• ಆಗ ನನಗೆ ಎರಡು ವರ್ಷ. ನಾನು ಆಗಿನ ಕಾಲದಲ್ಲಿ ನಮ್ಮೂರಿನ ಮಹಿಳೆಯರು ಸ್ನಾನ ಮಾಡಲು ಬಳಸುತ್ತಿದ್ದ ದೊಡ್ಡ ಹಳ್ಳದಲ್ಲಿ ಬಿದ್ದುಬಿಟ್ಟಿದ್ದೆ. ಆಟ ಆಡ್ತಾ ಆಡ್ತಾ ಅಲ್ಲಿ ಮುಳುಗಿಹೋದ ನಾನು ಮೇಲೆಬ್ಬಿಸಿದ ನೀರಿನ ಗುಳ್ಳೆಗಳನ್ನು ನೋಡಿ ನಮ್ಮ ಮನೆಗೆಲಸದವಳು ಓಡಿ ಬಂದು ನನ್ನನ್ನು ಎತ್ತಿದಳಂತೆ. ಹತ್ತು ವರ್ಷಗಳ ಹಿಂದೆ ಆಕೆ ತೀರಿಕೊಂಡಳು. ಆದರೆ ಕೊನೇವರೆಗೂ ಆಕೆ ನನ್ನನ್ನು ಭೇಟಿಯಾದಾಗೆಲ್ಲ ನಿನ್ನ ಬದುಕಿಗೆ ನಾನೇ ಕಾರಣ ಎಂದು ಕೀಟಲೆ ಮಾಡುತ್ತಿದ್ದಳು. ಅದು ನಿಜವೇ ಬಿಡಿ.

 • ನನ್ನ ಪದವಿ ಶಿಕ್ಷಣದ ಕಾಲದಲ್ಲಿ ನನ್ನ ಬಳಿ ಒಂದು ಬೈಸಿಕಲ್ ಇತ್ತು. ಆ ಕಾಲದಲ್ಲಿ ಸೈಕಲ್ ಇರುವುದೇ ಊರಿನಲ್ಲಿ ಘನತೆಯ ವಿಚಾರ. ನನ್ನ ಬಳಿ ಒಂದು ಮರ್ಸಿಡಿಸ್ ಇದ್ದಂತೆಯೇ ಸಂಭ್ರಮಿಸುತ್ತಿದ್ದೆ. ಒಂದು ದಿನ ಕಾಲೇಜಿನಿಂದ ಮನೆಗೆ ಬರೋವಾಗ ಹಾದಿಯಲ್ಲಿದ್ದ ಸೇತುವೆಯ ಮೇಲೆ ನನ್ನ ಸವಾರಿ ನಡೆದಿತ್ತು. ತುಂಬಾ ಕಿರಿದಾಗಿದ್ದ ಆ ಸೇತುವೆಯ ಆಚೆಗೆ ಒಂದು ಟ್ರಕ್ಕು, ಈಚೆಗೆ ಒಂದು ಬಸ್ಸು ಬಂದು ನಾನು ಸಿಕ್ಕಿಹಾಕಿಕೊಂಡೆ. ಕೊನೆಗೆ ಸೈಕಲ್‌ನ್ನು ವಾಳಿಸಿ ಸೇತುವೆಯ ಕಟ್ಟೆಯ ಮೇಲೆ ಕಾಲಿಟ್ಟೆ. ಆದರೆ ನನ್ನ ಲೆಕ್ಕಾಚಾರ ತಪ್ಪಿ ಸೀದಾ ರಸ್ತೆಯ ಮೇಲೇ ಬಿದ್ದೆ. ಇನ್ನೇನು, ಕೆಲವೇ ಸೆಕೆಂಡುಗಳಲ್ಲಿ ಟ್ರಕ್ಕು ನನ್ನ ಮೇಲೆ ಹಾದುಹೋಗಲಿದೆ ಎಂಬ ನಿರೀಕ್ಷೆಯಲ್ಲೇ ಹೃದಯ ಬಾಯಿಗೆ ಬಂತು. ಆದರೆ ಏನೂ ಆಗಲಿಲ್ಲ. ಟ್ರಕ್ಕಿ ಚಾಲಕ ಬ್ರೇಕ್ ಹಾಕಿದ ಸದ್ದು ಕೇಳಿತು. ನಾನು ಮತ್ತೆ ಬದುಕಿಕೊಂಡೆ.
 • ೩೨ ವರ್ಷಗಳ ಹಿಂದೆ ನಾನು ಹೊಸದಿಲ್ಲಿಯ ಲೋಧಿ ಉದ್ಯಾನದಲ್ಲಿ ವಾಕಿಂಗ್ ಮಾಡ್ತಾ ಇದ್ದೆ. ಹಠಾತ್ತನೆ ನನ್ನೆರಡೂ ಕಾಲಿನ ಕೀಲುಗಳಲ್ಲಿ ನೋವು ಕಾಣಿಸಿಕೊಂಡಿತು. ಮರುದಿನ ತಪಾಸಣೆಗಾಗಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ ಹೋದೆ. ನನಗೆ ಪೆರೆನಿಯಲ್ ಮಸ್ಕ್ಯುಲಾರ್ ಡಿಸ್ಟ್ರೋಫಿ ಎಂಬ ಅತ್ಯಪರೂಪದ ಮೋಟಾರ್ ನ್ಯೂರಾನ್ ಕಾಯಿಲೆ ಇದೆ ಎಂದು ವೈದ್ಯರು ಹೇಳಿದರು. ನಾನು ಅಂದಿನಿಂದ ಐದು ವರ್ಷಗಳಿಗಿಂತ ಹೆಚ್ಚು ಕಾಲ ಬದುಕಲಾರೆ ಎಂದೂ ಅವರು ತಿಳಿಸಿದರು. ಅದಾಗಿ ಮೂರು ದಶಕಗಳೇ ಕಳೆದಿವೆ. ಏನೂ ಆಗಿಲ್ಲ!

ಮೂರು ಸಲ ನಾನು ಸಾವಿನ ಗಳಿಗೆಯ ಹತ್ತಿರ ಹೋಗಿ ಹೊರಬಂದಿದ್ದೇನೆ. ಅದಕ್ಕೆ ಕಾರಣ ಏನು ಗೊತ್ತೆ? ಇನ್ನೊಂದು ಗುರಿ ಸಾಧನೆಯೇ ನನ್ನ ಗಮ್ಯವಾಗಿತ್ತು: ಅದೇ ರಿವರ್ ವ್ಯಾಲಿ.

ಹೀಗೆ ತನ್ನ ಸಾವಿನಂಚಿನ ಕಥೆಯನ್ನು ಅತ್ಯಂತ ವಿನೀತನಾಗಿ ನಮ್ಮೊಂದಿಗೆ ಹಂಚಿಕೊಂಡವರು ಸಿ.ವಿ. ರಾಧಾಕೃಷ್ಣನ್. ರಿವರ್ ವ್ಯಾಲಿ ಎಂಬ ಅವರ ಸಂಸ್ಥೆ ೧೩೦ಕ್ಕೂ ಹೆಚ್ಚು ಯುವಕ – ಯುವತಿಯರ ಬಾಳಿಗೆ ಬೆಳಕಾಗಿದೆ. `ನನ್ನ ಈ ಹೊಸ ಬದುಕಿಗೆ ಡೊನಾಲ್ಡ್ ಕನೂಥ್‌ರೇ ಕಾರಣ’ ಎಂದು ರಾಧಾಕೃಷ್ಣನ್ ಘೋಷಿಸಿದ್ದಾರೆ. ಹೌದೆ? ಅದು ಹೇಗೆ? ಗಣಿತಜ್ಞ ಕನೂಥ್‌ಗೂ ರಾಧಾಕೃಷ್ಣನ್‌ಗೂ ಇರುವ ನಂಟೇನು? ಈ ಕಥೆ ಬಹುಶಃ ನಮ್ಮ ಸಾಫ್ಟ್‌ವೇರ್ ರಂಗದ ಒಂದು ರೋಚಕ ಇತಿಹಾಸ. ಕನೂಥ್‌ರ `ಟೆಕ್ಸ್’ ತಂತ್ರಾಂಶವು ರಾಧಾಕೃಷ್ಣನ್‌ರ ಬದುಕಷ್ಟೇ ಯಾಕೆ, ವಿಶ್ವದ ವೈಜ್ಞಾನಿಕ ಪ್ರಕಾಶನ ರಂಗದ ದಿಕ್ಕನ್ನೇ ಬದಲಿಸಿತು.

೧೯೭೭ರ ಆ ದಿನ ದಿಲ್ಲಿಯಲ್ಲಿ ತನಗೆ ಗುಣಪಡಿಸಲಾಗದ ರೋಗವಿದೆ, ಇನ್ನು ಐದೇ ವರ್ಷಗಳು ಮಾತ್ರ ಬದುಕಿರಬಲ್ಲೆ ಎಂದು ವೈದ್ಯರಿಂದ ಕೇಳಿದ ರಾಧಾಕೃಷ್ಣನ್‌ಗೆ ಆಗ ಕೇವಲ ೨೫ರ ಹರೆಯ. ಹಡಗು ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಅವರು ಸೀದಾ ಕೇರಳದ ಮನೆಗೆ ಬಂದರು. ಬೇರೆ ಕೆಲಸ ಮಾಡು ಎಂದು ಅವರ ಅಪ್ಪ – ಅಮ್ಮ ಹೇಳಿದರು. ಕೊನೆಗೆ ಹೇಗೋ ತಿರುವನಂತಪುರದಲ್ಲಿ ಒಂದು ವರ್ಷ ಕಳೆದರು. ಆಮೇಲೆ ಕೇರಳ ವಿಶ್ವವಿದ್ಯಾಲಯದಲ್ಲಿ ಕಾರಕೂನರಾದ ರಾಧಾಕೃಷ್ಣನ್ ತಮ್ಮ ಹಳೆ ಶಿಕ್ಷಕ, ಗಣಿತ ವಿಭಾಗದ ಪ್ರೊ. ಕೆ ಎಸ್ ಎಸ್ ನಂಬೂದ್ರಿಪಾಡ್ ಬಳಿ ಹೋಗಿ `ನಾನಿನ್ನು ಕೆಲವೇ ವರ್ಷ ಬದುಕುವೆ. ಅಷ್ಟು ದಿನ ಕಲಿಯಲು ಏನಾದರೂ ಇದ್ದರೆ ಹೇಳಿ’ ಎಂದರು. `ಹೌದ? ಹಾಗಾದ್ರೆ ನೀನು `ಟೆಕ್ಸ್’ ಕಲಿ. ನೀನು ಬದುಕಿ ಇರೋವರೆಗೂ ಅದನ್ನ ಕಲೀತಾನೇ ಇರಬಹುದು’ ಎಂದು ನಂಬೂದ್ರಿಪಾಡ್ ಸಲಹೆ ನೀಡಿದರು. ಸರಿ, ಟೆಕ್ಸ್ ಬಗ್ಗೆ ಇದ್ದ ಸರಕನ್ನೆಲ್ಲ ಸಂಗ್ರಹಿಸಿದ ರಾಧಾಕೃಷ್ಣನ್ ಅದನ್ನು ಓದಲು, ಕಲಿಯಲು ಆರಂಭಿಸಿದರು. ಅಷ್ಟು ಹೊತ್ತಿಗೆ ಅವರ ದೇಹವನ್ನು  ಮತ್ತೆ ತಪಾಸಣೆ ಮಾಡಿದ ವೈದ್ಯರು ಕಾಯಿಲೆಯನ್ನು ದೃಢೀಕರಿಸಿದ್ದರು.

ಸಾವಿನ ಭಯ, ನೋವು, ಹತಾಶೆ, ಒಂಟಿತನ – ಎಲ್ಲವನ್ನೂ ನೀಗಿಕೊಳ್ಳಲು ಅವರು ಗಣಕದ ದೋಸ್ತಿ ಮಾಡಿದರು. ತಾನು ಜೀವಂತ ಜಡ ದೇಹವಾದರೆ ಬುದ್ಧಿಯಾದರೂ ಜಾಗೃತವಾಗಿರಲಿ ಎಂಬುದೇ ರಾಧಾಕೃಷ್ಣನ್‌ರ ಆಶಯವಾಗಿತ್ತು.

ಸರಿ, ಟೆಕ್ಸ್ ಮೂಲಕ ನಿಧಾನವಾಗಿ ವಿಶ್ವವಿದ್ಯಾಲಯದ ಪ್ರಶ್ನೆಪತ್ರಿಕೆಗಳನ್ನು ರೂಪಿಸುವಲ್ಲಿ, ವಿದ್ಯಾರ್ಥಿಗಳ ಸಂಶೋಧನಾ ಪತ್ರಿಕೆಗಳನ್ನು ವಿನ್ಯಾಸಗೊಳಿಸುವುದರಲ್ಲಿ ರಾಧಾಕೃಷ್ಣನ್ ಪುಟ್ಟ ಯಶ ಕಂಡರು. ಹಾಗೇ ವಿವಿಯ ಜೀವಶಾಸ್ತ್ರ ವಿಭಾಗದ ಕೀಟಶಾಸ್ತ್ರ ನಿಯತಕಾಲಿಕೆಯನ್ನೂ ಅವರು ರೂಪಿಸಿದರು. ಮೊದಲು ವಿದ್ಯಾರ್ಥಿಗಳಿಂದ ಹಣ ಪಡೆಯದ ಅವರು ಕೊನೆಗೆ ಮನೆಯ ಸಾಲದ ಕಂತನ್ನು ತೀರಿಸಲು ಶುಲ್ಕ ಪಡೆಯಲು ಮುಂದಾದರು. ಮುಂದೆ ಇದೇ ವೃತ್ತಿಯಾಗಿ, ರಿವರ್ ವ್ಯಾಲಿ ಟೆಕ್ನಾಲಜೀಸ್ ಎಂಬ ಸಂಸ್ಥೆಯನ್ನು ರಾಧಾಕೃಷ್ಣನ್ ಸ್ಥಾಪಿಸಿದರು. ಆ ಕಾಲದಲ್ಲಿ ಕೇಂದ್ರ ಸರ್ಕಾರದ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಅವರ ನೆರವಿಗೆ ಬಂತು. ತೆರಿಗೆ ರಜೆಯೂ ಸಿಕ್ಕಿತ್ತು. ಯಾವ ಸಂಪರ್ಕ ಜಾಲವೂ ಇಲ್ಲದೆ, ಮುಂದೇನು ಮಾಡಬೇಕೆಂದು ಗೊತ್ತಿಲ್ಲದೆ ಹೋದ ರಾಧಾಕೃಷ್ಣನ್, ಟೆಕ್ಸ್ ಬಳಕೆದಾರರ ಗುಂಪಿನ ಸೆಬಾಸ್ಟಿಯನ್‌ರ ಸಲಹೆಯಂತೆ ಭಾರತದಲ್ಲೂ ಟೆಕ್ಸ್ ಬಳಕೆದಾರರ ಗುಂಪನ್ನು ಸ್ಥಾಪಿಸಿದರು. ಆಗ ಅವರು ಬರೆದಿದ್ದ ಒಂದು ಪತ್ರವನ್ನು ನೋಡಿದ ಇಂಗ್ಲೆಂಡಿನ ಟೆಕ್ಸ್ ವೃತ್ತಿಪರ ಪ್ರಕಾಶಕ ಕಾವೇ ಬಝಾರ್ಗನ್ ತಕ್ಷಣ ರಾಧಾಕೃಷ್ಣನ್‌ರನ್ನು ಸಂಪರ್ಕಿಸಿದರು. ೧೯೯೭ರಲ್ಲಿ ಅವರ ಮತ್ತು ರಾಧಾಕೃಷ್ಣನ್‌ರ ಸಂಸ್ಥೆಗಳು ವಿಲೀನವಾದವು. ಅಲ್ಲಿಂದ ರಾಧಾಕೃಷ್ಣನ್ ಬರೆದಿದ್ದು ಹೊಸ ಇತಿಹಾಸ.

ವೃತ್ತಿಯಲ್ಲಿ ತನ್ನದೇ ಆದ ಆದರ್ಶಗಳು, ಕಾರ್ಯಶೈಲಿ, ಸಿಬ್ಬಂದಿ ನಿರ್ವಹಣೆ – ಎಲ್ಲ ವಿಶೇಷ ಗುಣಗಳನ್ನೂ ಹೊಂದಿರುವ ರಾಧಾಕೃಷ್ಣನ್‌ರ ಸಂಸ್ಥೆ ಈಗ ವಿಶ್ವದಲ್ಲೇ ವೈಜ್ಞಾನಿಕ ಪ್ರಕಾಶನ ವಿನ್ಯಾಸದ ಅಗ್ರಮಾನ್ಯ ಸಂಸ್ಥೆಯಾಗಿದೆ. ಐಓಪಿ ಪಬ್ಲಿಶಿಂಗ್ ಹೌಸ್, ಎಲ್ಸ್‌ವೀರ್, ನೇಚರ್ ಪಬ್ಲಿಶಿಂಗ್ ಹೌಸ್ ಸೇರಿದಂತೆ ಜಗತ್ತಿನ ಹಲವು ಪ್ರತಿಷ್ಠಿತ ಸಂಸ್ಥೆಗಳ ಪುಸ್ತಕಗಳನ್ನು ರಿವರ್ ವ್ಯಾಲಿಯ ಸಿಬ್ಬಂದಿಗಳು ರೂಪಿಸುತ್ತಿದ್ದಾರೆ. ವಾರ್ಷಿಕ ಏಳು ಕೋಟಿ ರೂ. ವಹಿವಾಟಿನ ಈ ಸಂಸ್ಥೆ ಈಗ ನಾಲ್ಕೆಕೆರೆ ಜಾಗದಲ್ಲಿ ಸ್ವಂತ ಕಚೇರಿಯನ್ನು ಹೊಂದಿದೆ. ಇಲ್ಲಿ ಹವಾನಿಯಂತ್ರಣ ವ್ಯವಸ್ಥೆಯಿಲ್ಲ; ಹೆಚ್ಚಾಗಿ ಸೂರ್ಯನ ಬೆಳಕು ಮತ್ತು ಸೌರವಿದ್ಯುತ್ ಬಳಕೆಯಾಗುತ್ತಿದೆ; ಕ್ಯಾಂಪಸ್ಸಿಗೆ ಬೇಕಾಗುವಷ್ಟು ಮಳೆನೀರಿನ ಸಂಗ್ರಹ ವ್ಯವಸ್ಥೆಯಿದೆ. ಸಂಸ್ಥೆಯ ಸಿಬ್ಬಂದಿಗಳಿಗೆ ಬೇಕಾಗುವಷ್ಟು ಸಾವಯವ ಕೃಷಿಯ ತರಕಾರಿ ಅಲ್ಲೇ ಬೆಳೆಯುತ್ತದೆ. ಅಡುಗೆಗೆ ಬಳಸುವ ಶೇ.೫೦ರಷ್ಟು ಇಂಧನವನ್ನು ಆಹಾರ ತ್ಯಾಜ್ಯದಿಂದಲೇ ಉತ್ಪಾದಿಸಲಾಗುತ್ತಿದೆ. ಇಡೀ ಕ್ಯಾಂಪಸ್ಸಿನಲ್ಲಿ ಬಿದಿರನ್ನು ವ್ಯಾಪಕವಾಗಿ ಬಳಸಲಾಗಿದೆ. ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣೆಯಿದೆ.

ಇಲ್ಲಿ ಸಾಫ್ಟ್‌ವೇರ್ ಕಚೇರಿಯಲ್ಲದ್ದಂತೆ ಠಾಕುಠೀಕಾಗಿ ಓಡಾಡುವುದಿಲ್ಲ. ಸ್ವತಃ ರಾಧಾಕೃಷ್ಣನ್ ಸರಳ ಉಡುಗೆಯಲ್ಲಿ ತಮ್ಮ ಗಾಲಿಕುರ್ಚಿಯಲ್ಲಿ (ಹೌದು, ಅವರ ಕಾಯಿಲೆಯೀಗ ನಿಧಾನವಾಗಿ ಅವರ ದೇಹದ ನಿಯಂತ್ರಣವನ್ನು ಕಸಿದುಕೊಳ್ಳುತ್ತಿದೆ). ಎಲ್ಲೆಡೆ ಓಡಾಡಿ ಸಿಬ್ಬಂದಿಗಳೊಂದಿಗೆ ಬೆರೆಯುತ್ತಾರೆ.

ಎರಡು ಕನಸು

ರಾಧಾಕೃಷ್ಣನ್ ಹೇಳುವಂತೆ ಅವರಿಗೆ ಎರಡು ಕನಸುಗಳಿವೆ: ಒಂದು – ಸುಸ್ಥಿರ ಸಾಮುದಾಯಿಕ ಬದುಕು. ಇನ್ನೊಂದು ಟೆಕ್ಸ್ ಪ್ರೋಗ್ರಾಮಿಂಗ್ ಕುರಿತಂತೆ ಆತ್ಮಕಥಾನಕ ಬರೆಯುವುದು.

ಮೊದಲಿನಿಂದಲೂ ಸಾಮುದಾಯಿಕ ಬದುಕಿನ ಬಗ್ಗೆ ಆಸಕ್ತಿ ಬೆಳೆಸಿಕೊಂಡ ರಾಧಾಕೃಷ್ಣನ್ ಆ ಬಗ್ಗೆ ಮೊದಲ ಪ್ರಯತ್ನಗಳಲ್ಲಿ ವಿಫಲಗೊಂಡರು. ಆದರೆ ಈಗ ತಮ್ಮದೇ ಕ್ಯಾಂಪಸ್ಸಿನಲ್ಲಿ ಅವರ ಕನಸನ್ನು ಸಾಕಾರಗೊಳಿಸಿದ್ದಾರೆ. ಅವರ ಮನೆಯೀಗ ಈ ಸಾಮುದಾಯಿಕ ಬದುಕಿನ ಕನಸಿನಂತೆಯೇ ವಿನ್ಯಾಸಗೊಂಡಿದೆ.

ಇನ್ನೊಂದು ಕನಸು, ಟೆಕ್ಸ್ ಕುರಿತ ಎರಡು ದಶಕಗಳಿಗೂ ಹೆಚ್ಚಿನ ಅನುಭವವನ್ನು ಹಂಚಿಕೊಳ್ಳುವುದು. ಡೊನಾಲ್ಡ್ ಕನೂಥ್ `ಟೆಕ್ಸ್’ ಬರೆಯುವಾಗ ಊಹಿಸದಿದ್ದ ಹಲವು ಪ್ರಯೋಗಗಳನ್ನು ರಾಧಾಕೃಷ್ಣನ್ ಮಾಡಿದ್ದಾರೆ. ಭಾವನಾತ್ಮಕ, ತಾಂತ್ರಿಕ – ರಾಜಕೀಯ, ವ್ಯವಹಾರ, ಪ್ರೋಗ್ರಾಮಿಂಗ್ – ಹೀಗೆ ನಾಲ್ಕು ಎಳೆಗಳಲ್ಲಿ ಹರಿಯುವ ಆತ್ಮಕಥೆಯ ಸೂತ್ರವೊಂದನ್ನು ಅವರೀಗ ಹೆಣೆದಿದ್ದಾರೆ. ಆದರೆ ಭಾವನಾತ್ಮಕ ಎಳೆ ಮಾತ್ರ ನನ್ನ ನಿಧನದ ನಂತರವೇ ಬಿಡುಗಡೆಯಾಗಲಿದೆ ಎಂದು ಅವರು ಹೇಳುತ್ತಾರೆ.

ತನ್ನ ಕಾಯಿಲೆಯನ್ನು ಎಲ್ಲೂ ರಹಸ್ಯವಾಗಿಡಕೂಡದು, ಯಾರಿಗೂ ತಿಳಿಸದೆ ಇರಬಾರದು, ಯಾರಿಗೂ ಸಮಸ್ಯೆ ಆಗಬಾರದು ಎಂದು ರಾಧಾಕೃಷ್ಣನ್ ದೃಢವಾಗಿ ಭಾವಿಸಿದ್ದರು. ಕೆಲವು ವರ್ಷಗಳಿಂದ ವಿದ್ಯಾ ಅವರ ಬಾಳಸಂಗಾತಿಯಾಗಿದ್ದಾರೆ.

ರಿವರ್ ವ್ಯಾಲಿಯ ನೀತಿ

ರಿವರ್ ವ್ಯಾಲಿ ಸಂಸ್ಥೆಯಯ ನೀತಿಸೂತ್ರಗಳು ಹೀಗಿವೆ:

 •  
  • ತಾಂತ್ರಿಕವಾಗಿ, ನೈತಿಕವಾಗಿ, ಮೌಲ್ಯಯುತವಾಗಿ ಸರಿಯಾದ ಕೆಲಸವನ್ನೇ ಮಾಡಿ; ಆಗ ತಳಮಟ್ಟದ ವಿಷಯಗಳು ಚೆನ್ನಾಗೇ ಇರುತ್ತವೆ.
  • ಲಿಖಿತ ಒಪ್ಪಂದಗಳನ್ನು ನಂಬಬೇಡಿ; ಅಲ್ಲಿ `ನಂಬಿಕೆ’ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
  • ನಿಮ್ಮ ಕಾರ್ಯಶೈಲಿಯ ಬಗ್ಗೆ ಪ್ರಚಾರ ಮಾಡಿ; ನಿಮ್ಮ ಪ್ರತಿಸ್ಪರ್ಧಿಗಳಿಗೂ ತಿಳಿಸಿ.
  • ನೈಜ ಚಿತ್ರಣವನ್ನೇ ನೀಡಿ; ಅದು ಯಾವಾಗಲೂ ಚೆನ್ನಾಗಿಲ್ಲದೆ ಇರಬಹುದು.
  • ನಿಮ್ಮನ್ನೂ ಮೀರಿ ಉಳಿಯುವ ಸಮುದಾಯವೊಂದನ್ನು ರೂಪಿಸಲು ಯತ್ನಿಸಿ.
  • ಸಾಮಾನ್ಯವಾಗಿ ಗ್ರಾಹಕನೇ ಸರಿ; ಹಾಗಂತ ಯಾವಾಗಲೂ ಅಲ್ಲ.
  • ಸಾಧ್ಯವಾದಾಗೆಲ್ಲ ಮುಕ್ತ ಮತ್ತು ಫ್ರೀ ಸಾಫ್ಟ್‌ವೇರನ್ನು ಬಳಸಿ.
  • ನಿಮ್ಮಲ್ಲಿ ಇಲ್ಲದ್ದನ್ನು ಖರ್ಚು ಮಾಡಬೇಡಿ.

ವಾರ್ಷಿಕ ಸರಾಸರಿ ಎರಡು ಲಕ್ಷಕ್ಕೂ ಹೆಚ್ಚು ಪುಟಗಳನ್ನು ಸಿದ್ಧಗೊಳಿಸುವ ಈ ಸಂಸ್ಥೆಯಲ್ಲಿ ಬಳಸುವ ಎಲ್ಲ ತಂತ್ರಾಂಶಗಳೂ ಮುಕ್ತ ತಂತ್ರಾಂಶಗಳು. ಅವರ ಸಂಸ್ಥೆಯ ಈ ಕೆಲವು ದೃಶ್ಯಗಳನ್ನು ನೋಡಿದರೆ ನಿಮಗೆ ಅವರ ಜೀವಶೈಲಿಯ ಅರಿವಾಗುತ್ತದೆ.

Please follow and like us: