ನನ್ನ ಪ್ರೀತಿಯ ದತ್ತಾಜಿ

ದತ್ತಾತ್ರೇಯ ಹೊಸಬಾಳೆ, – ನನ್ನ ಪ್ರೀತಿಯ ದತ್ತಾಜಿ – ಈಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರು. ಅವರಿಗೊಂದು ಪುಟ್ಟ ಅಭಿನಂದನೆ ಹೇಳಿ ಈ ಬ್ಲಾಗ್.

ದತ್ತಾಜಿ ವಿದ್ಯಾರ್ಥಿ ಪರಿಷತ್ತಿನಿಂದಾಗಿ ನನಗೆ ೨೮ ವರ್ಷಗಳಿಂದ ಪರಿಚಿತರು; ಈವರೆಗೂ ಪ್ರತೀ ಭೇಟಿಯಲ್ಲೂ ನನ್ನನ್ನು ಬೆರಗಿಗೆ, ಅಚ್ಚರಿಗೆ ಮೆಲುವಾಗಿ ತಳ್ಳಿದವರು. ಮಧುರ ಸ್ನೇಹದಲ್ಲಿ ನನ್ನನ್ನು ಕಂಡವರು …

೧೯೮೧ರ ಆ ಒಂದು ದಿನ ಹೂವಿನಹಡಗಲಿಯಲ್ಲಿ ವಿದ್ಯಾರ್ಥಿ ಪರಿಷತ್ತಿನ ಶಾಖೆ ಉದ್ಘಾಟನೆಯಾಯಿತು. ಕಾರ್ಯಕ್ರಮಕ್ಕೆ ಅಲ್ಲಿನ ಹಿರಿಯ ವಕೀಲ ಎಂ ಪಿ ಪ್ರಕಾಶ್ ಕೂಡಾ ಬಂದಿದ್ದರು. ಕಾರ್ಯಕ್ರಮದಲ್ಲಿ ದತ್ತಾಜಿ ತನ್ನ ಅಸ್ಖಲಿತ ಮಾತಿನಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ನನಗಂತೂ ಅವರೊಂದು ಎನಿಗ್ಮಾ ಅನ್ನಿಸಿಬಿಟ್ಟರು. ಅವರ ಜೊತೆಗೆ ಕೆಲಕಾಲ ಇರಲು ಸಾಧ್ಯವೇ ಎಂದು ಅಂದು ನಾನು ಕನಸು ಕಂಡಿದ್ದು ನಿಜ.

ಆಮೇಲೆ ಅವರನ್ನು ನಾನು ಕಂಡಿದ್ದು ದಾವಣಗೆರೆಯಲ್ಲಿ. ಆಗ ನಾನು ಮಾಡಿದ್ದು ಇಂಜಿನಿಯರಿಂಗ್‌ಗಿಂತ ಹೆಚ್ಚಾಗಿ ಸೋಶಿಯಲ್ ಇಂಜಿನಿಯರಿಂಗ್ ಮಾಡುವ ವಿದ್ಯಾರ್ಥಿ ಪರಿಷತ್ತಿನ ಚಟುವಟಿಕೆಯಲ್ಲಿ. ಮೂರು ವರ್ಷಗಳ ಕಾಲ ನಾನು ಸೈಕಲ್ ಸವಾರಿ ಮಾಡುತ್ತ ವಿದ್ಯಾರ್ಥಿ ಪರಿಷತ್ ಕೆಲಸ ಮಾಡಿದೆ. ೧೯೮೩ರಲ್ಲಿ ಒಂದು ಸಣ್ಣ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಿಂದ ಮೇಲೆದ್ದ ದಾವಣಗೆರೆ ಅಭಾವಿಪ (ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್) ೧೯೮೬ರಲ್ಲಿ ರಾಜ್ಯ ಸಮಾವೇಶ ನಡೆಸಿ ಹಿಂದೆಂದೂ ಕಾಣದ ದಾಖಲೆ ಸಂಖ್ಯೆ ಪ್ರತಿನಿಧಿಗಳನ್ನು ಸಂಘಟಿಸಿದ್ದು ಈಗ ಇತಿಹಾಸ. (ಆಗ ಸಮಾವೇಶಕ್ಕೆ ಕ್ರೀಡಾಪಟು ವಂದನಾರಾವ್ ಬಂದಿದ್ದು, ಜನ ಹಿಗ್ಗಾಮುಗ್ಗಾ ಬಂದು ಶಾಮಿಯಾನಾ ಅದುರಿದ್ದು, ನಾನು ಪ್ರದರ್ಶಿನಿಯನ್ನು ರೂಪಿಸುತ್ತ ನಿದ್ದೆಗೆಟ್ಟಿದ್ದು…. ಎಲ್ಲ ಚಕಚಕನೆ ಸ್ಲೈಡ್ ಶೋದಂತೆ ಗಿರಕಿ ಹೊಡೆಯುತ್ತಿವೆ….. ನಾನು ಆಗಿನ್ನೂ ೧೮ರ ಇಂಜಿನಿಯರಿಂಗ್ ಸ್ಟೂಡೆಂಟ್.

ದಾವಣಗೆರೆ ಸಮ್ಮೇಳನವೇ ನನ್ನ ಭವಿಷ್ಯವನ್ನು ಬದಲಿಸಿತೇನೋ ಅಂತ ಈಗ ನನಗೆ ಅನ್ನಿಸುತ್ತಿದೆ. ಓದುವುದಕ್ಕೆ ಮನಸ್ಸಿಲ್ಲದೆ, ಮನೆಯಲ್ಲಿ ಯಾವ ಸೌಭಾಗ್ಯವೂ ಇಲ್ಲದ ಆ ದಿನಗಳಲ್ಲಿ ಭಗತ್‌ಸಿಂಗ್ ನಗರದ ಆ ಮನೆಯಲ್ಲಿ ವಿಷಾದ ಹೊತ್ತ ಕವನಗಳನ್ನು ಬರೆದೆ. ನನಗೆ ಸಂತೈಸುವ ಬೆರಳುಗಳಿವೆ ಎಂದೆಲ್ಲ ನನಗೆ ನಾನೇ ಹಲುಬಿಕೊಂಡೆ; ಸೈಕಲ್ ಹತ್ತಿ ಎಲ್ಲೆಲ್ಲೋ ತಿರುಗಿದೆ. ದಿನ ಬೆಳಗಾದರೆ ಇವನು ಓದು ಬಿಟ್ಟವನು ಎಂಬ ಬೈಗಳಕ್ಕೆ ಒಳಗಾಗಿ, ಎಲ್ಲೋ ಒಂಥರದ ಏಕಾಂಗಿತನದಿಂದ ಅಂತರ್ಮುಖಿಯಾದೆ. ಸಿದ್ದಾಪುರದ ಮಂಜುಳಾ ಅವತ್ತು ನನಗೆ ಕಾಗದ ಬರೆದು ಸಮಾಧಾನ ಹೇಳದಿದ್ದರೆ ನನಗೆ ಬಹುಶಃ ಹೀಗೆ ಇಲ್ಲಿ ಇದನ್ನೆಲ್ಲ ಬರೆಯುವಷ್ಟು ತ್ರಾಣ ಇರುತ್ತಿರಲಿಲ್ಲ.

ಈ ಬಗೆಯ ವಿಷಯಾಂತರಕ್ಕೆ ಕಾರಣವಿದೆ. ನಾನು ಈ ಹೊತ್ತಿನಲ್ಲೇ ಬೆಂಗಳೂರಿಗೆ ದೌಡಾಯಿಸಿದೆ. ವಿದ್ಯಾರ್ಥಿ ಪರಿಷತ್ ಕಾರ್ಯಾಲಯಕ್ಕೆ ಬಂದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಆಗ ಬೆಂಗಳೂರು ಸಂಘಟನಾ ಕಾರ್ಯದರ್ಶಿ. ನಾನು ನಿರುದ್ಯೋಗಿಯಾಗಿ ಎಬಿವಿಪಿ ಕಚೇರಿಗೆ ಕಾಲಿಟ್ಟರೆ ನನ್ನನ್ನು ಅಲ್ಲಿದ್ದ ಎಲ್ಲ ನಿವಾಸಿಗಳೂ ಆತ್ಮೀಯತೆಯಿಂದ ಬರಮಾಡಿಕೊಂಡರು. ಇದ್ದ ಪುಟ್ಟ ಕಚೇರಿಯಲ್ಲೇ ನನಗೂ ಒಂದು ಹಾಸಿಗೆ, ಹೊದಿಕೆ ಸಿಕ್ಕಿತು. ಯಾವ ಎಗ್ಗೂ ಇಲ್ಲದೆ ಅಲ್ಲಿ ಶಾಂತಾರಾಂ ಮಾಡುತ್ತಿದ್ದ ಅನ್ನ ಸಾರನ್ನು ಕಬಳಿಸುತ್ತಿದ್ದೆ. ರಾಜ್ಯ ಕಚೇರಿಗೆ ಬರುವ ಎಲ್ಲ ಕಾರ್ಯಕತ್ರ ಜೊತೆಗೂ ಓಡಾಡುವ ನೆಪ ಮಾಡಿಕೊಂಡು ಊಟ, ಸಿನೆಮಾ ಎಲ್ಲ ಕತ್ತರಿಸಿದೆ. (ನಂಬರ್ ೯ ಕೆ ಕೆ ಲೇನ್ ಎಂದು ವಿಶ್ವಪ್ರಸಿದ್ಧವಾದ ಈ ಕಾರ್ಯಾಲಯದ ಬಗ್ಗೆ ಬರೆಯುವುದು ನನಗೂ, ನನ್ನಂಥ ನೂರಾರು ಎಬಿವಿಪಿ ಕಾರ್ಯಕರ್ತರಿಗೂ ಬೇಕಾದಷ್ಟಿದೆ ಬಿಡಿ)
ಇದೇ ಸಂದರ್ಭದಲ್ಲಿ ದತ್ತಾಜಿ ಬೆಂಗಳೂರಿಗೆ ಬಂದು ಅದೇ ಕಚೇರಿಯಲ್ಲಿ ಉಳಿಯುತ್ತಿದ್ದರು. ನನಗಂತೂ ಅವರು ಹಾಗೆ ಪ್ರವಾಸದಲ್ಲಿ ಬಂದ ಮೊದಲ ದಿನ ಎಂಥದೋ ಥ್ರಿಲ್…

ಕಚೇರಿಯಲ್ಲಿ ನಾನು `ವಿದ್ಯಾರ್ಥಿ ಪಥ’ ಪತ್ರಿಕೆಯನ್ನು ನೋಡಿಕೊಳ್ಳುವ ತೀರ್ಮಾನ ಆಯಿತು. ದತ್ತಾಜಿ ನನಗೆ `ಪಥ’ದ ಹಿಂದಿನ ಕಥೆಯೆಲ್ಲವನ್ನೂ ಹೇಳಿದರು. ಅದರ ಟೈಟಲ್ ಪಡೆಯುವಾಗಿಂದ ಹಿಡಿದು ಮುಂದೆ ಹೇಗೆ ಸಂಚಿಕೆಗಳನ್ನು ತಂದೆವು ಎಂದು ಅಲ್ಲಿದ್ದ ಗಾಜಿನ ಕಪಾಟು ತೆರೆದು ತೋರಿಸಿದರು. ಹೊಸ ಹೊಸ ಅಂಕಣ ಬರೆಯವುದು ಹೇಗೆ ಎಂದು ಗಂಟೆಗಟ್ಟಳೆ ಚರ್ಚಿಸಿದರು. ನನ್ನನ್ನು ಪತ್ರಕರ್ತನ ಥರ ನೋಡಿದ ಮೊತ್ತಮೊದಲ ವ್ಯಕ್ತಿ ಅವರೇ. ನಾನೂ ಬದುಕುವುದಕ್ಕಾಗಿ, ತುತ್ತು ಗಳಿಸುವುದಕ್ಕಾಗಿ ಪತ್ರಕರ್ತನಾಗಿದ್ದರೆ ಅದಕ್ಕೆ `ಪಥ’ವೇ ಕಾರಣ.

ಪಥದ ಬೈಠಕ್‌ಗಳಂತೂ ನನಗೆ ಚೆನ್ನಾಗಿ ನೆನಪಿದೆ. ಸಾಮಾನ್ಯವಾಗಿ ದತ್ತಾಜಿ ಇಂಥ ಬೈಠಕ್‌ಗಳಲ್ಲಿ ತಮ್ಮ ಪನ್, ಹಾಸ್ಯ, ಕುಟುಕು, ಮಾಹಿತಿ – ಇವುಗಳಿಂದ ನಮ್ಮನ್ನು ರಂಜಿಸುತ್ತಿದ್ದರು. ಈ ಬೈಠಕ್‌ಗಳಿಗೆ ಎಂ ಪಿ ಕುಮಾರ್ ಯಾವಾಗಲೂ ಲೇಟೇ. ಪ್ರತೀ ಭಾನುವಾರವೂ ಅವರ ಸ್ಕೂಟರ್ ಕೆಟ್ಟುಹೋಗಿ ಬರೋ ಹೊತ್ತಿಗೆ ಬೈಠಕ್ ಮುಗಿಯುತ್ತಿತ್ತು!

ಆಮೇಲೆ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಸಮ್ಮೇಳನದ ಎಲ್ಲ ಸಾವೆನಿರ್‌ಗಳಿಗೂ ನಾನೇ ಇನ್‌ಚಾರ್ಜ್. ದತ್ತಾಜಿ ಪ್ರತೀ ಸಲವೂ ಮುಖಪುಟ ಹೇಗಿರಬೇಕು ಎಂದು ಚರ್ಚಿಸುತ್ತಿದ್ದರು. ಯಾರ ಲೇಖನ ಬೇಕು ಎಂದು ಪಟ್ಟಿ ಮಾಡುತ್ತಿದ್ದರು. ವಿದ್ಯಾರ್ಥಿಪರಿಷತ್ತಿನ ಕರಪತ್ರಗಳು, ಬ್ರೋಶರ್‌ಗಳು, ಮನವಿ ಪತ್ರಗಳು, ಆಹ್ವಾನಪತ್ರ – ಎಲ್ಲ ಸಾಹಿತ್ಯದಲ್ಲೂ ನನಗೆ ದತ್ತಾಜಿ ಕೊಟ್ಟ ಸಲಹೆಗಳು, ಪ್ರೋತ್ಸಾಹ, ಬೆಂಬಲ – ಇವನ್ನೆಲ್ಲ ಈಗ ನೆನಪಿಸಿಕೊಂಡರೆ… ಅರೆ, ಎಂಥ ಪುಟ್ಟ ಪುಟ್ಟ ಕೆಲಸಗಳನ್ನು ಮಾಡುತ್ತಲೇ ನಾನು ಪತ್ರಕರ್ತನಾದೆನಲ್ಲ ಎಂದು ಅಚ್ಚರಿಯಾಗುತ್ತದೆ.

ವರ್ಷಕ್ಕೆ ಒಂದೆರಡು ಸಲ ದತ್ತಾಜಿ ನನಗೆ ಕಾಗದ ಬರೆಯುತ್ತಿದ್ದರು. ಅಂಚೆ ಕಾರ್ಡಿನಲ್ಲಿ ಅವರ ಭಾಷೆಯ ಸೊಗಸು, ಸ್ಫುಟತೆ, ಅಕ್ಕರೆ, ಸಂಘಟನೆಯ ಸಂದೇಶ – ಎಲ್ಲವನ್ನೂ ಹೇಗೆ ಜೇನುಗೂಡಿನಂತೆ ಶಿಸ್ತಾಗಿ ಹೆಣೆಯುತ್ತಿದ್ದರು … ಆ ಪತ್ರಗಳು ಈಗಲೂ ನನ್ನಲ್ಲಿ ಭದ್ರವಾಗಿವೆ……

೧೯೮೭ರಿಂದ ಈವರೆಗೂ ನಾನು ದತ್ತಾಜಿಯವರನ್ನು ಎಷ್ಟೋ ಸಲ ನೋಡಿದ್ದೇನೆ. ಅವರು ನನಗೆ ಫೋನ್ ಮಾಡಿ ಮನೆಗೆ ಬಂದಿದ್ದಾರೆ. ಬಹುಶಃ ಅವರು ಸಂಘದ ಪ್ರಚಾರಕರಲ್ಲಿ ಕಂಪ್ಯೂಟರ್ ಕಲಿತು ಲ್ಯಾಪ್‌ಟಾಪ್ ಇಟ್ಟುಕೊಂಡು ಓಡಾಡಿದ ಪ್ರಥಮರು. ಪ್ರಚಾರಕರಾಗಿ ಈ ಮೈಲ್ ಹೊಂದಿದವರು, ಬ್ಲಾಗ್ ಮಾಡಲು ಮುಂದಾದವರು…… ಯೂನಿಕೋಡ್ ಕಲಿಯಲು ಗಂಟೆಗಟ್ಟಳೆ ಏಕಾಗ್ರಚಿತ್ತರಾಗಿ ಕುಳಿತವರು…… ದತ್ತಾಜಿಯ ಕಲಿವ ತವಕ ಇಂದಿಗೂ ನಮ್ಮ ಯುವಕರಿಗೆ ಮಾದರಿ.

ಇನ್ನು ಅವರ ನೆನಪಿನ ಶಕ್ತಿಯ ಬಗ್ಗೆ ಹೇಳುವುದಕ್ಕೇ ನನಗೆ ಮರೆತುಹೋಗುತ್ತದೆ…!

ಅವರು ತಮ್ಮ ಕಪಾಟುಗಳಲ್ಲಿ ಪುಸ್ತಕ, ಕಾಗದ ಪತ್ರಗಳನ್ನು ಹೇಗೆ ಇಡುತ್ತಿದ್ದರೆಂದರೆ, ಅದೊಂದು ಅಬ್‌ಸ್ಟ್ರಾಕ್ಟ್ ಕಲೆಯೋ, ಇನ್‌ಸ್ಟಾಲೇಶನ್ ಕೃತಿಯೋ ಎಂದು ಜನ ಹುಬ್ಬೇರಿಸಬೇಕು… ಆದರೆ ಯಾವುದೋ ವರ್ಷದ, ಯಾವುದೋ ದಿನ ಎಲ್ಲೋ ಇಟ್ಟ ಒಂದು ಪುಸ್ತಕ, ದಾಖಲೆಯನ್ನು ಅವರು ಕಣ್ಣುಮುಚ್ಚಿಕೊಂಡು ಆ ಕಪಾಟಿನ ಅಬ್‌ಸ್ಟ್ರಾಕ್ಟ್ ರಾಶಿಯಿಂದ ಸರಕ್ಕನೆ ಹೊರತೆಗೆಯುತ್ತಾರೆ! ಈ ಪುಸ್ತಕದ ಈ ಪುಟದಲ್ಲಿ ಇಂಥ ವಾಕ್ಯವಿದೆ ಎಂದು ಬಿಡಿಸಿ ತೋರಿಸುವುದರಲ್ಲಿ ಅವರನ್ನು ಬಿಟ್ಟರೆ ಯಾರೂ ಇಲ್ಲ.

ದತ್ತಾಜಿಯವರದು ಕವಿಮನಸ್ಸು. ಅವರು ಕಿರಂ, ಲಂಕೇಶ್, ಅಡಿಗ, ಕಂಬಾರ, – ಹೀಗೆ ಹಲವು ಸಾಹಿತಿಗಳಿಗೆ ಪರಿಚಿತರು. ದತ್ತಾಜಿಯವರು ಕನ್ನಡ ಸಾಹಿತ್ಯವನ್ನು ಇಂಗ್ಲಿಶಿನಷ್ಟೇ ಆಳವಾಗಿ ಓದಿದ್ದಾರೆ. ಕನ್ನಡದ ಹಲವು ಕವಿಗಳ ಕವನಗಳು ಅವರಿಗೆ ಸಲೀಸಾಗಿ ನೆನಪಾಗುತ್ತವೆ. ಪತ್ರಿಕಾ ಕಚೇರಿಗಳಿಗೆ ಹೋದರೆ ಅವರನ್ನು ಮಾತನಾಡಿಸದವರೇ ಇಲ್ಲ; ದಿಲ್ಲಿಯಲ್ಲಿರುವ ದಿ ವೀಕ್ ಪತ್ರಿಕೆಯ ಸಚ್ಚಿಯನ್ನು ಕೇಳಿ, ದತ್ತಾಜಿಯವರ ಪ್ರಖರ ಜ್ಞಾನದ ಝಲಕ್ ಸಿಗುತ್ತದೆ. ಎಂ ಕೆ ಎಸ್ (ಡಾ. ಎಂ ಕೆ ಶ್ರೀಧರ್) ಮೇಲೆ ನೀವು ಬರೆದ ಆ ಕವನವನ್ನು ನಾನಂತೂ ಈಗಲೂ ಮರೆತಿಲ್ಲ….

ದತ್ತಾಜಿ…. ನೀವು ಈಗ ಸಂಘದ ಪ್ರಮುಖ ಹೊಣೆಗಾರಿಕೆಯನ್ನು ಹೊತ್ತುಕೊಂಡ ಗಳಿಗೆಯಲ್ಲಿ ಭಾವುಕವಾಗಿ ಏನೋ ಬರೆದಿದ್ದೇನೆ. ಮುಂದೆಯೂ ಬರೆಯಬಹುದು. ನೀವು ನನ್ನೊಂದಿಗೆ ಎಡಬಿಡದೆ ಹಲವು ತಾಸುಗಳನ್ನು ಕಳೆದ ದಿನಗಳು, ನಿಮ್ಮೊಂದಿಗೆ ನೋಡಿದ ಸಿನೆಮಾಗಳು, ನಿಮ್ಮೊಂದಿಗೆ ಮಾಡಿದ ಚರ್ಚೆಗಳು, ಹಂಚಿಕೊಂಡ ಈ ಮೈಲುಗಳು…. ಎಲ್ಲವೂ ನನ್ನನ್ನೀಗ ಆವರಿಸಿಕೊಂಡಿವೆ. ಸಂಘಟನೆ, ಸಿದ್ಧಾಂತಗಳ ಬಗ್ಗೆ ನಾನು ಭ್ರಮನಿರಸನಗೊಂಡ ಈ ಹೊತ್ತಿನಲ್ಲಿ ನಿಮ್ಮ ಎಲೆವೇಶನ್‌ನ ಸುದ್ದಿ ಕೇಳಿ ಯಾಕೋ… ಈಗಲಾದರೂ ಏನಾದರೂ ಸರಿಯಾಗಬಹುದೇನೋ ಎಂದೆನ್ನಿಸಿ…. ಅರೆ, ಈ ಥರ ಚುಕ್ಕೆ ಇಡುವ ಕಾಗದಗಳನ್ನು ಬರೆಯದೇ ಎಷ್ಟೋ ವರ್ಷಗಳಾದವು ನೋಡಿ…

ನನ್ನ ಕೈಬರಹದಲ್ಲೂ ನಿಮ್ಮ ಪ್ರಭಾವವಿದೆ ದತ್ತಾಜಿ… ಆದರೆ ಚಿಂತನೆಯಲ್ಲಿ ಬಹುಶಃ ನಾನು ಎಡವಟ್ಟೇ. ಆದರೆ ನಿಮ್ಮಂಥ ದಾರಿದೀಪಗಳನ್ನು ನೋಡುತ್ತ ನಡೆಯುವಲ್ಲಿ ನನಗೆ ಈಗಲೂ ಮುದವಿದೆ. ನಾನು ವಿದ್ಯಾರ್ಥಿ ವಿಸ್ತಾರಕ ಟರ್ಮನ್ನು ಕೊನೆಗೊಳಿಸಿ ಶಿರಸಿಗೆ ಕೆಲಸ ಹುಡುಕಿಕೊಂಡು ಹೋದ ಸಂದರ್ಭ ನನಗಿನ್ನೂ ಚೆನ್ನಾಗಿ ನೆನಪಿದೆ.

೧೯೯೧ರ ಅಕ್ಟೋಬರಿನ ಆ ದಿನ ನೀವು ನನ್ನನ್ನು ಮೆಜೆಸ್ಟಿಕ್ ರೈಲು ನಿಲ್ದಾಣದ ಎದುರಿನ (ಸೆಂಟ್ರಲ್‌ಗೆ ಹೋಗುವ ಅಂಡರ್‌ಬ್ರಿಜ್ ಮೇಲೆ) ಉದ್ಯಾನದಲ್ಲಿ ಕೂರಿಸಿಕೊಂಡಿದ್ದಿರಿ. ನಾನು ಶಿರಸಿಗೆ ಹೋಗುವ ನಿರ್ಧಾರದ ಬಗ್ಗೆ ನಿಮಗಿರೋ ಅನುಮಾನಗಳನ್ನು ಮುಕ್ತವಾಗಿ ಬಚ್ಚಿಟ್ಟಿದ್ದಿರಿ. ನಾನು ನನ್ನದೇ ಆದರ್ಶಗಳನ್ನು ಗಳಹಿ, ಸ್ನೇಹಿತರನ್ನು ನಂಬದೆ ಇನ್ನಾರನ್ನು ನಂಬಬೇಕು ದತ್ತಾಜಿ ಎಂದು ಪ್ರಶ್ನಿಸಿದ್ದೆ. ಆದರ್ಶ, ವಿಶ್ವಾಸದ ಕೊಬ್ಬಿನಿಂದ ಮೆರೆಯುತ್ತಿದ್ದ ನನಗೆ ನಿಮ್ಮ ಸಲಹೆಗಳು ರುಚಿಸಲಿಲ್ಲ.

ಆಮೇಲೆ ನನಗೆ ಶುಭವಿದಾಯ ಹೇಳುವ ಕಾರ್ಯಕ್ರಮದಲ್ಲಿ ನೀವು ನನ್ನ ಪಕ್ಕದಲ್ಲಿ ಕುಳಿತು ಹೇಳಿದ್ದಿರಿ: ನಾನೊಂದು ಲೈಟ್ ಕಂಬದ ಥರ. ಇದ್ದಲ್ಲೇ ಇರುತ್ತೇನೆ. ನೀವೆಲ್ಲ ಚಲಿಸುತ್ತ ಇರುತ್ತೀರಿ. ಇದು ಸಹಜ.
ನಿಜ ಹೇಳಬೇಕೆಂದರೆ ಈಗಲೂ ನೀವು ಬೆಳಕಿನ ವೇಗದಲ್ಲಿ ಚಲಿಸುತ್ತಿದ್ದೀರಿ. ನಾವು ಬೆಳಕಿನ ಅರ್ಥ ಗೊತ್ತಿಲ್ಲದೆ ತಡವರಿಸಿಕೊಂಡು ಹೇಗು ಹೇಗೋ ಅಡ್ಡಾಡುತ್ತಿದ್ದೇವೆ. ಶಿರಸಿಗೆ ಹೋದಮೇಲೆ ನಿಮ್ಮ ಮಾತಿನ ಅರ್ಥ ನನಗಾಯಿತು. ಆಮೇಲೆ ಎಷ್ಟೋ ದಿನ ನಿಮ್ಮ ಮಾತುಗಳನ್ನು ಮಥಿಸುತ್ತ ಕೊರಗಿದ್ದೇನೆ.

ನಾನು ನೀವು ಒಟ್ಟಿಗೆ ನೋಡಿದ ದಿ ಮಿಶನ್ ಸಿನೆಮಾ ನೆನಪಾಗುತ್ತಿದೆ; ಓಮರ್ ಮುಖ್ತರ್ ಸಿನೆಮಾ ನೆನಪಾಗುತ್ತಿದೆ. ಬದುಕಿನ ಈ ಯಾತ್ರೆಯಲ್ಲಿ ನೀವು ಕಂಡುಕೊಂಡ `ಮಿಶನ್’ನ ಗಹನ ವಿಚಾರಗಳೆಲ್ಲ ನಮ್ಮ ತಲೆಗೆ ಹೋಗುವುದಿಲ್ಲ; ಆದರೆ ಒಂದು ಮಾತ್ರ ನಿಜ ದತ್ತಾಜಿ…..

ನನ್ನಂಥ ಹುಂಬರನ್ನು ಏನಾದರೂ ಮಾಡಿ ಒಳ್ಳೆಯ ಕೆಲಸಕ್ಕೆ ಹಚ್ಚೋದಿದ್ದರೆ…. ಅದು ನೀವು ಮಾತ್ರ…

ಅಷ್ಟರಮಟ್ಟಿಗೆ ನಾವು ನಿಮ್ಮ ಕರೆಗಾಗಿ ಕಾಯುತ್ತೇವೆ. ಅಲ್ಲಿಯವರೆಗೆ…..

ಹೀಗೇ ಕುರುಡುಹಾದಿಯಲ್ಲಿ ಕಂಡಹಾಗೆ ಹೆಜ್ಜೆ ಹಾಕುತ್ತೇವೆ.

ದತ್ತಾಜಿ ಬಗ್ಗೆ ಯಾರೋ ಬರೆದ ಬ್ಲಾಗ್ ಇಲ್ಲಿದೆ. ದತ್ತಾಜಿಯನ್ನು ಒಂದು ಸಲ ಭೇಟಿ ಮಾಡಿದವರ ಕಥೆ ಇದು…
I mean, RSS – Rashtriya Swayamsevak Sangh, not RSS – RDF Site Summary (feed). On my way back from Soraba, I met a very interesting relative of mine who works full-time with RSS and has the somewhat lengthy title of “Akila Bharata Saha Boudhika Pramukh”, which translates to “Head: RSS Think-Tank”. As we had a couple of hours to kill on the bus till we reached Shimoga, it was talk-time for the idealogically confused Tejaswi Nadahalli and the passionate RSS leader/idealogue Dattatreya HosabaLe. We covered some organizational behavior, leadership, Indic-culture, (Neo-)Colonialism, India, Indian-ness, Nehru, Partition, and a whole load of other similar topics. For the very first time in my life, I met a true leader of people; someone who knows the complications of implementing policies, logistics, people, Indian History, is very well read, ideologically driven, unmarried, devoted, and a lot more. Very impressive person, eye-opening conversation….I even checked out the RSS website and a few columns there. Vitriolic as usual, and also extreme in places; but still, after pondering for a while, I am not sure I am as liberal as I think I am.

Leave a Reply