Chapter 1

ಹೆದರಿಕೆಯೊಂದೇ ವಾಸ್ತವ

ಆತ ನಾಲ್ಕನ್ನು ತೆಗೆದುಕೊಳ್ಳುತ್ತಿದ್ದಾನೆಯೆ? ಸಾವಿನತ್ತ  ಹೆಜ್ಜೆ ಹಾಕಿದ್ದಾನೆಯೆ?
ಆ ಉದ್ದ, ಸಣಕಲ ಭಿಕ್ಷು  ಐನೂರಡಿ ಕೋಡುಗಲ್ಲಿನ ತುಟಿಯ ಮೇಲೆ ತೂಗಾಡುತ್ತಿದ್ದಾನೆ. ಹಿಮಾಲಯದ ಕಟು ಗಾಳಿಯೊಂದೇ ಅವನಿಗೆ ತಡೆ. ಅವನನ್ನು ಇನ್ನೂ ನಿರುಕಿಸಿ ನೋಡಲು ಶಾನ್ ತಾವೋ ಯುನ್ ಕಣ್ಣು  ಮಾಲಿಸಿದ. ಹೃದಯ ಝಲ್ಲೆಂದಿತು. ಸಾಯಲು ಹೊರಟವ ಗೆಳೆಯ ತ್ರಿನ್ಲೆ.
ಶಾನ್‌ನ ಪಾದಗಳು ಇನ್ನೆಂದೂ ಕೀಟಗಳನ್ನು ಮೆಟ್ಟದಂತೆ ಬೆಳಿಗ್ಗೆಯಷ್ಟೇ ಪಾದದ ಮೇಲೆ ಪ್ರಾರ್ಥನೆಯನ್ನು ಉಸುರಿದ್ದ ವಿನಯವಂತ ಭಿಕ್ಷು!
ಶಾನ್ ಕೈಗಾಡಿಯನ್ನು ಬದಿಗೆ ತಳ್ಳಿ ಓಡಿದ.
ತ್ರಿನ್ಲೆ ಕೋಡುಗಲ್ಲಿನ ಆಚೆ ಬಾಗಿದಂತೆ ಮೇಲುಗಾಳಿ ಅವನನ್ನು ಹಿಂದೆ ತಳ್ಳಿತು.ಕುತ್ತಿಗೆಯ ಸುತ್ತ ಗುಪ್ತವಾಗಿ ಧರಿಸಿದ್ದ ಖಾತಾ ಹಾರಿತು. ಹಾರೆ, ಗುದ್ದಲಿ ಹಿಡಿದಿದ್ದವರನ್ನು ದಾಟಿ ಓಡಿದ ಶಾನ್ ಗರಸಿಗೆ ಎಡವಿ ಬಿದ್ದ. ಹಿಂದಿನಿಂದ ತೂರಿ ಬಂದ ಸೀಟಿ. ಒಂದು ಅಸಹನೆಯ ಕಿರುಚಾಟ. ತ್ರಿನ್ಲೆ ಆ ಕೊಳಕು ಬಿಳಿ ಶಾಲನ್ನು ಹಿಡಿಯಲು ಯತ್ನ ನಡೆಸಿದ್ದಾನೆ. ಆದರೆ ಶಾಲಿನ ಜೊತೆ ಆಟ ಆಡಿದ ಗಾಳಿ ಅದನ್ನು ನೀಲಿ ಆಗಸಕ್ಕೆ ಹಾರಿಸಿದೆ. ಖೈದಿಗಳು ಅದನ್ನೇ  ನೋಡುತ್ತ ನಿಂತಿದ್ದಾರೆ. ಅವರ ಕಣ್ಣುಗಳಲ್ಲಿ ಮಿಂಚಿದ್ದು ಅಚ್ಚರಿಯಲ್ಲ, ಗೌರವ. ಪ್ರತಿಯೊಂದೂ ಕ್ರಿಯೆಗೆ ಅರ್ಥ ಇದೆ ಎಂದು ಅವರಿಗೆ ಗೊತ್ತಿದೆ. ಅದರಲ್ಲೂ ಪ್ರಕೃತಿಯ ಅನಿರೀಕ್ಷಿತ ಕ್ರಿಯೆಗಳಿಗೆ ಅತೀ ಹೆಚ್ಚು ಅರ್ಥ ಇದೆ ಎಂಬುದು ಅವರ ಅಚಲ ನಂಬಿಕೆ.
ಕಾವಲುಗಾರರು ಮತ್ತೆ ಕಿರುಚಿದರು. ಆದರೆ ಯಾರೂ ಕೆಲಸಕ್ಕೆ ಮರಳುತ್ತಿಲ್ಲ. ಸೌಂದರ್ಯದ ಒಂದು ಅತ್ಯುತ್ತಮ ಕ್ಷಣವನ್ನು ತಪ್ಪಿಸಿಕೊಳ್ಳಲು ಸಾಧ್ಯವೆ?
ಕೋಬಾಲ್ಟ್  ನೀಲಿ ಬಣ್ಣದ ಆಕಾಶದಲ್ಲಿ ಬಿಳಿ ಬಟ್ಟೆ ಹಾರುತ್ತಿದೆ. ಕೆಲಸ ಬಿಟ್ಟು ಒಂದು ನಿಮಿಷ ಕಳೆದರೂ ಖಂಡಿತ ಶಿಕ್ಷೆ. ಅದನ್ನೂ ಕಡೆಗಣಿಸಿ  ಜೋತುಬಿದ್ದ ಇನ್ನೂರು ಮುಖಗಳು ಯಾವುದೋ ಸಂದೇಶಕ್ಕಾಗಿ ಎನ್ನುವಂತೆ ಆಕಾಶದೆಡೆಗೆ ಮುಖ ಮಾಡಿವೆ. ಟಿಬೆಟಿನಲ್ಲಿ ಇಂಥ ಕ್ಷಣಗಳನ್ನು ನಿರೀಕ್ಷಿಸಲೇಬೇಕು ಎಂಬುದು ಶಾನ್‌ಗೂ ಗೊತ್ತು.
ಆದರೆ ಕೋಡುಗಲ್ಲಿನ ಅಂಚಿನಲ್ಲಿ ವಾಲಾಡುತ್ತಿದ್ದ ತ್ರಿನ್ಲೆ  ಮತ್ತೆ ಕೆಳಗೆ ಅದೇ ತಣ್ಣಗಿನ ನಿರೀಕ್ಷಿತ ನೋಟ ಬೀರಿದ್ದಾನೆ. ಬೇರೆಯವರೂ ಈ ರೀತಿ ಸಾವಪ್ಪುವುದನ್ನು ಶಾನ್ ಕಂಡಿದ್ದಾನೆ. ಅವರ ಮುಖಗಳಲ್ಲೂ ಹೀಗೆಯೇ ನಿರೀಕ್ಷೆಗಳಿದ್ದವು. ಈ ಸಾವು ಸಾಮಾನ್ಯವಾಗಿ ಹಠಾತ್ತ್ತಾಗಿ ಹೀಗೆಯೇ ಘಟಿಸುತ್ತದೆ. ಯಾರಿಗೂ ಕೇಳಿಸದ ಅದೃಶ್ಯ ವಾಣಿಯ ಶಕ್ತಿಗೆ ಬಾಗಿದಂತೆ.
ಆತ್ಮಹತ್ಯೆ ಮಹಾಪಾಪ. ಮುಂದಿನ ಜನ್ಮದಲ್ಲಿ ಕೆಳಮಟ್ಟದ ಹುಟ್ಟು ಶತಃಸಿದ್ಧ. ಆದರೆ….
ಚೀನೀಯರ ಕಠಿಣ ಕಾರ್ಮಿಕ ತಂಡದಲ್ಲಿ ಎರಡು ಕಾಲುಗಳಲ್ಲಿ ಬದುಕುವುದಕ್ಕಿಂತ ಮುಂದಿನ ಜನ್ಮದಲ್ಲಿ ನಾಲ್ಕು ಕಾಲುಗಳ ಬದುಕಿಗೆ ಮೊರೆ ಹೋಗುವುದು ನಿಜಕ್ಕೂ ಆಕರ್ಷಕ ! ಆಮಿಷ ತರುವ ಆಯ್ಕೆ!
ತ್ರಿನ್ಲೆ ಆ ಕೊರಕಲಿನತ್ತ ಬಾಗುತ್ತಿದ್ದಂತೆ ಶಾನ್ ಅವನ ತೋಳನ್ನು ಹಿಡಿಯಲು ಮುಂದೆ ಹಾರಿದ. ಆಗಲೇ ಶಾನ್‌ಗೆ ಗೊತ್ತ್ತಾಗಿದ್ದು ; ತ್ರಿನ್ಲೆ ಸಾಯಲು ಹೊರಟಿಲ್ಲ! ಆ ಭಿಕ್ಷು ಏನನ್ನೋ ನೋಡುತ್ತಿದ್ದಾನೆ. ಆರು ಅಡಿಗಳ ಕೆಳಗೆ, ಸ್ವಾಲೋ ಹಕ್ಕಿಯ ಗೂಡಿಗಷ್ಟೆ ಇರುವ ಇಕ್ಕಟ್ಟಿನ ಜಾಗದಲ್ಲಿ ಚಿನ್ನದಂತೆ ಹೊಳೆಯುವ ವಸ್ತು ಕಾಣುತ್ತಿದೆ.
ಒಂದು ಸಿಗರೇಟ್ ಲೈಟರ್.
ಖೈದಿಗಳಲ್ಲಿ ಹರಿದದ್ದು ಉದ್ವೇಗದ ಗೊಣಗಾಟ. ಶಾಲು ಈಗ ಹಾರುತ್ತ ಹಾರುತ್ತ ಕೆಳಗಿಳಿಯುತ್ತಿದೆ.ರಸ್ತೆ  ಕಾರ್ಮಿಕರ ಮುಂದೆ ಐವತ್ತಡಿ ದೂರದಲ್ಲಿ ಇರುವ ಇಳುಕಲಿಗೆ ಬೀಳುತ್ತಿದೆ.
ಅವರಲ್ಲಿ ಕಾವಲುಗಾರರೂ ಇದ್ದಾರೆ. ಇನ್ನು ಕೈಗೆ ಲಾಠಿ ತೆಗೆದುಕೊಳ್ಳುವುದೇ ವಾಸಿ. ಶಾಲನ್ನು ನೋಡುತ್ತ ತ್ರಿನ್ಲೆ ಅಂಚಿನಿಂದ ಹಿಂದಕ್ಕೆ ಬಾಗಿದ. ಶಾನ್ ತನ್ನ ಕೈಗಾಡಿಯತ್ತ ನೋಟ ಬೀರಿದ. ಸಾರ್ಜೆಂಟ್ ಫೆಂಗ್ ಸೀಳುಗಲ್ಲಿನ ಬಳಿ ನಿಂತು ಟಿಪ್ಪಣಿ ಬರೆದುಕೊಳ್ಳುತ್ತಿದ್ದಾನೆ. ನಿಧಾನಿಯಾದರೂ ಸದಾ ಜಾಗರೂಕ ಮನುಷ್ಯ.
ರಸ್ತೆಗಳನ್ನು ಕಟ್ಟುವುದು ಸಮಾಜವಾದದ ಸೇವೆ. ಕೆಲಸ ಮಾಡುವುದನ್ನು ನಿಲ್ಲಿಸುವುದು ಜನತೆಯ ವಿರುದ್ಧ ಮಾಡುತ್ತಿರುವ ಮತ್ತೊಂದು ಅಪರಾಧ.
ಫೆಂಗ್ ಬೈಯಲು ತಯಾರಾಗುತ್ತಿದ್ದಾನೆ. ಶಾನ್ ಹಿಂದೆ ಸರಿಯಲು ಹೊರಟಂತೆಯೇ ಮೇಲಿನಿಂದ ಮತ್ತೆ ಕಿರುಚಾಟ. ಶಾಲನ್ನು ತೆಗೆದುಕೊಳ್ಳಲು ಇಬ್ಬರು ಖೈದಿಗಳು ಹೋಗಿದ್ದರು. ಶಾಲು ಬಿದ್ದ ಕಲ್ಲಿನ ರಾಶಿಯತ್ತ ಅವರು ಹೋಗಿದ್ದರಷ್ಟೆ. ಅವರು ಹಿಂದೆ ಸರಿದು ಮಂಡಿ ಊರಿದ್ದಾರೆ. ನಡುಗುತ್ತ ಮಂತ್ರೋಚ್ಛಾರಣೆ ಆರಂಭಿಸಿದ್ದಾರೆ. ಅದು ಹಿಂದೆ ನಿಂತಿದ್ದ ಖೈದಿಗಳನ್ನು ಗಾಳಿಯ ಅಲೆಯಂತೆ ಅಪ್ಪಳಿಸುತ್ತಿದೆ. ಅದನ್ನು ಕೇಳಿದ ತತ್‌ಕ್ಷಣವೇ ಪ್ರತಿಯೊಬ್ಬನೂ ಮಂಡಿ ಊರಿ ಕುಳಿತಿದ್ದಾನೆ. ಅದೇ ಮಂತ್ರವನ್ನು ಪುನರುಚ್ಚರಿಸಲು ಆರಂಭಿಸಿದ್ದಾನೆ. ಸೇತುವೆಯ ಕೆಳಗಿನ ಟ್ರಕ್ಕುಗಳ ಬಳಿ ಇದ್ದ ಖೈದಿಗಳವರೆಗೂ ಈ ಮಂತ್ರೋಚ್ಛಾರಣೆಯ ಅಲೆ ಹಬ್ಬಿತು. ಶಾನ್ ಸೇರಿದಂತೆ ಇಡೀ ತಂಡದಲ್ಲಿದ್ದ  ನಾಲ್ವರು ಹಾನ್ ಚೀನೀಯರು ಮಾತ್ರ ಸುಮ್ಮನೆ ನಿಂತಿದ್ದಾರೆ.
ಫೆಂಗ್ ಸೀಟಿ ಊದುತ್ತ ಮುಂದೆ ಧಾವಿಸಿದ. ಮಂತ್ರದ ಬಗ್ಗೆ ಶಾನ್‌ಗೆ ಗೊಂದಲ. ಅಲ್ಲಿ ಆತ್ಮಹತ್ಯೆ ನಡೆದಿಲ್ಲ. ಆದರೆ ಮಂತ್ರದ ಪದಗಳು ಸ್ಪಷ್ಟ.
ಅದು ಬಾರ್ದೋ ಸ್ಮರಣೆ!
ಸಾವಿನ ಘಳಿಗೆಯಲ್ಲಿ ಉಚ್ಚರಿಸುವ ಮಂತ್ರದ ಮೊದಲ ಚರಣ.
ನಾಲ್ಕು ಪಾಕೀಟುಗಳ ಜಾಕೆಟ್ ಅಂಗಿ ತೊಟ್ಟ ಆ ಸೈನಿಕ ಗುಡ್ಡ ಹತ್ತಿದ. ಅವನ ಉಡುಗೆ ಎಂದರೆ ಪೀಪಲ್ಸ್ ಲಿಬರೇಶನ್ ಆರ್ಮಿಯ ಸಾಮಾನ್ಯ ಲಕ್ಷಣ. ಅವನೇ ಲೆಫ್ಟಿನೆಂಟ್ ಚಾಂಗ್. ಆತ ಫೆಂಗ್ ಕಿವಿಯಲ್ಲಿ ಏನೋ ಉಸುರಿದ. ಟಿಬೆಟನ್ನರು ಹುಡುಕಿದ್ದ ಕಲ್ಲಿನ ರಾಶಿಯನ್ನು ಸರಿಸಲು ಸಾರ್ಜೆಂಟ್ ಫೆಂಗ್ ಅಲ್ಲಿದ್ದ ಹಾನ್ ಖೈದಿಗಳಿಗೆ ಆದೇಶಿಸಿದ. ಖಾತಾ ಬಿದ್ದಿದ್ದಲ್ಲಿಗೆ ಶಾನ್ ಮುನ್ನುಗ್ಗಿದ. ಹಾಗೇ  ಜಿಲಿನ್ ಪಕ್ಕದಲ್ಲಿ ಬಗ್ಗಿದ.
ಜಿಲಿನ್…. ಅದೇ ಹೆಸರಿನ ಪ್ರಾಂತದಿಂದ ಬಂದವನು. ಬಲಶಾಲಿ ಮಂಚೂರಿಯನ್.
ಶಾನ್ ತನ್ನ ಸ್ಕಾರ್ಫನ್ನು ಬದಿಗೆ ಸರಿಸಿದಂತೆ ಜಿಲಿನ್ ಮುಖದಲ್ಲಿ ನಾನಿದನ್ನು ನಿರೀಕ್ಷಿಸಿದ್ದೆ ಎಂಬ ಭಾವ. ಹೊಸ ಶಕ್ತಿ ಬಂದಂತೆ ಆತ ಕಲ್ಲುಬಂಡೆಗಳನ್ನು ದಾಟುತ್ತ ನಡೆದ.
ಯಾವಾಗಲೂ ಅತಿದೊಡ್ಡ ಕಲ್ಲುಬಂಡೆಗಳನ್ನು ,ಸಡಿಲವಾದ ಕಲ್ಲುಗಳನ್ನು ಸರಿಸುವ ಕೆಲಸವನ್ನೇ ಮಾಡುವ ಮುಂಚೂಣಿ ಕಾರ್ಯತಂಡಕ್ಕೆ ಹೀಗೆ ಅನಿರೀಕ್ಷಿತವಾದ ಸಂಗತಿಯನ್ನು ಎದುರಿಸುವುದು ಅಸಾಮಾನ್ಯವೇನೂ ಅಲ್ಲ. ಪಿ ಎಲ್ ಎ ಯ  ಎಂಜಿನಿಯರುಗಳು ಸಮೀಕ್ಷೆ ಮಾಡಿದ ದಾರಿಗಳಲ್ಲಿ ಯಾಕ್‌ನ ತಲೆಬುರುಡೆ ಅಥವಾ ಎಸೆದ ಮಡಕೆಗಳನ್ನು ಇವರೆಲ್ಲರೂ ಯಾವಾಗಲೂ ಕಾಣುತ್ತಾರೆ. ರಣಹದ್ದುಗಳಿಗೆ ಸತ್ತವರ ಹೆಣಗಳನ್ನು ಆಹಾರವಾಗಿ ಇಡುವ ಪದ್ಧತಿ ಇನ್ನೂ ಜೀವಂತವಿದ್ದ ನೆಲದಲ್ಲಿ ಮನುಷ್ಯರ ಮಾಂಸದ ಚೂರುಗಳನ್ನು  ಕಾಣುವುದೂ ಅಸಾಮಾನ್ಯವಲ್ಲ.
ಅಲ್ಲಿದ್ದ ರಾಶಿಯಲ್ಲಿ ಅರ್ಧ ಸುಟ್ಟಿದ್ದ ಸಿಗರೇಟಿನ ತುಂಡೊಂದು ಕಾಣಿಸುತ್ತಿದೆ. ಸಡಗರದಿಂದ ಇನ್ನಷ್ಟು ಕೆರೆದ ಜಿಲಿನ್‌ಗೆ  ಕಂಡದ್ದು ಫಳ ಫಳ ಹೊಳೆಯುತ್ತಿದ್ದ ಬೂಟುಗಳ ಒಂದು ಜೊತೆ. ಶಾನ್ ಬೆನ್ನು ತಿರುಗಿಸಿ ನೋಡತೊಡಗಿದ. ಲೆಫ್ಟಿನೆಂಟ್ ಚಾಂಗ್‌ನ ಚಹರೆ ಈಗ ಅಪಾಯಕಾರಿ ಮಟ್ಟ ತಲುಪಿದೆ. ಅವನ ಕೈ ಸೊಂಟದ ಮೇಲಿದ್ದ ರಿವಾಲ್ವರಿನ ಬಳಿ ಹೋಗಿದೆ. ತುಟಿಯಲ್ಲೇ ಕೊನೆ ಕಂಡ ಒಂದು ಕಿರುಚಾಟ.ಚಾಂಗ್ ಸೀದಾ ಫೆಂಗ್ ಪಕ್ಕಕ್ಕೆ ಸರಿದ.
ಈಗ ಜನತೆಯ ೪೦೪ನೆಯ ತಂಡವು ರಣಹದ್ದುಗಳನ್ನು ಓಡಿಸಿದೆ.
ಕಲ್ಲುಗಳಿಂದ ಆ ದೇಹ ಸುತ್ತುವರೆದಿತ್ತು. ಅದರ ಶೂಗಳು ನಿಜಕ್ಕೂ ಚರ್ಮದಿಂದ ಮಾಡಿದ್ದು. ಪಾಶ್ಚಾತ್ಯ  ಫ್ಯಾಶನ್ನಿನ ಸಂಕೇತ. ವಿ ಆಕಾರದ ಸ್ವೆಟರ್. ಅದರ ಒಳಗೆ ಆಗ ತಾನೇ ದೋಭಿ ತಂದು ತೊಟ್ಟಂತಿದ್ದ ಬಿಳಿ ಅಂಗಿ ಮಿರುಗಿತು.
`ಅಮೆರಿಕನ್’, ಜಿಲಿನ್ ಆವಾಕ್ಕಾಗಿ ಪಿಸುಗುಟ್ಟಿದ. ಸತ್ತ ವ್ಯಕ್ತಿಯಲ್ಲ. ಆ ಅಂಗಿ ಚೀನಾದ್ದಲ್ಲ.
ಆತ ಹೊಸ ನೀಲಿ ಜೀನ್ಸ್ ತೊಟ್ಟಿದ್ದಾನೆ. ದರಿದ್ರ ಚೀನೀ ಡೆನಿಮ್ ಅಲ್ಲ. ಅಂಥ ಜೀನ್ಸ್‌ಗಳು ನಿಜಕ್ಕೂ ಪಾಶ್ಚಾತ್ಯ ದೇಶಗಳಿಂದ ಬಂದವು ಎಂದು ಬೀದಿ ವ್ಯಾಪಾರಿಗಳು ಮಾರುತ್ತಿದ್ದರು. ಇದು ಮಾತ್ರ ಅಮೆರಿಕದ ಕಂಪೆನಿಯದೇ. ಸ್ವೆಟರಿನ ಮೇಲೆ ಎನಾಮೆಲ್  ಕವಚವಿದ್ದ ಪಿನ್.  ಅದಕ್ಕೆ ಅಮೆರಿಕ ಮತ್ತು ಚೀನೀ ಧ್ವಜಗಳನ್ನು ಚುಚ್ಚಿದ್ದಾರೆ. ಹೊಟ್ಟೆಯ ಮೇಲೆ ಆತ ಕೈ ಕಟ್ಟಿ ಮಲಗಿದ್ದಾನೆ. ಅತಿಥಿಗೃಹದಲ್ಲಿ ಚಹಾಗೆ  ಕಾಯುತ್ತ ಧ್ಯಾನಸ್ಥನಾದ ಹಾಗೆ.
ಲೆಫ್ಟಿನೆಂಟ್ ಚಾಂಗ್ ಕೂಡಲೇ ಚೇತರಿಸಿಕೊಂಡ. `ಥತ್…. ಉಳಿದದ್ದು….’ ಚಾಂಗ್  ಮತ್ತೆ ಫೆಂಗ್‌ನನ್ನು  ತಳ್ಳುತ್ತ ಕ್ಯಾಕರಿಸಿದ… `ನಾನು ಮುಖ ನೋಡಬೇಕು.’
ಲೆಫ್ಟಿನೆಂಟ್ ಶಾನ್‌ನನ್ನು ಒದ್ದ. ತರಲೆ ಮಾಡುವ ನಾಯಿಗಳನ್ನು ಬದಿಗೆ ಸರಿಸುವಂತೆ. ಶಾನ್‌ನ ಪಕ್ಕದಲ್ಲೇ ಜಿಲಿನ್ ಹಠಾತ್ತಾಗಿ ತಲೆ ಹಿಡಿದುಕೊಂಡ. ಲೆಫ್ಟಿನೆಂಟ್ ಸಹನೆ ಮೀರಿತು. ಆಗತಾನೇ ಹೊರಕಂಡಿದ್ದ ಮೊಣಕಾಲನ್ನು ಹಿಡಿದ. ಫೆಂಗ್‌ನತ್ತ ಸಿಡುಕಿನಿಂದ ಕಣ್ಣು ಹಾಯಿಸುತ್ತ ಆ ದೇಹವನ್ನು ಕಲ್ಲಿನ ರಾಶಿಯಿಂದ ಎಳೆದ. ಚಾಂಗ್ ಮುಖದ ಬಣ್ಣವೇ ಬದಲಾಯಿತು. ಆತ ತಿರುಗಿ ನಿಂತು ವಾಕರಿಸಿದ.
ರುಂಡವೇ ಇಲ್ಲದ ದೇಹ !
`ಮೂರ್ತಿಪೂಜೆಯು ಸಮಾಜವಾದಿ ವ್ಯವಸ್ಥೆಯ ಮೇಲಿನ ಒಂದು ಆಕ್ರಮಣ’. ಸೇನೆಯ ಸೇವೆಯಿಂದ ಎಂದೋ ನಿವೃತ್ತವಾಗಿದ್ದ ಜರ್ಝರಿತ ಬೂದು ಟ್ರಕ್ಕುಗಳ ಗುಂಟ ಖೈದಿಗಳು ಸಾಗುತ್ತಿದ್ದಂತೆ ಒಬ್ಬ ಯುವ ಅಧಿಕಾರಿ ಬೊಗಳಿದ. `ಪ್ರತಿಯೊಂದು ಪ್ರಾರ್ಥನೆಯೂ ಜನರ ವಿರುದ್ಧದ ಒಂದು ಹೊಡೆತ’. ಬೂರ್ಜ್ವಾಶಾಹಿಯ ಸಂಕೋಲೆಯನ್ನು ಕಿತ್ತೊಗೆಯಿರಿ…ಶಾನ್ ತನ್ನೊಳಗೇ ಗುನುಗಿದ. ಅಥವಾ…. ಗತಕಾಲವನ್ನು ಗೌರವಿಸುವುದು ಪಾಪ…
` ಡ್ರೇಗನ್ ತಿಂದದ್ದು…’ ಖೈದಿಗಳ ಸಾಲಿನಿಂದ ಒಂದು ದನಿ ತೂರಿ ಬಂತು.
ಸುಮ್ಮನಿರುವಂತೆ ಎಲ್ಲಿಂದಲೇ ಒಂದು ಸೀಟಿ.
`ನೀವು ಕೆಲಸದ ಕೋಟಾ ಪೂರೈಸಲು ಸೋತಿದ್ದೀರಿ,’ ರಾಜಕೀಯ ಅಧಿಕಾರಿ ತನ್ನ ಗಡಸು ಕಂಠದಲ್ಲಿ ಮುಂದುವರೆಸಿದ.
ಅರೆ, ಹಿಂದೆಂದೂ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕಾಣದಂಥ ಒಂದು ಕೆಂಪು ಟ್ರಕ್ ಕಾಣುತ್ತಿದೆ. ಮಿನಿಸ್ಟ್ರಿ ಆಫ್ ಜಿಯಾಲಜಿ ಎಂದು ಅದರ ಬಾಗಿಲು ಹೇಳುತ್ತಿದೆ.
`ನೀವು ಜನತೆಗೆ ಅವಮಾನ ಮಾಡಿದ್ದೀರಿ. ನಿಮ್ಮ ಬಗ್ಗೆ ಕರ್ನಲ್ ತಾನ್ ಬಳಿ ದೂರಬೇಕಾಗುತ್ತೆ,’ ಅಧಿಕಾರಿಯ ಧ್ವನಿ ಆ ಘಟ್ಟದ ಇಳುಕಲಿನಲ್ಲಿ ಪ್ರತಿಧ್ವನಿಸಿತು.
ಯಾಕೆ? ಭೂಗರ್ಭ ಇಲಾಖೆಯ ವಾಹನ ಇಲ್ಲಿಗೆ ಬಂದಿದ್ದಾದರೂ ಯಾಕೆ? ಶಾನ್ ಅಚ್ಚರಿಪಟ್ಟ. `ಭೇಟಿಯ ಹಕ್ಕುಗಳನ್ನು ಅಮಾನತು ಮಾಡಲಾಗಿದೆ. ಎರಡು ವಾರಗಳ ಕಾಲ ಬಿಸಿ ಚಹಾ ರದ್ದು!  ಬೂರ್ಜ್ವಾಶಾಹಿಯ ಸಂಕೋಲೆಯನ್ನು ಕಿತ್ತೆಸೆಯರಿ. ಜನತೆಯ ಆಶೋತ್ತರಗಳನ್ನು ಕಲಿಯಿರಿ.’
`ನನ್ನ ಹಡು’, ಶಾನ್ ಹಿಂಭಾಗದಲ್ಲಿ ನಿಂತಿದ್ದವನ ದನಿ ಕೇಳಿಸಿತು. `ಮತ್ತ್ತೆ ಲಾ ಗೊಯ್ ಕಾಫಿ’. ಆ ಮನುಷ್ಯ ಶಾನ್ ಬೆನ್ನ ಹಿಂದೆಯೇ ನಿಂತು ಟ್ರಕ್ ಹತ್ತಿದ. ಶಾನ್ ತಿರುಗಿದ. ಹೊಸ ಮುಖ. ಯುವ ಟಿಬೆಟನ್. ಮುಖ ನೋಡಿದರೇ ತಿಳಿಯುತ್ತೆ. ಈತ  ಒಬ್ಬ ಖಾಂಪಾ. ಪೂರ್ವದ ಪ್ರತಿಷ್ಠಿತ ಉನ್ನತ ಖಾಮ್ ಪ್ರಸ್ಥಭೂಮಿಯ ಕುರುಬರ ಮನೆತನದವನು.
ಶಾನ್ ಮುಖ ನೋಡುತ್ತಿದ್ದಂತೆ ಅವನ ಮುಖ ಹಠಾತ್ತಾಗಿ ಗಡುಸಾಯಿತು. `ಮಾನ್ಯರೆ, ನಿಮಗೆ ಲಾ ಗೊಯ್ ಕಾಫಿ ಗೊತ್ತೆ?’ ಆತ ಹಲ್ಲು ಕಿಸಿದ. ಅವನಲ್ಲಿ ಉಳಿದಿದ್ದ ಕೆಲವೇ ಹಲ್ಲುಗಳೂ ಕೊಳೆತು ಕಪ್ಪಾಗಿವೆ.
`ಒಂದು ಚಮಚಾ ಒಳ್ಳೆಯ ಟಿಬೆಟನ್ ಕೊಳೆ. ಅರ್ಧ ಲೋಟ ಉಚ್ಚೆ.’
ಎದುರಿದ್ದ ಬೆಂಚಿನ ಮೇಲೆ ಕೂತ ಆತ ಶಾನ್‌ನನ್ನೇ ದಿಟ್ಟಿಸಿದ. ಶಾನ್ ತನ್ನ ಅಂಗಿಯ ತೋಳನ್ನು ಬಿಚ್ಚಿದ. ಟ್ರಕ್ಕಿನ ಹಿಂಭಾಗವನ್ನು ಮುಚ್ಚಲೆಂದು ಇದ್ದ ಶಿಥಿಲ ಕ್ಯಾನ್‌ವಾಸ್ ಹೊರಗಿನ ಗಾಳಿಯನ್ನು ತಡೆಯುವಲ್ಲಿ ಸಂಪೂರ್ಣ ಸೋತಿದೆ. ಶಾನ್ ಕೂಡಾ ಆತನನ್ನು ಎವೆಯಿಕ್ಕದೆ ದಿಟ್ಟಿಸಿದ. ಬದುಕುವುದು ಅಂದರೆ ಹೆದರಿಕೆಯನ್ನು ನಿಭಾಯಿಸುವುದು ಮಾತ್ರ ಎಂದು ಶಾನ್ ಚೆನ್ನಾಗಿ ತಿಳಿದಿದ್ದ.
ಅದು ನಿಮ್ಮ ಹೊಟ್ಟೆಯನ್ನು ಸುಡಬಹುದು.
ನಿಮ್ಮ ಹೃದಯವನ್ನು ಸೀಳಬಹುದು. 
ನಿಮ್ಮ ಆತ್ಮ ಸುಟ್ಟು ಕಮಟು ವಾಸನೆ ಬರಬಹುದು.
ಆದರೆ ಅದನ್ನು ಎಂದಿಗೂ ತೋರಕೂಡದು.
ಶಾನ್ ಈಗ ಹೆದರಿಕೆಯ ರಸವನ್ನು ಹೀರುವುದರಲ್ಲಿ ತುಂಬಾ ಅನುಭವಿ. ಅದರ ವೈವಿಧ್ಯಮಯ ಚಹರೆ ಮತ್ತು ದೈಹಿಕ ಪ್ರತಿಕ್ರಿಯೆಗಳನ್ನು ಹೊಗಳುತ್ತಾನೆ. ಉದಾಹರಣೆಗೆ ಹಿಂಸೆ ನೀಡುವವನ ಬೂಟುಗಳ ಶಬ್ದದ ಹೆದರಿಕೆಗೂ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ತಂಡವು ಸಿಲುಕಬಹುದಾದ ಹಿಮಪಾತದ ಹೆದರಿಕೆಗೂ ತುಂಬಾ ವ್ಯತ್ಯಾಸವಿದೆ ಎಂಬುದನ್ನು  ಶಾನ್ ಅರಿತಿದ್ದಾನೆ. ಆದರೆ ದಣಿವಿನ ಮತ್ತು ನೋವಿನ ದುರ್ಗಂಧದಲ್ಲಿ ತನ್ನ ತಂದೆಯ ಮುಖವನ್ನು ಮರೆಯುವ ಹೆದರಿಕೆಯನ್ನು ಹುಡುಕುತ್ತಿದ್ದ ರಾತ್ರಿಗಳು ಅವನನ್ನು ನಿದ್ದೆ ಮಾಡಲು ಬಿಟ್ಟಿರಲಿಲ್ಲ. ಈ ಹೆದರಿಕೆಯ ಮುಂದೆ ಇನ್ನಾವುದೂ ಇಲ್ಲ. ರಾಜಕೀಯ ಚಿಕಿತ್ಸೆ ಮತ್ತು ಚುಚ್ಚುಮದ್ದಿನ ಚಿಕಿತ್ಸೆಯ ಮಬ್ಬಿನ ಆ ಮೊದಲ ದಿನಗಳಲ್ಲಿ ಹೆದರಿಕೆ ಎಂಥ ಬೆಲೆ ಬಾಳುತ್ತದೆ ಎಂಬ ಅರಿವು ಶಾನ್‌ಗೆ ಚೆನ್ನಾಗಿದೆ.
ಕೆಲವೊಮ್ಮೆ ಹೆದರಿಕೆಯೊಂದೇ ವಾಸ್ತವವಾಗಿದ್ದೂ ಇದೆ.
ಖಾಂಪಾನ ಮುಖದ ಮೇಲೆ ಆಳವಾದ ಗಾಯದ ಗುರುತುಗಳು. ಕುತ್ತಿಗೆಯ ಮೇಲೆ ಬ್ಲೇಡಿನ ಗೀರುಗಳು. ಆತ ಮಾತಾಡುತ್ತಿದ್ದಂತೆ ಮುಖ ಚಳಿಯಿಂದ ಕಿವುಚುತ್ತಿದೆ.`ಕರ್ನಲ್ ತಾನ್ ಅಂತ ಅವರು ಹೇಳಿದ್ರು…’ ಯಾರೂ ನನಗೆ ಇದು ತಾನ್‌ನ ಜಿಲ್ಲೆ ಅಂತ ಹೇಳಲಿಲ್ಲ. ಥಂಬ್ ರಯಟ್ಸ್ಸ್ ನಿಂದ ಬಂದಿದಾನೆ ಅವನು, ಸರೀನಾ? ಬಡ್ಡೀಮಗನ ದೊಡ್ಡ ಮಗ ಬಡ್ಡಿಮಕ್ಕಳ ಸೇನೆಯಲ್ಲಿದ್ದಾನೆ.’
ಒಂದು ಕ್ಷಣ ಯಾರೂ ಆ ಮಾತನ್ನು ಕೇಳಲೇ ಇಲ್ಲ ಎಂಬಂಥ ವಾತಾವರಣ. ಆಗಲೇ ಅಲ್ಲಿದ್ದ ಕಾವಲುಗಾರನೊಬ್ಬ ಹೊದಿಕೆಯನ್ನು ಎತ್ತಿ ಲಾಠಿಯಿಂದ ಆತನ ಮೊಣಕಾಲು ತಿವಿದ. ಖಾಂಪಾನ ಮುಖದಲ್ಲಿ ನೋವಿನ ಎಳೆ. ಅದು ಸಣ್ಣ ನಗೆಯಾಗಿ ರೂಪಾಂತರವಾಯಿತು. ಒಂಥರ ಶಾನ್ ಕಡೆಗೆ ಬೀರಿದ ಸಂಕೇತ. ಅನಾಸಕ್ತನಂತೆ  ಶಾನ್ ಕಣ್ಣು ಮುಚ್ಚಿ ಕೂತ.
ಅವರ ಹಿಂದಿನ ಹೊದಿಕೆಯನ್ನು ಎಳೆಯುತ್ತಿದ್ದಂತೆ ಟ್ರಕ್ಕು ಮರ್ರೋ ಎಂಬ ಯಾತನೆಯ ಸದ್ದಿನೊಡನೆ ಚಲಿಸಿತು. ಕತ್ತಲಿನಲ್ಲಿ ಒಂದು ಕ್ಷೀಣ ಮರ್ಮರ. ದೂರದಲ್ಲಿ ಹರಿಯೋ ಝರಿಯಂತೆ  ಸರಿಯಾಗಿ ಗ್ರಹಿಸಲಾಗದ ದನಿ. ಶಿಬಿರಕ್ಕೆ ಅರ್ಧ ಗಂಟೆಯ ದಾರಿ. ಟ್ರಕ್ಕಿನ ಕ್ಯಾಬಿನ್ನಿನಲ್ಲಿ ಕಾವಲುಗಾರರು. ಈ ಬದಿಯಲ್ಲಿ ಕೇವಲ ಖೈದಿಗಳು. ಎಲ್ಲರ ಮುಖದಲ್ಲೂ ದಣಿವು ರಾಚುತ್ತಿದೆ. ಶಿಬಿರಕ್ಕೆ ಮರಳುವ ಈ ಯಾನ ತೀರಾ ಕಳಾಹೀನ. ಆದರೆ  ಈ ಯಾತ್ರೆಯು ಅಲ್ಲಿದ್ದವರು ಪ್ರತಿಜ್ಞೆ ತೆಗೆದುಕೊಳ್ಳುವ ಕಾಯಕದಿಂದ ಮಾತ್ರ ವಿಮುಖರಾಗುವುದಿಲ್ಲ.
ಮೂರು ವರ್ಷಗಳ ನಂತರ ಶಾನ್‌ಗೆ ಈ ಜನರ ಮಾಲೆಗಳನ್ನು, ಮಣಿಗಳನ್ನು ಕೇವಲ ಶಬ್ದಮಾತ್ರದಿಂದಲೇ ಗುರುತಿಸಲು ಸಾಧ್ಯವಾಗಿದೆ.  ಅವನ ಎಡಕ್ಕೆ ಈಗ ಕುಳಿತಿದ್ದವನು ಅಂಗಿಗುಂಡಿಗಳ ಮಾಲೆಯನ್ನು ಹಿಡಿದಿದ್ದಾನೆ. ಇನ್ನೊಂದು ಬದಿಯಲ್ಲಿ ಕುಳಿತಿದ್ದವನ ಕೈಯಲ್ಲಿ ಕೈಬೆರಳುಗಳ ಉಂಗುರದ ಮಾಲೆಯಿದೆ. ಅದು ಜನಪ್ರಿಯ ಸಾಧನ. ಒಬ್ಬಾತ ಉಗುರುಗಳನ್ನು ಬೆಳೆಸಿ, ಕತ್ತರಿಸಿ ಸಂಗ್ರಹಿಸುತ್ತಿದ್ದ. ಬೇಕಾಗಿದ್ದದ್ದು ಕೇವಲ ೧೦೮ ಉಗುರುಗಳು. ಅಷ್ಟು ಉಗುರುಗಳು ಸಂಗ್ರಹವಾದ ಕೂಡಲೇ ಹೊದಿಕೆಯಿಂದ ತೆಗೆದ ಎಳೆಗಳಿಂದ ಮಾಲೆ ಸಿದ್ಧ. ಕೆಲವು ಮಾಲೆಗಳಂತೂ  ಕೇವಲ ದಾರದ ಗಂಟುಗಳಿಂದಲೇ ಕೂಡಿದ್ದು. ಅವುಗಳನ್ನು ಜಡ್ಡುಗಟ್ಟಿದ ಬೆರಳುಗಳು ಮೌನವಾಗಿ ಎಣಿಸುತ್ತಿದ್ದವು.  ಕೆಲವು ಮಾಲೆಗಳು ಕಲ್ಲಂಗಡಿ ಬೀಜಗಳಿಂದ ಮಾಡಿದ್ದು. ಅವಂತೂ ತೀರಾ ಅಪರೂಪ. ಎಚ್ಚರಿಕೆಯಿಂದ ಕಾಯಬೇಕು. ಇತ್ತೀಚೆಗೆ ಬಂದ ಕೆಲವು ಖೈದಿಗಳಂತೂ ಬದುಕಿನ ಬಗೆಗಿನ ಆಚರಣೆಗಳಿಗಿಂತ ಬದುಕಿ ಉಳಿಯುವ ಆಚರಣೆಗಳ ಬಗ್ಗೆಯೇ ಹೆಚ್ಚು ಕಾಳಜಿ ತೋರುವವರು. ಅವರು ಅಂಥ ಮಾಲೆಗಳನ್ನು ತಿಂದು ಹಾಕಲೂ ಸಿದ್ಧ !
ಪ್ರತಿಯೊಂದೂ ಬೀಜ ಅಥವಾ ಉಗುರಿನ, ಗಂಟು ಅಥವಾ ಗುಂಡಿಯನ್ನು ಬೆರಳುಗಳಿಂದ ಸರಿಸುತ್ತ ಆ ಭಿಕ್ಷುಗಳು ಪ್ರಾಚೀನ ಮಂತ್ರವನ್ನು ಉಚ್ಚರಿಸುತ್ತಿದ್ದರು.
ಓಂ ಮಣಿ ಪದ್ಮೇ ಹಂ.
ಪದ್ಮದಲ್ಲಿರುವ ಮಣಿಗೆ ಜಯವಾಗಲಿ. ಅದು ಕರುಣಾಳು ಬುದ್ಧನ ಸ್ಮರಣೆ. ಪ್ರತಿದಿನ ಇಂಥ ಒಂದು ನೂರು ವೃತ್ತಗಳನ್ನು ಮಾಡದೆ ಯಾವ ಖೈದಿಯೂ ಮಲಗಿದ್ದನ್ನು ಶಾನ್ ನೋಡಿಲ್ಲ.
ಈ ಮಂತ್ರೋಚ್ಚಾರಗಳು ಶಾನ್‌ನ ಶಿಥಿಲ ಆತ್ಮದ ಮೇಲಿನ ಮೆದು ಲೇಪದಂತೆ ತಾಗುತ್ತಿವೆ.  ಆ ಭಿಕ್ಷುಗಳು, ಅವರ ಮಂತ್ರಗಳು ಅವನ ಬದುಕನ್ನು  ಈಗಾಗಲೇ ಬದಲಿಸಿವೆ. ಗತಕಾಲದ ನೋವನ್ನು ಹಿಂದೆಯೇ ಬಿಟ್ಟು ಮುಂದಣ ದಾರಿಯನ್ನು ನೋಡಲು  ಸಾಧ್ಯವಾಗುವಂತೆ ಮಾಡಿದ್ದೇ ಈ ಮಂತ್ರಗಳು.
ಒಂದು ತನಿಖೆ….. ಆತ ಚಾಂಗ್ ಗೆ ಹೇಳಿದ್ದ. ಆ ಪದಗಳು ಲೆಫ್ಟಿನೆಂಟನನ್ನು ಅಚ್ಚರಿಗೆ ಕೆಡವಿದ್ದಕ್ಕಿಂತ ಅವನಿಗೇ ಅಚ್ಚರಿ ತಂದಿತ್ತು.
ಹಳೆ ಅಭ್ಯಾಸ ಬಿಟ್ಟುಹೋಗುವುದಾದರೂ ತಡವಾಗಿ…
ಒಂದು ಬಗೆಯ ದಣಿವು ಅವನ ಪ್ರಜ್ಞೆಯನ್ನು ಮರಳಿಸಿದೆ. ಯಾವುದೋ ದೃಶ್ಯ ಅವನ ಮೇಲೆ ಪ್ರಹಾರ ಮಾಡಿದಂತೆ. ತಲೆಯಿಲ್ಲದ ದೇಹ ನೆಟ್ಟಗೆ ನಿಂತಿದೆ. ಕೈಯಲ್ಲಿ ಚಿನ್ನದ ಮೆರುಗಿನ ಸಿಗರೇಟ್ ಲೈಟರ್ ಹಿಡಿದಿದೆ. ಅದು ಹೇಗೋ ಶಾನ್‌ನನ್ನು ನೋಡಿದೆ.  ಲೈಟರನ್ನು ಶಾನ್‌ನತ್ತ ಚಾಚುತ್ತಿದೆ. ಉಸಿರೆಳೆದುಕೊಳ್ಳುತ್ತ ಶಾನ್ ಕಣ್ಣು ತೆರೆದಿದ್ದಾನೆ. ಅರೆ, ಉಸಿರಾಡಲೇ ಆಗುತ್ತಿಲ್ಲ….
ಈಗ ಶಾನ್‌ನನ್ನು ನೋಡುತ್ತಿದ್ದುದು ಆ ಖಾಂಪಾ ಅಲ್ಲ. ಇನ್ನೊಬ್ಬ ವೃದ್ಧ ಭಿಕ್ಷು. ಹಲವು ತಿಂಗಳುಗಳ ಸಂಗ್ರಹದ ರೂಪವಾಗಿದ್ದ ಬೀಜಗಳ ಮಾಲೆ ಹಿಡಿದವನು. ಆ ಬೀಜಗಳು ಸವೆದುಹೋಗಿವೆ. ಅದು ಮಾತ್ರ ಪಕ್ಕಾ ಮಣಿಮಾಲೆ. ಆತ ಕ್ಯಾಬಿನ್ನಿನ ಹಿಂದೆಯೇ ಇದ್ದ ಬೆಂಚಿನ ಮೇಲೆ , ತ್ರಿನ್ಲೆಯ ಪಕ್ಕ ಕುಳಿತಿದ್ದಾನೆ. ಅವನ ಮುಖ ಗುಂಡುಕಲ್ಲಿನ ಹಾಗೆ ಬೋಳು ಬೋಳು. ಎಡ ಕೆನ್ನೆಯ ಮೇಲೆ ಒಂದು ಗೀರಿನ ಗುರುತು. ೩೦ ವರ್ಷಗಳ ಹಿಂದೆ ಕೆಂಪುಭಟನೊಬ್ಬ ಅವನನ್ನು ಕಳೆಗುದ್ದಲಿಯಿಂದ ಹೊಡೆದಿದ್ದ. ಚೋಜೆ ರಿನ್‌ಪೊಚೆ. ನಂಬೆ ಗೊಂಪಾ ಮಠದ ಮುಖ್ಯ ಅರ್ಚಕ – ಕೆನ್‌ಪೋ – ಆಗಿದ್ದವ. ಅಂಥ ಸಾವಿರಾರು ಮಠಗಳು ಚೀನಾದಿಂದ ನಿರ್ನಾಮವಾಗಿವೆ. ಈಗ ಆತನೇ ೪೦೪ನೆಯ ನಿರ್ಮಾಣ ತಂಡದ ಕೆನ್‌ಪೋ.ಷಿ
ಟ್ರಕ್ ಮುಂದೆ ಸಾಗುವ ಸಂಗತಿಯೇ ಅನ್ಯ , ತನಗೆ ಸೇರದ ಘಟನೆ ಎನ್ನುವಂತೆ ಚೋಜೆಯೂ ಮಣಿಗಳನ್ನು ಎಣಿಸುತ್ತ ಮಂತ್ರ ಹೇಳುತ್ತ ಕುಳಿತಿದ್ದ. ತ್ರಿನ್ಲೆ ಒಂದು ಸಣ್ಣ ವಸ್ತುವನ್ನು ತನ್ನ  ತೊಡೆಯ ಮೇಲೆ ಬೀಳಿಸಿದ. ಚೋಜೆ ತನ್ನ ಮಣಿಮಾಲೆಯನ್ನು ತಗ್ಗಿಸಿ ಆ ಚಿಂದಿಯನ್ನು ತೆರೆದ. ತುಕ್ಕು ಹಿಡಿದ ಕಲೆಯ ಕಲ್ಲು. ಅದನ್ನು ಆ ಹಿರಿಯ ಲಾಮಾ ಗೌರವದಿಂದ ಹಿಡಿದ. ಅದರ ಪ್ರತೀ ಮುಖವನ್ನೂ ಗೌರವದಿಂದ ಗಮನಿಸಿದ. ಯಾವುದೋ ನಿಗೂಢ ಸತ್ಯವನ್ನು ಹಿಡಿದುಕೊಂಡ ಹಾಗೆ. ನಿಧಾನವಾಗಿ ಅದರ ರಹಸ್ಯ ಅನಾವರಣವಾದಂತೆ, ಅವನ ಕಣ್ಣುಗಳಲ್ಲಿ ವಿಷಾದ ಆವರಿಸಿತು. ಆ ಕಲ್ಲು ರಕ್ತದಿಂದ ತೋಯ್ದಿತ್ತು. ಮೇಲೆ ಕಣ್ಣು ಎತ್ತಿದರೆ ಶಾನ್‌ನ ದೃಷ್ಟಿ. ಪರವಾ ಇಲ್ಲ ಎಂಬ ನೋಟಕ್ಕೆ ಮನ್ನಣೆ.
ಅಮೆರಿಕದ ಜೀನ್ಸ್ ತೊಟ್ಟಿದ್ದ ಮನುಷ್ಯ ಅದೇ ರಸ್ತೆಯ ಮಧ್ಯೆ ಸತ್ತುಹೋಗಿದ್ದ.
ಈ ಪರ್ವತದಲ್ಲಿ ಇನ್ನು ಮುಂದೆ ಕೆಲಸ ಮಾಡಲು ಬೌದ್ಧರು ಒಪ್ಪುವುದಿಲ್ಲ!
ಕಾಂಪೌಂಡಿನ ಒಳಗೆ ಟ್ರಕ್ಕು ಸಾಗಿತು. ಕೂಡಲೇ ಮಣಿಮಾಲೆಗಳು ಮಾಯ. ಸೀಟಿಯ ಸದ್ದು. ಬಿಚ್ಚಿಕೊಂಡ ತಾಡಪಾಲು. ಸಂಜೆಯ ಮಬ್ಬುಗತ್ತಲಿನ ಬೆಳಕಿನಲ್ಲೇ ಖೈದಿಗಳು ಮೌನವಾಗಿ ತಮ್ಮ ವಸತಿಯಾಗಿದ್ದ ಹಲಗೆಯ ಕಟ್ಟಡದ ಒಳಗೆ ನಡೆದರು. ಮರುಕ್ಷಣವೇ ತವರದ ಕೈಪಾತ್ರೆಗಳನ್ನು ಹಿಡಿದು ಹೊರಬಂದರು.
ಅದೇ ಅವರ ವಾಶ್ ಬೇಸಿನ್.
ಆಹಾರ ತಿನ್ನುವ ಪ್ಲೇಟು.
ಚಹಾ ಕುಡಿಯುವ ಲೋಟ.
ಊಟದ ಕೋಣೆಯ ಒಂದು ಮೂಲೆಯಿಂದ ಸಾಲಾಗಿ ಸಾಗಿದ ಹಾಗೆ ಅವರ ಪಾತ್ರೆಯಲ್ಲಿ ಬಾರ್ಲಿ ಗಂಜಿ ತುಂಬಿಕೊಂಡಿತು. ಬಿಸಿ ಬಿಸಿ ಗಂಜಿ ಹೊಟ್ಟೆಯೊಳಗೆ ಸೇರಿದಂತೆ ಅವರೆಲ್ಲರಿಗೂ ಜೀವ ಬಂದಂತಾಯಿತು. ಎಲ್ಲರೂ ಪರಸ್ಪರ ನೋಡಿಕೊಂಡು ಮೌನದಲ್ಲೇ ಮಾತಾಡಿಕೊಂಡರು. ಬಸವಳಿದ ಕಿರುನಗೆಗಳನ್ನು ವಿನಿಮಯ ಮಾಡಿಕೊಂಡರು. ಯಾರಾದರೂ ಗಟ್ಟಿಯಾಗಿ ಮಾತನಾಡಿದರೆ ಅವರಿಗೆ ಮಲಗಲು ಕುದುರೆ ಲಾಯವೇ ಗತಿ.
ಗುಡಿಸಲಿನಲ್ಲಿ ಹೊಸ ಖೈದಿಯನ್ನು ನೋಡಿ ತ್ರಿನ್ಲೆ ನಿಂತ. ಖಾಂಪಾ ಆತನ ಎದುರಿಗೇ ಸಾಗಿ ಹೋಗುತ್ತಿದ್ದ. `ಇಲ್ಲಲ್ಲ’, ಭಿಕ್ಷು ಹೇಳಿದ. ಅವನ ಕೈ ನೆಲದ ಮೇಲಿದ್ದ ಸೀಮೆಸುಣ್ಣದಿಂದ ಬರೆದಿದ್ದ ಆಯತಾಕಾರವನ್ನು  ತೋರುತ್ತಿದೆ.
ಸೆರೆಮನೆಯ ಕೋಣೆಗಳಲ್ಲಿದ್ದ ರಹಸ್ಯ ದೈವಿಕ ಚಿಹ್ನೆಗಳ ಬಗ್ಗೆ ಅರಿವಿದೆ ಎಂಬಂತೆ  ಖಾಂಪಾ ಭುಜ ಕುಣಿಸಿದ. ಆಯತಾಕಾರವನ್ನು ಸುತ್ತಿ ದಾಟಿ ಮೂಲೆಯಲ್ಲಿದ್ದ ಬಂಕ್‌ನತ್ತ ನಡೆದ.
`ಬಾಗಿಲಿನ ಪಕ್ಕ’ ತ್ರಿನ್ಲೆ ಮೆಲ್ಲಗೆ ನುಡಿದ. ಅವ ಮಾತಾಡುವುದೇ ಹಾಗೆ. ಪೂಜೆ ಮಾಡುವಾಗ ಮಂತ್ರಿಸಿದಂತೆ. `ನಿನ್ನ ಬಂಕ್ ಅಲ್ಲಿ  ಬಾಗಿಲಿನ ಪಕ್ಕ’ ಎಂದು ತ್ರಿನ್ಲೆ ಮತ್ತೆ ಉಚ್ಚರಿಸಿದ. ಆತನ ಚೀಲವನ್ನು ತೆಗೆದುಕೊಳ್ಳಲು ಮುಂದೆ ಬಾಗಿದ.
ಆ ಮನುಷ್ಯ ತ್ರಿನ್ಲೆಯ ಮಾತನ್ನು ಕೇಳಿಸಿಕೊಂಡಂತೆ ಕಾಣಿಸಲಿಲ್ಲ. `ಬುದ್ಧನ ಉಸಿರು!’ ಆತ ಉಸಿರೆಳೆದುಕೊಂಡ. ತ್ರಿನ್ಲೆಯ ಕೈಗಳನ್ನೇ ನೋಡಿದ.  `ಎಲ್ಲಿ ನಿನ್ನ ಹೆಬ್ಬೆರಳುಗಳು?’
ತ್ರಿನ್ಲೆ ತಲೆ ಅಲ್ಲಾಡಿಸಿದ. `ಏನಾಯಿತೆಂದು ನನಗೆ ಗೊತ್ತಿಲ್ಲ.’ ಅವನ ಮಾತಿನಲ್ಲಿ ಒಂದು ಬಗೆಯ ಕುತೂಹಲ. ಈ ಪ್ರಶ್ನೆಯನ್ನೇ ಕೇಳಿಸಿಕೊಂಡಿಲ್ಲ ಎಂಬ ಭಾವ.
`ಸೂಳೆಮಕ್ಕಳು… ಅವರು ನಿನಗೂ ಹೀಗೆ ಮಾಡಿದ್ರಾ? ಹೌದಲ್ವಾ? ನೀನು ಮಣಿಮಾಲೆಯನ್ನು ಮುಟ್ಟಬಾರದು ಅಂತ?’
`ನಾನು ಹೇಗೋ ನಿಭಾಯಿಸ್ತೀನಿ…. ಬಾಗಿಲಿನ ಪಕ್ಕ,’ ತ್ರಿನ್ಲೆ ನಿಧಾನವಾಗಿ ಉತ್ತರಿಸಿದ.
`ಅಲ್ಲಿ ಎರಡು ಖಾಲಿ ಬಂಕ್‌ಗಳಿವೆ’ ಆ ಮನುಷ್ಯ ಮಾರುತ್ತರ ನೀಡಿದ. ಆತ ಅರ್ಚಕನಲ್ಲ. ತನ್ನನ್ನು ಸರಿಸಲು ತ್ರಿನ್ಲೆಗೆ ಸವಾಲು ಒಡ್ಡುವಂತೆ ಹುಲ್ಲಿನ ಚಾಪೆಯ ಮೇಲೆ  ಒರಗಿದ. ಪೀಪಲ್ಸ್ ಲಿಬರೇಶನ್ ಆರ್ಮಿಗೆ ತೀವ್ರವಾಗಿ ಪ್ರತಿರೋಧ ನೀಡಿದವರು ಯಾರಾದರೂ ಇದ್ದರೆ ಅವರು ಖಾಮ್ನಿಂದ ಬಂದವರೇ. ಸಂಚಿನ ಆರೋಪದ ಮೇಲೆ ಈಗಲೂ ಅವರನ್ನು ಮೂಲೆ ಮೂಲೆಯ ಹಳ್ಳಿಗಳಿಂದ ಬಂಧಿಸಿ ತರಲಾಗುತ್ತಿದೆ. ಸೆರೆಮನೆಯಿಂದ ಹೊರಗೆ ಇರುವ ದಕ್ಷಿಣದ ಮನೆತನಗಳ ಖಾಂಪಾಗಳಿಗೆ ಈಗಲೂ ಪರಂಪರಾಗತವಾಗಿದ್ದ ಶಸ್ತ್ರಾಸ್ತ್ರದೊಂದಿಗೆ ಸಾಗುವ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಅವರು ಐದು ಅಂಗುಲಕ್ಕಿಂತ ಉದ್ದವಾದ ಬ್ಲೇಡನ್ನೂ ಇಟ್ಟುಕೊಳ್ಳುವಂತಿಲ್ಲ.
ಅತ್ಯಂತ ಸಂಭ್ರಮದಿಂದ ಆತ ತನ್ನ ಚಿಂದಿ ಬೂಟುಗಳನ್ನು ಬಿಚ್ಚಿದ. ಜೇಬಿನಿಂದ ಒಂದು ಕಾಗದದ ಚೀಟಿ ಹೊರ ತೆಗೆದ.  ಕಾವಲುಗಾರನೊಬ್ಬನ ತಾಳೆಪತ್ರದ ಒಂದು ಹಾಳೆ ಅದು. ಅಕಸ್ಮಾತ್ತಾಗಿ ಗಾಳಿಯಲ್ಲಿ ಹಾರಿ ಬಂದರೆ ಮಾತ್ರ ಸಿಗುತ್ತದೆ. ಅಗತ್ಯಕ್ಕಿಂತ ಹೆಚ್ಚೇ ನಗುತ್ತ ಅದನ್ನು ಬೂಟಿನೊಳಕ್ಕೆ ಸೇರಿಸಿದ. ಹೆಚ್ಚುವರಿ ರಕ್ಷಣೆ ಸಿಕ್ಕಂತಾಯಿತು. ೪೦೪ ನೆಯ ತಂಡದ ಬದುಕನ್ನು ಅಳೆಯುವುದೇ ಇಂಥ ಅತ್ಯಂತ ಪೇಲವ ಜಯಗಳಿಂದ.
ಸಾಕ್ಸ್‌ಗಳ ಥರ ಕಾಣುತ್ತಿದ್ದ ಚಿಂದಿಗಳನ್ನು ಆತ ಮತ್ತೆ ಸರಿಪಡಿಸಿಕೊಳ್ಳುತ್ತಿದ್ದಂತೆಯೇ ತನ್ನ ಸಹಚರರನ್ನು ನೋಡಿದ. ಶಾನ್ ಈ ಬಗೆಯ ನೋಟವನ್ನು ಎಣಿಸಲಾಗದಷ್ಟು ಸಲ ಕಂಡವನೇ. ಪ್ರತಿಯೊಬ್ಬ ಹೊಸ ಖೈದಿಯೂ ಮೊದಲು ಮುಖ್ಯ ಅರ್ಚಕನನ್ನು ನೋಡುತ್ತ್ತಾರೆ. ಆಮೇಲೆ ಅಲ್ಲಿರುವ ಅತ್ಯಂತ ದುರ್ಬಲ ವ್ಯಕ್ತಿಯನ್ನು ಹುಡುಕುತ್ತಾರೆ. ತೊಂದರೆಗೆ ಸಿಗಬಾರದಲ್ಲ, ಅದಕ್ಕೆ.  ಹಾಗೆಯೇ ಬಿಡುಗಡೆಯ ಆಸೆ ಬಿಟ್ಟವರನ್ನೂ ಹುಡುಕುತ್ತಾರೆ. ಹಾಗೆಯೇ ಅಧಿಕಾರಿಗಳಿಗೆ ಮಾಹಿತಿ ನೀಡಬಹುದಾದ ಮಾಹಿತಿದಾರರನ್ನೂ ಹುಡುಕುತ್ತಾರೆ. ಮೊದಲನೆಯದು ತುಂಬಾ ಸುಲಭ. ಆತನ ಕಣ್ಣುಗಳು ತಕ್ಷಣವೇ ಚೋಜೆಯನ್ನು ಹುಡುಕಿದವು. ಮಧ್ಯಭಾಗದಲ್ಲಿದ್ದ ಬಂಕ್‌ನಲ್ಲಿ ಚೋಜೆ ಪದ್ಮಾಸನ ಹಾಕಿ ಕುಳಿತಿದ್ದ. ಕೈಯಲ್ಲಿ ರಕ್ತರಂಜಿತ ಕಲ್ಲನ್ನು ಅಧ್ಯಯನ ಮಾಡುತ್ತಲೇ ಇದ್ದ. ಆ ಬ್ರಿಗೇಡಿನಲ್ಲಿದ್ದ ಯಾರೂ ಅವನಷ್ಟು ಪ್ರಭೆ ಹೊಂದಿಲ್ಲ.
ಆಗತಾನೇ ಪರ್ವತಶ್ರೇಣಿಗಳಲ್ಲಿ ಬಿಟ್ಟಿದ್ದ ಎಲೆಗಳನ್ನು, ಕಳೆಗಿಡಗಳ ಮೊಳಕೆಗಳನ್ನು ಕೆಲವು ಯುವ ಭಿಕ್ಷುಗಳು ಹೊರಗೆಳೆದರು. ತ್ರಿನ್ಲೆ ಅವನ್ನು ಎಣಿಸಿದ. ಒಬ್ಬ ಖೈದಿಗೆ ಒಂದು ಎಲೆಯ ಹಾಗೆ ಹಂಚಿದ. ಅದನ್ನು ಪ್ರತಿಯೊಬ್ಬರೂ ಅತ್ಯಂತ ಗೌರವದಿಂದ ತೆಗೆದುಕೊಂಡರು. ಆ ಎಲೆಗಳನ್ನು ಕೊಯ್ದು ತಂದಿದ್ದಕ್ಕೆ ನಾಳೆ ಶಿಕ್ಷೆ ಅನುಭವಿಸುವ ಸರದಿ ಹೊತ್ತಿದ್ದ ಭಿಕ್ಷುವಿಗೆ ಧನ್ಯವಾದದ ಮಂತ್ರವನ್ನು ಹೇಳಿದರು.
ತ್ರಿನ್ಲೆ  ಮತ್ತೆ ಖಾಂಪಾನತ್ತ ತಿರುಗಿದ. ಖಾಂಪಾ ಎಲೆಯನ್ನು ತಿನ್ನುತ್ತಿದ್ದ. `ಕ್ಷಮಿಸು’, ತ್ರಿನ್ಲೆ ನುಡಿದ,`ಅಲ್ಲಿ ಶಾನ್ ತಾವೋ ಮಲಗ್ತಾನೆ.’ ಸುತ್ತಮುತ್ತ ತಿರುಗಿದ ಖಾಂಪಾ ಚೋಜೆ ಬಳಿ ಕೂತಿದ್ದ ಶಾನ್‌ನತ್ತ ನೋಟ ತಿರುಗಿಸಿದ.
`ಅಕ್ಕಿ ತಿನ್ನುವವನೆ?’ ಖಾಂಪಾ ಗೊಣಗಿದ.`ಯಾವ ಖಾಂಪಾನೂ ಅಕ್ಕಿ ತಿನ್ನುವವನಿಂದ ಹೊಡೆತ ತಿನ್ನಲ್ಲ.’ ನಗುತ್ತ ಸುತ್ತಲೂ  ನೋಡಿದ. ಯಾರೂ ನಗಲಿಲ್ಲ.
ಮೌನವೂ ಆತನಿಗೆ ಅಸಹನೀಯ. `ಅವರು ನಮ್ಮ ನೆಲವನ್ನು ಬಾಚಿಕೊಂಡರು.ನಮ್ಮ ಮಠಗಳನ್ನು ವಶಪಡಿಸಿಕೊಂಡರು. ನಮ್ಮ ತಂದೆ ತಾಯಂದಿರನ್ನೂ ಬಲಿ ಹಾಕಿದರು. ನಮ್ಮ ಮಕ್ಕಳನ್ನು ಸಾಯಿಸಿದರು…’ ಥೂ ಎಂದು ಉಗುಳಿದ.. ಅಸಹನೆಯಿಂದ ಅಲ್ಲಿದ್ದ ಭಿಕ್ಷುಗಳತ್ತ ನೋಟ ಬೀರಿದ.
ಇರುಸುಮುರುಸುಗೊಂಡವರಂತೆ ಭಿಕ್ಷುಗಳು ಪರಸ್ಪರ ನೋಡಿಕೊಂಡರು. ಅವರ ಗುಡಿಸಲಿನಲ್ಲಿ ಅವನ ಈ ದ್ವೇಷದ ಮಾತುಗಳು ತೀರಾ ಅನ್ಯ.
`ಅದು ಕೇವಲ ಆರಂಭ ಮಾತ್ರ. ಈಗ ಅವರು ನಮ್ಮ ಆತ್ಮಗಳನ್ನೂ ತೆಗೆದುಕೊಳ್ತಿದಾರೆ. ನಮ್ಮ ನಗರಗಳಲ್ಲಿ ಅವರ ಜನರನ್ನು ಇಡ್ತಿದಾರೆ. ನಮ್ಮ ಕಣಿವೆಗಳಲ್ಲೂ ಅವರ ಜನ. ನಮ್ಮ ಪರ್ವತಗಳೂ ಅಷ್ಟೆ. ನಮ್ಮ ಸೆರೆಮನೆಯಲ್ಲೂ! ನಮ್ಮನ್ನು ವಿಷಮಯ ಮಾಡೋದಕ್ಕೆ. ನಾವೆಲ್ಲರೂ ಅವರ ಹಾಗೆ ಕಾಣಬೇಕು ಅನ್ನೋ ಉದ್ದೇಶಕ್ಕೆ. ನಮ್ಮ ಆತ್ಮಗಳು ಮುರುಟಿಹೋಗಬೇಕು. ನಮ್ಮ ಮುಖಗಳು ಮಾಯವಾಗಬೇಕು. ನಾವು ಯಾರೂ ಆಗಬಾರದು.’
ಹಿಂದಿದ್ದ ಬಂಕ್‌ನತ್ತ ತಿರುಗಿದ ಖಾಂಪಾ ಮಾತಿನ ಚಾಟಿ ಮುಂದುವರೆಸಿದ.`ನಾನಿದ್ದ ಹಳೆ ಕ್ಯಾಂಪಿನಲ್ಲೂ ಹೀಗೇ ಆಯ್ತು.  ಅವರೆಲ್ಲರೂ ತಮ್ಮ ಮಂತ್ರಗಳನ್ನೇ ಮರೆತ್ರು. ಒಂದು ದಿನ ಅವರು ಎದ್ದಾಗ ಅವರ ಮನಸ್ಸೆಲ್ಲ ಖಾಲಿ ಖಾಲಿ. ಯಾವುದೇ ಪ್ರಾರ್ಥನೆಗಳೂ ಅಲ್ಲಿ ಉಳಿದಿರಲಿಲ್ಲ.’
`ಅವರು ನಮ್ಮ ಹೃದಯದಿಂದ ಯಾವತ್ತೂ ಪ್ರಾರ್ಥನೆಗಳನ್ನು ಕಿತ್ತೊಗೆಯಲಾರರು’ ತ್ರಿನ್ಲೆ ನುಡಿದ. ಅವನೀಗ ಶಾನ್‌ನತ್ತ  ಕೌತುಕದಿಂದ ನೋಡುತ್ತಿದ್ದಾನೆ.
`ಥತ್ತೆರಿಕಿ.. ಅವರು ನಮ್ಮ ಹೃದಯವನ್ನು ಕಿತ್ತುಕೋತಾರೆ. ಆಮೇಲೆ ಯಾರಿಗೂ ಮುಕ್ತಿ ಸಿಗಲ್ಲ. ಯಾರೂ ಬುದ್ದನ ಬಳಿ ಹೋಗಲ್ಲ. ಎಲ್ಲರೂ ಕೆಳಗೆ ಹೋಗುತ್ತಾರೆ. ಒಂದು ಕೀಳು ಜನ್ಮದಿಂದ ಇನ್ನೊಂದು ಕೀಳು ಜನ್ಮಕ್ಕೆ ಇಳೀತಾರೆ. ನಾನಿದ್ದ ಹಳೆ ಕ್ಯಾಂಪಿನಲ್ಲಿ ಒಬ್ಬ ಹಿರಿಯ ಭಿಕ್ಷು ಇದ್ದ. ಅವನಿಗೆ ಅವರು ರಾಜಕೀಯ ಕಲಿಸಿದರು.ಒಂದು ದಿನ ಬೆಳಗ್ಗೆ ಎದ್ದು ನೋಡ್ತಾನೆ…. ಆತ ಒಂದು ಮೇಕೆಯಾಗಿ ಹುಟ್ಟಿದಾನೆ…. ನಾನೇ ಅವನನ್ನು ನೋಡಿದೆ. ಆ ಮೇಕೆ ಆಹಾರಕ್ಕಾಗಿ ಸಾಲಿನಲ್ಲಿ ನಿಂತುಕೊಂಡಿತು. ಅದೇ ಮುದುಕ ನಿಂತುಕೊಳ್ಳುತ್ತಿದ್ದ ಜಾಗದಲ್ಲಿ. ನಾನೇ ಕಣ್ಣಾರೆ ನೋಡಿದೆ. ಹಾಗೇ ಆಗುತ್ತೆ. ಒಂದು ಮೇಕೆ. ಕಾವಲುಗಾರರು ಬಯೊನೆಟ್‌ನಿಂದ ತಿವಿದರು. ನಮ್ಮ ಎದುರಿಗೇ ಆ ಮೇಕೆಯನ್ನು ಹುರಿದರು. ಮರುದಿನ ಒಂದು ಬಕೆಟಿನಲ್ಲಿ ಶೌಚಾಲಯದಿಂದ ಮಲ ತಂದು ನಮಗೆ ತೋರಿಸಿದರು…. ನೋಡಿ…ಈತ ಈಗ ಏನಾಗಿದ್ದಾನೆ ಎಂದು ಮುಖಕ್ಕೆ ಹಿಡಿದರು….’
`ನೀನು ನಿನ್ನ ದಾರಿಯಿಂದ ವಿಮುಖನಾಗಲಿಕ್ಕೆ ಚೀನೀಯರೇ ಬೇಕಾಗಿಲ್ಲ,’ ಚೋಜೆ ಹಠಾತ್ತಾಗಿ ನುಡಿದ,`ನಿನ್ನ ದ್ವೇಷವೇ ಸಾಕು.’ ಅವನ ಧ್ವನಿ ಮೆದು. ಕಲ್ಲಿನ ಮೇಲೆ ಮರಳು ನಿಧಾನವಾಗಿ ಸುರಿದಂತೆ.
ಖಾಂಪಾ ಈಗ ಕುಗ್ಗಿ ಹೋದ. ಆದರೆ ಕಣ್ಣುಗಳಲ್ಲಿ ಇನ್ನೂ ಅದೇ ಕ್ರೂರತೆ. `ನಾನು ಮರುದಿನ ಮೇಕೆಯ ಹಾಗೆ ಏಳಲ್ಲ. ಅದಕ್ಕಿಂತ ಮೊದಲು ಯಾರನ್ನಾದರೂ ಸಾಯಿಸ್ತೇನೆ,’ ಆತ ಶಾನ್‌ನತ್ತ ನೋಡುತ್ತ ನುಡಿದ.
`ಶಾನ್  ತಾವೋ ಯುನ್,’ ತ್ರಿನ್ಲೆ ನಿಧಾನವಾಗಿ ಹೇಳಿದ `ಕುಗ್ಗುವ ಶಿಕ್ಷೆಗೆ ಒಳಗಾಗಿದ್ದಾನೆ. ಅವನು ತನ್ನ ಬಂಕಿನಲ್ಲಿ ನಾಳೆಯವರೆಗೂ ಮಲಗಲಾಗದು.’
`ಕುಗ್ಗುವ ಶಿಕ್ಷೆ?’ ಖಾಂಪಾ ಮತ್ತೆ ಗೊಣಗಿದ.
`ಹೌದು, ಶಿಕ್ಷೆ. ನಿನಗೆ ಇಲ್ಲಿಯ ವ್ಯವಸ್ಥೆಯ ಬಗ್ಗೆ ಯಾರೂ ಹೇಳಿಲ್ಲವೆ?’
`ಅವರು ಸೀದಾ ನನ್ನನ್ನು ಟ್ರಕ್ಕಿನಿಂದ ಎಸೆದು ಒಂದು ಗುದ್ದಲಿ ಕೊಟ್ಟರು.’
ತ್ರಿನ್ಲೆ ಅಲ್ಲೇ ಇದ್ದ ಯುವ ಭಿಕ್ಷುವಿನತ್ತ ತಲೆ ಆಡಿಸಿದ. ಆತ ಕೂಡಲೇ ತನ್ನ ಮಣಿಮಾಲೆಯನ್ನು ಕೆಳಗೆ ಇಟ್ಟು ಖಾಂಪಾನ ಕಾಲಿನ ಬಳಿ ಬಂದ.
`ವಾರ್ಡನ್‌ನ ಒಂದು ನಿಯಮವನ್ನು ಮುರಿ,’ ಆತ ವಿವರಿಸಿದ,` ಆತ ನಿನ್ನನ್ನು ಶುದ್ಧ  ಅಂಗಿಗೆ ಕಳಿಸ್ತಾನೆ. ನೀನು ಅವನ ಎದುರಿಗೆ ಹಾಜರಾಗ್ತೀಯ. ಅದೃಷ್ಟ ಇದ್ದರೆ ನೀನು ಕುಗ್ಗಿಸೋ ಶಿಕ್ಷೆಗೆ ಗುರಿಯಾಗ್ತೀಯ. ನಿನ್ನ ಬೆನ್ನಿನ ಮೇಲೆ ಇರೋ ಬಟ್ಟೆಯೊಂದನ್ನು ಹೊರತುಪಡಿಸಿ ನಿನಗೆ ಆರಾಮು ನೀಡೋ ಎಲ್ಲವೂ ಅಲಭ್ಯ. ಮೊದಲ ರಾತ್ರಿ ನೀನು ಈ ಗುಡಿಸಲಿನ ಹೊರಗೆ ಕಳೀತೀಯ. ಸಭೆಯ ಸ್ಥಳದ ಮಧ್ಯದಲ್ಲಿ. ಚಳಿಗಾಲವೇನಾದ್ರೂ ಇದ್ದರೆ ನೀನು ಆ ರಾತ್ರಿಯೇ ಅಲ್ಲಿ ನಿನ್ನ ದೇಹದಿಂದ ಕಳಚಿಕೊಳ್ತೀಯ.’
ಮೂರು ವರ್ಷಗಳಲ್ಲಿ ಶಾನ್ ಆರು ಜನರನ್ನು ಇಂಥ ಸ್ಥಿತಿಯಲ್ಲಿ ನೋಡಿದ್ದಾನೆ. ದೇವ ವಿಗ್ರಹಗಳಂತೆ ಪದ್ಮಾಸನದಲ್ಲೇ ಮರಗಟ್ಟಿಹೋಗಿದ್ದ ಭಿಕ್ಷುಗಳನ್ನು ಸೈನಿಕರು ಎತ್ತಿ ಒಯ್ದಿದ್ದರು. ಅವರ ಕೈಗಳು ಮಾತ್ರ ಮಣಿಮಾಲೆಯನ್ನು ಭದ್ರವಾಗಿ ಹಿಡಿದಿದ್ದವು. ಇನ್ನೂ ಮಂತ್ರ ಜಪಿಸುತ್ತಿರಬಹುದೇನೋ…
`ಅದು ಅಕಸ್ಮಾತ್ ಚಳಿಗಾಲ ಆಗಿರದಿದ್ರೆ ನೀನು ನಿನ್ನ ಗುಡಿಸಲಿನ ನಿನ್ನ ಬಂಕಿಗೆ ವಾಪಸು ಬರಬಹುದು. ಮರುದಿನ ನಿನ್ನ ಬೂಟುಗಳು ಮರಳುತ್ತವೆ. ಆಮೇಲೆ ನಿನ್ನ ಕೋಟು. ನಂತರ ನಿನ್ನ ಊಟದ ಲೋಟ. ಆಮೇಲೆ ಹೊದಿಕೆ, ಚಾಪೆ, ಕೊನೆಗೆ ಹಾಸಿಗೆ.’
`ಅದೃಷ್ಟ ಇದ್ದವರಿಗೆ ಮಾತ್ರ ಹಾಗೆ ಅಂದೆಯಲ್ಲ, ಉಳಿದವರ ಗತಿ ಏನು?’
ಯುವ ಭಿಕ್ಷು ಹೇಳಿದ.`ವಾರ್ಡನ್ ಆತನನ್ನು ಕರ್ನಲ್ ತಾನ್ ಬಳಿ ಕಳಿಸ್ತಾನೆ.’
`ಪ್ರಸಿದ್ಧ ಕರ್ನಲ್ ತಾನ್..’ ಖಾಂಪಾ ಗೊಣಗುಟ್ಟಿದ. `ಮತ್ತೆ ಯಾಕೆ ಶುದ್ಧ ಅಂಗಿ?’
`ವಾರ್ಡನ್ ಒಬ್ಬ ಸೂಕ್ಷ್ಮ ಮನುಷ್ಯ.’ ಭಿಕ್ಷು ಏನು ಹೇಳಬೇಕೆಂದು ತಿಳಿಯದೆ ತ್ರಿನ್ಲೆಯತ್ತ ತಿರುಗಿದ. `ಕೆಲವು ಸಲ ಹಾಗೆ ಹೋಗುವವರು ಹೊಸ ಸ್ಥಳಕ್ಕೇ ಹೋಗ್ತಾರೆ.’
ಭಿಕ್ಷುವಿನ ಮಾತಿನಲ್ಲಿದ್ದ ನಿಗೂಢ ಅರ್ಥವನ್ನು ಗ್ರಹಿಸಿದಂತೆ ಖಾಂಪಾ ತಲೆಯಾಡಿಸಿ ಎದ್ದು ಶಾನ್‌ನ ಸುತ್ತ ತಿರುಗಲಾರಂಭಿಸಿದ.
`ಈತ ಒಬ್ಬ ಗೂಢಚರ. ನನಗೆ ವಾಸನೆ ಬರ್‍ತಿದೆ.’
ನಿಟ್ಟುಸಿರು ಬಿಟ್ಟ ತ್ರಿನ್ಲೆ ಖಾಂಪಾನ ಚೀಲ ಹಿಡಿದು ಅದನ್ನು ಬಾಗಿಲಿನ ಪಕ್ಕದ ಬಂಕಿನತ್ತ ಒಯ್ದ. ` ಇದು ಶಿಗಾತ್ಸೆಯ ಹಿರಿಯನಿಗೆ ಸೇರಿದ್ದು. ಅವನ ಬಿಡುಗಡೆಗೆ ಶಾನ್‌ನೇ ಕಾರಣ.’
`ಅವ ನಾಲ್ಕನ್ನು ತೆಗೆದುಕೊಂಡ ಅಂತ ಕೇಳ್ದೆ.’
`ಇಲ್ಲ , ಬಿಡುಗಡೆಯಾದ. ಅವನನ್ನು ಲೋಕೇಶ್ ಅಂತ ಕರೀತಿದ್ರು. ಆತ ದಲಾಯಿ ಲಾಮಾ ಸರ್ಕಾರದಲ್ಲಿ ತೆರಿಗೆ ಸಂಗ್ರಹಿಸ್ತಿದ್ದವ. ೩೫ ವರ್ಷ ಇಲ್ಲಿದ್ದ. ಹಠಾತ್ತಾಗಿ ಇವರು ಅವನ ಹೆಸರು ಹಿಡಿದು ಕರೆದರು.. ಗೇಟಿನ ಬಾಗಿಲು ಅವನಿಗೆ ತೆರೆಯಿತು.’
`ಮತ್ತೆ ಈ ಅಕ್ಕಿ ತಿನ್ನೋನು ಬಿಡಿಸಿದ ಅಂದೆ?’
`ಶಾನ್ ಒಂದು ಬ್ಯಾನರಿನ ಮೇಲೆ ಕೆಲವು ಶಕ್ತಿಯ ಪದಗಳನ್ನು ಬರೆದ.’ ಚೋಜೆ ಮಧ್ಯೆ ಪ್ರವೇಶಿಸಿ ನುಡಿದ.
ಬಾಯಿ ತೆರೆದುಕೊಂಡೇ ಶಾನ್‌ನನ್ನು ನೋಡಿದ ಖಾಂಪಾ.`ಹಾಗಾದ್ರೆ ನೀನು ಒಬ್ಬ ಮಂತ್ರವಾದಿ ಅನ್ನು….’ ಅವನ ಕಣ್ಣುಗಳಲ್ಲಿ ಇನ್ನೂ ವಿಷ ಹಬ್ಬಿತ್ತು. `ನನ್ನ ಮೇಲೂ ಏನಾದ್ರೂ ಮ್ಯಾಜಿಕ್ ಮಾಡ್ತೀಯ?’
ಶಾನ್ ಅವನತ್ತ ನೋಡಲಿಲ್ಲ. ಆತ ಈಗ ಚೋಜೆಯ ಕೈಗಳನ್ನೇ ಗಮನಿಸುತ್ತಿದ್ದ. ಸಂಜೆಯ ಪ್ರಾರ್ಥನೆ ಇನ್ನೇನು ಆರಂಭ ಆಗುವುದರಲ್ಲಿದೆ.
ದುಃಖದ ನಗೆ ಬೀರುತ್ತ ತ್ರಿನ್ಲೆ ನುಡಿದ`ಮಂತ್ರವಾದಿಗಳಿಗೆ ಶಾನ್ ಕಲ್ಲುಗಳನ್ನು ಚೆನ್ನಾಗಿ ಎಸೀತಾನೆ.’
ತನ್ನ ಬಂಕ್‌ನತ್ತ ಬೂಟುಗಳನ್ನು ಎಸೆದ ಖಾಂಪಾ. ಆತ ಬಗ್ಗಿದ್ದು ಭಿಕ್ಷುಗಳಿಗೆ. ಶಾನ್‌ಗಲ್ಲ. ಅದನ್ನೇ ಸ್ಪಷ್ಟಪಡಿಸಲು ಎಂಬಂತೆ ಶಾನ್‌ನತ್ತ ತಿರುಗಿದ. `ನಿನ್ನಮ್ಮನ್…’ ಖಾಂಪಾ ಮತ್ತೆ ಗೊಣಗಿದ. ಯಾರೂ ಅವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಅವನ ಕಣ್ಣುಗಳಲ್ಲಿ ಒಂದು ಬಗೆಯ ವಿಷಾದ . ಶಾನ್‌ನ ಬಂಕರಿನತ್ತ ನಡೆದು ಪೈಜಾಮಾದ ಲಾಡಿ ಬಿಚ್ಚಿದ. ಅಲ್ಲಿದ್ದ ಹಲಗೆಯ ಮೇಲೆ ಉಚ್ಚೆ ಹೊಯ್ದ.
ಯಾರೂ ಮಾತಾಡಲಿಲ್ಲ.
ಚೋಜೆ ನಿಧಾನವಾಗಿ ಎದ್ದು ತನ್ನ ಹೊದಿಕೆಯಿಂದಲೇ ಆ ಬಂಕನ್ನು ಒರೆಸಲಿಕ್ಕೆ ಆರಂಭಿಸಿದ.
ಖಾಂಪಾನ ಮುಖದಲ್ಲಿದ್ದ ವಿಜಯದ ನಗೆ ಮಾಸಿಹೋಯಿತು. ಬೈದುಕೊಳ್ಳುತ್ತಲೇ ಚೋಜೆಯನ್ನು ಬದಿಗೆ ಸರಿಸಿ ತನ್ನ ಅಂಗಿಯಿಂದಲೇ ಒರೆಸಿದ.
ಎರಡು ವರ್ಷಗಳ ಹಿಂದೆ ಇಂಥದೇ ಒಬ್ಬ ಖಾಂಪಾ ಇಲ್ಲಿದ್ದ. ಮಧ್ಯವಯಸ್ಕ. ಕೃಷಿ ಸಹಕಾರಿ ಸಂಘದಲ್ಲಿ ನೋಂದಾವಣೆ ಮಾಡಿಸಿಕೊಳ್ಳದ ಅಪರಾಧಕ್ಕಾಗಿ ಸೆರೆಮನೆಗೆ ಬಂದವ. ಅವನ ಕುಟುಂಬವನ್ನು ಸೇನೆಯು ಬಂಧಿಸಿದ ಹದಿನೈದು ವರ್ಷಗಳ ಕಾಲ ಒಬ್ಬಂಟಿಯಾಗಿದ್ದವನು ತನ್ನ ನಾಯಿ ಸತ್ತುಹೋದ ಮೇಲೆ ಕಣಿವೆಯ ನಗರಕ್ಕೆ ಇಳಿದುಬಂದಿದ್ದ. ಶಾನ್ ನೋಡಿದ ಮಟ್ಟಿಗೆ ಆತ ಬಂಧನಕ್ಕೆ ಒಳಗಾಗಿದ್ದ ಪ್ರಾಣಿಯ ಹಾಗೆ ಇದ್ದ. ಸರಳುಗಳ ಹಿಂದೆ ಇರೋ ಕರಡಿಯ ಹಾಗೆ ಬಂಕಿನಲ್ಲೂ ಶತಪಥ ತಿರುಗುತ್ತಿದ್ದ. ಶಾನ್‌ನನ್ನು ನೋಡಿದ ಎಂದರೆ ಅವನ ಮುಷ್ಟಿ ಬಿಗಿಯುತ್ತಿತ್ತು.
ಆದರೆ ಆ ಖಾಂಪಾ ಚೋಜೆಯನ್ನು ತಂದೆ ಥರ ಕಾಣುತ್ತಿದ್ದ. ಅಲ್ಲಿ ಲೆಫ್ಟಿನೆಂಟ್ ಸ್ಟಿಕ್  ಇದ್ದ. ತನ್ನ ದಂಡದ ಜೊತೆಗೆ ಅಪಾರವಾದ ಮೋಹ ಇಟ್ಟುಕೊಂಡಿದ್ದಕ್ಕೆ ಅವನಿಗೆ ಆ ಹೆಸರು. ಒಮ್ಮೆ ಕೈಬಂಡಿಯಲ್ಲಿದ್ದ ಸರಕನ್ನು ಚೆಲ್ಲಿದ್ದಕ್ಕೆ ಚೋಜೆಯನ್ನು ಬಲವಾಗಿ ಥಳಿಸಿದ್ದ. ಜೊತೆಗೆ ಅಶ್ಲೀಲ ಬೈಗಳು.  ಒಂದು ವಾರದ ನಂತರ ಲಾಯದಿಂದ ಬಿಡುಗಡೆಯಾದ ಚೋಜೆ ಮೊಣಕಾಲಿಗಾದ ಗಾಯದಿಂದಾಗಿ ಕುಂಟುತ್ತಿದ್ದ. ಆಗ ಖಾಂಪಾ ತನ್ನ ಹೊದಿಕೆಯನ್ನು ಕತ್ತರಿಸಿ ಅಂಗಿಯೊಳಗೇ ಜೇಬುಗಳನ್ನು ಹೊಲೆಯುತ್ತಿದ್ದ. ಗುಡ್ಡ ಬೆಟ್ಟಗಳಾಚೆ ಪರಾರಿಯಾದರೆ ಬೇಕಾಗುವಷ್ಟು ಆಹಾರವನ್ನು ಆತ ತನ್ನ ಹೊಸ ಕಿಸೆಗಳಲ್ಲಿ ಸಂಗ್ರಹಿಸಿದ್ದ ಎನ್ನುವುದನ್ನು ತ್ರಿನ್ಲೆ ಸಹಿತ ಎಲ್ಲರೂ ಕಂಡಿದ್ದರು. ಆದರೆ ಪರಾರಿಯಾಗುವ ಯತ್ನದ ಬಗ್ಗೆ ಯೋಚಿಸುವುದೇ ಅಸಾಧ್ಯ ಎಂಬ ಸ್ಥಿತಿ ಅಲ್ಲಿತ್ತು.
ತನ್ನೆಲ್ಲ ಜೇಬುಗಳನ್ನು ಹೊಲೆದುಕೊಂಡ ಮೇಲೆ ಖಾಂಪಾ ಚೋಜೆಯ ವಿಶೇಷ ಆಶೀರ್ವಾದ ಬೇಡಿದ. ಪರ್ವತಶ್ರೇಣಿಯಲ್ಲಿ ಕೆಲಸ ಆರಂಭವಾದಂತೆ ಆತ ತನ್ನ ಜೇಬುಗಳಲ್ಲಿ ಕಲ್ಲುಗಳನ್ನು ತುಂಬಿಸಿಕೊಂಡ. ಹಿರಿಯ ಗೋಪಾಲಕನ ಹಾಡೊಂದನ್ನು ಗುನುಗುತ್ತ ಕೆಲಸ ಮಾಡುತ್ತಿದ್ದ. ಲೆಫ್ಟಿನೆಂಟ್ ಸ್ಟಿಕ್ ಪ್ರಪಾತದ ಆಂಚಿಗೆ ಹೋಗುವವರೆಗೆ. ಆಮೇಲೆ ಒಂದು ಕ್ಷಣವೂ ಯೋಚಿಸದೆ ಹಾರಿಬಿದ್ದ ಖಾಂಪಾ ಸೀದಾ ಸ್ಟಿಕ್‌ನನ್ನು ಬಲವಾಗಿ ತಬ್ಬಿಕೊಂಡ.  ಕೈ-ಕಾಲುಗಳಿಂದ ಲೆಫ್ಟಿನೆಂಟನನ್ನು ಬಿಗಿಯಾಗಿ ಆವರಿಸಿದ. ಕಲ್ಲುಗಳ ಹೆಚ್ಚುವರಿ ಭಾರದ ಬಲದಿಂದ ಪ್ರಪಾತಕ್ಕೆ ಇಬ್ಬರೂ ಜಿಗಿಯುವಂತೆ ನೋಡಿಕೊಂಡ.
ರಾತ್ರಿಯ ಗಂಟೆ ಬಾರಿಸುತ್ತಿದೆ. ಕೊಠಡಿಯನ್ನು ಬೆಳಗುತ್ತಿದ್ದ ಒಂದೇ ಒಂದು ಬತ್ತಲು ಬಲ್ಬು ಕೂಡಾ ಆರಿದೆ. ಈಗ ಯಾರಿಗೂ ಮಾತನಾಡುವುದಕ್ಕೆ ಅನುಮತಿಯಿಲ್ಲ. ಆಗ ನಿಧಾನವಾಗಿ, ಇಡೀ ರಾತ್ರಿಯನ್ನು ತಣ್ಣಗೆ ಆವರಿಸಿಕೊಳ್ಳುವ ಮಿಡತೆಗಳ ಹಾಗೆ… ಮಣಿಮಾಲೆಗಳ ಜುಳುಜುಳು ದನಿ ಎಲ್ಲೆಡೆ ಆವರಿಸುತ್ತಿದೆ.
ಒಬ್ಬ ಭಿಕ್ಷು ಬಾಗಿಲಿನ ಮೂಲಕ ಕಳ್ಳನೋಟ ಬೀರಿದ. ಸಡಿಲು ಬಿದ್ದ ಒಂದು ಬೋರ್ಡಿನ ಕೆಳಗೆ ತ್ರಿನ್ಲೆ ಎರಡು ಮೋಂಬತ್ತಿಗಳನ್ನು ತೆಗೆದು ದೀಪ ಬೆಳಗಿದ. ಒಂದೊಂದೂ ಆಯತಾಕಾರದ ಸೀಮೆಸುಣ್ಣದ ಗುರುತಿನ ಒಂದೊಂದು ಮೂಲೆಯಲ್ಲಿ ಇಟ್ಟ. ಮೂರನೆಯದನ್ನು  ಚೋಜೆ ಬಳಿ ಇಟ್ಟ. ಅದರ ಜ್ವಾಲೆ ಎಷ್ಟು ಮಂಕು. ಕೆನ್‌ಪೋನ ಮುಖವೂ ಸರಿಯಾಗಿ ಕಾಣುತ್ತಿಲ್ಲ. ಬೆಳಕಿನ ಕುಡಿಯಲ್ಲಿ ಅವನ ಕೈಗಳು ಕಾಣಿಸತೊಡಗಿದವು. ಸಂಜೆಯ ಪಾಠ ಆರಂಭ. ಅದು ಸೆರೆಮನೆಯ ಆಚರಣೆ. ಮಾತಿಲ್ಲ, ಸಂಗೀತವಿಲ್ಲ. ನಾಲ್ಕು ದಶಕಗಳ ಹಿಂದೆ  ಭಿಕ್ಷುಗಳು ಚೀನೀ ಸೆರೆಮನೆಯನ್ನು ತುಂಬತೊಡಗಿದ ದಿನದಿಂದ ಆರಂಭವಾಗಿ ಈ ಹಂತಕ್ಕೆ ಬೆಳೆದಿದೆ.
ಮೊದಲು ಕಾಣದ ದೇವರಿಗೆ ಪ್ರಾರ್ಥನೆ. ಚೋಜೆ ಈಗ ದೇವರಿಗೆ ಅರ್ಘ್ಯ ಕೊಡುತ್ತಿದ್ದಾನೆ. ತನ್ನೆರಡೂ ಅಂಗೈಗಳನ್ನು ಬಿಚ್ಚಿ ಆಕಾಶಕ್ಕೆ ತೋರಿದ್ದಾನೆ. ಅವನ ತೋರುಬೆರಳುಗಳು ಹೆಬ್ಬೆರಳುಗಳ ನಡುವೆ ಬಂದು ವೃತ್ತವಾಗಿವೆ. ಮುಖಕ್ಕೆ ನೀರು ಚಿಮುಕಿಸುವ ಬಗೆ ಇದು. ಸಾವಿರಾರು ಮುದ್ರೆಗಳಲ್ಲಿ ಒಂದು. ಒಳಗಣ ಶಕ್ತಿಯನ್ನು ಬಿಂಬಿಸುವ, ಅವುಗಳನ್ನು ಒಂದು ದಿಕ್ಕಿನಲ್ಲಿ ಕೇಂದ್ರೀಕರಿಸುವ ಚಿಹ್ನೆಗಳು. ಇವೆಲ್ಲ ಶಾನ್‌ಗೆ ಎಷ್ಟೋ ದಿನಗಳ ಕಾಲ ಅರ್ಥವಾಗಿರಲಿಲ್ಲ.  ಆದರೆ ಪ್ರಾರ್ಥನೆಯ ಚಿಹ್ನೆಗಳನ್ನು ತ್ರಿನ್ಲೆ ಶಾನ್‌ಗೆ ವಿವರಿಸಿದ್ದ. ಚೋಜೆಯ  ಕೊನೆಯ ಎರಡು ಬೆರಳುಗಳು ನಿಧಾನವಾಗಿ ಕೆಳಬಾಗಿವೆ.
ಪದ್ಯಂ.
ಪಾದಗಳಿಗೆ ನೀರು ಹನಿಸುತ್ತಿದ್ದಾನೆ. ನಿಧಾನವಾಗಿ, ಅಷ್ಟೇ ಗೌರವದಿಂದ ಚೋಜೆ ತನ್ನ ಕೈಗಳನ್ನು ಮುಷ್ಟಿ ಬಿಗಿದ. ಹೆಬ್ಬೆರಳುಗಳು ಮೇಲೆದ್ದವು.
ಅದು ಅಲೋಕೆ. ದೀಪಗಳು.
ದೂರದಿಂದ ಎಲ್ಲೋ ನೋವಿನ ಚೀತ್ಕಾರ ಇಡೀ ಮೌನವನ್ನು ಭೇದಿಸಿತು. ನಿಜ. ಪಕ್ಕದಲ್ಲಿದ್ದ ಗುಡಿಸಲಿನಲ್ಲಿ ಒಬ್ಬ ಭಿಕ್ಷು ಯಾವುದೋ ರೋಗದಿಂದ  ಸಾಯುತ್ತಿದ್ದಾನೆ.
ಚೋಜೆಯ ಕೈಗಳು ಈಗ ಆರಾಧಕರ ಊಹಾತ್ಮಕ ವೃತ್ತ್ತವನ್ನು ತೋರಿಸಿದವು. ಒಳಗಣ ದೇವರಿಗಾಗಿ ನೀವೇನು ತಂದಿದ್ದೀರಿ ಎಂದು ಅವನ ಕೈಗಳು ಸನ್ನೆ ಮಾಡಿ ಪ್ರಶ್ನಿಸಿದವು. ಹೆಬ್ಬೆರಳುಗಳೇ ಇಲ್ಲದ ಒಂದು ಜೊತೆ ಕೈಗಳು ಬೆಳಕಿನಲ್ಲಿ  ಮೇಲೆದ್ದವು. ಅವುಗಳ ತೋರು ಬೆರಳುಗಳು ತುದಿಯಲ್ಲಿ ಕೂಡಿಕೊಂಡಿದ್ದವು. ಉಳಿದ ಬೆರಳುಗಳು ಪರಸ್ಪರ ಕೂಡಿಕೊಂಡಿವೆ. ಅನುಮೋದನೆಯ ಪುಟ್ಟ ಮರ್ಮರ ಕೋಣೆಯನ್ನು ವ್ಯಾಪಿಸಿತು.
ಅದು ಚಿನ್ನದ ಮೀನು. ಸೌಭಾಗ್ಯ ಬೇಡುವ ಪ್ರಾರ್ಥನೆ.
ಈ ಕೊಡುಗೆಯ ಪ್ರಾರ್ಥನೆಯ ನಂತರ ನಿಧಾನವಾಗಿ ಇನ್ನಷ್ಟು ಕೈಗಳು ಮೇಲೆದ್ದವು. ಪ್ರಾರ್ಥನೆಯಂತೂ ಮೌನದ್ದೇ. ಅದು ತ್ಯಾಗದ ಪ್ರಾರ್ಥನೆ. ಶಂಖ ಮುದ್ರೆ. ಸಮೃದ್ಧ ಕಣಜ. ಸುರುಳಿ ಗಂಟು…. ಪದ್ಮ. ಈಗ ಶಾನ್‌ನ ಸರದಿ. ಆತ ಕೊಂಚ ಹಿಂಜರಿದ. ತನ್ನ ಎಡ ತೋರುಬೆರಳನ್ನು ಮೇಲಕ್ಕೆ ತೋರಿಸುತ್ತ ಬಲಗೈಯನ್ನು ಬಿಚ್ಚಿ ಅದಕ್ಕೆ ನೆರಳಾಗಿ ಹಿಡಿದ.
ಬಿಳಿ ಕೊಡೆ. ಅದೃಷ್ಟಕ್ಕಾಗಿ ಮಾಡುವ ಇನ್ನೊಂದು ಪ್ರಾರ್ಥನೆ.
ಈಗ ಇಡೀ ಕೊಠಡಿಯಲ್ಲಿ ಒಂದು ವಿಶಿಷ್ಟ ದನಿ ತುಂಬುತ್ತಿದೆ. ಹಕ್ಕಿ ಮೆಲ್ಲಗೆ ಪಟಪಟ ರೆಕ್ಕೆ ಬಿಚ್ಚಿಕೊಂಡಂತೆ. ಸುಮಾರು ಹನ್ನೆರಡು ಭಿಕ್ಷುಗಳು ಮೌನವಾಗಿ ಪ್ರಾರ್ಥನೆಯನ್ನು ಪಠಿಸುತ್ತಿದ್ದಾರೆ. ಇದೆಲ್ಲ ಶಾನ್‌ಗೆ ತೀರಾ ಸುಪರಿಚಿತ.ಅರ್ಚನೆಗಾಗಿ ಚೋಜೆಯ ಕೈಗಳು ಮತ್ತೆ ದೀಪದತ್ತ ಬಂದಿವೆ. ಶಾನ್ ಕೆಲವೇ ಸಲ ನೋಡಿದ ಒಂದು ಸಂಕೇತ ಅವನ ಕೈಗಳಲ್ಲಿ ಮೂಡುತ್ತಿದೆ. ಬಲಗೈನ ಬೆರಳುಗಳು ಮೇಲಕ್ಕೆ ನೋಡುತ್ತ ಆತ ತನ್ನ ಬಲ ಅಂಗೈಯನ್ನು ಮೇಲಕ್ಕೆ ಒಯ್ಯುತ್ತಿದ್ದಾನೆ. ಭಯ ನಿವಾರಕ ಮುದ್ರೆ.ಅದು ಈಗ ಕೊಠಡಿಯಲ್ಲಿ ಒಂದು ಬಗೆಯ ವಿಚಿತ್ರ ಮೌನಕ್ಕೆ ದಾರಿ ಮಾಡಿಕೊಟ್ಟಿದೆ. ಏನೋ ತುಂಬಾ ಗಹನವಾದದ್ದು ನಡೆಯುತ್ತಿದೆ ದಿಢೀರನೆ ಗೊತ್ತಾಗಿಬಿಟ್ಟ ಹಾಗೆ ಯುವ ಭಿಕ್ಷುವೊಬ್ಬ ಗಟ್ಟಿಯಾಗಿ ನಾಭಿಯಿಂದ ಉಸಿರೆಳೆದುಕೊಳ್ಳುತ್ತಿದ್ದಾನೆ. ಮಧ್ಯದ ಬೆರಳುಗಳು ಮೇಲೆ ನೋಡುತ್ತಿವೆ. ಬುದ್ಧಿಯ ವಜ್ರದ ಮುದ್ರೆ… ಉದ್ದೇಶದ ಸ್ಪಷ್ಟತೆ ಮತ್ತು ಶುದ್ಧತೆಗಾಗಿ ಪ್ರಾರ್ಥನೆ.  ಇದೊಂದು ಧರ್ಮೋಪದೇಶ. ಕೈಗಳು ಬದಲಾಗಲಿಲ್ಲ. ಅವು ತೆಳುವಾದ ಗ್ರಾನೈಟ್ ಕಲ್ಲಿನಿಂದ ಕೆತ್ತಿ ತೆಗೆದ ಹಾಗೆ ಚಲನೆಯಿಲ್ಲದೆಯೇ ತೇಲುತ್ತಿರುವಂತೆ ಕಾಣಿಸುತ್ತಿವೆ. ಆರಾಧಕರು ಹಾಗೆಯೇ ಧ್ಯಾನಿಸುತ್ತಿದ್ದಾರೆ.  ಚೋಜೆ ಒಂದು ಪರ್ವತದ ತುಟ್ಟ ತುದಿಯಿಂದ ಕಿರುಚಿದ್ದರೂ ಹೀಗೆ ಇಷ್ಟು ತೀವ್ರವಾಗಿ ತನ್ನ ಸಂದೇಶವನ್ನು ಸಂವಹಿಸಲು ಸಾಧ್ಯವಿಲ್ಲ.  ಇಲ್ಲಿ ನೋಮ ಅಸಂಬದ್ಧ. ಕಲ್ಲುಬಂಡೆಗಳು, ಬೊಬ್ಬೆಗಳು, ಮುರಿದ ಮೂಳೆಗಳು…. ಎಲ್ಲವೂ ಅಲ್ಲಿ ಅರ್ಥಹೀನ.
ನಿಮ್ಮ ಉದ್ದೇಶವನ್ನು ನೆನಪು ಮಾಡಿಕೊಳ್ಳಿ. ನಿಮ್ಮೊಳಗಿನ ದೇವರನ್ನು ಗೌರವಿಸಿ.
ಶಾನ್‌ಗೆ ಅಸ್ಪಷ್ಟತೆಯೇನೂ ಇರಲಿಲ್ಲ. ಬೇರೆ ಯಾವ ಶಿಕ್ಷಕನೂ ಹೇಳದ ವಿಷಯಗಳನ್ನು ಚೋಜೆ ತಿಳಿಸಿದ್ದಾನೆ. ಹೇಗೆ ಒಂದು ವಿಷಯದತ್ತ ಗಮನ ಕೇಂದ್ರೀಕರಿಸಬೇಕೆಂದು ಕಲಿಸಿದ್ದಾನೆ. ಚಳಿಗಾಲದಲ್ಲಿ ವಾರ್ಡನ್ ತಮ್ಮಿಬ್ಬರನ್ನೂ ಒಂದೇ ಕಡೆ ಕೂಡಿ ಹಾಕಿದಾಗ – ಅದು ಬಂಧಿಗಳು ತಪ್ಪಿಸಿಕೊಳ್ಳುತ್ತಾರೆ ಎಂದಲ್ಲ, ಕಾವಲುಗಾರರು ಚಳಿಯಿಂದ ಪಾರಾಗಿ ಬದುಕಬೇಕು ಎಂಬ ಉದ್ದೇಶದಿಂದ – ಚೋಜೆ ಶಾನ್‌ಗೆ ಅತಿ ವಿಶಿಷ್ಟ ಆವಿಷ್ಕಾರವನ್ನು ತಲುಪಲು ಸಹಕರಿಸಿದ್ದ.  ಗುಲಾಗ್‌ಗಿಂತ ಮುಂಚೆ ಪತ್ತೇದಾರನಾಗಲು ಶಾನ್‌ಗೆ ಗೊತ್ತಿದ್ದ  ಒಂದೇ ಒಂದು ಸಂಗತಿ ಎಂದರೆ ಪ್ರತಿಯೊಬ್ಬರೂ ಒಂದಷ್ಟು ಧಕ್ಕೆಗೊಳಗಾದ ಆತ್ಮವನ್ನು ಹೊಂದಿರುತ್ತಾರೆ ಎಂಬುದು.  ವಿಶಿಷ್ಟ  ಪತ್ತೇದಾರನಿಗೆ ಯಾವ ನಂಬಿಕೆಯೂ ಇರುವುದಿಲ್ಲ.  ಎಲ್ಲವೂ ಸಂಶಯಾಸ್ಪದ. ಎಲ್ಲವೂ ಬದಲಾಗುತ್ತದೆ. ಆಪಾದನೆಯಿಂದ ವಾಸ್ತವದವರೆಗೆ, ಹೊಸ ರಹಸ್ಯವನ್ನು ಜಾರಿಗೆ ತರುವವರೆಗೆ ಎಲ್ಲವೂ ಬದಲಾಗುತ್ತಲೇ ಇರುತ್ತದೆ. ಎಲ್ಲೂ ಶಾಂತಿ ಇರುವುದಕ್ಕೇ ಸಾಧ್ಯವಿಲ್ಲ. ಯಾಕೆಂದರೆ ಶಾಂತಿ ಬರುವುದೇ ನಂಬಿಕೆಯಿಂದ. ಉಹ್ಞು…. ಅಲ್ಲ, ಅವನಲ್ಲಿ ಸ್ಪಷ್ಟತೆ ಇರಲಿಲ್ಲ ಎಂದಲ್ಲ. ಗಾಢವಾದ ಯಾವುದೋ ಮುನ್ನೆಚ್ಚರದ ಭಾವವು ಆವರಿಸುವ ಇಂಥ ಕ್ಷಣಗಳಲ್ಲಿ, ಲಂಗರಿಗೆ ಸಿಕ್ಕಿದಂತೆ ಅವನ ಹಿಂದಿನ ಬದುಕು ಎಳೆಯುತ್ತಿರುವ ಕ್ಷಣಗಳಲ್ಲಿ ಅವನಲ್ಲಿ ಒಳಗಣ ದೇವರೊಂದೇ ಕೊರತೆಯಾಗಿ ಕಾಣುತ್ತದೆ.
ಚೋಜೆಯ ಕೆಳಗೆ ನೆಲದಲ್ಲಿ ಏನೋ ಒಂದು ಬಿದ್ದಿದ್ದನ್ನು ಶಾನ್ ಗಮನಿಸಿದ. ರಕ್ತರಂಜಿತ ಕಲ್ಲು. ತಾನು ಮತ್ತು ಚೋಜೆ ಇಬ್ಬರೂ ಒಂದೇ ರೀತಿ ಯೋಚಿಸುತ್ತಿದ್ದೇವೆ ಎಂದು ಶಾನ್‌ಗೆ ತಕ್ಷಣ ಹೊಳೆಯಿತು. ಕೆನ್‌ಪೋ ತನ್ನ ಅರ್ಚಕರಿಗೆ ಮಾಡಬೇಕಾದ ಕೆಲಸವನ್ನು ನೆನಪಿಸುತ್ತಿದ್ದಾನೆ. ಶಾನ್‌ನ ತುಟಿ ಒಣಗಿತು. ಶಾನ್  ಪ್ರತಿಭಟಿಸಲು ಬಯಸಿದ್ದ. ಸತ್ತ ವಿದೇಶಿಗನ ಕುರಿತು ತಮ್ಮನ್ನು ತಾವೇ ಸಂಕಟಕ್ಕೆ ದೂಡಿಕೊಳ್ಳಬಾರದು ಎಂದು ಬೇಡಲು ಬಯಸಿದ್ದ. ಆದರೆ ಆ ಮುದ್ರೆ ಅವನನ್ನು ಮಾಂತ್ರಿಕವಾಗಿ ಹಿಡಿದಿಟ್ಟಿತ್ತು.
ಶಾನ್ ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಂಡ. ಆದರೆ ಚೋಜೆಯ ಸಂದೇಶದ ಮೇಲೆ ಗಮನ ಕೇಂದ್ರೀಕರಿಸಲು ಆಗಲೇ ಇಲ್ಲ. ಏಕಾಗ್ರತೆಗೆ ಪ್ರಯತ್ನ ಪಟ್ಟಷ್ಟೂ ಅವನಿಗೆ ಬೇರೆಯದೇನೋ ಕಾಣಿಸತೊಡಗಿತು. ಐನೂರಡಿ ಎತ್ತರದ ಕಣಿವೆಯ ಮೇಲೆ ಚಿನ್ನದ ಬಣ್ಣದ ಸಿಗರೇಟ್ ಲೈಟರ್ ಬಿದ್ದ ದೃಶ್ಯ ಕಣ್ಣಿಗೆ ಕಟ್ಟುತ್ತಿದೆ. ಹಾಗೆಯೇ ಹಗಲಿನ ಕೆಟ್ಟ ಕನಸಾಗಿ ಕಾಣುತ್ತಿದ್ದಾನೆ ಅದೇ ಸತ್ತ ಅಮೆರಿಕನ್.
ಬಾಗಿಲಿನಿಂದ ಕ್ಷೀಣ ಸೀಟಿಯ ಶಬ್ದ. ತತ್‌ಕ್ಷಣ ಮೋಂಬತ್ತಿಗಳು ಆರಿದವು. ಯಾರೋ ಛಾವಣಿಯ ದೀಪದ ಸ್ವಿಚ್ ಹಾಕಿದರು. ಕಾವಲುಗಾರನೊಬ್ಬ ಬಾಗಿಲನ್ನು ತಳ್ಳಿ ಒಳಬಂದ. ಕೊಠಡಿಯ ಮಧ್ಯಭಾಗಕ್ಕೆ ಬಂದು ನಿಂತ. ತೋಳಿನ ಮೇಲೆ ಒಂದು ಕೊಡಲಿ. ಅವನ ಹಿಂದೆ ಬಂದಿದ್ದಾನೆ ಲೆಫ್ಟಿನೆಂಟ್ ಚಾಂಗ್. ಹುಸಿನಗುವಿನ ಗೌರವ ನೀಡುತ್ತ ಚಾಂಗ್ ಒಂದು ಚಿಕ್ಕ ಬಟ್ಟೆಯನ್ನು ತೆಗೆದ. ಯಾರಿಗೂ ಗೊಂದಲವಾಗಬಾರದು. ಅದು ಶುದ್ಧವಾದ ಅಂಗಿ. ಬ್ಲೇಡಿನಿಂದ ಎಲ್ಲರನ್ನೂ ಕೊಯ್ಯುವಂತೆ ಸುತ್ತಲೂ ಕಣ್ಣು ಹಾಯಿಸಿದ. ಹಾಗೆಯೇ ವಿಕಟ ನಗು.  ಹಠಾತ್ತಾಗಿ ಆ ಅಂಗಿಯನ್ನು ನೆಲದ ಮೇಲೆ ಮಲಗಿದ್ದ ಶಾನ್‌ನತ್ತ ಎಸೆದ.
`ನಾಳೆ ಬೆಳಗ್ಗೆ’ ಚಾಂಗ್ ಹೊರನಡೆದ.
ಟಿ 
ಬೇಲಿಯ ಗುಂಟ ತನ್ನನ್ನು ಸಾರ್ಜೆಂಟ್ ಫೆಂಗ್ ಕರೆದೊಯ್ಯುತ್ತಿದ್ದಂತೆ ಶಾನ್ ಮುಖಕ್ಕೆ ರಾಚಿದ್ದು ಕೊರೆಯುವ, ತಣ್ಣನೆಯ ಗಾಳಿ. ೪೦೪ನೆಯ ವಾರ್ಡಿನಲ್ಲಿ ದ್ದವರಿಗೆ ಗಾಳಿ ತುಂಬಾ ಕ್ರೂರ. ಡ್ರೇಗನ್ ಕ್ಲಾಸ್ (ಪಂಜ) ಕಣಿವೆಯ ತೀರಾ ಉತ್ತರದಲ್ಲಿದ್ದ ಈ ವಾರ್ಡಿನ ಹಿಂದೆ ಒಂದು ದೊಡ್ಡ ಕಲ್ಲುಬಂಡೆ ಚಾಚಿಕೊಂಡಿದೆ. ಅಲ್ಲಿ ಮೇಲೆ ಏಳುವ ಗಾಳಿಯು ಕೆಲವೊಮ್ಮೆ ಗುಡಿಸಲುಗಳ ಛಾವಣಿಯನ್ನು ಹಾರಿಸಿದ್ದೂ ಇದೆ. ಕೆಳಗೆ ಬೀಸಿ ಬರುವ ಗಾಳಿಯು ಅವರಿಗೆಲ್ಲ ಕಲ್ಲಿನ ಚೂರುಗಳ ಮಳೆ ತರಿಸಿದ್ದೂ ಇದೆ.
`ಈಗಾಗಲೇ ಕುಗ್ಗಿದ್ದೀಯೆ..’ ಗೇಟಿನ ಬಾಗಿಲಿಗೆ ಬೀಗ ಜಡಿಯುತ್ತ ಸಾರ್ಜೆಂಟ್ ಫೆಂಗ್ ಗೊಣಗುಟ್ಟಿದ. `ಈಗಾಗಲೇ ಕುಗ್ಗಿದ ಯಾರೂ ಮತ್ತೆ ಹೀಗೆ ಅಂಗಿಯನ್ನು ಪಡೆದಿರಲಿಲ್ಲ…’ ಫೆಂಗ್ ಒಬ್ಬ ಕುಳ್ಳಗಿನ ದಪ್ಪ ವ್ಯಕ್ತಿತ್ವದವ. ಅವನ ತೋಳುಗಳೂ ಬಲವಾಗಿದ್ದವು. ಸೂರ್ಯ, ಗಾಳಿ ಮತ್ತು ಹಿಮಕ್ಕೆ ಪಕ್ಕಾಗಿ ವರ್ಷಗಟ್ಟಳೆ ಕಾಲ ಕಳೆದ ಖೈದಿಗಳ ಹಾಗೆ ಅವನ ಚರ್ಮವೂ ದಪ್ಪ. `ಎಲ್ಲರೂ ಊಹೆ ಮಾಡ್ತಾ ಇದಾರೆ… ನಿರೀಕ್ಷೆ ಮಾಡ್ತಿದಾರೆ…. ಬಾಜಿ ಕಟ್ತಾನೂ ಇದಾರೆ..’ ಒಣಗಿದ ದನಿಯಲ್ಲಿ ಫೆಂಗ್  ಹಾಗೆ ನುಡಿದಾಗ ಅದು ಒಂದು ನಗುವಿರಬಹುದೆ ಎಂಬ ಅನುಮಾನ ಶಾನ್ನನ್ನು ಕಾಡಿತು.
ಇದೆಲ್ಲವನ್ನೂ ಕೇಳಲೇಬಾರದು. ಶಾನ್ ನಿರ್ಧರಿಸಿದ. ಕುದುರೆ ಲಾಯದ ಬಗ್ಗೆ ಯೋಚಿಸಬಾರದು. ಝೊಂಗ್‌ನ ಕಡುಸಿಟ್ಟನ್ನು ನೆನಪಿಸಿಕೊಳ್ಳಬಾರದು.
ಆದರೆ ಈ ಬಾರಿ ಝೊಂಗ್‌ನ ಸಿಟ್ಟು ನಿಯಂತ್ರಣದಲ್ಲಿ ಇದ್ದಂತಿದೆ. ವಾರ್ಡನ್ ಬೀರಿದ ನಗೆಯಲ್ಲಿ ಇನ್ನೇನೋ ತಂತ್ರ ಇದೆ ಎಂದು ಶಾನ್ ಗಟ್ಟಿಯಾಗಿ ನಂಬಿದ. ತನ್ನ ಬಲತೋಳಿನ ಮುಷ್ಟಿ ಬಿಗಿದ. ಅವನ ಆ ತೋಳಿಗೆ ಒಮ್ಮೆ ಬ್ಯಾಟರಿ ವೈರುಗಳನ್ನು ಹಾಯಿಸಿದ ನೆನಪು ಇನ್ನೂ ಮರೆತಿಲ್ಲ.
`ಅವನು ನನ್ನನ್ನು ಒಮ್ಮೆಯಾದರೂ ಸಂಪರ್ಕಿಸುವ ಯತ್ನ ಮಾಡಿದ್ದರೆ,’ ಫ್ಯುಜಿಯ ಅನುನಾಸಿಕ ಶೈಲಿಯಲ್ಲಿ ಝೊಂಗ್ ನುಡಿದ,`ನಾನು ಅವನಿಗೆ ಎಚ್ಚರಿಕೆ ಕೊಡುತ್ತಿದ್ದೆ. ಈಗ ನೀನು ಎಷ್ಟು ತ್ರಾಸು ಕೊಡ್ತೀಯ ಅನ್ನೋದನ್ನ ಅವನೇ ಕಂಡುಕೊಳ್ಳಬೇಕಿದೆ.’ ತನ್ನ ಡೆಸ್ಕಿನಿಂದ ಒಂದು ಕಾಗದದ ಚೂರನ್ನು ತೆಗೆದು ನಂಬಲೇ ಆಗದಂತೆ ತಲೆ ಅಲ್ಲಾಡಿಸುತ್ತ ಓದಿದ. ` ಪರಾವಲಂಬಿ’ ಎಂದು ಧುಸುಗುಡುತ್ತ ನುಡಿದ. ಆಮೇಲೆ ಆ ಚೂರಿನ ಮೇಲೆ ತಾನು ನೋಡಿದ್ದೇನೆ ಎಂಬಂತೆ ಗೀಚಿದ.
`ಅದೇನೂ ತುಂಬಾ ಹೊತ್ತು ಇರಲ್ಲ,’ ತುಂಬಾ ನಿರೀಕ್ಷಿಸಿದವನಂತೆ ಮಾತುಗಳು ಹೊರಬಿದ್ದವು ` ಒಂದೇ ಒಂದು ತಪ್ಪು ಹೆಜ್ಜೆ. ಅಷ್ಟೆ. ನೀನು ಆಗ ಬರಿಗೈಯಲ್ಲಿ ಕಲ್ಲು ಕುಟ್ಟಬೇಕಾಗುತ್ತೆ. ನೀನು ಸಾಯೋವರೆಗೆ.’
`ನಾನು ನನ್ನ ಮೇಲೆ ಇಟ್ಟ ನಂಬಿಕೆಯನ್ನು ಪೂರೈಸಲಿಕ್ಕೆ ಸದಾ ಪ್ರಯತ್ನಿಸ್ತೇನೆ’ ಶಾನ್ ಕಣ್ಣು ಪಿಳುಕಿಸದೆ ಹೇಳಿದ.
ವಾರ್ಡನ್ನಿಗೆ ಸ್ವಲ್ಪ ಖುಷಿಯಾಗಿರಬೇಕು. ಒದು ಬಗೆಯ ವಿಕೃತ ನಗೆ ಬೀರಿದ. `ತಾನ್ ನಿನ್ನನ್ನ ಸಜೀವವಾಗಿ ತಿಂತಾನೆ.’
ಸಾರ್ಜೆಂಟ್ ಫೆಂಗ್ ಮುಖದಲ್ಲಿ ಅಪರಿಚಿತ ಚಹರೆ. ಹಬ್ಬದ ಗಾಳಿ ಹರಡಿದಂತೆ. ಲ್ಹಾದ್ರಂಗ್‌ಗೆ  ಹೋಗುವುದೆಂದರೆ ೪೦೪ನೆಯ ವಾರ್ಡಿನ ಕಾವಲುಗಾರನ ಅದೃಷ್ಟವೇ ಸರಿ. ಲ್ಹಾದ್ರಂಗ್…ಕೌಂಟಿ ಕೇಂದ್ರವಾಗಿದ್ದ ಅತಿ ಪ್ರಾಚೀನ ನಗರ. ಫೆಂಗ್ ರಸ್ತೆ ಬದಿಯಲ್ಲಿ ಓಡುತ್ತಿದ್ದ ಮುದುಕಿಯರು, ಮೇಕೆಗಳ ಬಗ್ಗೆ ತಮಾಷೆ ಮಾಡಿದ.ಒಂದು ಸೇಬು ಹಣ್ಣು  ಕತ್ತರಿಸಿ ಚಾಲಕನಿಗೂ ಕೊಟ್ಟ. ಶಾನ್‌ನತ್ತ ನಿರ್ಲಕ್ಷ್ಯ. ಇಬ್ಬರ ನಡುವೆ ಶಾನ್ ಕೂತಿದ್ದ. ವಿಚಿತ್ರ ನಗೆ ಬೀರುತ್ತ ಶಾನ್‌ನ ಬಂಧಿಸಿದ್ದ ಕೋಳಗಳ ಕೀಲಿಯನ್ನು ಒಂದು ಕಿಸೆಯಿಂದ ಇನ್ನೊಂದು ಕಿಸೆಗೆ ವರ್ಗಾಯಿಸುತ್ತಿದ್ದ.
`ಅಧ್ಯಕ್ಷನೇ ಸ್ವತಃ ನಿನ್ನನ್ನು ಇಲ್ಲಿಗೆ ಕಳಿಸಿದನಂತೆ,’ ನಗರದ ಕಟ್ಟಡಗಳು ಕಾಣತೊಡಗಿದಂತೆ ಸಾರ್ಜೆಂಟ್ ನುಡಿದ.
ಶಾನ್ ಉತ್ತರಿಸಲಿಲ್ಲ. ತನ್ನ ಕೋಳಗಳನ್ನು ಇನ್ನಷ್ಟು ಮೇಲೆ ತಳ್ಳಲು ಸೀಟಿನಲ್ಲಿ ಬಗ್ಗಿದ. ದಾರಿಯಲ್ಲಿ ತೊಡಲು ಯಾರೋ ಅವನಿಗೆ ಶಿಥಿಲವಾದ ದೊಡ್ಡ ಸೈಜಿನ ಬೂದು ಪ್ಯಾಂಟುಗಳನ್ನು ಕೊಟ್ಟಿದ್ದರು. ಹಾಗೆಯೇ ಸೈನಿಕರು ಬಳಸುವ ಒಂದು ಸವೆದ ಜಾಕೆಟ್. ಕಚೇರಿಯ ನಡುಭಾಗದಲ್ಲೇ ಆತನನ್ನು ತಡೆದು ಬಟ್ಟೆ ಬದಲಿಸಿಕೊಳ್ಳಲು ಸೂಚಿಸಿದ್ದರು. ಎಲ್ಲರೂ ಕೆಲಸ ನಿಲ್ಲಿಸಿ ಅವನನ್ನೇ ನೋಡುತ್ತಿದ್ದರು.
`ಅದ್ರೆ ನಿನ್ನನ್ನು ಮತ್ತೆ ಯಾಕೆ ಅವರು ಜೊತೆಗೆ ಕರ್‍ಕೊಂಡು ಹೋಗ್ತಿದಾರೆ?’
ಶಾನ್ ನೇರವಾಗಿ ಕೂತ.`ನಾನೊಬ್ಬನೇ ಚೀನೀ ಅಲ್ಲ.’
ಅಚ್ಚರಿಪಟ್ಟರೂ ಫೆಂಗ್ ಸುಮ್ಮನಾದ. `ನಿಜ. ಪ್ರತಿಯೊಬ್ಬರೂ ಮಾದರಿ ಪ್ರಜೆಗಳು. ಜಿಲಿನ್, ಅವ ಹತ್ತು ಮಹಿಳೆಯರನ್ನು ಕೊಂದ. ಅವನ ಚಿಕ್ಕಪ್ಪ ಪಕ್ಷದ ಕಾರ್ಯದರ್ಶಿ ಆಗಿರದಿದ್ದರೆ ಅವನಿಗೆ ನೇರವಾಗಿ ಗುಂಡಿಕ್ಕುತ್ತಿದ್ದರು. ಆರನೆಯ ತಂಡದ ಆ ಮನುಷ್ಯ ಸಮುದ್ರದಲ್ಲಿ ಬಳಸೋ ತೈಲ ಕೊಳವೆ ಬಾವಿಯ ಸೇಫ್ಟಿ ಗೇರನ್ನೇ ಕದ್ದ. ಕಪ್ಪು ಮಾರುಕಟ್ಟೇಲಿ ಮಾರಲಿಕ್ಕೆ. ಬಿರುಗಾಳಿ ಬೀಸಿ ಐವತ್ತು ಜನ ಸತ್ತರು. ಅವನ ಮೇಲೆ ಗುಂಡು ಹಾರಿಸುವುದು ತಪ್ಪುವುದೂ ತುಂಬಾ ಸುಲಭ. ಎಲ್ಲವೂ ವಿಶೇಷ ಪ್ರಕರಣಗಳು…’
`ಪ್ರತಿಯೊಬ್ಬ ಖೈದಿಯೂ ಒಂದು ವಿಶೇಷ ಪ್ರಕರಣ.’
ಫೆಂಗ್ ಮತ್ತೆ ಹೂಗುಟ್ಟಿದ. `ಶಾನ್, ನಿನ್ನಂಥ ಜನರನ್ನ, ಸುಮ್ಮನೆ ಅಭ್ಯಾಸಕ್ಕೆ ಅಂತ ಇಟ್ಕೊಂಡಿರ್‍ತಾರೆ..’ ಅವನ ಬಾಯಿಗೆ ಫೆಂಗ್ ಸೇಬಿನ ಎರಡು ಚೂರುಗಳನ್ನು ತುರುಕಿದ. ಮೋಮೋ ಗ್ಯಾಕ್‌ಪಾ, ಅವನನ್ನು ಹಿಂದಿನಿಂದ ಕರೆಯುತ್ತಿದ್ದ ಹೆಸರದು. ಕೊಬ್ಬಿನ ಮುದ್ದೆ. ಅವನ ಭಾರೀ ಹೊಟ್ಟೆ ಮತ್ತು ತಿನ್ನುವ ಪರಿಗೆ ಇಟ್ಟ ಹೆಸರು.
ಶಾನ್ ತಿರುಗಿದ. ಸಮುದ್ರದ ಹಾಗೆ ಹಿಮಾವೃತ ಶಿಖರಶ್ರೇಣಿಗಳತ್ತ ಬಾಗಿದ ಗುಡ್ಡಗಳ ಸಾಲನ್ನು ನೋಡತೊಡಗಿದ. ತಪ್ಪಿಸಿಕೊಳ್ಳುವ ಅವಕಾಶದ ಭ್ರಮೆಯನ್ನು ಅವು ಹುಟ್ಟಿಸುತ್ತಿವೆ.
ತಪ್ಪಿಸಿಕೊಳ್ಳಲು ಯಾವ ಜಾಗವೂ ಇರದಿದ್ದವರಿಗೆ ತಪ್ಪಿಸಿಕೊಳ್ಳುವುದು ಎಂದರೆ ಒಂದು ಭ್ರಮೆಯೇ.
ಅಲ್ಲಲ್ಲಿ ಗುಬ್ಬಚ್ಚಿಗಳು ಹಾರುತ್ತಿವೆ. ೪೦೪ ನೆಯ ವಾರ್ಡಿನಲ್ಲಿ ಹಕ್ಕಿಗಳೇ ಇಲ್ಲ. ಎಲ್ಲಾ ಖೈದಿಗಳೂ ಜೀವದ ಬಗ್ಗೆ ಗೌರವ ಇಟ್ಟುಕೊಂಡವರಲ್ಲ. ಅವರು ಪ್ರತೀ ಚೂರು, ಪ್ರತೀ ಬೀಜ, ಪ್ರತಿಯೊಂದೂ ಕೀಟವನ್ನೂ ತಿನ್ನುತ್ತಾರೆ. ಕಳೆದ ವರ್ಷವೇ ಅಲ್ಲವೆ, ಒಂದು ಕೌಜುಗದ ಹಕ್ಕಿ ಹಾರಿ ಬಂದಾಗ ಜಗಳ ನಡೆದಿದ್ದು? ಅದಷ್ಟವಶಾತ್ ಆ ಹಕ್ಕಿ ತಪ್ಪಿಸಿಕೊಡಿತು. ಇಬ್ಬರಿಗೆ ಸಿಕ್ಕಿದ್ದು ಕೆಲವು ಪುಕ್ಕಗಳು ಮಾತ್ರ. ಅವರು ಆ ಪುಕ್ಕಗಳನ್ನೇ ತಿಂದು ತೃಪ್ತಿ ಪಟ್ಟಿದ್ದರು.
ಲ್ಹಾದ್ರಂಗ್ ಕೌಂಟಿಸರ್ಕಾರ ಇದ್ದ ಕಚೇರಿ ನಾಲ್ಕಂತಸ್ತಿನ ಕಟ್ಟಡ. ಇನ್ನೇನು ಬಿದ್ದೇ ಬಿಡುತ್ತದೆಂಬ ಕೃತಕ ಅಮೃತಶಿಲೆಯ ಕವಚ ಹೊದ್ದ ಗೋಡೆಗಳು. ಕೊಳಕು ಕಿಟಕಿಗಳು. ತುಕ್ಕು ಹಿಡಿದ ಕಟ್ಟುಗಳು. ಗಾಳಿ ಬೀಸಿದಾಗೆಲ್ಲ ಕಿರ್ರೆಂಬ ಶಬ್ದ. ಶಾನ್‌ನನ್ನು ಫೆಂಗ್ ದೂಡುತ್ತ ತುತ್ತತುದಿಯ ಅಂತಸ್ತಿಗೆ ಒಯ್ದ. ಪುಟ್ಟ, ಬೂದುಬಣ್ಣದ ಕೂದಲಿನ ಹೆಂಗಸೊಬ್ಬಳು ಅವರನ್ನು ಒಂದು ಕಾಯುವ ಕೋಣೆಗೆ ಕರೆದೊಯ್ದಳು. ದೊಡ್ಡ ಕಿಟಕಿ. ಎರಡೂ ಬದಿಗೆ ಬಾಗಿಲುಗಳು. ತಲೆ ಬಾಗಿಸಿ ಅವಳು ಶಾನ್‌ನನ್ನು ನಿರುಕಿಸಿದಳು. ಕುತೂಹಲದ ಹಕ್ಕಿಯ ಹಾಗೆ. ಫೆಂಗ್‌ಗೆ ಬೈಯುತ್ತ ಶಾನ್‌ನ ಕೋಳಗಳನ್ನು ಬಿಚ್ಚಿದಳು. ಆಮೇಲೆ ಸೀದಾ ಹಜಾರದ ತುದಿಗೆ ನಡೆದಳು.
` ಕೆಲವೇ ನಿಮಿಷ…’ ಆಕೆ ಇನ್ನೊಂದು ಬಾಗಲಿನತ್ತ ಕಣ್ಣು ಹಾಯಿಸುತ್ತ ಪ್ರಕಟಿಸಿದಳು `ನಾನು ನಿಮಗೆ ಚಹಾ ತರುತ್ತೇನೆ.’
ಬಾಯಿಗೆ ಶಬ್ದಗಳೇ ಬರದಂತೆ ಶಾನ್ ಅವಳತ್ತ ನೋಡಿದ. ಘೋರ ತಪ್ಪು ಮಾಡ್ತಿದಾಳೆ. ಅವಳಿಗೆ ತಿಳಿಸಬೇಕು. ಮೂರು ವರ್ಷಗಳಿಂದ ಶಾನ್ ನೈಜ ಚಹಾವನ್ನು, ಹಸಿರು ಚಹಾವನ್ನು ಕುಡಿದಿಲ್ಲ. ಈಗ ಶಾನ್ ಬಾಯಿ ಬಿಟ್ಟು ಕೂತಿದ್ದಾನೆ. ಶಬ್ದಗಳೇ ಹೊರಡುತ್ತಿಲ್ಲ. ಆಕೆ ನಸುನಗುತ್ತ ಬಾಗಿಲಿನ ಹಿಂದೆ ಮರೆಯಾದಳು.
ಹಠಾತ್ತಾಗಿ ಆತ ಒಬ್ಬನೇ ಉಳಿದಿದ್ದ. ಈ ಅನಿರೀಕ್ಷಿತ ಏಕಾಂಗಿತನ ಎಷ್ಟೇ ಅಲ್ಪವಾಗಿರಲಿ…. ಅದು ಅವನನ್ನು ಗಾಢವಾಗಿ ಆವರಿಸಿತ್ತು. ಸೆರೆಮನೆಯಲ್ಲಿದ್ದ ಖೈದಿಯನ್ನು ಹಠಾತ್ತಾಗಿ ಐಸಿರಿಯಿದ್ದ ಸಂದೂಕದ ಬಳಿ ಬಿಟ್ಟ ಹಾಗೆ. ಯಾಕೆಂದರೆ..ಬೀಜಿಂಗ್‌ನಲ್ಲಿ ಒಬ್ಬಂಟಿಯಾಗಿದ್ದದ್ದೇ ಅವನ ತಪ್ಪಾಗಿತ್ತು. ಅದಕ್ಕಾಗಿ ತನ್ನನ್ನು ಶಿಕ್ಷಿಸುತ್ತಾರೆ ಎಂದು ಆತ ಎಂದೂ ಯೋಚಿಸಿರಲಿಲ್ಲ. ತನ್ನ ಹೆಂಡತಿಯಿಂದ ದೂರವಾಗಿ ಹದಿನೈದು ಕಡೆಗಳಲ್ಲಿ ಕೆಲಸ.. ವಿವಾಹಿತರ ನಡುವೆಯೇ ಅವನದೂ ಖಾಸಗಿ ಮನೆ, ಉದ್ಯಾನಗಳಲ್ಲಿ ಒಬ್ಬಂಟಿಯಾಗಿ ಸುತ್ತಾಟ, ಅವನ ರಹಸ್ಯ ದೇಗುಲದ ಹಿಂಬದಿಯಲ್ಲಿ ಇದ್ದ ಧ್ಯಾನದ ಕೊಟಡಿಗಳು, ಅನಿಯಮಿತ ಕೆಲಸದ ಹೊತ್ತುಗಳು, ಎಲ್ಲವೂ ಅವನಿಗೆ ತನ್ನ ನೂರು ಕೋಟಿ ದೇಶವಾಸಿಗಳಿಗೆ ಇಲ್ಲದ ಖಾಸಗಿತನವನ್ನು ತಂದುಕೊಟ್ಟಿವೆ. ಆದರೆ ಮೂರು ವರ್ಷಗಳ ಹಿಂದೆ ಸಾರ್ವಜನಿಕ ಭದ್ರತಾ ಬ್ಯೂರೋದ ಸಿಬ್ಬಂದಿಗಳು ಬಂದು ಈ ಸಿರಿವಂತಿಕೆಯನ್ನು ಹಾಳುಗೆಡಹುವವರೆಗೂ ಅವನಿಗೆ ಅದರ ಅರಿವೇ ಇರಲಿಲ್ಲ. ಅವನಿಗೆ ಸ್ವಾತಂತ್ರ್ಯದ ಹರಣ ಅಷ್ಟಾಗಿ ನೋವು ಕೊಟ್ಟಿರಲಿಲ್ಲ. ನೋವಾಗಿದ್ದದ್ದು ಖಾಸಗಿತನ ಕಳೆದುಕೊಂಡದ್ದಕ್ಕೆ.
೪೦೪ ನೆಯ ವಾರ್ಡಿನ ಒಂದು ತಾಮ್‌ಜಿಂಗ್ ಗೋಷ್ಠಿಯಲ್ಲಿ ತನ್ನ ಈ ಚಟವನ್ನು ಆತ ಒಪ್ಪಿಕೊಂಡದ್ದೂ ಇದೆ. ಆತ ತನ್ನ ಸಮಾಜವಾದಿ ಬಂಧವನ್ನು ತಿರಸ್ಕರಿಸದಿದ್ದರೆ ಅವನನ್ನು ಯಾರಾದರೂ ತಡೆಯುತ್ತಿದ್ದರು ಎಂದು ಅವರೆಲ್ಲ ಹೇಳುತ್ತಿದ್ದರು. ಅವನಿಗೆ ಗೆಳೆಯರು ಅಷ್ಟಾಗಿ ಅಡ್ಡಿಯಾಗಿರಲಿಲ್ಲ. ಒಬ್ಬ ನಿಜ ಸಮಾಜವಾದಿಗೆ ಕೆಲವೇ ಗೆಳೆಯರು. ಉಳಿದಂತೆ ನಿಗಾ ಇಡುವವರೇ ಹೆಚ್ಚು. ಊಟದ ನಂತರ ಅವನ್ನು ಒಬ್ಬನೇ ಇರುವ ಸುಖ ಅನುಭವಿಸಲು ಅಲ್ಲಿಯೇ ಇದ್ದ. ಕೂಡಲೇ ವಾರ್ಡನ್ ಝೊಂಗ್ ಅವನ್ನು ಲಾಯಕ್ಕೆ ಕಳಿಸಿದ್ದ. ಅಲ್ಲಿ ಶಾನ್‌ನ ಕಾಲಿನ ಒಂದು ಮೂಳೆ ಮುರಿದುಹೋಗುವಂತೆ ಹೊಡೆದಿದ್ದರು. ಅದು ಮಾಗುವ ಮುನ್ನವೇ ಕೆಲಸ ಮಾಡಲು ತಳ್ಳಿದ್ದರು.
ಶಾನ್ ಈಗ ಕೊಠಡಿಯನ್ನು ಪರಿಶೀಲಿಸಲು ಆರಂಭಿಸಿದ. ಛಾವಣಿಯತ್ತ ಬೆಳೆದ ಒಂದು ಗಿಡ. ಅದು ಸತ್ತೇ ಹೋಗಿದೆ. ಅಲ್ಲಿ ಒಂದು ಸಣ್ಣ ಮೇಜು. ಚೆನ್ನಾಗಿ ಹೊಳೆಯುತ್ತಿದೆ. ಕಸೂತಿಯ ಬಟ್ಟೆಯೊಂದು ಅದರ ಮೇಲಿದೆ. ಅದು ಶಾನ್‌ಗೆ ಅಚ್ಚರಿ ತಂದಿತು. ಎದೆಯಲ್ಲಿ ಏನೋ ನೋವು ಅನುಭವಿಸಿದಂತೆ ಅದರ ಎದುರು ಶಾನ್ ನಿಂತ. ಕಿಟಕಿಯ ಬಳಿ ಬಂದ.
ತುತ್ತ ತುದಿಯ ಈ ಮಾಳಿಗೆಯ ಮೂಲಕ ಉತ್ತರದ ಕಣಿವೆಯ ಬಹುತೇಕ ಭಾಗವನ್ನು ನೋಡಬಹುದು. ಪೂರ್ವದಲ್ಲಿ ಡ್ರೇಗನ್ ಕ್ಲಾ ಇದೆ. ಎರಡು ಸಮವಾದ ಭಾರೀ ಪರ್ವತಗಳು. ಅವೆರಡೂ ಪರ್ವತಗಳ ಆಚೀಚೆ ಶಿಖರಶ್ರೇಣಿ ಹದವಾಗಿ ಹಬ್ಬಿದೆ. ಹಾಗೆಯೇ ಅದು ಡ್ರೇಗನ್ ಸ್ವರೂಪವನ್ನು ಪಡೆದಿದೆ. ಅದು ಇಡೀ ಕಣಿವೆಯನ್ನು ನೋಡುತ್ತಿದೆಯಂತೆ. ಅದಕ್ಕೇ ಅದರ ಕಾಲುಗಳು ಕಲ್ಲಾದವಂತೆ.
ಅಮೆರಿಕನ್ನನ ದೇಹ ಕಂಡಾಗ ಆ ಮಾತೇ ಅಲ್ಲವೆ, ಯಾರೋ ಕಿರುಚಿದ್ದು? `ಡ್ರೇಗನ್ ತಿಂದಿದೆ.’
ಶಾನ್ ನಿಧಾನವಾಗಿ ಅಲ್ಲಿನ ಪ್ರಕೃತಿಯನ್ನೇ ನೋಡುತ್ತ ನಿಂತ. ಪುಟ್ಟದಾಗಿ ಕಾಣುವ ಸಸ್ಯರಾಶಿಯಾಚೆ…, ಹಲವಾರು ಮೈಲಿಗಳಾಚೆ.. ಜೇಡ್ ಸ್ಪ್ರಿಂಗ್ ಕ್ಯಾಂಪಿನ ಛಾವಣಿ ಕಾಣಿಸಿತು. ದೇಶದ ಪ್ರಮುಖ ಸೇನಾ ನೆಲೆ. ಅದಕ್ಕೆ ಕೊಂಚ ಮೇಲೆ, ತೀರಾ ಉತ್ತರದಲ್ಲಿರುವ ಡ್ರೇಗನ್ ಪಂಜದ ಗುಡ್ಡದ ಬಳಿ ಜೇಡ್ ಸ್ಪ್ರಿಂಗ್‌ನ್ನು ೪೦೪ರ ವಾರ್ಡಿನ ತಂತಿ ಬೇಲಿಯಿಂದ ಬೇರ್ಪಡಿಸಿದ ಕಿರು ಗುಡ್ಡ ಕಾಣಿಸುತ್ತಿದೆ.
ಶಾನ್ ಕೂಡಲೇ ಅಲ್ಲಿ ಕಂಡ ರಸ್ತೆಗಳನ್ನು ಗುರುತಿಸಿದ. ಅಲ್ಲಿ ಮೂರು ವರ್ಷಗಳಿಂದ ಆತ ಕೆಲಸ ಮಾಡುತ್ತಿದ್ದಾನೆ. ಟಿಬೆಟಿನಲ್ಲಿ ಎರಡು ಬಗೆಯ ರಸ್ತೆಗಳಿವೆ. ಕಬ್ಬಿಣದ ರಸ್ತೆಗಳು ಯಾವಾಗಲೂ ಮೊದಲಿಗೆ ಕಾಣಿಸುತ್ತವೆ. ಪಶ್ಚಿಮದ ಗುಡ್ಡಗಳಾಚೆ ಜೇಡ್ ಸ್ಪ್ರಿಂಗ್ ಕ್ಯಾಂಪಿನವರೆಗೆ ಇದ್ದ ಅಗಲವಾದ ಹಾದಿಗೆ ಮಣ್ಣು ಹೊತ್ತಿದ್ದೇ ೪೦೪ನೆಯ ವಾರ್ಡಿನ ಖೈದಿಗಳು. ಕಬ್ಬಿಣದ ರಸ್ತೆಗಳು ರೈಲು ಹಾದಿಯೇನಲ್ಲ. ಟಿಬೆಟಿನಲ್ಲಿ ಅಂಥ ರಸ್ತೆಗಳಿಲ್ಲ. ಅವು ಟ್ರಕ್ಕುಗಳಿಗೆ, ಟ್ಯಾಂಕುಗಳಿಗೆ, ಸಮರಾಂಗಣದ ಫಿರಂಗಿಗಳಿಗೆ. ಅವೇ ಪೀಪಲ್ಸ್ ಲಿಬರೇಶನ್ ಆರ್ಮಿಯ ಉಕ್ಕಿನ ಅಂಶಗಳು.
ನಗರದ ಉತ್ತರದಲ್ಲಿ ಕಂಡ ಚಿಕ್ಕ ಕಂದು ಗೆರೆಯು ಅಂಥ ರಸ್ತೆಯೇನಲ್ಲ ಎಂದು ಶಾನ್ ತಕ್ಷಣ ಗುರುತಿಸಿದ. ಅದು ತೀರಾ ಹಾಳಾಗಿದೆ. ಈಗ ೪೦೪ನೆಯ ವಾರ್ಡಿನವರು ಕಟ್ಟುತ್ತಿರುವ ರಸ್ತೆ ವಸಾಹತುಶಾಹಿಗಳಿಗೆ ಅಲ್ಲ. ಅವರೆಲ್ಲ ಉನ್ನತ ಶಿಖರಗಾಚೆ ಇರುವ ಕಣಿವೆಗಳಲ್ಲಿ ಇರುತ್ತಾರೆ. ಬೀಜಿಂಗ್ ಬಳಸುತ್ತಿದ್ದ ಕೊಟ್ಟಕೊನೆಯ ಅಸ್ತ್ರ ಎಂದರೆ ಜನಸಂಖ್ಯೆ. ಮುಸ್ಲಿಮ್ ಸಮುದಾಯದವರೇ ಹೆಚ್ಚಾಗಿದ್ದ ಝಿನ್‌ಝಿಯಾಂಗ್ ಪ್ರಾಂತದಲ್ಲಿ ಮಾಡಿದಂತೆಯೇ ಇಲ್ಲಿಯೂ ಟಿಬೆಟಿನಲ್ಲಿದ್ದ ದೇಶೀಯರನ್ನು ಅವರ ನೆಲದಲ್ಲೇ ಅಲ್ಪಸಂಖ್ಯಾತಗೊಳಿಸಲು ಯತ್ನ ನಡೆಸುತ್ತಿದೆ. ಟಿಬೆಟಿನ ಅರ್ಧ ಭಾಗವನ್ನು ನೆರೆಯ ಚೀನೀ ಪ್ರಾಂತಗಳಿಗೆ ಹಂಚಲಾಗಿದೆ. ಟಿಬೆಟಿನ ಉಳಿದ ಭಾಗಗಳಲ್ಲಿಯೂ ಚೀನೀ ವಲಸೆಗಾರರು ತುಂಬಿಕೊಂಡಿದ್ದಾರೆ. ಮೂವತ್ತು ವರ್ಷಗಳ ನಿರಂತರ ಟ್ರಕ್ ಓಡಾಟದಿಂದ ಲ್ಹಾಸಾ ಒಂದು ಹಾನ್ ಚೀನೀ ನಗರವಾಗಿದೆ. ಅಂಥ ಸಾಗಾಟಕ್ಕಾಗಿ ಮಾಡಿದ ರಸ್ತೆಗಳನ್ನು ೪೦೪ನೆಯ ವಾರ್ಡಿನವರು ಅವಿಚಿ ಎಂದು ಕರೆಯುತ್ತಿದ್ದರು. ಅಂದರೆ ನರಕದ ಎಂಟನೆಯ ಸ್ತರ. ಅದು ಬೌದ್ಧಮತವನ್ನು ನಾಶ ಮಾಡುವವರಿಗೆ ಮೀಸಲು.
ಬಜರ್ ಸದ್ದಾಯಿತು. ಶಾನ್ ತಿರುಗಿದ. ಚಹದ ಬಟ್ಟಲು ಹಿಡಿದು ಹಕ್ಕಿಥರದ ಹೆಂಗಸು ನಿಂತಿದ್ದಾಳೆ. ಬಟ್ಟಲನ್ನು ಆಕೆಯೇ ಮುಂದು ಮಾಡಿದಳು. ಆಮೇಲೆ ಮತ್ತೆ ಬಾಗಿಲಿನ ಕಡೆಗೆ ನಡೆದಳು. ಕತ್ತಲಿನ ಕೋಣೆಯಲ್ಲಿ ಮರೆಯಾದಳು.
ಶಾನ್ ಅರ್ಧ ಚಹವನ್ನು ಹೀರಿದ. ಅದು ಗಂಟಲನ್ನು ಸುಟ್ಟು  ನೋವಾಗುತ್ತಿದ್ದರೂ ಲೆಕ್ಕಿಸಲಿಲ್ಲ. ಈಕೆ ತನ್ನ ತಪ್ಪನ್ನು ತಿಳಿದುಕೊಂಡು ಬಂದು ಬಟ್ಟಲನ್ನು ವಾಪಸು ತೆಗೆದುಕೊಂಡಾಳು. ಚಹಾ ಕುಡಿದ  ಈ ಸಂವೇದನೆಯನ್ನು  ಆ ರಾತ್ರಿ ತನ್ನ ಬಂಕಿನಲ್ಲಿ ಸ್ಮರಿಸಿಕೊಳ್ಳಬೇಕು ಎಂದು ಶಾನ್‌ಗೆ ಬಲವಾಗಿ ಅನ್ನಿಸುತ್ತಿದೆ. ಹಾಗೆ ನೆನಪಾಗುತ್ತಲೇ ಶಾನ್ ಕುಗ್ಗಿದ. ಖೈದಿಗಳು ಪ್ರಪಂಚದ ತುಂಡೊದನ್ನು ಕದ್ದು ಮತ್ತೆ ಗುಡಿಸಲಿಗೆ ಬಂದು ಅದನ್ನು ಆರಾಧಿಸುವುದು ದೊಡ್ಡ ತಪ್ಪು ಎಂದು ಚೋಜೆ ಸದಾ ಎಚ್ಚರಿಸುತ್ತಿದ್ದ.
ಆಕೆ ಮತ್ತೆ ಪ್ರತ್ಯಕ್ಷಳಾದಳು. ಒಳಗೆ ಹೋಗು ಎಂಬ ಸನ್ನೆ.
ಒಂದೂ ಚುಕ್ಕೆ ಇಲ್ಲದ ಶುಭ್ರ ಉಡುಗೆ ತೊಟ್ಟ ವ್ಯಕ್ತಿಯೊಬ್ಬ ಹಂಸದ ಕುತ್ತಿಗೆಯಂಥ ದೀಪವಿದ್ದ ಅಲಂಕೃತ ಮೇಜಿನ ಹಿಂದೆ ಕೂತಿದ್ದಾನೆ. ಅದು ಡೆಸ್ಕಲ್ಲ. ಸರ್ಕಾರಿ ಬಳಕೆಗೆ ರೂಪಾಂತರಿಸಿದ್ದ ಒಂದು ಪೀಠ.
ದುಬಾರಿ ಅಮೆರಿಕನ್ ಸಿಗರೇಟನ್ನು ಹೊತ್ತಿಸುತ್ತ ಆ ವ್ಯಕ್ತಿ ಮೌನವಾಗಿ ಶಾನ್‌ನನ್ನು ಅಧ್ಯಯನ ಮಾಡುತ್ತಿರುವಂತೆ ನೋಡಿದ. ಲೋತೋ ಗಾಯ್. ಒಂಟೆಗಳು.
ಶಾನ್ ಮತ್ತೆ ತೀರಾ ಪರಿಚಿತ ಗಡಸುತನವನ್ನೇ ಅನುಭವಿಸುತ್ತಿದ್ದ. ಕರ್ನಲ್ ತಾನ್‌ನ ಮುಖದಲ್ಲೂ ಅದು ಹೊಳೆಯುತ್ತಿದೆ. ತಣ್ಣಗಿನ ಬಾಕುವಿನಿಂದ ಕೆತ್ತಿದ ಹಾಗೆ ಮುಖ. ತಾವೇನಾದರೂ ಹಸ್ತಲಾಘವ ಮಾಡಿಕೊಳ್ಳುತ್ತಿದ್ದರೆ……ತಾನ್‌ನ ಬೆರಳುಗಳು ತನ್ನ ಬೆರಳುಗಳ ಕೀಲುಗಳನ್ನೇ ಕತ್ತರಿಸಿಬಿಡುತ್ತವೆ ಎಂದು ಶಾನ್‌ಗೆ ಅನ್ನಿಸಿತು.
ಸಿಗರೇಟಿನ ಹೊಗೆಯನ್ನು ಮೂಗಿನಿಂದ ನಿಧಾನವಾಗಿ ಹೊರಬಿಡುತ್ತ ಶಾನ್ ಕೈಯಲ್ಲಿದ್ದ ಚಹದ ಬಟ್ಟಲನ್ನೇ ನೋಡಿದ ತಾನ್. ಕೊನೆಗೆ ಕಂದುಕೂದಲಿನ ಹೆಂಗಸಿನ ಕಡೆಗೆ. ಆಕೆ ಕರ್ಟನುಗಳನ್ನು ಸರಿಸತೊಡಗಿದಳು.
ಗೋಡೆಯ ಮೇಲೆ ಏನಿದೆ ಎದು ತಿಳಿಯಲು ಶಾನ್‌ಗೆ ಬೆಳಕೇನೂ ಬೇಕಿಲ್ಲ. ಚೀನಾದ ಎಲ್ಲೆಡೆ ಅಂಥ ನೂರಾರು ಕಚೇರಿಗಳನ್ನು ಶಾನ್ ನೋಡಿದವನೇ. ಅಲ್ಲಿ ಮಾವೋನ ಇನ್ನೊಂದು ಚಿತ್ರಪಟ ಇರುತ್ತದೆ. ಮಿಲಿಟರಿ ಬದುಕಿನ ಚಿತ್ರವೂ ಇರುತ್ತದೆ. ಅತಿಪ್ರಿಯ ಕಮ್ಯಾಂಡರಿನ ಫೋಟೋ. ಕೊನೆಗೆ ಪಕ್ಷದ ಘೋಷಣೆ.
`ಕೂತ್ಕೋ…’ ಕರ್ನಲ್ ಅಲ್ಲಿದ್ದ ಕಬ್ಬಿಣದ ಕುರ್ಚಿಯ ಕಡೆಗೆ ತೋರಿಸುತ್ತ ನುಡಿದ.
ಶಾನ್ ಕುಳಿತುಕೊಳ್ಳಲಿಲ್ಲ. ಆತ ಗೋಡೆಯನ್ನು ನೋಡುತ್ತ ನಿಂತ. ಮಾವೋ ಅಲ್ಲಿದ್ದ. ಪುನರಾಶ್ರಯ ಪಡೆದ ಮಾವೋ ಅಲ್ಲ. ಅರವತ್ತರ ದಶಕದ ಮಾವೋ. ಅವನ ಮುಖದ ಮೇಲಿನ ಮಚ್ಚೆ ಚೆನ್ನಾಗಿ ಕಾಣುತ್ತಿದೆ. ಅಲ್ಲಿ ಪ್ರಮಾಣಪತ್ರವೂ ಇದೆ. ನಗೆ ಬೀರುತ್ತಿದ್ದ ಸೇನಾಧಿಕಾರಿಗಳ ಗುಂಪು ಚಿತ್ರವೂ ಇದೆ. ಅವೆಲ್ಲದರ ಮೇಲೆ ಚೀನೀ ಧ್ವಜದಿಂದ ಸುತ್ತಿದ್ದ ಪರಮಾಣು ಅಸ್ತ್ರದ ಚಿತ್ರವೂ ಇದೆ. ಒಂದು ಕ್ಷಣ ಶಾನ್‌ಗೆ ಘೋಷಣೆ ಕಾಣಿಸಲಿಲ್ಲ. ಕೊನೆಗೆ ತಾನ್ ಹಿಂದೆಯೇ ಮಾಸಿದ ಪೋಸ್ಟರ್ ಕಾಣಿಸಿತು. `ಸತ್ಯ..ಅದುವೇ ಜನಕ್ಕೆ ಬೇಕಾಗಿರೋದು.’
ತಾನ್ ತೆಳುವಾದ, ಮುದುಡಿದ ಕವರೊಂದನ್ನು ತೆರೆಯುತ್ತ ಶಾನ್‌ನತ್ತ ತಣ್ಣಗೆ ನೋಡಿದ.
`ಲ್ಹಾದ್ರಂಗ್ ಕೌಂಟಿಯಲ್ಲಿ ಸರ್ಕಾರವು ಒಂದು ಸಾವಿರದ ಎಂಟುನೂರು ಖೈದಿಗಳ ಮರು ಶಿಕ್ಷಣದ ಹೊಣೆಯನ್ನು ನನಗೆ ವಹಿಸಿದೆ.’ ಕೇಳುವವರಿಗಿಂತ ತನಗೇ ಹೆಚ್ಚು ಗೊತ್ತಿದೆ ಎಂಬ ಭಾವ ಅವನ ಮಾತುಗಳಲ್ಲಿ ಇಣುಕುತ್ತಿದೆ. ಅಂಥ ಆತ್ಮವಿಶ್ವಾಸದ ದನಿ. `ಐದು ಲಾಗೊಯ್ ಸಶ್ರಮ ಕ್ಯಾಂಪುಗಳು ಮತ್ತು ಎರಡು ಕೃಷಿ ಶಿಬಿರಗಳು.’
ಅಲ್ಲಿ ಆವರೆಗೆ ಶಾನ್ ನೋಡಿರದ ಇನ್ನೂ ಏನೋ ಇದೆ. ಅವೇ ಅವನ ಬಾಯಿಯ ಕೆಳಗೆ ಇದ್ದ ನೆರಿಗೆಗಳು. ದಟ್ಟವಾಗಿದ್ದ ಬೂದಿ ಕೂದಲುಗಳ ನಡುವೆ ಅವು ಕಾಣುತ್ತಿದ್ದವು. ಬಳಲಿಕೆಯ ಗುರುತು ಎನ್ನಬಹುದು. ` ಒಂಭೈನೂರಾ ಎಪ್ಪತ್ತೈದು ಜನರ ಕಡತ ಇಲ್ಲಿದೆ. ಪ್ರತಿಯೊಬ್ಬನೂ ಎಲ್ಲಿ ಹುಟ್ಟಿದ, ಅವನ ವರ್ಗದ ಹಿನ್ನೆಲೆ ಏನು, ಎಲ್ಲಿ ಅವನ ಬಗ್ಗೆ ಮೊತ್ತ ಮೊದಲು ಕೇಳಿಬಂತು, ಎಲ್ಲಿ ಆತ ಯಾವ ಮಾತುಗಳನ್ನು ಸರ್ಕಾರದ ವಿರುದ್ಧ ಆಡಿದ.. ಎಲ್ಲವೂ ನಮಗೆ ಗೊತ್ತು. ಆದರೆ ಒಬ್ಬನ ಬಗ್ಗೆ ಮಾತ್ರ ಬೀಜಿಂಗ್‌ನಿಂದ ಅತಿ ಚಿಕ್ಕ ಟಿಪ್ಪಣಿ ಬಂದಿದೆ. ನಿನ್ನ ಬಗ್ಗೆ ಕೇವಲ ಒಂದೇ ಪುಟ ಇದೆ ಖೈದಿ ಶಾನ್…’ ತಾನ್ ಕವರನ್ನು ಅಂಗೈನಿಂದ ಮುಚ್ಚಿದ. ` ಇಲ್ಲಿ ಪಾಲಿಟ್ ಬ್ಯೂರೋದ ಸದಸ್ಯನಿಂದ ವಿಶೇಷಾಹ್ವಾನ. ಆರ್ಥಿಕ ಸಚಿವ ಖಿನ್. ಎಂಟನೆಯ ಮಾರ್ಗದ ಸೇನೆಯ ಅದೇ ಮುದಿ ಖಿನ್. ಮಾವೋ ನೇಮಿಸಿದವರಲ್ಲಿ ಉಳಿದ ಒಬ್ಬನೇ ವ್ಯಕ್ತಿ. ಅನಿರ್ದಿಷ್ಟ ಸೆರೆವಾಸ. ಕ್ರಿಮಿನಲ್ ಸಂಚು. ಹೆಚ್ಚೇನಿಲ್ಲ.’ ತಾನ್ ಸಿಗರೇಟು ತೆಗೆದು ಶಾನ್‌ನನ್ನು ಅಧ್ಯಯನ ಮಾಡುವಂತೆ ನೋಡಿದ.` ಅದೇನು ಸಂಚು?’
ಶಾನ್ ತನ್ನೆರಡೂ ಕೈಗಳನ್ನು ಬಲವಾಗಿ ಕಟ್ಟಿ ನೆಲ ನೋಡಿದ. ಲಾಯಕ್ಕಿಂತ ದುರ್ಭರವಾದ ಸಂಗತಿಗಳು ಇನ್ನೂ ಬೇರೆ ಇವೆ. ಝೊಂಗ್‌ಗೆ ತನ್ನನ್ನು ಲಾಯಕ್ಕೆ ಕಳಿಸಲು ತಾನ್‌ನ ಅನುಮತಿ ಬೇಕಿಲ್ಲ. ಅಲ್ಲಿ ಸಾವಿನ ಹೊರತಾಗಿ ಹೊರಗೆ ಬರಲಾಗದಂಥ ಸೆರೆಮನೆಗಳಲ್ಲಿ  ಜನ ಇದ್ದಾರೆ.
ಸಾಂಕ್ರಾಮಿಕವಾದ ಸಿದ್ಧಾಂತಗಳನ್ನು ಹೊಂದಿದವರಿಗಾಗಿ ಸಾರ್ವಜನಿಕ ಭದ್ರತಾ ಬ್ಯೂರೋದ ವೈದ್ಯರು ನಡೆಸುವ ಗುಪ್ತ ವೈದ್ಯಕೀಯ ಸಂಶೋಧನಾ ಕೇಂದ್ರಗಳಿವೆ!
`ಕೊಲೆ ಮಾಡಲು ಸಂಚೆ? ಸರ್ಕಾರಿ ಹಣವನ್ನು ದುರ್ಬಳಕೆ ಮಾಡಲು? ಸಚಿವನ ಹೆಂಡತಿಯನ್ನು ಹಾಸಿಗೆಗೆ ಕರೆದದ್ದು? ಅವನ ಕೋಸುಗಡ್ಡೆಗಳನ್ನು ಕದ್ದ ಸಂಚೆ? ಯಾಕೆ ಖಿನ್ ನಮ್ಮ ಬಳಿ ಈ ಮಾಹಿತಿಯನ್ನು ಹಂಚಿಕೊಂಡಿಲ್ಲ?’
` ಇದೂ ಒಂದು ತಾಮ್‌ಜಿಂಗ್ ಆಗಿದ್ದರೆ…’ ಶಾನ್ ಯಾವ ಭಾವುಕತೆಯೂ ಇಲ್ಲದ ದನಿಯಲ್ಲಿ ನುಡಿದ ` ಇಲ್ಲಿ ಸಾಕ್ಷಿಗಳು ಇರಲೇಬೇಕು. ಇಲ್ಲಿ ನಿಯಮಗಳಿವೆ.’
ತಾನ್‌ನ ತಲೆ ಈಗ ಅಲ್ಲಾಡಲಿಲ್ಲ. ಆದರೆ ಹುಬ್ಬುಗಳು ಮೇಲೇರಿದವು. `ಹೋರಾಟದ ಗೋಷ್ಠಿ ನಡೆಸುವುದು ನನ್ನ ಜವಾಬ್ದಾರಿಗಳಲ್ಲಿ ಸೇರಿಲ್ಲ,’ ತೀಕ್ಷ್ಣವಾಗಿ ನುಡಿದ ತಾನ್ ಒಂದು ಕ್ಷಣ ಶಾನ್‌ನನ್ನು ಸುಮ್ಮನೆ ನೋಡಿದ. ‘ ನೀನು ಬಂದ ದಿನ ಝೊಂಗ್ ಈ ಕವರನ್ನು ನನಗೆ ಕೊಟ್ಟ. ಅದು ಅವನಿಗೆ ಭಯ ತಂದಿರಬೇಕು.ಆತ ನಿನ್ನ ಮೇಲೆ ನಿಗಾ ಇಟ್ಟಿದ್ದಾನೆ.’
ತಾನ್ ಈಗ ಎರಡನೆಯ ಕವರಿನತ್ತ ನೋಟ ಬೀರಿದ. ಒಂದಂಗುಲ ದಪ್ಪದ್ದು. ` ತನ್ನದೇ ಫೈಲು ತಯಾರಿಸಿದ್ದಾನೆ. ನಿನ್ನ ಬಗ್ಗೆ ವರದಿ ಕಳಿಸ್ತಾ ಇರ್‍ತಾನೆ. ನಾನೇನೂ ಕೇಳ್ತಾ ಇರ್‍ಲಿಲ್ಲ. ಅವನೇ ಕಳಿಸ್ತಿದಾನೆ. ತಾಮ್‌ಜಿಂಗ್ ಗೋಷ್ಠಿಯ ವಿವರಗಳು, ಫಲಿತಾಂಶಗಳು ಇಲ್ಲಿವೆ. ಕೆಲಸದ ಬಗ್ಗೆ ವಿವರಗಳಿವೆ. ಯಾಕೆ ಹಾಗೆ ಮಾಡ್ತಾ ಇದೀಯ? ನೀನು ಖಿನ್‌ಗೆ ಸೇರಿದವನಂತೆ.’
ಶಾನ್ ಅಲ್ಲಿದ್ದ ಎರಡು ಫೋಲ್ಡರುಗಳತ್ತ ನೋಟ ಬೀರಿದ. ಒಂದು, ಹಳದಿ ಹಾಳೆಯನ್ನು ಹೊಂದಿದೆ. ಇನ್ನೊಂದು ಕೋಪೋದ್ರಿಕ್ತ ಜೈಲರನ ಟಿಪ್ಪಣಿಗಳಿರುವ ಚಿಂದಿಗಳು.
ಅವೇ ಅವನ ಹಿಂದಿನ ಬದುಕು. ಅವೇ ಅವನ ಮುಂದಿನ ಬದುಕೂ…
ತಾನ್ ಮತ್ತೆ ಚಹಾ ಹೀರಿದ. `ಆದರೆ ನೀನು ಅಧ್ಯಕ್ಷರ ಜನ್ಮದಿನವನ್ನು ಆಚರಿಸಲಿಕ್ಕೆ ಹೇಳ್ದೆಯಂತೆ.’ ಎರಡನೆಯ ಫೋಲ್ಡರ್  ತೆಗೆದು ಓದುತ್ತ ತಾನ್ ಹೇಳಿದ ` ತೀರಾ ಸೃಜನಶೀಲ ನೀನು.’ ತಾನ್ ಸಿಗರೇಟಿನ ಹೊಗೆ ಛಾವಣಿಯತ್ತ ಸಾಗುತ್ತಿರುವುದನ್ನೇ ನೋಡತೊಡಗಿದ. `ನಿನ್ನ ಬ್ಯಾನರ್ ಪ್ರಕರಣವಾದ ೨೪ ತಾಸುಗಳ ಒಳಗೇ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿದ್ದ ಕರಪತ್ರಗಳು ನಮಗೆ ಸಿಕ್ಕಿದವು ಅನ್ನೋದು ನಿಂಗೆ ಗೊತ್ತ? ಮರುದಿನವೇ ಇನ್ನೊಂದು ಅನಾಮಿಕ ಅರ್ಜಿಯೊಂದು ನನ್ನ ಡೆಸ್ಕಿನ ಮೇಲಿತ್ತು. ಅದರ ಪ್ರತಿಗಳು ಬೀದೀಲಿ ಹರಾಜಾಗಿದ್ದವು. ನಮಗೆ ಬೇರೆ ದಾರೀನೇ ಇರಲಿಲ್ಲ. ನೀನು ನಮಗೆ ಬೇರೆ ಚಾನ್ಸೇ ಕೊಡಲಿಲ್ಲ.’
ಶಾನ್ ನಿಟ್ಟುಸಿರು ಬಿಟ್ಟು ನೋಡಿದ. ರಹಸ್ಯ ಒಡೆದಿದೆ. ಲೋಕೇಶ್ ಬಿಡುಗಡೆ ಪ್ರಕರಣದಲ್ಲಿ ತನ್ನನ್ನು ಸರಿಯಾಗಿ ಶಿಕ್ಷಿಸಲಿಲ್ಲ ಎಂದು ತಾನ್ ನಿರ್ಧರಿಸಿದ್ದಾನೆ. `ಅವನನ್ನು ಮೂವತ್ತೈದು ವರ್ಷಗಳ ಸೆರೆವಾಸಕ್ಕೆ ದೂಡಲಾಗಿತ್ತು.’ ಶಾನ್‌ನ ದನಿ ಪಿಸುಗುಡುವುದಕ್ಕಿಂತ  ಕೊಂಚ ಎತ್ತರದ ಸ್ತರದಲ್ಲಿದೆ. `ರಜೆಗಳಲ್ಲಿ ಅವನ ಹೆಂಡತಿ ಬಂದು ಸೆರೆಮನೆಯ ಹೊರಗಡೆ ಕುಳಿತುಕೊಳ್ತಿದ್ದಳು.’ ಶಾನ್‌ಗೆ  ಯಾಕೆ ಈ ವಿವರಣೆ ಕೊಡುತ್ತಿದ್ದೇನೆಂಬ ಅರಿವೇ ಇರಲಿಲ್ಲ. ಮಾವೋನಿಗಾದರೂ ಈ ವಿವರಣೆ ಬೇಕೆಂದು ಶಾನ್ ಮುಂದುವರೆಸಿದ,` ಐವತ್ತು ಅಡಿಗಳಿಗಿಂತ ಹತ್ತಿರಕ್ಕೆ ಹೋಗಲು ಅನುಮತಿಯಿಲ್ಲ.’ ಮಾವೋ ಚಿತ್ರಕ್ಕೆ ಶಾನ್ ಹೇಳಿದ. `ಮಾತನಾಡಲಾಗದಷ್ಟು ದೂರ. ಅದಕ್ಕೇ ಅವರಿಬ್ರೂ ಪರಸ್ಪರ ಕೈ ಬೀಸುತ್ತಿದ್ದರು. ಗಂಟೆಗಳ ಕಾಲ ಅವರು ಕೈ ಬೀಸುತ್ತಲೇ ಇರ್‍ತಿದ್ದರು…’
ತಾನ್ ಮುಖದ ಮೇಲೆ ಒಂದು ಕಂಡೂ ಕಾಣದಂಥ ಹರಿತವಾದ ನಗೆ ಸುಳಿಯಿತು. `ನಿನಗೆ ತರಡು ಇರೋದು ನಿಜ ಕಾಮ್ರೇಡ್.’ ಕರ್ನಲ್ ಅವನನ್ನು ಅಣಕಿಸುತ್ತಿದ್ದ. ಖೈದಿಗೆ ಕಾಮ್ರೇಡ್ ಎಂದು ಕರೆಸಿಕೊಳ್ಳುವ ಯಾವ ಅರ್ಹತೆಯೂ ಇರಲಿಲ್ಲ. `ಅದು ತೀರಾ ಜಾಣತನದ ಕೆಲಸ. ಒಂದು ಪತ್ರವಾಗಿದ್ದರೆ  ಅಶಿಸ್ತಿನ ಮೇಲೆ ಕ್ರಮ ಜರುಗುತ್ತಿತ್ತು. ನೀನು ಕಿರುಚಲು ಯತ್ನಿಸಿದ್ದರೆ ಬಾಯಿ ಮುಚ್ಚಿಕೊಡು ಇರುವಂತೆ ಹೊಡೆತ ಬೀಳುತ್ತಿತ್ತು. ನಿನ್ನ ಸ್ವಂತ ಮನವಿಯೇನಾದ್ರೂ ಬಂದಿದ್ರೆ ಅದನ್ನು ಸುಟ್ಟು ಹಾಕ್ತಿದ್ದರು…’
ತಾನ್ ಸಿಗರೇಟಿನ ಹೊಗೆಯನ್ನು  ಹೀರಿದ. ` ಇಷ್ಟಾಗಿಯೂ ನೀನು ವಾರ್ಡನ್ ಝೊಂಗ್ ಒಬ್ಬ ಮೂರ್ಖ ಅನ್ನೋ ಥರ ತೋರಿಸಿಬಿಟ್ಟೆ. ಅದಕ್ಕೇ ಆತ ನಿನ್ನನ್ನು ಸದಾ ದ್ವೇಷಿಸ್ತಾ ಇರ್‍ತಾನೆ. ಆ ಬ್ರಿಗೇಡಿನಿಂದ ನಿನ್ನನ್ನು ವರ್ಗ ಮಾಡಬೇಕೆಂದು ಆತ ಕೇಳಿದ್ದ. ನೀನು ಸಮಾಜವಾದಿ ಸಂಬಂಧಗಳನ್ನು ಒಡೆದು ಹಾಕುವ ಸಂಚುಕೋರ ಎಂದ. ಕಾವಲುಗಾರರೂ ತೀರಾ ಸಿಟ್ಟಾಗಿದ್ದರು. ಸಚಿವ ಖಿನ್‌ನ ವಿಶೇಷ ಅತಿಥಿಗೆ ಯಾವುದಾದರೂ ಅಪಘಾತ ಆಗಬಹುದಿತ್ತು. ನಾನು ಬೇಡ ಅಂದೆ. ವರ್ಗಾವಣೆ ಇಲ್ಲ. ಅಪಘಾತವೂ ಇಲ್ಲ.’
ಶಾನ್ ಈಗ ಮೊತ್ತಮೊದಲ ಬಾರಿಗೆ ತಾನ್‌ನ ಕಣ್ಣುಗಳನ್ನೇ ನೇರವಾಗಿ ನೋಡಿದ. ಲ್ಹಾದ್ರಂಗ್ ಒಂದು ಗುಲಾಗ್ ಕೌಂಟಿ. ಗುಲಾಗ್ನಲ್ಲಿ ವಾರ್ಡನ್‌ಗಳು ಹೇಳಿದ್ದೇ ಸತ್ಯ.
`ಅದು ಅವನಿಗಾದ ಮುಜುಗರ. ನನಗಲ್ಲ. ಮುದುಕನನ್ನು ಬಿಡುಗಡೆ ಮಾಡಿದ್ದೇ ಸರಿಯಾದ ಕ್ರಮವಾಗಿತ್ತು. ಅವನಿಗೆ ಡಬಲ್ ರೇಶನ್ ಪುಸ್ತಕ ಕೊಟ್ಟರು.’ ಮತ್ತೆ ಹೊಗೆ ಬಿಡುತ್ತ ತಾನ್ ನುಡಿದ `ತಪ್ಪನ್ನು ಸರಿ ಮಾಡೋದಕ್ಕೆ..’
ತಾನ್ ಆ ಫೋಲ್ಡರನ್ನು ಮುಚ್ಚಿದ. `ಆದ್ರೂ ನಾನು ನಮ್ಮ  ರಹಸ್ಯಮಯ ಅತಿಥಿಯ ಬಗ್ಗೆ ಕುತೂಹಲ ಹೊಂದಿದ್ದೆ. ಅಷ್ಟು ರಾಜಕೀಯ. ಅಷ್ಟು ಅದೃಶ್ಯ. ನೀನು ಎಸೆಯಬಹುದಾದ ಇನ್ನೊಂದು ಬಾಂಬ್ ಬಗ್ಗೆ ನಾನಾದ್ರೂ ಯಾಕೆ ಹೆದರ್‍ಕೋಬೇಕು ಎಂದು ನಾನು ಯೋಚಿಸಿದೆ.’ ಅವನ ತುಟಿಯ ಮೆಲೆ ಇನ್ನೊಂದು ಸಿಗರೇಟು. ` ನಾನು ಬೀಜಿಂಗ್‌ನಲ್ಲಿ ನನ್ನದೇ ವಿಚಾರಣೆ ಮಾಡ್ದೆ. ಮೊದಲು ಹೆಚ್ಚಿಗೆ ಯಾವ ಮಾಹಿತಿಯೂ ಇಲ್ಲ ಅಂದ್ರು. ಖಿನ್ ಕೂಡಾ ಸಿಗಲಿಲ್ಲ. ಆಸ್ಪತ್ರೇಲಿ ಇದಾನೆ. ಖಿನ್ ಬಗ್ಗೆ ಹೆಚ್ಚಿನ ಮಾಹಿತಿ ಸಿಗ್ತಾನೇ ಇಲ್ಲ.’
ಶಾನ್ ಮತ್ತಷ್ಟು ಬಿಗಿಯಾದ. ಮತ್ತೆ ಗೋಡೆಯತ್ತ ನೋಡಿದ. ಅಧ್ಯಕ್ಷ ಮಾವೋ ಈಗ ಬೇರೆ ಕಡೆ ನೋಡ್ತಿದಾನೆ ಎಂಬ ಭಾವ.
`ಆದರೆ ಅದು ಒಂದು ವಾರ ತುಂಬಾ ತಣ್ಣಗಿತ್ತು. ನನ್ನ ಕುತೂಹಲ ಇನ್ನಷ್ಟು ಹೆಚ್ಚಿತು. ನಾನು ಬಿಡಲಿಲ್ಲ. ಫೈಲಿನಲ್ಲಿ ಇರೋ ಮೆಮೋನ ಸಾರ್ವಜನಿಕ ಭದ್ರತಾ ಬ್ಯೂರೋದ ಮುಖ್ಯ ಕಚೇರೀಲಿ ತಯಾರಿಸಿದ್ದು ಅನ್ನೋದು ಗೊತ್ತಾಯ್ತು. ನಿನ್ನನ್ನು ಬಂಧಿಸಿದ ಝಿನ್‌ಝಿಯಾಂಗ್ ನ ಕಚೇರೀಲಿ ಅಲ್ಲ. ಅಥವಾ ನಿನ್ನನ್ನು ಸೆರೆಮನೆಗೆ ತಳ್ಳಿದ ಲ್ಹಾಸಾದಲ್ಲೂ ಅಲ್ಲ. ಒಂಬೈನೂರಕ್ಕೂ ಹೆಚ್ಚು ಖೈದಿಗಳಿದಾರೆ. ಆದ್ರೆ ನಿನ್ನೊಬ್ಬನ ಫೈಲನ್ನು ಮಾತ್ರ ಬೀಜಿಂಗ್ ಕಚೇರೀಲಿ ತಯಾರಿಸಿದಾರೆ. ನೀನು ಇಷ್ಟು ವಿಶೇಷ ವ್ಯಕ್ತಿ ಅನ್ನೋದು ನಮಗೆ ಎಷ್ಟೂ ಇಷ್ಟವಿಲ್ಲದ ವಿಚಾರವಾಗಿತ್ತು ಅನ್ಸುತ್ತೆ.’
ಶಾನ್ ಮತ್ತೆ ತಾನ್‌ನ ಕಣ್ಣುಗಳನ್ನೇ ನೋಡಿದ. `ಅಮೆರಿಕಾದ ಗಾದೆ ಗೊತ್ತ? ಪ್ರತಿಯೊಬ್ಬನೂ ಹದಿನೈದು ನಿಮಿಷಗಳ ಕಾಲ ಪ್ರಸಿದ್ಧವಾಗಿರ್‍ತಾನೆ.’
ತಾನ್ ಸ್ತಬ್ಧವಾದ. ತಲೆಯಾಡಿಸುತ್ತ ಮತ್ತೆ ಶಾನ್‌ನನ್ನೇ ನಿರುಕಿಸಿದ. ಶಾನ್ ಹೇಳಿದ್ದು ಸರಿಯಾಗಿ ಕೇಳಿಸಲಿಲ್ಲ ಎಂಬಂತೆ ಮುಖಭಾವ. ಕೊನೆಗೆ ಮತ್ತೆ ಕಾಣಿಸಿದ್ದು ಅದೇ ಹರಿತವಾದ ಕಿರುನಗೆ.
ಶಾನ್ ಹಿಂದುಗಡೆ ಸಣ್ಣ ಹೆಜ್ಜೆಸಪ್ಪಳ ಕೇಳಿಬಂತು.
`ಮೇಡಂ ಕೋ,’ ತಾನ್ ಹೇಳಿದ, ಅದೇ ತಣ್ಣಗಿನ ನಗು ಇನ್ನೂ ಮಿಂಚುತ್ತಿದೆ. `ನಮ್ಮ ಅತಿಥಿಗೆ ಇನ್ನಷ್ಟು ಚಹಾ ಬೇಕಿದೆ.’
ಬಡ್ತಿ ಸಿಗಲೂ ಬೇಕಾದಷ್ಟು ವಯಸ್ಸು ಈ ಮುದುಕನಿಗೆ ಇದ್ದಂತಿಲ್ಲ. ಈ ಹಂತದಲ್ಲೂ ಟಿಬೆಟಿನಲ್ಲಿ ಅಧಿಕಾರಿ ಅಂದರೆ ಒಂದು ಬಗೆಯ ದೇಶಭ್ರಷ್ಟತನವೇ.
`ನಾನು ಈ ನಿಗೂಢ ಶಾನ್ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿದುಕೊಂಡೆ,’ ತಾನ್ ಮುಂದುವರೆಸಿದ. `ಆತ ಆರ್ಥಿಕ ಸಚಿವಾಲಯದಲ್ಲಿ ಒಬ್ಬ ಮಾದರಿ ಕೆಲಸಗಾರನಾಗಿದ್ದ. ನ್ಯಾಯದ ಮುಂದುವರಿಕೆಗೆ ಅಧ್ಯಕ್ಷರಿಂದ ವಿಶೇಷ ಕೊಡುಗೆಗಳ ಶ್ಲಾಘನೆ ಸಿಕ್ಕಿತ್ತು. ಅವನಿಗೆ ಪಾರ್ಟಿ ಸದಸ್ಯತ್ವವನ್ನೂ ಕೊಡುವ ಕರೆ ಬಂದಿತ್ತು. ವೃತ್ತಿಯ ಅರ್ಧ ಹಾದಿಯಲ್ಲಿ ಇರುವವರಿಗೆ ತುಂಬಾ ವಿಶೇಷವಾದ ಕರೆಯೇ. ಆದರೆ ಅವನು ಇನ್ನೂ ವಿಶೇಷವಾದದ್ದನ್ನು ಮಾಡಿದ. ಆತ ಅದನ್ನು ತಿರಸ್ಕರಿಸಿದ. ತೀರಾ ಸಂಕೀರ್ಣ ಮನುಷ್ಯ.’
ಶಾನ್ ಕುಳಿತ. `ನಾವು ತೀರಾ ಸಂಕೀರ್ಣವಾದ ಜಗತ್ತಿನಲ್ಲಿ ಬದುಕಿದ್ದೇವೆ.’ ತನ್ನ ಕೈಗಳು ತನ್ನರಿವೇ ಇಲ್ಲದ ಹಾಗೆ ಒಂದು ಮುದ್ರೆಯನ್ನು ರೂಪಿಸುತ್ತಿವೆ ಎಂದು ಶಾನ್‌ಗೆ ಅರಿವಾಗುತ್ತಿದೆ.
ಮನಸ್ಸಿನ ವಜ್ರ.
`ಅದರಲ್ಲೂ ಅವನ ಹೆಂಡತಿ ಪಕ್ಷದ  ಒಬ್ಬ ಸದಸ್ಯೆ ಎಂದು ತುಂಬಾ ಗೌರವ ಹೊಂದಿರೋವಾಗ… ಚೆಂಗ್‌ದು ನಲ್ಲಿ ಹಿರಿಯ ಅಧಿಕಾರಿಣಿಯಾಗಿರೋವಾಗ. ಉಹ್ಞು…ಮಾಜಿ ಪತ್ನಿ ಅಂತ ನಾನು ಹೇಳಬೇಕಿತ್ತು.’
ಶಾನ್ ತಬ್ಬಿಬ್ಬಾಗಿ ನೋಡಿದ.
`ಗೊತ್ತಿಲ್ವ ನಿಂಗೆ?’ ತಾನ್ ಮುಖದಲ್ಲಿ ಸಮಾಧಾನದ ನಗೆ. `ಎರಡು ವರ್ಷಗಳ ಹಿಂದೆ ಡೈವೋರ್ಸ್ ಆಯ್ತು. ವಾಸ್ತವವಾಗಿ ಹೇಳಬೇಕಂದ್ರೆ ಅವಳೇ ಬಿಟ್ಟಳು. ಯಾವತ್ತೂ ಜೊತೆಗೆ ಬದುಕಿದ್ದೇ ಇಲ್ಲ ಅಂದಳು.’
`ನಾವು,-‘ ಶಾನ್ ಬಾಯಿ ಒಣಗುತ್ತಿತ್ತು….`ನಮಗೆ ಒಬ್ಬ ಮಗ ಇದಾನೆ.’
`ನೀನು ಹೇಳಿದ ಹಾಗೆಯೇ. ಒಂದು ಸಂಕೀರ್ಣ ಜಗತ್ತು.’
ತನ್ನ ದಾಢಸಿತನದಲ್ಲಿ ಕಂಡ ನೋವನ್ನು ಎದುರಿಸಿ ಹೋರಾಡಲು ಶಾನ್ ಕಣ್ಣು ಮುಚ್ಚಿದ.
ಅವರು ತನ್ನ ಬದುಕಿನ ಕೊನೆಯ ಅಧ್ಯಾಯವನ್ನು ಮರುಬರೆಯುವ ಕೆಲಸವನ್ನು  ಮುಗಿಸಿದ್ದಾರೆ. ಅವರು ತನ್ನ ಮಗನನ್ನು ನಿವಾರಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಅವರು ತನಗೆ ನಿಕಟವಾಗಿದ್ದರು ಅಂತೇನಲ್ಲ. ಮಗ ಹುಟ್ಟಿದ ನಂತರ ಈ ಹದಿಮೂರು ವರ್ಷಗಳಲ್ಲಿ ಆತ ಹೆಚ್ಚೆಂದರೆ ನಲವತ್ತು ದಿನಗಳ ಕಾಲ ಅವನೊಂದಿಗಿದ್ದ. ಸೆರೆಮನೆಯಲ್ಲಿದ್ದಾಗ ತಾನು ಕಾಣುತ್ತಿದ್ದ ಕನಸು ನೆನಪಾಗುತ್ತಿದೆ. ಮುಂದೊಂದು ದಿನ ಈ ಹುಡುಗನ ಜೊತೆಗೆ ತನ್ನ ಸಂಬಂಧ ಹೇಗಿರಬಹುದು, ಹೇಗೆ ತನ್ನ ತಂದೆಯೊಡನೆ ಹೊಂದಿದ್ದಂಥ ನಿಕಟ ಸಂಬಂಧವನ್ನೇ ಹೊಂದಬಹುದೆ…ಹೀಗೆ. ಸದಾ ರಾತ್ರಿ ಕಣ್ಣುಬಿಟ್ಟುಕೊಂಡೇ ಮಲಗುತ್ತಿದ್ದ. ಹುಡುಗ ಈಗ ಹೇಗಿರಬಹುದು… ತನ್ನ ತಂದೆಯನ್ನು ಮತ್ತೆ ಕಂಡಾಗ ಆತನಿಗೆ ಏನನ್ನಿಸಬಹುದು….ಈ ಊಹೆಯ ಸಂಬಂಧಗಳೇ ಶಾನ್‌ನ ಕೊನೆಯ ನಿರೀಕ್ಷೆಗಳಾಗಿದ್ದವು. ಶಾನ್ ತನ್ನ ಅಂಗೈಗಳನ್ನು ಕೆನ್ನೆಗೆ ಊರಿ ಕೂತ.
ಶಾನ್ ಕಣ್ಣು ತೆರೆದಾಗ ತಾನ್ ತುಂಬಾ ಸಮಾಧಾನದಿಂದ ಶಾನ್‌ನತ್ತ ನೋಟ ಬೀರಿದ್ದು ಕಾಣಿಸಿತು. ` ನಿನ್ನ ಬ್ರಿಗೇಡ್ ನಿನ್ನೆ ಒಂದು ದೇಹವನ್ನು ಕಂಡಿತು,’ ಹಠಾತ್ತಾಗಿ ತಾನ್ ಬಾಯಿಂದ ಮಾತು ಹೊರಬಿತ್ತು.
`ಲಾಗೊಯ್ ಖೈದಿಗಳು ಸಾವಿಗೆ ತೀರಾ ಪರಿಚಿತರು’ ಕೊರಡಿನಿಂದ ಹೊರಬಿದ್ದ ದನಿ. ಮಗನಿಗೆ ಖಂಡಿತ ಶಾನ್ ಸತ್ತುಹೋಗಿದ್ದಾನೆ ಎಂದೇ ಹೇಳಿರುತ್ತಾರೆ. ಆದರೆ ಶಾನ್ ಸತ್ತಿದ್ದು ಹೇಗೆ? ಹೀರೋ ಥರಾನಾ? ಅಥವಾ ಅವಮಾನಿತನಾಗೋ? ಅಥವಾ ಗುಲಾಗ್‌ನಲ್ಲಿ ಗುಲಾಮನಾಗೋ?
ಮತ್ತೆ ತಾನ್ ಹೊಗೆ ಬಿಡುತ್ತಿದ್ದ. `ಕೆಲಸ ಮಾಡುವವರ ನಡುವೆ ಬದಲಾವಣೆ ಯಾವತ್ತಿಗೂ ನಿರೀಕ್ಷಿತವೇ.’ ಆದರೆ ತಲೆಯಿಲ್ಲದ ಪಾಶ್ಚಾತ್ಯ ಪ್ರವಾಸಿಯನ್ನು ಕಾಣುವುದು ಮಾತ್ರ ಅಸಾಮಾನ್ಯ…’
ಶಾನ್ ಮುಖ ತಿರುಗಿಸಿದ. ಇದನ್ನೆಲ್ಲ ತಿಳಿಯಲು ಶಾನ್ ಬಯಸಿರಲಿಲ್ಲ. ಈ ಬಗ್ಗೆ ಕೇಳಲೂ ಶಾನ್ ಬಯಸಿಲ್ಲ.  ತನ್ನ ಚಹದ ಬಟ್ಟಲನ್ನೇ ನೋಡುತ್ತ ಕುಳಿತ. `ಆತ ಯಾರೆಂದು ನಿನಗೆ ಖಚಿತವಾಗಿದೆ ತಾನೆ?’
`ಸ್ವೆಟರ್ ಮಾತ್ರ ಕಾಶ್ಮೀರದ್ದು. ಅವನ ಅಂಗಿಯ ಕಿಸೆಯಲ್ಲಿ ೨೦೦ಕ್ಕೂಹೆಚ್ಚು ಅಮೆರಿಕನ್ ಡಾಲರ್‌ಗಳಿದ್ದವು. ಅಮೆರಿಕದ ವೈದ್ಯಕೀಯ ಸಾಧನ ಸಂಸ್ಥೆಯ ಒಂದು ಬ್ಯುಸಿನೆಸ್ ಕಾರ್ಡ್ ಇತ್ತು. ಆತ ಬಹುಶಃ ಅನಧಿಕೃತ ಪಾಶ್ಚಾತ್ಯ ಭೇಟಿಕಾರ.’
`ಅವನ ಬಣ್ಣ ತೀರಾ ಕಡುವಾಗಿತ್ತು. ದೇಹದ ಮೇಲೆ ಕಪ್ಪು ಕೂದಲು. ಆತ ಏಶಿಯಾದವನಾಗಿರಬಹುದು. ಅಥವಾ ಚೀನೀ ಕೂಡಾ ಆಗಿರಬಹುದು.’
`ಅಂಥ ಉನ್ನತ ಸ್ತರದ ಒಬ್ಬ ಚೀನೀ? ಅಸಾಧ್ಯ. ಅದರಲ್ಲೂ ಅಮೆರಿಕ ಕಂಪೆನಿಯ ವಿಸಿಟಿಂಗ್ ಕಾರ್ಡ್.’ ತಾನ್ ಜಯ ದೊರೆತಂತೆ ಮಾತಾಡತೊಡಗಿದ.`ಲ್ಹಾದ್ರಂಗ್‌ನಲ್ಲಿ ಅನುಮತಿ ಸಿಕ್ಕಿರೋ ಪಾಶ್ಚಾತ್ಯರು ಎಂದರೆ ನಮ್ಮ ವಿದೇಶೀ ಹೂಡಿಕೆ ಯೋಜನೆಯಲ್ಲಿ ಕಾರ್ಯಾಚರಣೆ ಮಾಡ್ತಿರೋರು ಮಾತ್ರ. ಅವರು ಕಾಣೆಯಾಗಲ್ಲ. ಖಂಡಿತಾ ಬೇಗ ಗೊತ್ತಾಗುತ್ತೆ. ಇನ್ನೆರಡು ವಾರದಲ್ಲಿ ಅಮೆರಿಕದಿಂದ ಪ್ರವಾಸಿ ತಂಡಗಳು ಬರೋದಕ್ಕೆ ಶುರು. ಇನ್ನೂ ಬಂದಿಲ್ಲ.’ ತಾನ್ ಸಿಗರೇಟಿನಿಂದ ಕೊನೆ ಬಾರಿಗೆ ಎಂಬಂತೆ ಹೊಗೆ ಎಳೆದುಕೊಂಡ. `ನಿನಗೆ ಈ ಪ್ರಕರಣದಲ್ಲಿ ಇರೋ ಆಸಕ್ತಿಯನ್ನ ತಿಳ್ಕೊಳ್ಳೋದಕ್ಕೆ ನಾನು ಉತ್ಸುಕನಾಗಿದೇನೆ.’
ಶಾನ್ ಸೀದಾ ತಾನ್‌ನತ್ತ, ಆಮೇಲೆ ಘೋಷಣಾ ಪೋಸ್ಟರಿನತ್ತ ನೋಡಿದ. ಅದನ್ನು ಒಂದಕ್ಕಿಂತ ಹೆಚ್ಚಿನ ಅರ್ಥ ಬರುವಂತೆ ಓದಿಕೊಳ್ಳಬಹುದು. `ಪ್ರಕರಣ?’ ಶಾನ್ ಪ್ರಶ್ನಿಸಿದ.
`ಅಲ್ಲಿ ಈಗ ಒಂದು ವಿಚಾರಣೆ ಆಗಲೇಬೇಕು. ಒಂದು ಔಪಚಾರಿಕ ವರದಿ. ನಾನು ಲ್ಹಾದ್ರಂಗ್ ಕೌಂಟಿಯ ನ್ಯಾಯಿಕ ಆಡಳಿತದ ಉಸ್ತುವಾರಿ ಹೊತ್ತವನೂ ಹೌದು.’
ಇದು ಒಂಥರದ ಬೆದರಿಕೆಯ ಹೇಳಿಕೆಯೇ ಎಂದು ಶಾನ್ ಯೋಚಿಸಿದ. `ಈ ಶೋಧವನ್ನು ನನ್ನ ತಂಡ ಮಾಡಿದ್ದಲ್ಲ. ನ್ಯಾಯವಾದಿಗಳಿಗೆ ಹೇಳಿಕೆಗಳು ಬೇಕಾದ್ರೆ ಅವರೆಲ್ಲ  ಅಲ್ಲಿ ಕಾವಲುಗಾರರನ್ನು ವಿಚಾರಿಸಬೇಕು. ನಾವು ನೋಡಿದ್ದನ್ನೇ ಅವೂ ನೋಡಿದಾರೆ. ನಾನು ಕಲ್ಲುಗಳನ್ನು ಅತ್ತಿತ್ತ ಸರಿಸಿದೆ ಅಷ್ಟೆ.’ ಶಾನ್ ಕುರ್ಚಿಯ ತುದಿಗೆ ಬಂದು ಕೂತ. ಯಾವುದೋ ತಪ್ಪಿಗಾಗಿ ತನ್ನನ್ನು ಕರೆಸಿದ್ದಾರೆಯೆ?
`ಪ್ರಾಸಿಕ್ಯೂಟರ್ ಈಗ ಒಂದು ತಿಂಗಳ ರಜೆ ತಗೊಂಡಿದಾನೆ…ಕರಾವಳೀಲಿ ಕಾಲ ಕಳೀತಿದಾನೆ.’
`ನ್ಯಾಯದ ಚಕ್ರಗಳು ಯಾವಾಗ್ಲೂ ನಿಧಾನವಾಗಿಯೇ ತಿರುಗುತ್ತಾವಂತೆ. ಅದೇ ಕ್ರಮ.’
`ಈಗಲ್ಲ. ಅಮೆರಿಕನ್ ಪ್ರವಾಸಿಗಳು ಬರೋವಾಗ್ಲಂತೂ ಖಂಡಿತ ಅಲ್ಲ. ಅವರಿಗಿಂತ ಮುಚೆ ನ್ಯಾಯ ಸಚಿವಾಲಯದ ತನಿಖಾ ತಂಡ ಬರುತ್ತೆ. ಐದು ವರ್ಷಗಳಲ್ಲಿ ಅವರದ್ದು ಮೊದಲನೇ ತನಿಖೆ. ಬಹಿರಂಗ ಸಾವಿನ ಕಡತ ತೀರಾ ತಪ್ಪು ಅಭಿಪ್ರಾಯ ಮೂಡಿಸಬಹುದು.’
ಶಾನ್‌ನೊಳಗೇ ಈಗ ಧೈರ್ಯದ ಗಂಟೊಂದು ತನ್ನಿಂತಾನೇ ಕಟ್ಟಿಕೊಳ್ಳತೊಡಗಿತು. `ಪ್ರಾಸಿಕ್ಯೂಟರ್‌ಗೆ ಸಹಾಯಕರಿರಬೇಕಲ್ವ?’
`ಈಗ ಯಾರೂ ಇಲ್ಲ. ಆದ್ರೆ ನೀನು..ಶಾನ್…’ ತಾನ್ ಈಗ ಶಾನ್‌ನ ಮುಖವನ್ನೇ ದಿಟ್ಟಿಸುತ್ತಿದ್ದ.`ನೀನು ಹಿಂದೆ ಆರ್ಥಿಕ ಸಚಿವಾಲಯದ ಪ್ರಧಾನ ನಿರೀಕ್ಷಕನಾಗಿದ್ದೆ.’
ಇಲ್ಲಿ ಯಾವುದೇ ಲೋಪವೂ ಆಗಿಲ್ಲ. ಶಾನ್ ನಿಂತ. ಕಿಟಕಿಯ ಬಳಿ ನಡೆದ. ಈ ಯತ್ನವೇಅವನ ಎಲ್ಲ ಶಕ್ತಿಯನ್ನೂ ಕಬಳಿಸಿದಂತೆ ಅನ್ನಿಸಿತು. ಅವನ ತೊಡೆಗಳು ನಡುಗುತ್ತಿರೋ ಅನುಭವ. ` ತುಂಬಾ ಹಿಂದೆ.’ ಶಾನ್ ಶಕ್ತಿ ಒಟ್ಟುಗೂಡಿಸಿ ನುಡಿದ.` ಅದೇ ಬೇರೆ ಬದುಕು.’
`ಬೀಜಿಂಗಿನಲ್ಲೇ ತೀರಾ ಪ್ರಸಿದ್ಧವಾದ ಎರಡು ಲಂಚದ ಪ್ರಕರಣಗಳನ್ನು ಶೋಧಿಸಿದ್ದಕ್ಕೆ ನೀನೇ ಹೊಣೆ ಅಲ್ವೆ? ನಿನ್ನ ಕಾಲದಲ್ಲಿ ನೀನು ಡಜನ್ನುಗಟ್ಟಳೆ ಅದಕ್ಷ ಅಧಿಕಾರಿಗಳನ್ನು ಲೇಬರ್ ಕ್ಯಾಂಪುಗಳಿಗೆ ಕಳಿಸಿದೆ. ಅಥವಾ ಇನ್ನೂ ಕಠಿಣ ಶಿಕ್ಷೆಗೆ ದೂಡಿದೆ. ಸಹಜವಾಗಿಯೇ ನಿನ್ನ ಹೆಸರನ್ನು ನೆನಪಿಟ್ಟುಕೊಂಡಿರೋರೂ ಕೆಲವರು ಇದ್ದೇ ಇರ್‍ತಾರೆ. ನಿನಗೆ ಹೆದರೋರೂ. ನೀನು ಇದ್ದ ಹಳೆ ಸಚಿವಾಲಯದಲ್ಲಿ ಯಾರೋ ನೀನು ಜೈಲಿನಲ್ಲಿ ಇದ್ದದ್ದೇ ಸರಿ ಅಂತಿದ್ರು.  ಯಾಕಂದ್ರೆ ನೀನೊಬ್ನೇ ಬೀಜಿಂಗ್‌ನಲ್ಲಿ ಇದ್ದ ಪ್ರಾಮಾಣಿಕ ವ್ಯಕ್ತಿ ಅಂತೆ. ಕೆಲವರು ನೀನು ಪಶ್ಚಿಮಕ್ಕೆ ಹೋದ ಅಂದ್ರು. ಆದ್ರೆ ನೀನು ಇಲ್ಲೇ ಇದೀಯ..’
ಶಾನ್ ಕಿಟಕಿಯಾಚೆ ನೋಡಿದ. ಅಲ್ಲಿ ಏನನ್ನೂ ಕಾಣಲಾಗಲಿಲ್ಲ. ಅವನ ಕೈಗಳು ನಡುಗುತ್ತಿವೆ.
`ನೀನು ಕೆಲಸ ಬಿಟ್ಟೆಯಂತೆ….. ಬ್ಯೂರೋ ಮತ್ತೆ ನಿನ್ನನ್ನು ಕರೆತಂದಿತಂತೆ. ಯಾಕಂದ್ರೆನಿನಗೆ ತುಂಬಾ ವಿಷಯ ಗೊತ್ತಿತ್ತಂತೆ…’
`ನಾನು ಎಂದೂ ಪ್ರಾಸಿಕ್ಯೂಟರ್ ಆಗಿರ್‍ಲಿಲ್ಲ.’ ಕಿಟಕಿಯ ಗಾಜನ್ನು ನೋಡುತ್ತ ಶಾನ್ ನುಡಿದ. ಅವನ ದನಿ ಒಡೆದಿತ್ತು. ` ನಾನು ಬರೀ ಸಾಕ್ಷ್ಯ ಕಲೆ ಹಾಕ್ತಿದ್ದೆ.’
`ಅಂಥ ಸೂಕ್ಷ್ಮಗಳನ್ನು ಮಾತಾಡ್ಲಿಕ್ಕೆ ನಾವು ಬೀಜಿಂಗ್‌ನಿಂದ ತುಂಬಾ ದೂರ ಇದೇವೆ. ನಾನು ಇಂಜಿನಿಯರ್ ಆಗಿದ್ದೆ.’ ತಾನ್ ಹಿಂದೆ ತಿರುಗಿ ನುಡಿದ.` ನಾನು ಒಂದು ಕ್ಷಿಪಣಿ ನೆಲೆಯನ್ನ ನೋಡಿಕೊಳ್ತಿದ್ದೆ. ನಾನು ಒಂದು ಕೌಂಟಿ ನೋಡಿಕೊಳ್ಲಿಕ್ಕೆ ಅರ್ಹ ಅಂತ ಯಾರೋ ನಿರ್ಧಾರ ಮಾಡಿದ್ರು.’
`ನನಗೆ ಅರ್ಥ ಆಗ್ತಿಲ್ಲ,’ ಶಾನ್ ಕಟುವಾಗಿ ನುಡಿದ. ಕಿಟಿಯತ್ತ ಬಾಗಿದ. ಮತ್ತೆ ತನಗೆ ಶಕ್ತಿ ಬರುವುದೆ ಎಂಬ ಚಿಂತೆ ಆವರಿಸುತ್ತಿದೆ. `ಅದು ಬೇರೆಯದೇ ಬದುಕು. ನಾನೀಗ ಆ ಥರದ ವ್ಯಕ್ತಿ ಆಗಿ ಉಳಿದಿಲ್ಲ.’
`ನಿನ್ನ ಇಡೀ ಜೀವನ ಹೀಗೆ ಪತ್ತೇದಾರಿಗಿರಿಯಿಂದ ಕಳೆದಿದೆ. ಶಿಬಿರದಲ್ಲಿ ಮೂರು ವರ್ಷ ಅಂದ್ರೆ ಅಂಥಾ ಮಹಾ ಅಲ್ಲ.’
`ಬೇರೆ ಯಾರನ್ನಾದರೂ ಕರೀಬಹುದಲ್ಲ?’
`ಅದಾಗಲ್ಲ. ಹಾಗೆ ಮಾಡಿದ್ರೆ ಅದರಿಂದ ಸ್ವಾವಲಂಬಿತನ, ಸ್ವ ಸಾಮರ್ಥ್ಯದ ನಿದರ್ಶನ ಖಂಡಿತ ಆಗಲ್ಲ.’ ಪದಗಳನ್ನು ಹುಡುಕುತ್ತ ಶಾನ್ ನುಡಿದ.
`ಆದ್ರೆ ನನ್ನ ಫೈಲ್,’ ಶಾನ್ ಪ್ರತಿಭಟಿಸಿದ.`ನಾನು ಈಗಾಗಲೇ ಸಾಬೀತಾಗಿರೋ ಹಾಗೆ…’ ಉಹ್ಞು, ಮಾತಾಡಲಾಗುತ್ತಿಲ್ಲ. ಗಾಜಿನ ಮೇಲೆ ಕೈ ಊರಿದ. ನಾನೀಗ ಈ ಕಿಟಕಿಯನ್ನು ಒಡೆದು ಪರಾರಿಯಾಗಬಹುದು. ನಿನ್ನ ಆತ್ಮ ಖಚಿತವಾದ ಸಂತುಲನೆ ಹೊಂದಿದ್ದರೆ….ಚೋಜೆ ಹೇಳಿದ್ದ….. ನೀನು ಹೀಗೇ ಇನ್ನೊಂದು ಜಗತ್ತಿಗೆ ತೇಲಿಹೋಗಿಬಿಡಬಹುದು.
`ಏನು ಪೂವ್ ಆಗಿದೆ? ಝೊಂಗ್‌ನ ಹಾದಿಯಲ್ಲಿ ಮುಳ್ಳು ಎಂದೆ? ಹೌದು ಅಂದ್ಕೊ.’ ತಾನ್ ಆ ದಪ್ಪ ಫೈಲನ್ನು ತೆರೆದು ಹುಡುಕಲಾರಂಭಿಸಿದ. ` ನೀನು ಮಹಾ ಚಾಣಾಕ್ಷ, ತೀರಾ ಖಚಿತವಾದಿ ಅಂತ ನಾನೂ ಸಾಬೀತು ಮಾಡಬಲ್ಲೆ… ನಿನ್ನದೇ ದಾರಿಯಲ್ಲಿ ನೀನು ತೀರಾ ಜವಾಬ್ದಾರಿಯುತ. ಅಷ್ಟೇ ಅಲ್ಲ, ಉಳ್ಕೊಂಡಿದೀಯಾ ಕೂಡಾ. ನಿನ್ನಂಥವರಿಗೆ ಉಳಿದುಕೊಳ್ಳೋದೇ ಅತ್ಯಂತ ದೊಡ್ಡ ಕೌಶಲ್ಯ.’
ತಾನ್ ಹೇಳುತ್ತಿರೋದು ಏನು ಎಂದು ಶಾನ್‌ಗೆ ತಿಳಿಯಲಿಲ್ಲ ಎಂದೇನಲ್ಲ. ಶಾನ್ ತನ್ನ ಮೂಳೆ ದೇಹವನ್ನೇ ನೋಡತೊಡಗಿದ. `ನಾನು ಹಿನ್ನಡೆಯೋದರ ವಿರುದ್ಧ ಎಚ್ಚರಿಕೆ ಪಡೆದಿದೀನಿ. ನಾನು ಒಬ್ಬ ರಸ್ತೆಯ ಕಾರ್ಮಿಕ. ನಾನು ಹೊಸ ದಾರಿಗಳಲ್ಲಿ ಯೋಚಿಸಬೇಕು ಎಂದಾಗಿದೆ. ನಾನು ಜನರ ಅಭಿವೃದ್ಧಿ, ಸಮೃದ್ಧಿಗಾಗಿ ನಿರ್ಮಾಣ ಮಾಡುತ್ತೇನೆ.’ ದುರ್ಬಲರು ಹೇಳುವ ಕೊನೆಯ ಮಾತು. ಅನುಮಾನ ಇದ್ದಾಗ ಬಳಸುವ ಘೋಷಣೆ.
`ನಮಗ್ಯಾರಿಗೂ ಗತಕಾಲ ಎಂಬುದು ಇಲ್ದೇ ಇದ್ರೆ, ರಾಜಕೀಯ ಅಧಿಕಾರಿಗಳಿಗೆ ಕೆಲಸಾನೇ ಇರ್‍ತಿರಲಿಲ್ಲ. ಗತಕಾಲವನ್ನು ಎದುರಿಸುವಲ್ಲಿ ವಿಫಲನಾಗೋದು ನಿಜವಾದ ಅಪರಾಧ. ನೀನು ನಿನ್ನ ಗತಕಾಲವನ್ನು ಎದುರಿಸಬೇಕು ಅಂತ ನಾನು ಬಯಸ್ತೀನಿ. ಮತ್ತೆ ನಿನ್ನೊಳಗಿನ ಇನ್‌ಸ್ಪೆಕ್ಟರ್ ಜೀವ ಪಡೆಯಲಿ. ಕೊನೇ ಪಕ್ಷ ಕೆಲಕಾಲ.  ಸಚಿವಾಲಯವು ಯಾವ ಬಗೆಯ ವರದಿ ನಿರೀಕ್ಷೆ ಮಾಡ್ತಿದೆ ಅಂತ ನಂಗೊತ್ತಿಲ್ಲ. ನನಗೆ ಅದರ ಭಾಷೆ ಗೊತ್ತಿಲ್ಲ. ಇಲ್ಲಿ ಯಾರಿಗೂ ಗೊತ್ತಿಲ್ಲ. ನನಗೆ ಪ್ರಾಸಿಕ್ಯೂಟರ್‌ನಂಥವರ ಚಿಂತನೆಯ ಬೆಂಬಲವೇ ಇಲ್ಲ. ಇವೆಲ್ಲ ಎರಡು ಸಾವಿರ ಕಿಲೋಮೀಟರು ದೂರದಲ್ಲಿ ಇರೋವನ ಹತ್ತಿರ ಫೋನಿನಲ್ಲಿ ಮಾತಾಡೋ ವಿಷಯವೂ ಅಲ್ಲ. ನ್ಯಾಯ ಸಚಿವಾಲಯ ಅರ್ಥ ಆಗೋ ರೀತೀಲಿ ಈ ವಿಷಯದ ಬಗ್ಗೆ ವರದಿ ಆಗಬೇಕು. ಆ ವರದಿಯಿಂದ ಇನ್ನೂ ಹೆಚ್ಚಿನ ತನಿಖೆ ಆಗೋ ಹಾಗಿರಬಾರದು. ನಿನಗೆ ಬೀಜಿಂಗ್ ಶೈಲಿ ಇನ್ನೂ ಗೊತ್ತಿದೆ ಎಂದು ನಾನು ಸವಾಲು ಹಾಕಬಲ್ಲೆ.’
ಶಾನ್ ಕುರ್ಚಿಯಲ್ಲಿ ಕುಸಿದ. `ನೀನು ಹೀಗೆ ಮಾಡಕ್ಕಾಗಲ್ಲ.’
`ನಾನೇನೂ ಭಾರಿಯಾದದ್ದನ್ನ ಕೇಳ್ತಾ ಇಲ್ಲ,’ ಹುಸಿ ಸಮಾಧಾನದ ಭಾವದಲ್ಲಿ ತಾನ್ ನುಡಿದ. `ಸಂಪೂರ್ಣ ತನಿಖೆ ಅಲ್ಲವೇ ಅಲ್ಲ.  ಮರಣಪತ್ರವನ್ನು ಬೆಂಬಲಿಸೋವಂಥ ಒಂದು ವರದಿ ಅಷ್ಟೆ. ಈ ದುರದೃಷ್ಟಕರ ಸಾವಿಗೆ ಕಾರಣವಾದ ಘಟನೆಯನ್ನು ವಿವರಿಸೋದು ಅಷ್ಟೆ. ನಿನ್ನ  ಪುನರಾಶ್ರಯಕ್ಕೆ ಇದು ಒಂದು ಅವಕಾಶ ಆಗಬಹುದು.’ ತಾನ್ ಈಗ ಝೊಂಗ್‌ನ ವರದಿಯ ಫೈಲಿನತ್ತ ಕೈ ತೋರಿಸುತ್ತಿದ್ದಾನೆ. `ನೀನು ಒಬ್ಬ ಗೆಳೆಯನನ್ನು ಬಳಸಬಹುದು.’
`ಬಹುಶಃ ಒಂದು ಉಲ್ಕೆ ಇರಬೇಕು,’ ಶಾನ್ ಗೊಣಗಿದ.
`ಅಬ್ಬ! ನಾನೂ ಇದನ್ನೇ ನಿರೀಕ್ಷಿಸಿದ್ದೆ. ಈ ಥರದ ಚಿಂತನೆಯಿಂದ ನಾವು ಒಂದೆರಡು ದಿನದಲ್ಲೇ ಈ ಪ್ರಕರಣವನ್ನು ಮುಚ್ಚಿಹಾಕಬಹುದು. ನಾವು ಸೂಕ್ತ ಬಹುಮಾನವನ್ನೂ ನೀಡೋ ಬಗ್ಗೆ ಯೋಚಿಸ್ತೇವೆ. ಉದಾಹರಣೆಗೆ ಹೆಚ್ಚಿನ ರೇಶನ್. ಕಡಿಮೆ,ಲಘು ಕೆಲಸಗಳು. ಬಹುಶಃ ದುರಸ್ತಿ ಅಂಗಡಿಯಲ್ಲಿ ಕೆಲಸ.’
` ನಾನು ಮಾಡಲ್ಲ,’ ಶಾನ್ ತೀರಾ ದೃಢವಾದ ದನಿಯಲ್ಲಿ ನುಡಿದ. ` ಅಂದ್ರೆ, ನನಗೆ ಆಗಲ್ಲ.’
ತಾನ್ ಮುಖದಲ್ಲಿ ಸೋಜಿಗದ ಮನೆ. `ನೀವು ಯಾವ ಆಧಾರದ ಮೇಲೆ ಈ ಕೆಲಸಾನ ತಿರಸ್ಕರಿಸ್ತಿದೀರಿ ಕಾಮ್ರೇಡ್ ಖೈದಿಯವರೆ?’
ಶಾನ್ ಉತ್ತರಿಸಲಿಲ್ಲ. ತಾನು ಸುಳ್ಳು ಹೇಳಕ್ಕಾಗುವುದಿಲ್ಲ ಎಂಬ ನಿಲುವಿನ ಹಿನ್ನೆಲೆಯಲ್ಲಿ ಎಂದು ಹೇಳಬೇಕೆಂದಿದ್ದ. ನನ್ನ ಆತ್ಮವು ನಿನ್ನಂಥವರಿಂದ ಕೆಲವೇ ತೆಳು ದಾರಗಳಾಗಿ ಶಿಥಿಲವಾಗಿದೆ ಎಂಬ ಹಿನ್ನೆಲೆಯಲ್ಲಿ ಎಂದು ಹೇಳಬೇಕೆಂದಿದ್ದ. ನಿನ್ನಂಥ ಒಬ್ಬ ಮನುಷ್ಯನ ಬಗ್ಗೆ ಸತ್ಯವನ್ನು ಹುಡುಕಲು ಯತ್ನಿಸುತ್ತಿದ್ದಾಗಲೇ ನನ್ನ ಈ ತೊಂದರೆಗಳಿಗಾಗಿ ಬಂಧಿಸಿ ಗುಲಾಗ್‌ಗೆ ಕಳಿಸಿದ್ದರು ಎಂಬ ನೆಲೆಯಲ್ಲಿ ಎಂದು ಹೇಳಬೇಕೆಂದಿದ್ದ.
`ಬಹುಶಃ ನೀನು ನನ್ನ ಆತಿಥ್ಯದಿಂದ ಗೊಂದಲಕ್ಕೆ ಒಳಗಾಗಿದೀಯ. ನಾನು ಪೀಪಲ್ಸ್ ಲಿಬರೇಶನ್ ಆರ್ಮಿಯಲ್ಲಿ ಒಬ್ಬ ಕರ್ನಲ್. ನಾನು ಹದಿನೇಳನೆಯ ರ್‍ಯಾಂಕಿನ ಒಬ್ಬ ಪಕ್ಷದ ಸದಸ್ಯ. ಈ ಜಿಲ್ಲೆ ನನಗೆ ಸೇರಿದ್ದು. ಇಲ್ಲಿನ ಜನರು ಶಿಕ್ಷಣ ಪಡೆಯಲಿಕ್ಕೆ, ಇಲ್ಲಿನ ಜನರ ಹಸಿವಿಗೆ ಆಹಾರ ಒದಗಿಸಲಿಕ್ಕೆ, ಇಲ್ಲಿ ಸಿವಿಲ್ ಕಾಮಗಾರಿಗಳು ನಡೆಯೋದಕ್ಕೆ, ತ್ಯಾಜ್ಯಗಳನ್ನು ತೆಗೆಸೋದಕ್ಕೆ, ಖೈದಿಗಳ ಉಸ್ತುವಾರಿ ನೋಡಿಕೊಳ್ಳೋದಕ್ಕೆ, ಸಾಂಸ್ಕೃತಿಕ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸಲಿಕ್ಕೆ, ಸಾರ್ವಜನಿಕ ಬಸ್ಸುಗಳನ್ನು ಓಡಾಡಿಸಲಿಕ್ಕೆ, ಸಮುದಾಯದ ಆಹಾರವನ್ನು ದಾಸ್ತಾನು ಮಾಡಲಿಕ್ಕೆ…. ನಾನೇ ಹೊಣೆ. ಹಾಗೆಯೇ ಕೀಟಗಳ ನಿವಾರಣೆ ಕೂಡಾ. ಯಾವುದೇ ಬಗೆಯ ಕೀಟ ಇರಬಹುದು. ನಿನಗೆ ಇವೆಲ್ಲ ಅರ್ಥ ಆಗ್ತಾ ಇದೆಯ?’
`ಇದು ಅಸಾಧ್ಯ.’
ಶಾನ್ ನಿಧಾನವಾಗಿ ತನ್ನ ಬಟ್ಟಲಿನ ಚಹಾದ ಕೊನೆಯ ಗುಟುಕು ಹೀರಿದ.` ಈಗಲೂ ಅಷ್ಟೆ. ನಿನಗೆ ತಿರಸ್ಕರಿಸಲು ಅನುಮತಿ ಇಲ್ಲ.’

ಈ ಅಧ್ಯಾಯದಲ್ಲಿ ಬಂದ  ಕೆಲವು ಪಾರಿಭಾಷಿಕ  ಪದಗಳ ವಿವರ
ನಾಲ್ಕನ್ನು ತೆಗೆದುಕೊಳ್ಳುವುದು : ಆತ್ಮಹತ್ಯೆ ಮಾಡಿಕೊಳ್ಳುವುದು
ಖಾತಾ : ತಾತ್ಕಾಲಿಕ ಉತ್ತರೀಯ
ಪಿ ಎಲ್ ಎ : ಪೀಪಲ್ಸ್ ಲಿಬರೇಶನ್ ಆರ್ಮಿ. ಚೀನಾ ದೇಶದ ಅಧಿಕೃತ ಸೇನೆ.
ಜನತೆಯ ೪೦೪ನೆಯ ತಂಡವು… :  ೪೦೪ ಅಂದರೆ ಕಾರ್ಮಿಕ ಶಿಬಿರದ ಹೆಸರು. ಇಡೀ ಕಾರ್ಮಿಕ ಶಿಬಿರವು ಜನತೆಗೆ ಸೇರಿದ್ದು ಎಂಬ ಅರ್ಥ ಇಲ್ಲಿದೆ.
ಡ್ರೇಗನ್, ಡ್ರೇಗನ್‌ನ ದಕ್ಷಿಣದ ಕೋರೆ ಹಲ್ಲುಗಳಂತಿರುವ ಬೆಟ್ಟಗಳನ್ನು,ಡ್ರೇಗನ್ ಗಂಟಲಿಗೆ..:  ಇಲ್ಲಿ ಡ್ರೇಗನ್ ಆಕಾರದ ಪರ್ವತಶ್ರೇಣಿ ಇದೆ. ಕರ್ನಾಟಕದಲ್ಲಿ ಕುದುರೆಮುಖ ಇದ್ದ ಹಾಗೆ. ಅದನ್ನೇ ಇಲ್ಲಿ ಬೇರೆ ಬೇರೆ ವಿಶೇಷಣಗಳ ಮೂಲಕ ವಿವರಿಸಲಾಗಿದೆ.
ಲಾ ಗೊಯ್ : ಚೀನಾ ದೇಶದಲ್ಲಿ ಈಗಲೂ ಅಸ್ತಿತ್ವದಲ್ಲಿರುವ ಬಲವಂತದ ಕಾರ್ಮಿಕ ಶಿಬಿರ. ವಿವರಗಳಿಗೆ ತಿತಿತಿ.ಟಚಿogಚಿi.oಡಿg ವೆಬ್‌ಸೈಟಿಗೆ ಭೇಟಿ ನೀಡಿ.
ಥಂಬ್ ರಯಟ್ : ಟಿಬೆಟನ್ನರ ಪ್ರಾರ್ಥನೆಗೆ ಮುಖ್ಯವಾಗಿದ್ದ ಹೆಬ್ಬೆರುಗಳನ್ನೇ ಕತ್ತರಿಸಿದ ಚೀನೀ ಅಧಿಕಾರಿಗಳ ಹಿಂಸಾಚಾರ.
ಗೊಂಪಾ : ಬೌದ್ಧ ದೇಗುಲ    ರಿನ್‌ಪೊಚೆ :  ಹಿರಿಯ ಲಾಮಾ.   
ಷಿಕೆನ್‌ಪೋ : ಬೌದ್ಧ ದೇಗುಲದ ಅರ್ಚಕ
ಕುಗ್ಗುವ ಶಿಕ್ಷೆ, ಶುದ್ಧ  ಅಂಗಿ : ಕಾರ್ಮಿಕ ಶಿಬಿರದಲ್ಲಿ ನೀಡುತ್ತಿದ್ದ ಶಿಕ್ಷೆಗಳ ಹೆಸರುಗಳು. ಕಾದಂಬರಿಯಲ್ಲಿ ಇದರ ವಿವರವೂ ಇದೆ.
ಮೋಮೋ  : ಸಣ್ಣ ಸಣ್ಣ ಮುದ್ದೆಗಳು.
 ತಾಮ್‌ಜಿಂಗ್ : ಖೈದಿಗಳು ಪರಸ್ಪರ ಕಮ್ಯುನಿಮ್ ವಿರೋಧಿಗಳನ್ನು ಗುರುತಿಸಿ ಅವರ ತಪ್ಪುಗಳನ್ನು ಘೋಷಿಸುವ ಗೋಷ್ಠಿಗಳು. ಇದನ್ನು ಸಂಘರ್ಷಗೋಷ್ಠಿಗಳೆಂದೂ ಕರೆಯುತ್ತಾರೆ.
ಗುಲಾಗ್ : ಸೆರೆಮನೆ

Leave a Reply