ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ

This is an instant review of “Ondu Badi Kadalu, a new novel by Shri Viveka Shanabhaga. A must read book.

ದೇಶ – ಕಾಲದ ಎಲ್ಲೆ ಮೀರುವ ಬಯಕೆ ಇರುವವರೂ ತಮ್ಮೊಳಗಿನ ಲೋಕಲ್ ಕುದಿಯನ್ನು ಹೊರಗೆಡಹದೆ ಇರಲಾರರು ಎಂಬುದಕ್ಕೆ ಇತ್ತೀಚೆಗೆ ಬರುತ್ತಿರುವ ಕನ್ನಡ ಕಾದಂಬರಿಗಳೇ ನಿದರ್ಶನ ಎನ್ನಬಹುದೇನೋ. ಅದರಲ್ಲೂ ಬಾಲ್ಯವನ್ನು ಹಳ್ಳಿಯಲ್ಲಿ ಕಳೆದವರು ನಗರ ತಲುಪಿ ಉಸ್ಸೆಂದ ಕೂಡಲೇ ಲೋಕಲ್ ಸರಕನ್ನೇ ಕ್ರಿಯಾಶೀಲವಾಗಿ ಹೆಣೆಯುವುದು ಕನ್ನಡ ಸಾಹಿತ್ಯದಲ್ಲಂತೂ ಸಾಮಾನ್ಯ.

ಎಚ್. ನಾಗವೇಣಿಯವರ `ಗಾಂಧಿ ಬಂದ’ ಎಂಬ ಡಾಕ್ಯುಂಬರಿಯು (ಈ ಡಾಕ್ಯುಂಬರಿ ಎಂಬ ನನ್ನದೇ ವಿಚಿತ್ರ ಶೋಧದ ಬಗ್ಗೆ ಮುಂದೆ ಒಂದು ಭಯಂಕರ ಲೇಖನವನ್ನು ಬರೆಯಲಿದ್ದೇನೆ) ಬಂದಮೇಲೆ ಲೋಕಲ್ ಕುದಿಯನ್ನು ಕೃತಿಯಾಗಿಸುವ, ಅದರಲ್ಲೂ ಕಾದಂಬರಿಯಾಗಿಸುವ ಯತ್ನಗಳು ಹೆಚ್ಚಾಗಿವೆ. ಹಾಗಂತ ಈಗ ಬಂದದ್ದೆಲ್ಲವೂ `ಗಾಂಧಿ ಬಂದ’ ಎಂಬ ಕಾರಣಕ್ಕೇ ಬಂದವು ಎಂದು ಆರೋಪಿಸುತ್ತಿಲ್ಲ. ಆದರೆ ಬಂದ ಕಾದಂಬರಿಗಳನ್ನು ನೋಡಿದರೆ ಇಂಥ ತರ್ಕವೂ ಸಾಧ್ಯ ಎನ್ನಿಸುತ್ತಿದೆ!
`ದೇಶಕಾಲ’ದ ವಿವೇಕ ಶಾನಭಾಗರು ಬರೆದ `ಒಂದು ಬದಿ ಕಡಲು’ ಓದಿದ ಮೇಲೆ ಈ ಮೇಲ್ಕಂಡ ಮಾತುಗಳನ್ನು ಬರೆದು ವಿಷಯಾಂತರ ಮಾಡಿಯೇ ಮುಂದುವರಿಯಬೇಕು ಎಂದೆನಿಸಿತು. ಯಾವುದೇ ಕ್ಲೀಷೆಯಿಲ್ಲದೆ ಭಾಷೆಯನ್ನು ಶ್ರದ್ಧೆಯಿಂದ ಬಳಸುವ ರೀತಿ, ಅಚ್ಚುಕಟ್ಟಾದ ವಾಕ್ಯರಚನೆ, ಯಾವುದೇ ಗೊಂದಲವಾಗದಂತೆ ಪ್ಯಾರಾಗಳ ವಿಂಗಡಣೆ, ಕಥೆಯನ್ನು ಅಧ್ಯಾಯವಾಗಿ ಹೆಣೆಯುವ ಬಗೆ – ಹೀಗೆ ಶಿಸ್ತಿನಿಂದ ಮತ್ತು ಆಸ್ಥೆಯಿಂದ ಬರೆಯುವ ವಿವೇಕ ಶಾನಭಾಗರು ತಮ್ಮ ಈ ಕಾದಂಬರಿಯಿಂದ ಕನ್ನಡದ ಅತಿ ಮಹತ್ವದ ಕಾದಂಬರಿಕಾರರಾಗಿದ್ದಾರೆ ಎಂದು ನಾನು ಈ ಮೂಲಕ ಅಭಿಪ್ರಾಯಪಡುತ್ತೇನೆ.
ಕಾರವಾರದ, ದಕ್ಷಿಣ ಕನ್ನಡದ ಕಥೆಗಳನ್ನು ಕಾದಂಬರಿಯಾಗಿ ಮೂಡಿಸುವಲ್ಲಿ ನಮ್ಮ ಡಾ|| ಶಿವರಾಮ ಕಾರಂತರನ್ನು ಮೀರಿಸುವವರು ಯಾರು? ಅವರ ಕಾದಂಬರಿಗಳಲ್ಲಿ ಇರುವ ಕಥೆಗಳು ತುಂಬಾ ಸರಳ. ಯಾವುದೋ ಮನೆ, ಮನೆತನ, ಯಾವುದೋ ಹುಡುಕಾಟ, ಯಾವುದೋ ಸಂಸಾರದ ಒಳಸುಳಿಗಳು – ಹೀಗೆ ಕಾರಂತರು ಸರಳ ಹಂದರವನ್ನೇ ಸರಳವಾಗಿ ಬರೆಯುತ್ತಾರೆ. ಕಥೆಯ ಓಟದಲ್ಲೂ ಅಂಥ ಅಚ್ಚರಿಯೇನೂ ಇರುವುದಿಲ್ಲ. ಆದರೆ ಓದಿ ಮುಗಿಸಿದ ಮೇಲೆ ಕರಾವಳಿಗೆ ಧಗೆ ನಿಮ್ಮೊಳಗೆ ಕೂತುಬಿಡುತ್ತದೆ. ಯಾವುದೋ ಕಾಲಘಟ್ಟದ ಯಾವುದೋ ಕ್ಷಣದಲ್ಲಿ ನಿಂತು ಎಲ್ಲ ಕಥೆಯನ್ನೂ ಸವಿದು ಬಂದ, ಯಾರದೋ  ಯಾತನೆಯನ್ನು ಅನುಭವಿಸಿದ ಸ್ಥಿತಿ ನಿಮ್ಮದಾಗಿರುತ್ತದೆ. ವಿವೇಕ ಶಾನಭಾಗರು ಮಾಡಿರುವುದೂ ಇದನ್ನೇ. ಅವರೇನೋ ತಾವು ಕಂಡ ಲೋಕವನ್ನು ಲಿಪೀಕರಿಸಿದರು ಎಂದರೆ ಸಾಲದು. ಅವರೂ ಕಾರಂತರಂತೆ ನಮಗೆ ಒಂದು ಲೋಕವನ್ನು ತೋರಿಸಿದ್ದಾರೆ. ಗೌಡ ಸಾರಸ್ವತ ಬ್ರಾಹ್ಮಣರ ಮನೆಗಳ ಕಥೆಯನ್ನು ಎಚ್ಚು ಛೆಂದ ಬರೆದಿದ್ದಾರೆ ಎಂದರೆ ನನಗಂತೂ ಶಭಾಶ್ ಅನ್ನಬೇಕೆನಿಸುತ್ತದೆ.
ಒಂದು ಬದಿ ಕಡಲು ಎಂಬ ಶಬ್ದಗುಚ್ಛವೇ ಎಷ್ಟು ಸುಮಧುರವಾಗಿದೆ….. ಇನ್ನೊಂದು ಬದಿ ಏನಿದ್ದಿರಬಹುದು? ಅದು ಹರಿವ ಬದುಕೆ? ನದಿಯೆ? ದ್ವೀಪಗಳೆ? ಮುಖಜ ಪ್ರದೇಶವೆ? ಕರಾವಳಿಯ ಬೆವರೆ? ಧೊಪ್ಪೆಂದು ಜಡಿವ ಮಳೆಯೆ? ಸಂಬಂಧಗಳೆ? ವಿವೇಕ ಶಾನಭಾಗರ ಕಾದಂಬರಿಯು ತನ್ನೊಳಗಿನ ವ್ಯಕ್ತಿಗಳ ಸಹಜ ಭಾವಗಳನ್ನು ಮೂಡಿಸುತ್ತ, ಕೆಲವೊಮ್ಮೆ ಕಾವ್ಯಮಯವಾಗಿ, ಕೆಲವೊಮ್ಮೆ ರಮ್ಯಲೋಕದ ಝಲಕ್‌ನಂತೆ ಮಿಂಚುತ್ತ ನಮ್ಮನ್ನು ತುಂಬಾ ಕಾಡುತ್ತದೆ.
೨೧೨ ಪುಟಗಳ ಈ ಕಾದಂಬರಿಯಲ್ಲಿ ಪುರಂದರ ಎಂಬೊಬ್ಬ ಹುಡುಗ ಬೆಳೆಯುತ್ತ ಹೋಗುವುದನ್ನೇ ಒಂದು ಸೂತ್ರವಾಗಿಟ್ಟುಕೊಳ್ಳಬಹುದು. ಅವನ ಸುತ್ತಮುತ್ತಲೇ ಕಥೆ ಇದೆ ಎನ್ನುವುದೊಂದೇ ಇದಕ್ಕೆ ಹಿನ್ನೆಲೆ. ಹೊರತಾಗಿ ಈ ಕಾದಂಬರಿಯಲ್ಲಿ ಯಾವುದೇ ಪಾತ್ರದ ಬಗ್ಗೆ ಹೆಚ್ಚಿನ ಮೋಹ ಇಟ್ಟುಕೊಳ್ಳದೆ ಹೋಗಿರುವುದು ವಿವೇಕ ಶಾನಭಾಗರ ಕಂಟ್ರೋಲ್ ಎನ್ನಬಹುದು. ಈ ಕಥೆ ಹೇಗಿದೆ ಎನ್ನುವುದಕ್ಕಿಂತ ಕಥೆಯು ಎಷ್ಟು ಸುಮಧುರವಾಗಿ, ಸುಲಲಿತವಾಗಿ ಹರಿದುಕೊಂಡಿದೆ ಎಂಬುದು ಮುಖ್ಯ. ಅದೇ ತಾನೆ ಓದಿಸಿಕೊಳ್ಳುವುದು…. ನಿಜಕ್ಕೂ ವಿವೇಕ ಶಾನಭಾಗರು `ಆವರಣ’ ಎಂಬ ಇನ್ನೊಂದು ಡಾಕ್ಯುಂಬರಿಯ ಅವಾಂತರದ ನಂತರ ಕನ್ನಡದ ಓದುಗರು ಸಮಾಧಾನಚಿತ್ತರಾಗುವಂತೆ ಮಾಡಿದ್ದಾರೆ. ಓದಿದ ಮಾಹಿತಿಯನ್ನು ಕಥೆಯೆಂಬ ಹಂದರದ ಮೂಲಕ ಹೇರುವುದಕ್ಕೂ, ಅನಿಸಿದ ಭಾವಗಳನ್ನು ಬಿಂಬಿಸುವುದಕ್ಕೂ ಇರುವ ವ್ಯತ್ಯಾಸವನ್ನು  ಈ ಎರಡು ಕಾದಂಬರಿಗಳ ತುಲನೆಯಿಂದ ಕಂಡುಹಿಡಿಯಬಹುದು!
ಹಾಗಾದರೆ ಈ ಕಾದಂಬರಿಯನ್ನು ಶ್ರೇಷ್ಠ ಎನ್ನುವುದಕ್ಕೆ ಇರುವ ಮೂಲ ಕಾರಣವಾದರೂ ಏನು? ಮಲೆನಾಡಿನಲ್ಲೇ ಬಾಲ್ಯವನ್ನು ಎರ್ರಾಬಿರ್ರಿಯಾಗಿ ಕಳೆದ ನನಗೆ ಶಾನಭಾಗರು ಬರೆದುಕೊಟ್ಟ ದೃಶ್ಯಗಳು ಹಠಾತ್ತನೆ ಯಾವುದೋ ಬಾಲ್ಯಕ್ಕೆ ಕರೆದೊಯ್ದದ್ದು ನಿಜ. ಬಹುಶಃ ನನ್ನ ಬದುಕಿನಲ್ಲೂ ಇಂಥ ಹತ್ತಾರು ದೃಶ್ಯಗಳು ಕೂತಿದ್ದರಿಂದಲೇ ನಾನೂ ಈ ಕಾದಂಬರಿಯನ್ನು ತುಂಬಾ ಮೆಚ್ಚಿಕೊಂಡಿರಬಹುದೆ? ಅಥವಾ ಹಚ್ಚಿಕೊಂಡಿರಬಹುದೆ? ಗೊತ್ತಿಲ್ಲ.
ಆದರೆ ಮೊದಲೇ ಹೇಳಿದೆನಲ್ಲ….. ವಿವೇಕ ಶಾನಭಾಗರದು ನಿಯತ್ತಿನ ಭಾಷೆ. ಅವರ ನಿವೇದನೆಯಲ್ಲಿ, ನಿರೂಪಣೆಯಲ್ಲಿ ಒಂದು ಬಗೆಯ ವಿಶಿಷ್ಟತೆಯಿದೆ. ಯಾವುದೇ ರೋದನವಿಲ್ಲದೆ, ವೈಚಾರಿಕತೆಯ ಪಸೆಯಿಲ್ಲದೆ, ಕೇವಲ ದೃಶ್ಯಗಳ ಮೂಲಕವೇ ಸಂಸ್ಕೃತಿಯನ್ನು ದಾಖಲಿಸುವ ಸೂಕ್ಷ್ಮ ಕೆಲಸವನ್ನು ಶಾನಭಾಗರು ಮಾಡಿದ್ದಾರೆ. ಈ ಜಗತ್ತಿನಲ್ಲಿ ಬೆಳಕಿನ ವೇಗದಲ್ಲಿ ನಶಿಸುತ್ತಿರುವ ಸಂಕುಲಗಳಲ್ಲಿ ಸಂಸ್ಕೃತಿಯ ನೆನಹೂ ಒಂದು. ಅದನ್ನು ದಾಖಲೀಕರಣ ಮಾಡುವುದೇ ಕೆಲವ ಉದ್ಯೋಗವಾಗಿದ್ದರೆ, ಅದನ್ನು ಸುಮಧುರವಾಗಿ ಆಹ್ವಾನಿಸಿಕೊಳ್ಳುವುದು ವಿವೇಕ ಶಾನಭಾಗರಂಥವರ ಸಹಜ ಸಾಮರ್ಥ್ಯ. ಈ ಕಾದಂಬರಿಯು ಇಂಥ ಒಂದು ಗ್ಲೋಬಲ್ ಕಾರ್ಯಕ್ಕೆ ಕೈ ಹಾಕಿ ಯಶ ಸಾಧಿಸಿದೆ. ಅಂಡಮಾನಿನ ಜರವಾ ಬುಡಕಟ್ಟನ್ನೇ ಭೇದಿಸುವ ಅಂಡಮಾನ್ ಟ್ರಂಕ್ ರೋಡ್‌ನ್ನು ಟೀಕಿಸುವ ಪರಿಸರವಾದಿಗಳಿಗಿಂತ ಉಗ್ರವಾದ ಭಾವನೆಗಳು ವಿವೇಕರ ಒಡಲೊಳಗೆ ಕುದಿಯುತ್ತಿವೆ. ಆದರೆ ಅದನ್ನು ಹೊರಹಾಕಲು ಅವರು ವಿವೇಕಯುತ ಮಾರ್ಗವನ್ನು ಬಳಸಿದ್ದಾರೆ. ಬಹುಶಃ ಒಂದು ಬದಿ ಎಷ್ಟೋ ಲಕ್ಷ ವರ್ಷಗಳಿಂದ ಬದುಕುತ್ತಿರುವ  ಕಡಲಿನ ಅಲೆಗಳು, ಅದೇ ನೊರೆ, ಅದೇ ಕಿನಾರ, ಅದೇ ತೆಂಗು, ಬಂಗುಡೆ, ಸೇತುವೆಗಳು ವಿವೇಕರ ಈ ಶಾಂತ ಮನಸ್ಸಿಗೆ ಕಾರಣವಾಗಿವೆ.
ಇಡೀ ಕಾದಂಬರಿಯಲ್ಲಿ ಕೆಲವೊಮ್ಮೆ ತಾಂತ್ರಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎನ್ನುವುದೂ ನಿಜ. ಉದಾಹರಣೆಗೆ, ಫಂಡರಿ ಮತ್ತು ಯಮುನಾರ ಕಥೆಯು ಮೊದಲ ಪುಟಗಳಲ್ಲೇ ಬಂದರೂ ಅವರು ಮತ್ತೆ ಕಾಣಿಸಿಕೊಳ್ಳುವುದು ಪುರಂದರನು ಡಿಗ್ರಿ ಮುಗಿಸಿದ ಮೇಲೆ. ಎಲ್ಲಿಂದಲೋ ಬಂದವರಂತೆ ಅವರು ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಮೊದಲ ಪುಟದ ಘಟನೆಯನ್ನೇ ಅವರ ಮರುಪ್ರವೇಶಕ್ಕೆ ಲಿಂಕ್‌ಮಾಡಿರುವುದು ಯಾಕೋ ಕೊಂಚ ಕೃತಕ ಎನ್ನಿಸುತ್ತದೆ.
ಹಾಗೆಯೇ ನಾಟಕದ ಯಶವಂತನ ಪಾತ್ರವು ಇನ್ನೇನು ಕಾದಂಬರಿ ಮುಗಿಯುವಲ್ಲಿಗೆ ಹಠಾತ್ತನೆ ಬಂದು ನನ್ನ ಪ್ರಕಾರ ಕಥಾನಾಯಕನಾಗಿರುವ ಪುರಂದರನ ಬದುಕಿನೊಂದಿಗೆ ಸಮೀಕರಣಗೊಳ್ಳುತ್ತದೆ. ಅವನು ಪರಾರಿಯಾಗಿದ್ದ ಎನ್ನುವುದೇನೋ ನಿಜ. ಆದರೆ ಅವನ ಕಥೆಯೂ ಎಲ್ಲೋ ಒಂದು ವಿಶೇಷ ದೃಶ್ಯದಂತೆ ಕಾಣಿಸುತ್ತದೆ.
ಹಾಗೆಯೇ ರಮಾಕಾಂತನ ಪಾತ್ರವೂ ಬಹುಬೇಗ ಕ್ರಾಂತಿಕಾರಿಯಾಗಿ ಬೆಳೆಯುತ್ತದೆ. ಈ ಮಹಾಶಯರೂ ಕಾದಂಬರಿಯ ಕೊನೆಗೆ ಪ್ರಬಲರಾಗಿ ಪುರಂದರನನ್ನು ಮರೆಸುತ್ತಾರೆ. ಒಂದು ಸಂದರ್ಭದಲ್ಲಂತೂ ಪುರಂದರನೇ ತನ್ನು ಎಂಥ ಸಾಮಾನ್ಯ ಬದುಕು ಎಂದು ಬೇಜಾರುಪಟ್ಟುಕೊಳ್ಳುತ್ತಾನೆ. ಇವೆಲ್ಲವೂ ವಿವೇಕರ ತಾರತಮ್ಯರಹಿತ ಪಾತ್ರನಿರ್ವಹಣೆ ಎಂದುಕೊಂಡರೂ ಯಾಕೋ ಅವರು ತುಂಬಾ ನಿರಾಸಕ್ತರಾಗಿದ್ದಾರೆ; ಪಾತ್ರಗಳ ಪರಕಾಯ ಪ್ರವೇಶದಲ್ಲಿ, ಪಾತ್ರಗಳನ್ನು ಬೆಳೆಸುವಲ್ಲಿ ತೋರಬೇಕಾದ ನಿಯಂತ್ರಣವನ್ನೂ ತೋರಿಲ್ಲ ಎಂದು ಕೆಲವರಿಗೆ ಅನ್ನಿಸಬಹುದು.
ವಿವೇಕ ಶಾನಭಾಗರು ಕನ್ನಡ ಭಾಷೆಯನ್ನು ಅತ್ಯಂತ ಸಮಚಿತ್ತದಿಂದ ಮತ್ತು ಸೂಕ್ಷ್ಮ ಗ್ರಹಿಕೆಗಳಿಂದ ಕಲಿತು ಅದನ್ನು ನಾಜೂಕಾಗಿ ಬಳಸುತ್ತಾರೆ. ಅವರ ವಾಕ್ಯಗಳಲ್ಲಿ ಘಟನೆ ಇರುತ್ತದೆಯೇ ಹೊರತು ಯಾವುದೇ ಬಗೆಯ ಭಾಷೆಯ ಕಿರಿಕಿರಿ ಇರುವುದಿಲ್ಲ. ಭಾಷೆಯು ಸಂಸ್ಕೃತಿಯನ್ನು ಬಿಂಬಿಸುವ ವಾಹಕವಾಗುತ್ತದೆ.
ಈ ವಿಮರ್ಶೆಯ ಮೊದಲ ಪ್ಯಾರಾದಲ್ಲಿರುವ ವಿಷಯಾಂತರವನ್ನು ಈಗ ಲಿಂಕ್ ಮಾಡುತ್ತೇನೆ. ಡಾಕ್ಯುಂಬರಿ ಎಂದು ನಾನು ಕರೆಯುವ ಕಾದಂಬರಿಗಳಲ್ಲಿ ಮೊದಲನೆಯದು ಡಾ|| ಎಸ್. ಎಲ್. ಭೈರಪ್ಪನವರ `ಸಾರ್ಥ`. ಎರಡನೆಯದು ಎಚ್. ನಾಗವೇಣಿಯವರ `ಗಾಂಧಿ ಬಂದ’. ಮೂರನೆಯದು ಅದೇ ಭೈರಪ್ಪನವರ `ಆವರಣ’. ಇನ್ನು ಇತಿಹಾಸ, ವರ್ತಮಾನದ ಡಾಕ್ಯುಂಬರಿಗಳಾಗಿದ್ದರೂ ಹಾಗೆ ಕಾಣಿಸಿಕೊಳ್ಳದೆ ರಮ್ಯ ಕಾದಂಬರಿಗಳಂತೆ ತೋರಿಸಿಕೊಂಡದ್ದು ಕಂಬಾರರ `ಶಿಖರ ಸೂರ್ಯ’ ಮತ್ತು ಅನಂತಮೂರ್ತಿಯವರ `ದಿವ್ಯ.’ (ಇನ್ನು ಇತ್ತೀಚೆಗೆ ಬಂದ ಕೆಲವರ ಕಾದಂಬರಿಗಳನ್ನು ನಾನು ಪೂರ್ತಿ ಓದಿಲ್ಲ.) ಈ ಕಾದಂಬರಿಗಳು ಡಾಕ್ಯುಂಬರಿಗಳಾಗಲು ಕಾರಣ ಇಷ್ಟೆ: ಐತಿಹಾಸಿಕ ಸಂಗತಿಗಳನ್ನು ಹೇಳಲು ಒಂದು ಕಥೆಯನ್ನು ಹೆಣೆಯುವುದು. ಅವುಗಳನ್ನು ಬರೆಯುವಾಗ ಇನ್‌ಫೋ ಡಂಪಿಂಗ್ (ಮಾಹಿತಿಯನ್ನು ಕಂಡಾಪಟ್ಟೆ ಸುರಿಯುವುದು) ಎಂಬ ಪರಿಸರವಿರೋಧಿ ಕೃತ್ಯವನ್ನು ಮಾಡುವುದು.
ವಿವೇಕ ಶಾನಭಾಗರೂ ಕೆಲವೊಮ್ಮೆ ಡಾಕ್ಯುಂಬರಿಯ ಸಂಗತಿಗಳನ್ನು ಹೇಳಲು ಮುನ್ನುಗ್ಗಿದ್ದುಂಟು. ಆದರೆ ಅವರು ತಕ್ಷಣವೇ ಜಾಗೃತಗೊಂಡು ಅಂಥ ಅಪಾಯದಿಂದ ಪಾರಾಗಿದ್ದಾರೆ. ಆಫ್‌ಕೋರ್ಸ್, ಉಳಿದವರು ಜಾಗೃತರಾಗಿ ಇದ್ದುಕೊಂಡೇ ಇಂಥ ಡಾಕ್ಯುಂಬರಿಗಳನ್ನು ಬರೆದಿದ್ದಾರೆ !
ಕಾದಂಬರಿಯಲ್ಲಿ ಬರುವ ಪುರಂದರ – ಮೋಹಿನಿ ಸ್ಪರ್ಧೆ, ಯಮುನೆಯ ಜಲಪಾತದ ಸ್ನಾನ, ಬನಬಂಢಾರಿಯ ಪಾತ್ರ – ಇವು ಶಾನಭಾಗರು ನಿಜಕ್ಕೂ ಒಬ್ಬ ಕವಿಯೇ ಹೌದು ಎಂಬುದನ್ನು ಸಾಬೀತುಪಡಿಸುತ್ತದೆ. ಕಲಾತ್ಮಕತೆ, ಕಾವ್ಯಾತ್ಮಕತೆ ಎಂಬುದು ಕಾದಂಬರಿಗೆ ಯಾಕೆ ಬೇಕು ಎಂಬುದನ್ನು `ದಿವ್ಯ’, `ಶಿಖರಸೂರ್ಯ’, `ಆವರಣ’ ಬರೆದವರು ಇದನ್ನು ಓದಿ ತಿಳಿದುಕೊಳ್ಳಬಹುದು.
ರಾಘವೇಂದ್ರ ಪಾಟೀಲರ `ತೇರು’ ವಿಸ್ಮಯದ ಲೋಕ ತೋರಿಸುತ್ತ ಹಾದುಹೋದ ಮೇಲೆ ಈ ಕಡಲು ನಮ್ಮನ್ನು ಪ್ರಶಾಂತವಾಗಿ ಆವರಿಸಿಕೊಳ್ಳುತ್ತದೆ.
ರಾವ್‌ಬೈಲ್ ಎಂಬ ನಮ್ಮ ನಡುವಿನ ಪ್ರಮುಖ ಕಲಾವಿದರು ನಿಜಕ್ಕೂ ಭಾವಕ್ಕೆ ಕುಂದು ಬಾರದ ಹಾಗೆ ಚಿತ್ರ ಬರೆದಿದ್ದಾರೆ. `ಶಿಖರ ಸೂರ್ಯ’ದಲ್ಲಿ ನೂರಾರು ಭೀಕರ ಮಿಸ್ಟೇಕುಗಳನ್ನು ಮಾಡಿದ್ದ ಅಕ್ಷರ ಪ್ರಕಾಶನವು ಇಲ್ಲಿ ಮುದ್ರಾರಾಕ್ಷಸನ ಹಾವಳಿಯಿಂದ ಪಾರಾಗುವಲ್ಲಿ ಯಶ ಸಾಧಿಸಿದೆ. ೧೩೫ ರೂ.ಗಳ ಬೆಲೆಯೂ ಅಂಥದ್ದೇನಲ್ಲ ಬಿಡಿ.
ಸಂಸ್ಕೃತಿಯ ನೆನಹನ್ನು ಸಂರಕ್ಷಿಸುವುದಕ್ಕೆ ಬೆಲೆ ಕಟ್ಟುವುದು ನನಗಂತೂ ಅಸಾಧ್ಯ.


					

Leave a Reply