ಇಂಧನ : ಅಮೆರಿಕಾದ ರಕ್ತಕ್ರಾಂತಿ,
ವಿಜ್ಞಾನಿಗಳ ಸಂಶೋಧನಾ ಕ್ರಾಂತಿ !


ಇಂಧನ ಎಂದ ಕೂಡಲೇ ತೈಲವೇ ನಮಗೆಲ್ಲ ಹೊಳೆಯುವ ಈ ದಿನಗಳಲ್ಲಿ  ಅತ್ಯಾಧುನಿಕ ಹೈಡ್ರೋಕಾರ್ಬನ್ ಇಂಧನಗಳು ಭವಿಷ್ಯದ ಅತ್ಯುತ್ತಮ ಇಂಧನ ಪರಿಹಾರವಾಗಬಲ್ಲವು ಎಂದು ಅಮೆರಿಕದ ತಜ್ಞ ಜೇಮ್ಸ್ ವೂಲ್ಸೆ ಹೇಳಿದ್ದಾರೆ.  ತೈಲ, ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲುಗಳ ಬದಲಿಯಾಗಿ ಈ ಇಂಧನಗಳನ್ನು ಸಮರ್ಥವಾಗಿ ಬಳಸಬಹುದು ಎಂದು ಅವರು ಇತ್ತೀಚೆಗೆ ಒಪಿನಿಯನ್ ಜರ್ನಲ್‌ನಲ್ಲಿ ಬರೆದ ಲೇಖನದಲ್ಲಿ ವಾದಿಸಿದ್ದಾರೆ.
ಹೀಗೆ  ಹೈಡ್ರೋಕಾರ್ಬನ್ ಆಧಾರಿತ ಬದುಕನ್ನು ಸಾಧಿಸಿದರೆ ಮುಂದಿನ ದಿನಗಳಲ್ಲಿ ನಾವು ಮಧ್ಯಪೂರ್ವ ದೇಶಗಳ ತೈಲವನ್ನೇ ನೆಚ್ಚಿಕೊಳ್ಳಬೇಕಾದ ಪ್ರಮೇಯ ಬರುವುದಿಲ್ಲ ಎಂಬುದು ಅವರ ವಾದ.
ಆಯಿಲ್ ಶೇಲ್, ಕಲ್ಲಿದ್ದಲು ದ್ರವೀಕರಣ, ಬಯೋಮಾಸ್ ಮತ್ತು ಹೈಬ್ರಿಡ್ ಕಾರುಗಳ ಮೂಲಕ ನಾವು ಇಂಧನ ಬಳಕೆಯಲ್ಲಿ ತೈಲವನ್ನು ಬಳಸದೇ ಇರುವುದಕ್ಕೆ ಸಾಧ್ಯವಿದೆ ಎಂಬುದು ವೂಲ್ಸೆ ವಾದವಾಗಿದೆ.
ಈ ಮಧ್ಯೆ ಸೌರಶಕ್ತಿಯನ್ನು ಸಮರ್ಥವಾಗಿ ಬಳಸುವ ಹಿನ್ನೆಲೆಯಲ್ಲಿ ಅಮೆರಿಕಾದಲ್ಲೇ ಇನ್ನೊಂದು ಮಹತ್ವದ ಸಂಶೋಧನೆಯಾಗಿದೆ. ಬೋಯಿಂಗ್ – ಸ್ಪರೆಕ್ಟ್ರೋಲ್ಯಾಬ್ ಸಂಸ್ಥೆಗಳು ಸೌರಶಕ್ತಿಯನ್ನು ಶೇ. ೪೦ರಷ್ಟು ಸಂಗ್ರಹಿಸುವ ವಿಧಾನವನ್ನು ಈಗಷ್ಟೇ ರೂಪಿಸಿದ್ದಾರೆ. ಈ ಹಿಂದೆ ಕೇವಲ ಶೇ. ೨೦ರಷ್ಟು ಸೌರಶಕ್ತಿಯನ್ನು ಮಾತ್ರವೇ ಸಂಗ್ರಹಿಸಲು ಸಾಧ್ಯವಾಗಿತ್ತು. ಸೌರಶಕ್ತಿ ಕಾನ್‌ಸೆಂಟ್ರೇಟರ್ ಮತ್ತು ಮಲ್ಟಿಜಂಕ್ಷನ್ ಕನ್ವರ್ಟರ್ ಮೂಲಕ ಈ  ಗುರಿ ಸಾಧ್ಯವಾಗಿದೆ. ಅಂದರೆ ಇದರಿಂದ ಸೂರ್ಯನ ಅವಕೆಂಪು (ಇನ್‌ಫ್ರಾರೆಡ್)  ಮತ್ತು ಅತಿನೇರಳೆ (ಅಲ್ಟ್ರಾ ವಯಲೆಟ್) ಕಿರಣಗಳನ್ನೂ ಶಕ್ತಿಯಾಗಿ ಪರಿವರ್ತಿಸಬಹುದು.
ಇದರ ಅರ್ಥ ಇಷ್ಟೆ: ಒಂದು ವ್ಯಾಟ್ ಉತ್ಪಾದನಾ ಘಟಕ ಸ್ಥಾಪನೆಯ ವೆಚ್ಚ ಕೇವಲ ಮೂರು ಡಾಲರ್ ಆಗುತ್ತದೆ. ಅಂದರೆ ಒಂದು ಕಿಲೋವಾಟ್ ಅವರ್ ವಿದ್ಯುತ್ ಉತ್ಪಾದನೆಗೆ ಕೇವಲ ೮ರಿಂದ ೧೦ ಸೆಂಟ್‌ಗಳು ಸಾಕು. ಹೀಗೆಂದು ಅಮೆರಿಕಾದ ಇಂಧನ ಇಲಾಖೆಯೇ ಹೇಳಿದೆ.
ಶೇ. ೪೦ರ ಸೌರಶಕ್ತಿ ಸಂಗ್ರಹದ ಪ್ರಮಾಣದಲ್ಲಿ ಸೌರಶಕ್ತಿ ಸಂಗ್ರಹದ ಮೂಲಕ ಇಡೀ ವಿಶ್ವದ ಇಂಧನ ಬೇಡಿಕೆಯನ್ನು  ಪೂರೈಸಲು ಕೇವಲ ೨೬೫ ಚದರ ಮೈಲಿ ಭೂಪ್ರದೇಶ ಸಾಕು ಎಂಬುದು ಒಂದು ಅಂದಾಜು.
ವೂಲ್ಸೆ ಹೇಳುತ್ತಾರೆ: ಗ್ಯಾಸೊಲಿನ್ – ಎಲೆಕ್ಟ್ರಿಕ್ ಹೈಬ್ರಿಡ್ ವಾಹನಗಳನ್ನು ಬಳಸುವುದರ ಮೂಲಕ ಮತ್ತು ರಾತ್ರಿಯ ಅತಿ ಕಡಿಮೆ ವಿದ್ಯುತ್ ಬೇಡಿಕೆಯ  ಅವಧಿಯಲ್ಲಿ ವಾಹನಗಳನ್ನು ಚಾರ್ಜ್ ಮಾಡುವ ಮೂಲಕ ಇಂಧನ ಉಳಿತಾಯ ಸಾಧ್ಯ.  ಅಲ್ಲದೆ ಬಯೋಮಾಸ್ ಮತ್ತು ತ್ಯಾಜ್ಯಗಳನ್ನು ಬಳಸಿ ಇಂಧನ ಉತ್ಪಾದಿಸುವುದರಿಂದ ಪರಿಸರ ಸಮಸ್ಯೆಗಳೂ ಕಡಿಮೆಯಾಗುತ್ತವೆ.
ನೋಡಿ, ಇಂಧನ ಉಳಿಸುವ ಸುದ್ದಿಯೂ ಅಮೆರಿಕಾದಿಂದಲೇ ಬಂದಿದೆ. ತೈಲಕ್ಕಾಗಿ ಇಂದು ಜಗತ್ತಿನಾದ್ಯಂತ ಗಲಾಟೆ ಮಾಡುತ್ತಿರುವ ದೇಶವೂ ಅಮೆರಿಕಾ!
ಇರಾಖ್ ಈಗ ಅಮೆರಿಕದ ಕೈಯಲ್ಲಿದೆ. ಅಲ್ಲಿ ತೆಗೆಯುವ ಎಣ್ಣೆಯನ್ನು ಹೇಗೆ ತಾನೇ ಕುಡಿಯಬಹುದು ಎಂದು ಅಮೆರಿಕಾ ತಂತ್ರ ರೂಪಿಸಿದೆ. ಒಂದೋ, ಇರಾಖಿಯನ್ನರು ಮೂರು ದೇಶವಾಗಿ ಒಡೆದುಹೋಗಬೇಕು; ಅಥವಾ ಹಾಗೇ ಇದ್ದರೂ ಅದರ ತೈಲ ಉತ್ಪನ್ನಗಳೆಲ್ಲ ಅಮೆರಿಕಾಗೇ ಹರಿಯಬೇಕು. ಹಾಗೆ ಮಾಡುವ  ಸಂವೈಧಾನಿಕ ತಿದ್ದುಪಡಿಗಳನ್ನು ಅಮೆರಿಕಾ ನಿಯಂತ್ರಿತ ಇರಾಖ್ ಸರ್ಕಾರ ಒಪ್ಪಿ ಜಾರಿ ಮಾಡಿದೆ.
ಮುಂದೆ? ಅಫಘಾನಿಸ್ತಾನ, ಪಾಕಿಸ್ತಾನ ದೇಶಗಳು ಈಗಾಗಲೇ ಅಮೆರಿಕಾದ ಬಿಗಿಮುಷ್ಟಿಯಲ್ಲಿವೆ. ಇರಾನ್‌ಒಂದೇ ಬಾಕಿ. ಅದಕ್ಕೇ ಈಗ ಅಮೆರಿಕಾದ ಸಿಟ್ಟೆಲ್ಲ ಇರಾನಿನ ಮೇಲೆ. ಅಮೆರಿಕಾಗೆ ನೆಪ ಸಿಕ್ಕಲಿ ಎಂಬಂತೆ ಈ ದೇಶಗಳಲ್ಲೂ ಸರ್ಕಾರಗಳು, ಸಂಘಟನೆಗಳು ವರ್ತಿಸುತ್ತಿವೆ. ಅಮೆರಿಕಾದ ಸೇನೆ ಭಾರತದ ಗಡಿಗೆ ಬಂದು ನಿಲ್ಲುವುದಕ್ಕೆ ಅಂಥ ಸಮಯ ಬೇಕಿಲ್ಲ.
ಅಮೆರಿಕಾದ ಈ ಇಂಧನಪಿಪಾಸು ರಾಜಕಾರಣವನ್ನು ಅದೇ ದೇಶದ ಸಂಶೋಧನೆಗಳು  ತಡೆಯಲು ಹೊರಟಿರುವುದು ಮಾತ್ರ ವಿಚಿತ್ರ ;  ನಿಜ.
(ಮುಗಿಯಿತು)

Please follow and like us: