಕೊಳ್ಳಿ.
ಆಮೇಲೆ ಅದನ್ನು ಮೆಟ್ಟಿ ಹಾಕಲು ಕಾಲು ಎತ್ತಲಾಗದ ಸ್ಥಿತಿಯನ್ನು ಊಹಿಸಿಕೊಳ್ಳಿ.
ಕೆಲವರಂತೂ ಎಡಿಮಾದಿಂದ ಬಳಲಿದರು. ಅದು ಕಾಲಿನಿಂದ ಶುರು. ಆಮೇಲೆ ಮೀನಖಂಡಗಳು, ತೊಡೆ, ಕೊನೆಗೆ ತಲೆ. ಎಡಿಮಾಗ್ರಸ್ತ  ಮನುಷ್ಯ ಒಂದು ಬಲೂನಿನಂತೆ ಕಾಣ್ತಾನೆ. ಭರ್ತಿ ಗಾಳಿ ತುಂಬಿದ ಬಲೂನು ನೋಡಿದ್ದೀರ ತಾನೆ? ಕಣ್ಣುಗಳು ಊದಿ-ಕೊಳ್ಳುತ್ತವೆ. ಅವು ಮುಚ್ಚಿಕೊಂಡು ಸಣ್ಣ ಸೀಳು ಮಾತ್ರ ಗೋಚರವಾಗುತ್ತೆ. ಅದರೊಳಕ್ಕೆ ಬೆಳಕು ಹಾಯಲಾರದು. ಆತ ಏನನ್ನೂ ನೋಡಲಾರ. ಆದರೆ ಸರಳ, ನೇರ ಎಡಿಮಾ ಅಂದರೆ ಸಾವಿನ ಮುಖವಾಡ ಎಂದೂ ಹೇಳಬಹುದು. ಊದಿಕೊಳ್ಳುತ್ತಿರೋ ಚರ್ಮ ಸೀಳುಬಿಟ್ಟು ಹಳದಿ ಗ್ರಂಥಿ ದ್ರವ ಸೋರುತ್ತಿದ್ದಂತೆ…
ಸಾವು ಇನ್ನು ದೂರವಿಲ್ಲ ಬಿಡಿ.
ನಮ್ಮ ಗುಂಪಿನಲ್ಲಿದ್ದವರು ಸಾಯ್ತಾ ಹೋದರು. ನೀವು ಬೆಳಗ್ಗೆ ಎದ್ದಾಗ ನಿಮ್ಮ ಪಕ್ಕದಲ್ಲಿದ್ದ ವ್ಯಕ್ತಿ ಸತ್ತಿದ್ದರೆ ನೀವು ಈ ಕೆಳಗಿನಂತೆ ತಂಡನಾಯಕನಿಗೆ ವರದಿ ಮಾಡಬೇಕು: `ತಂಡ-ನಾಯಕರೆ, ಇಂಥ ವ್ಯಕ್ತಿ ಸತ್ತಿದ್ದಾನೆ.’ ಅಷ್ಟೆ. ನೀವು `ಓಹ್! ತಂಡನಾಯಕರೆ, ಇನ್ನೊಬ್ಬ ಸತ್ತ!’ ಎಂದು ಹೇಳಕೂಡದು. ೧೯೬೦ರ ದಶಕದಲ್ಲಿ ಕ್ಯಾಂಪುಗಳಲ್ಲಿ ಇಲ್ಲದವರಿಗೆ ಈ ಭಾಷಾ-ಸೂಕ್ಷ್ಮತೆ ಅರ್ಥವಾಗೋದೇ ಇಲ್ಲ ಬಿಡಿ.
ಇಂಥ ವ್ಯತ್ಯಾಸವನ್ನು ವಿವರಿಸಬಲ್ಲಂಥವರೂ ಅವರೇ, ಬುದ್ಧಿಜೀವಿಗಳು. ನೀವು `ಇನ್ನೊಬ್ಬ’ ಎಂದರೆ ಅದು ನಿಮ್ಮ ವಿರುದ್ಧ ಬಳಸಬಹುದಾದ ಭಾಷಾ ಅಸ್ತ್ರ. ಅದರ ತೀರಾ ಸರಳ ಬಳಕೆ ಅಂದ್ರೆ ತಂಡನಾಯಕನಿಗೆ ಈ ಬಗ್ಗೆ ವರದಿ ಮಾಡೋದು. ತೀವ್ರ ಬಳಕೆ ಅಂದ್ರೆ ನಿಮ್ಮ ಟೀಕೆಗೆ ಅಕಾರಿಗಳು ಸಿದ್ಧತೆ ನಡೆಸ್ತಾರೆ.
`ನೀನು “ಇನ್ನೊಬ್ಬ ಸತ್ತ!” ಅಂದ್ಯ? ಹಾಗಂದ್ರೆ ಏನಪ್ಪಾ? ಒಬ್ಬ ಸತ್ರ ಒಬ್ಬ ಸತ್ತ ಅಂತ ಅಷ್ಟೆ. ಯಾಕೆ ಇನ್ನೊಬ್ಬ ಅಂತ ಸೇರಿಸ್ತೀಯ? ಇಲ್ಲಿರೋ ಪರಿಸ್ಥಿತೀನ ನೀನು ಬಣ್ಣಿಸ್ತಾ ಇದೀಯ? ನೀನು ಸತ್ತ ಇನ್ನೊಬ್ಬನ ಬಗ್ಗೆ ಮಾತ್ರ ಯಾಕೆ ಕಾಳಜಿ ವಹಿಸ್ತೀಯ? ಸುಧಾರಣೆ-ಯಾದ ಇನ್ನೊಬ್ಬನ ಬಗ್ಗೇನೂ ಯಾಕೆ ಕಾಳಜಿ ಹರಿಸಬಾರದು?’
`ನೀನು ಹೊರಗೆ ಗುಲಾಬಿ ವರ್ಣಲೇಪಿತ ಕನ್ನಡಕ ಹಾಕಿಕೊಂಡಿದೀಯ. ನೀನು ಸಮಾಜವಾದದ ಕಪ್ಪುಮುಖವನ್ನಷ್ಟೇ ಆರಿಸ್ಕೊಂಡಿದೀಯ. ಈಗ ಕಾರ್ಮಿಕ ಸುಧಾರಣಾ ಶಿಬಿರದಲ್ಲಿದ್ದೂ ನೀನು ಹಳೆಯ ಗುಣಗಳನ್ನು ಬದಲಿಸಿಕೊಳ್ಳಲಿಲ್ಲ. ನೀನು ಖೈದಿಗಳ ಮಧ್ಯೆ ಉದ್ವಿಗ್ನತೆ ಉಂಟು ಮಾಡೋದಕ್ಕೆ ಪ್ರಯತ್ನಿಸ್ತಿದ್ದೀಯ… ಹೇಳು! ಹಾಗಲ್ವ?’
ನೀವು ನಿಮ್ಮ ಪಕ್ಕ ಸತ್ತವನನ್ನು ಸಾರಾಸಗಟಾಗಿ ಮರೆತೇಬಿಡಬೇಕು. ಮುಂದಿನ ಸಲ `ಇನ್ನೊಬ್ಬ’ ಸತ್ತಾಗ, ಆತನೇ ಹಾಗೆ ಸತ್ತವರಲ್ಲಿ ಮೊದಲನೇಯವನು ಅಂತ ಭಾವಿಸಬೇಕು. ಕ್ಯಾಂಪಿನಲ್ಲಿ ಎಷ್ಟೇ ಜನ ಸತ್ರೂ ಅವರೆಲ್ಲ ಒಬ್ಬರೇ.
ಬುದ್ಧಿಜೀವಿ ಖೈದಿಗಳು ತಮ್ಮವರನ್ನೇ ನಡೆಸಿಕೊಳ್ತಿದ್ದ ರೀತಿ ತಂಡನಾಯಕರಿಗಿಂತ ಕ್ರೂರವಾಗಿತ್ತು. ಖೈದಿಯೊಬ್ಬ  ತನ್ನೆಲ್ಲ ಶ್ರಮ ಹಾಕಿ ಕೆಲಸ ಮಾಡ್ತಾನೋ ಇಲ್ವೋ ಅಂತ ತಂಡನಾಯಕ ನೋಡ್ತಿರ್‍ಲಿಲ್ಲ. ಆತ ನಿಧಾನವಾಗಿ ಅಥವಾ ವೇಗವಾಗಿ ಕೆಲಸ ಮಾಡೋದಷ್ಟೇ ಮುಖ್ಯವಾಗಿತ್ತು. ಆದರೆ ಈ ಬುದ್ಧಿಜೀವಿಗಳು ಮಾತ್ರ ಭಾಷೆಯಲ್ಲೂ ದೋಷ ಕಂಡು-ಹಿಡೀತಿದ್ರು. ಅತ್ಯಂತ ಕ್ರೂರ ತಂಡನಾಯಕನೂ ತಪ್ಪಿತಸ್ಥ ಖೈದಿಗೆ ಒದೀತಿದ್ದ ಅಥವಾ ಹೊಡೀತಿದ್ದ, ಅಷ್ಟೆ. ಅಥವಾ ಇನ್ನೊಬ್ಬ ಕ್ರಿಮಿನಲ್ ಖೈದಿಗೆ ಒದೀಲಿಕ್ಕೆ ಹೇಳ್ತಿದ್ದ. ಅದಕ್ಕೂ ಹೆಚ್ಚು ಅಂದ್ರೆ `ಫೋಟೋಗ್ರಾಫ್’ ಮಾಡ್ತಿದ್ದ.
ಆದರೆ ಬುದ್ಧಿಜೀವಿಗಳಿಗೆ ಒದೆತವಾಗ್ಲೀ, ಹೊಡೆತವಾಗ್ಲೀ ಅಂಥ ಹೆದರಿಕೆ ಹುಟ್ಟಿಸ್ತಿರ್‍ಲಿಲ್ಲ. ಅವರು ಹೆದರ್‍ತಿದ್ದದ್ದು ಪದಗಳಿಗೆ, ಲಿಖಿತ ದೂಷಣೆಗೆ !
ಒದೆತ ತಿಂದ ಮೇಲೆ ಬುದ್ಧಿಜೀವಿ ತನಗೇನೂ ಆಗೇ ಇಲ್ಲ ಅನ್ನೋ ಥರ ಎದ್ದು ಮೈ ಕೊಡವಿಕೊಂಡು ಹೋಗ್ತಿದ್ದ. ಅದೇ ಪದಗಳಾಗಿದ್ರೆ ತನ್ನನ್ನು ಯಾರೋ ಇರಿದೇ ಬಿಟ್ಟಿದಾರೆ ಎಂಬಂತೆ ಯಾತನೆ ಅನುಭವಿಸ್ತಿದ್ದ. ನಾಲ್ಕು ದಿನ ತಲೆ ಎತ್ತಿರ್‍ಲಿಲ್ಲ. ಆರು ವರ್ಷಗಳ ನಂತರ ಸಾಂಸ್ಕೃತಿಕ ಕ್ರಾಂತಿಯಲ್ಲಿ ಇವರೆಲ್ಲ ಸಾವಿಗಿಂತ ಹೆಚ್ಚಾಗಿ ಟೀಕೆಗೇ ಹೆದರ್‍ತಿದ್ರು ಎಂಬ ಅಂಶ ಖಚಿತವಾಯ್ತು.
ಕ್ರಿಮಿನಲ್‌ಗಳೂ ಟೀಕೆಗೆ ಹೆದರೋರೇ. ಆದರೆ ಟೀಕಿಸೋರನ್ನು ಅವರು ಸರಿಯಾಗಿ ವಿಚಾರಿಸ್ಕೋತಿದ್ರು. ಬುದ್ಧಿಜೀವಿಯೇನಾದ್ರೂ ಟೀಕೆ ಮಾಡಿದ್ರೆ, ಸರಿ! ಹೇಗೂ ಕೆಲಸ ಮಾಡೋ-ದಕ್ಕೆ ಹೊಲಕ್ಕೆ ಬರ್‍ತಾನಲ್ಲ….!
`ಬಡ್ಡಿಮಗನೆ! ಕೊಳಕು ದ್ರೋಹಿ ಸೂಳೆಮಗನೆ! ನೀನು ಟೀಕೆಗೆ ಸಿಕ್ಕಾಗ ನೀನು ಸತ್ತುಹೋಗೋ ಹಾಗೆ ನೋಡ್ಕೋತೀನಿ!’
ಇವರೆಲ್ಲ ಅಸ್ಥಿಪಂಜರಗಳ ಥರಾನೇ ಇದ್ರು ಅನ್ನೋದು ನಿಜ. ಆದರೆ ಅವರು ಕೆಲಸ ಮಾಡಬೇಕೆಂದೇ ಹುಟ್ಟಿದವರು. ನೀವು ಅವರ ಜೊತೆ ಚೆನ್ನಾಗಿದ್ರೆ ನಿಮ್ಮ ಮಣ್ಣಿನ ಮುದ್ದೆಗಳನ್ನು ಎತ್ತಿ ನಿಧಾನವಾಗಿ ನಿಮ್ಮ ಹೆಗಲ ಮೇಲೆ ಇಡ್ತಾರೆ.
`ಹ್ಯಾಗಿದೆ? ಸಣ್ಣ ಕಜ್ಜಿ  ತುರಿಸಿಕೊಂಡ ಹಾಗೆ ಇದೆ ಅಲ್ವ?’
ಅಕಸ್ಮಾತ್ ನೀವೇನಾದ್ರೂ ಅವನಿಗೆ ಸಿಟ್ಟಿ ತರಿಸಿದ್ರೋ, ಟೀಕೆ ಮಾಡಿದ್ರೋ…. ಕ್ಷಮಿಸಿ! ಮುದ್ದೇನ ಎತ್ತಿ ಕೆಳಗೆ ಒಗೀತಾನೆ. ಇನ್ನೂ ಹೆಚ್ಚಿನ ಶಿಕ್ಷೆ ಅಂದ್ರೆ ನಿಮ್ಮ ಬೆನ್ನುಮೂಳೆಗಳು ದೇಹದಿಂದ ಹೊರಗೆ ಚಾಚೋ ಹಾಗೆ ಮಾಡ್ತಾರೆ.
ಇನ್ನೂ ಕೆಲವು ಕ್ರಿಮಿನಲ್‌ಗಳು ನಿಮ್ಮ ಕುಟುಂಬ ಕಳಿಸಿದ ಆಹಾರ ನಿಮಗೆ ಸಿಗದೇ ಇರೋ ಹಾಗೆ ನೋಡ್ಕೋತಾರೆ. ಕೆಲವೊಮ್ಮೆ ಅವು ಕಳವಾಗುತ್ವೆ. ಅದನ್ನು ಪ್ರಶ್ನೆ ಮಾಡಿದ್ರೆ ಕ್ರಿಮಿನಲ್ ಬಾಯಿ ತೆರೀತಾನೆ. ಅವನ ಬಾಯಲ್ಲಿ ನಿಮ್ಮ ಆಹಾರದ ಚೂರುಗಳು ಮಂದಹಾಸ ಬೀರು-ತ್ತವೆ.
ಬುದ್ಧಿಜೀವಿಗಳು ಸಾವಿಗೆ ಹೆದರದೇ ಇದ್ದಿದ್ರಿಂದ ಅವರೇ ಹೆಚ್ಚು ಸಂಖ್ಯೆಯಲ್ಲಿ ಸತ್ತರು. ಕ್ರಿಮಿನಲ್ ಹಾಗಲ್ಲ. ಸಾಯ್ತಿದೇನೆ ಎಂದು ಅನ್ನಿಸಿದ್ರೆ ಮಲಗೇಬಿಡ್ತಾನೆ. ಕೆಲಸಕ್ಕೆ ಹೋಗಲ್ಲ. ಹೀಗೆ ನಾಯಿ ಥರ ನಟಿಸೋರ ಬಗ್ಗೆ ಏನೂ ಮಾಡಕ್ಕಾಗಲ್ಲ. `ಒಳ್ಳೆಯವನು ಸೋಮಾರಿಗೆ ಹೆದರ್‍ತಾನೆ. ಸೋಮಾರಿ ಭಿಕಾರಿಗೆ ಹೆದರ್‍ತಾನೆ. ಭಿಕಾರಿ ಮಾತ್ರ ಮುಖದ ಬಗ್ಗೆ ಎಚ್ಚರಿಕೆ ಇಲ್ಲದವನಿಗೆ ಹೆದರ್‍ತಾನೆ !’
ಬುದ್ಧಿಜೀವಿಗಳು ಮುಖದ ಬಗ್ಗೆ ಜಾಗ್ರತೆ ವಹಿಸ್ತಾರೆ. ಅವರು ಕ್ರಿಮಿನಲ್‌ಗಳಿಗಿಂತ ಕಡಿಮೆ ಸ್ತರದವರು ಎಂದು ಒಪ್ಕೋತಾರೆ. ಕ್ರಿಮಿನಲ್‌ಗಳು ಕೊನೇಪಕ್ಷ ಮನುಷ್ಯರು. ಆದ್ರೆ ಇವರೆಲ್ಲ ಮನುಷ್ಯರಾಗಿರೋ ಹಕ್ಕನ್ನೂ ಕಳಕೊಂಡಿದಾರಲ್ಲ?
ಮುಖ್ಯ ಕ್ಯಾಂಪಿಗೆ ಬಂದ ಮೇಲೆ ಏನಾಗುತ್ತೆ ಅನ್ನೋ ಕುತೂಹಲ ಎಲ್ಲರಿಗೂ ಬಂತು. ಅಲ್ಲಿ ಸಹಜವಾಗೇ ತಿನ್ನೋದಕ್ಕೆ ಒಳ್ಳೆ ಆಹಾರ ಸಿಗಬಹುದು. ಪ್ರತಿಯೊಬ್ಬರೂ ಬೆನ್ನ ಮೇಲೆ ತಮ್ಮ ತಮ್ಮ ಲಗೇಜನ್ನು ಹೊತ್ತುಕೊಂಡು ನಡೆದರು. ಹೆಚ್ಚು ಲಗೇಜು ಇದ್ದವರು ಅಂದ್ರೆ ಇನ್ನೂ ಅವರ ದೇಹ ಪೂರ್ತಿ ಶಿಥಿಲವಾಗಿಲ್ಲ ಅಂತ ಅರ್ಥ.  ಸಾಮಾನ್ಯವಾಗಿ ಲಗೇಜು ಅಂದ್ರೆ ತಿಂದ ಮೇಲೆ ಉಳಿದದ್ದು. ದೇಹ ಚೆನ್ನಾಗಿದ್ದವರು ಇನ್ನೂ ಆಹಾರದ ವ್ಯಾಪಾರ ಶುರು ಮಾಡಿರಲ್ಲ.
ನನ್ನ ಹತ್ರ ಇನ್ನೂ ಒಂದು ಚರ್ಮದ ಸೂಟ್‌ಕೇಸ್ ಇತ್ತು. ನಾನು ನನ್ನ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡೆ. ನನ್ನ ಮಟ್ಟಿಗೆ ಇವೆಲ್ಲ ಖಾದ್ಯವಸ್ತುಗಳು. ಅವಕ್ಕೆ ನನ್ನ ಜೀವಮಾನವನ್ನು ವಿಸ್ತರಿಸೋ ಶಕ್ತಿ ಇದೆ.
ಮುಖ್ಯ ಕ್ಯಾಂಪನ್ನು ಗುರುತಿಸೋದು ಅಂಥ ಕಷ್ಟವೇನಲ್ಲ. ಅಲ್ಲಿ ಮಣ್ಣಿನ ಕಟ್ಟಗಳು ಕಾಣ್ತಾ ಇವೆ ನೋಡಿ.

Leave a Reply