Foreword to Skull Mantra

ಮುನ್ನುಡಿ

 

`ದಿ ಸ್ಕಲ್ ಮಂತ್ರ’ ಕಾದಂಬರಿಯನ್ನು ಕನ್ನಡಕ್ಕೆ ತರಬೇಕೆಂದು ನಿರ್ಧರಿಸಿದಾಗ ಮೊದಲು ಹುಡುಕಿದ್ದು ಲೇಖಕ ಎಲಿಯಟ್ ಪ್ಯಾಟಿಸನ್‌ರ ವೆಬ್‌ಸೈಟ್. ಸಿಕ್ಕಿತು. ಕನ್ನಡಕ್ಕೆ ಅನುವಾದ ಮಾಡಲು ಅನುಮತಿ ನೀಡಿ ಎಂದು ವಿನಂತಿಸಿದೆ. `ನನ್ನ ಸಾಹಿತ್ಯ ಪ್ರತಿನಿಧಿ ನತಾಶಾ ಕರ್ನ್‌ಳನ್ನು ಕೇಳು ಮಾರಾಯಾ’ ಎಂದು ಪ್ಯಾಟಿಸನ್ ಬರೆದರು. ಅಲ್ಲಿಂದ ನತಾಶಾ ಕರ್ನ್ ಜೊತೆ ನಿರಂತರ ಈ ಮೇಲ್ ಸಂಪರ್ಕ ಬೆಳೆಯಿತು. ಎಂಥ ಉದಾರ ಮನೋಭಾವದವಳು! ಪ್ರಕಾಶಕರ ಜೊತೆ ಮಾತಾಡಿದ್ದು, ಕೊನೆಗೆ ಅವರಿಂದ ನನಗಾಗಿ ಅನುಮತಿಯನ್ನು ದೊರಕಿಸಿದ್ದು ನತಾಶಾಳೇ. ಖುದ್ದು ಭೇಟಿಯಾಗದೇ ಹಕ್ಕು ಪಡೆದು ಅನುವಾದಿಸುವ ಸಾಧ್ಯತೆ ಒದಗಿಸಿದ ನತಾಶಾಗೆ, ನೆರವಾದ ಮಾಹಿತಿ ತಂತ್ರeನಕ್ಕೆ ನಮೋನ್ನಮಃ!
ಟಿಬೆಟ್ ಎಂದರೆ ನನಗೆ ವಿಚಿತ್ರ ಆಕರ್ಷಣೆ.ಐದು ವರ್ಷಗಳ ಹಿಂದೆ `ದಿ ಫೈರ್ ಅಂಡರ್ ದಿ ಸ್ನೋ’ ಎಂಬ ಟಿಬೆಟನ್ ಭಿಕ್ಷುವಿನ ಮೂವತ್ತೊಂದು ವರ್ಷಗಳ ಸೆರೆವಾಸದ ಕಥನವನ್ನು `ಹಿಮದೊಡಲ  ತಳಮಳ’ ಎಂದು ಕನ್ನಡಕ್ಕೆ ತಂದೆ. `ಹೊಸದಿಗಂತ’ದೈನಿಕದಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತಾದರೂ ಪುಸ್ತಕವಾಗಲಿಲ್ಲ. ಆದರೆ ನನ್ನ ಟಿಬೆಟ್-ಚೀನಾ ಮೋಹ ಕಡಿಮೆಯಾಗಲಿಲ್ಲ. ಓದುತ್ತ ಹೋದೆ. ಹುಡುಕುತ್ತ ನಡೆದೆ. ಈಗ `ಸ್ಕಲ್ ಮಂತ್ರ’ ನಿಮ್ಮ ಕೈಯಲ್ಲಿದೆ. ಇನ್ನೊಂದು ವರ್ಷದಲ್ಲಿ ಇದೇ ಬಗೆಯ ಸೃಜನಶೀಲ/ಸೃಜನೇತರ ಚೀನೀ-ಟಿಬೆಟ್ ಸಂಬಂಧೀ ಕೃತಿಗಳನ್ನು ಅನುವಾದಿಸುವ ಆಗಾಧ ಮೋಹ ನನ್ನಲ್ಲಿ ಹಬ್ಬಿದೆ. ಕನ್ನಡಿಗರಿಗೆ ಟಿಬೆಟನ್ನರು ಹೊಸಬರಲ್ಲ. ಅವರ ಕಾಲೋನಿಗಳೂ ಹೊಸತಲ್ಲ. ಆದರೆ ಅವರ ಬಗ್ಗೆ ಕನ್ನಡದಲ್ಲಿ ಇರುವ ಸಾಹಿತ್ಯ ಮಾತ್ರ ತೀರಾ ಕಡಮೆ. ಈ ಹಿನ್ನೆಲೆಯಲ್ಲಿ ನನ್ನ ಹಂಬಲಕ್ಕೆ ಅರ್ಥವೂ ಇದೆ ಎನ್ನಬಹುದು!
`ಸ್ಕಲ್ ಮಂತ್ರ’ ಹೇಳಿ ಕೇಳಿ ಒಂದು ಪತ್ತೇದಾರಿ ಕಾದಂಬರಿ. ಇದರಲ್ಲಿ ಕೊಲೆ, ರಾಜಕೀಯ, ಪವಾಡ, ಧರ್ಮ, ಮಾನವೀಯ ಸಂಬಂಧ – ಎಲ್ಲವೂ ಇವೆ. ಆದರೆ ಕಥೆ ನಡೆಯುವುದು ಟಿಬೆಟಿನಲ್ಲಿ. ಹೀಗಾಗಿ ಪಾತ್ರಗಳು, ಸನ್ನಿವೇಶಗಳನ್ನು  ಅರ್ಥ ಮಾಡಿಕೊಳ್ಳುವುದು ಮೊದಮೊದಲು ಕೊಂಚ ನಿಧಾನವಾಗಬಹುದು. ಅದಕ್ಕೆಂದೇ ಈ ಪುಸ್ತಕದಲ್ಲಿ ಪಾತ್ರ ಪರಿಚಯವನ್ನೂ ಕೊಟ್ಟಿದ್ದೇನೆ. ಕನ್ನಡದಲ್ಲಿ ಪಾಶ್ಚಾತ್ಯ ಸಾಹಿತ್ಯ ಸಾಕಷ್ಟು ಹರಿದಿದೆ. ಅವುಗಳಲ್ಲಿನ ಸಂಸ್ಕೃತಿ-ಸನ್ನಿವೇಶಗಳನ್ನು ಅರಿತುಕೊಳ್ಳುವಷ್ಟು ಸಲೀಸಾಗಿ ಪೌರ್ವಾತ್ಯ ಪುಸ್ತಕಗಳನ್ನು ಪ್ರವೇಶಿಸಲಾಗದೇನೋ ಎಂಬ ಅನುಮಾನ ನನ್ನದು. ಆದರೆ ನಮ್ಮ ಸಂಸ್ಕೃತಿಯು ಟಿಬೆಟ್ ಜೀವನಕ್ರಮಕ್ಕೆ ತೀರಾ ಹತ್ತಿರದ ಸಂಬಂಧ ಹೊಂದಿರುವುದರಿಂದ ಈ ತೊಂದರೆ ಕಾಣಲಾರದು ಎಂಬ ವಿಶ್ವಾಸವೂ ನನ್ನದೇ!
ಈ ಪುಸ್ತಕ ಅನುವಾದಿಸುತ್ತಿದ್ದೇನೆ ಎಂದ ಕೂಡಲೇ ಮುಗಿಸಿಕೊಡಿ, ಪ್ರಕಟಿಸುತ್ತೇನೆ ಎಂದು ಬೆನ್ನು ತಟ್ಟಿದ ಮಿತ್ರ ಶ್ರೀ ಪ್ರಕಾಶ ಕಂಬತ್ತಳ್ಳಿಯವರಿಗೆ ನಾನು ಅತ್ಯಂತ ಕೃತಜ್ಞ. ಪುಸ್ತಕವನ್ನು ಓದಿ, ಕರಡು ತಿದ್ದಲು ನೆರವಾದ ಶ್ರೀ ದು.ಗು. ಲಕ್ಷ್ಮಣರಿಗೆ ನನ್ನ ವಂದನೆಗಳು. ನಾನು ಅನುವಾದಕ್ಕೆ ಕೂತಾಗ ತರಕಾರಿ ತರಲು ಹೇಳದೆ, ಹೋಮ್‌ವರ್ಕ್‌ಗೆ ಸಹಾಯ ಮಾಡಲು ಕೇಳದೆ ನನ್ನ ಬರೆವಣಿಗೆಯನ್ನೇ ಬೆಂಬಲಿಸಿದ ಹೆಂಡತಿ ವಿಮಲಾ, ಮಗ ಸುಧಾಂಶು ಮಿತ್ರನಿಗೆ ನನ್ನ ಪ್ರೀತಿಯ ಥ್ಯಾಂಕ್ಸ್. ಸದಾ ನನ್ನ ಕೆಲಸಗಳಿಗೆ ಒತ್ತಾಸೆಯಾಗಿರುವ ಹಿರಿಗೆಳೆಯ ಶ್ರೀ ಮನೋಹರ ಮಸ್ಕಿಯವರಿಗೆ ನನ್ನ ಪ್ರೀತಿಯ ಕೃತಜ್ಞತೆಗಳು ;  ಮುಖಪುಟ ರೂಪಿಸಿದ ಶ್ರೀ ಶ್ರೀಪಾದ್‌ಗೂ.
ಮುಂದೆಯೂ  ಟಿಬೆಟ್-ಚೀನಾದ ಬದುಕನ್ನು ಕನ್ನಡದಲ್ಲಿ ಮೂಡಿಸಲು ನನಗೆ ನಿಮ್ಮೆಲ್ಲರ ಬೆಂಬಲ ಖಂಡಿತ ಬೇಕು ಎಂದು ವಿನಂತಿಸುವೆ. ಈ ಪುಸ್ತಕದ ಬಗ್ಗೆ ದಯಮಾಡಿ ನಿಮ್ಮ ನೇರ ಅಭಿಪ್ರಾಯವನ್ನು ತಿಳಿಸಿ. ನನ್ನಲ್ಲಿರುವ ಲೋಪಗಳನ್ನು ತಿದ್ದಿಕೊಳ್ಳಲು ನಿಮ್ಮ ಪ್ರತಿಕ್ರಿಯೆ ತುಂಬಾ ಮುಖ್ಯ.

ಬೇಳೂರು ಸುದರ್ಶನ
೨೬ ಮೇ ೨೦೦೩

Leave a Reply